ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್‌ಗೆ ದ್ರೋಹ

ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ಆರೋಪ
Last Updated 28 ನವೆಂಬರ್ 2019, 10:07 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಹಸಿವು ಮುಕ್ತ ಕರ್ನಾಟಕವನ್ನಾಗಿಸಲು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಮೂಲಕ ಪ್ರತಿ ಕುಟುಂಬಕ್ಕೆ 30 ಕೆಜಿ ಅಕ್ಕಿ, ರಾಗಿ, ಗೋಧಿ ಕೊಡುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಕಾಂಗ್ರೆಸ್ ಪಕ್ಷ ತಂದ ಅನ್ನಭಾಗ್ಯ ಯೋಜನೆಯನ್ನು ಮೊಟಕುಗೊಳಿಸಿದೆ ಎಂದು ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ತಿಳಿಸಿದರು.

ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಿಜೆಪಿ ಪಕ್ಷ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಜಾರಿಗೆ ತಂದಂತಹ ಅನೇಕ ಯೋಜನೆಗಳನ್ನು ಕೈಬಿಡುವ ಸಂಚು ರೂಪಿಸಿದೆ. ಜನರನ್ನು ಮರೆತು ಸ್ವಾರ್ಥಕ್ಕೆ ಅನುಕೂಲಕರವಾಗುವ ಯೋಜನೆಗಳನ್ನು ರೂಪಿಸುವಲ್ಲಿ ಮುಂದಾಗಿದೆ ಎಂದು ಆರೋಪಿಸಿದರು.

ಹಾಲು ಉತ್ಪಾದನೆಯಲ್ಲಿ ನಮ್ಮ ರಾಜ್ಯ ದೇಶದಲ್ಲಿ 11ನೇ ಸ್ಥಾನದಲ್ಲಿದೆ ಹಾಲು ಸಂಗ್ರಹಣೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಸರ್ಕಾರ ಹಾಲು ಉತ್ಪಾದನೆಯನ್ನು ಹೆಚ್ಚಿಸಿ ರೈತರ ಆರ್ಥಿಕ ಮಟ್ಟ ಸುಧಾರಿಸಲು ಪ್ರತಿ ಲೀಟರ್‌ಗೆ ₹ 4ರಂತೆ ಪ್ರೋತ್ಸಾಹಧನವನ್ನು ನೀಡಿದೆ. ಮಕ್ಕಳ ಅಪೌಷ್ಠಿಕತೆಯನ್ನು ದೂರಮಾಡಲು ಒಂದರಿಂದ ಹತ್ತನೇ ತರಗತಿಯವರೆಗೆ ರಾಜ್ಯದ 62 ಲಕ್ಷ ಮಕ್ಕಳಿಗೆ ಹಾಲು ನೀಡುವ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಹೇಳಿದರು.

ಅವಿವಾಹಿತ ಮಹಿಳೆಯರು ನೆಮ್ಮದಿಯ ಜೀವನ ಸಾಗಿಸಲು ಮನಸ್ವಿನಿ ಯೋಜನೆ ಜಾರಿಗೊಳಿಸಲಾಗಿದೆ. ಹೀಗೆ ಹಲವಾರು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲ್ಪಸಂಖ್ಯಾತರು ಹಿಂದುಳಿದ ವರ್ಗಗಳ ಮತ್ತು ಮಹಿಳಾ ಅಭಿವೃದ್ಧಿ ನಿಗಮದಿಂದ ಪಡೆದ ಸಾಲವನ್ನು ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು.

ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ಬಡ್ಡಿ ರಹಿತ ಸಾಲ ನೀಡುವುದರ ಮೂಲಕ ರೈತರಿಗೆ ಉತ್ತಮ ಜೀವನ ನಡೆಸಲು ಅನುಕೂಲ ಮಾಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ ಎಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸಿದೆ. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ ಜಾರಿಗೊಳಿಸಿದೆ ಎಂದು ಹೇಳಿದರು.

ಬರಗಾಲದಲ್ಲಿ ಸುಮಾರು ಎಂಟು ತಿಂಗಳುಗಳ ಕಾಲ ತನ್ನ ಸ್ವಂತ ವೆಚ್ಚದಲ್ಲಿ ಅಕ್ಕಿ, ರಾಗಿ, ಸಕ್ಕರೆ, ಗೋಧಿ ನೀಡಿದ ಅನ್ನದಾತ ನಂದಿ ಎಂ.ಅಂಜಿನಪ್ಪ ಅವರ ಈ ಮಹತ್ಕಾರ್ಯ ರಾಜ್ಯದ ಜನತೆಗೆ ತಲುಪಲು ಸಿದ್ದರಾಮಯ್ಯನವರ ಸರ್ಕಾರ ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಿದೆ. ಈ ಕೀರ್ತಿ ನಂದಿ ಎಂ ಅಂಜನಪ್ಪ ಅವರಿಗೆ ಸಲ್ಲುತ್ತದೆ. ಬಡವರ ಬಂಧು ಅನ್ನದಾತ ಆಂಜಿನಪ್ಪ ಅವರಿಗೆ ಮತ ನೀಡಿ ಜಯಶೀಲರನ್ನಾಗಿ ಮಾಡಿ ಎಂದು ಮತಯಾಚನೆ ಮಾಡಿದರು.

ಕೇವಲ ಸ್ವಂತ ಲಾಭಕ್ಕೆ ಮಂತ್ರಿ ಆಸೆಗೆ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದ ಸುಧಾಕರ್‌ಗೆ ಜನ ತಕ್ಕ ಪಾಠ ಕಲಿಸಬೇಕು ಮುಂದಿನ ದಿನಗಳಲ್ಲಿ ಇಂತಹ ಪಕ್ಷಾಂತರಿಗಳಿಗೆ ಕ್ಷೇತ್ರದಲ್ಲಿ ಸ್ಥಾನ ಕಲ್ಪಿಸಬಾರದು ಎಂದು ಮನವಿ ಮಾಡಿದರು.

ಅನಾವಶ್ಯಕವಾಗಿ ಉಪಚುನಾವಣೆ ಬಂದಿದೆ. ಜನ ಹಣದ ಆಸೆಗೆ ಬಲಿಯಾಗುವುದಿಲ್ಲ ಅವರಿಗೂ ಸ್ವಾಭಿಮಾನ ಇದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT