ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಷ್ಟದಿಂದ ಲಾಭದೆಡೆಗೆ ಕ್ಯಾಪ್ಸಿಕಂ ಕೃಷಿ

ಪಾಲಿಹೌಸ್‌ನಲ್ಲಿ ದಪ್ಪಮೆಣಸಿನಕಾಯಿ ಬೆಳೆದಿರುವ ಆನೂರಿನ ರೈತ ದೇವರಾಜು
Last Updated 1 ಆಗಸ್ಟ್ 2020, 6:44 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಲಾಕ್‌ಡೌನ್ ಸಮಯದಲ್ಲಿ ಹಾಳಾಗಿದ್ದ ಕ್ಯಾಪ್ಸಿಕಮ್ ಬೆಳೆಯನ್ನು ಉತ್ತಮ ನಿರ್ವಹಣೆ ಮೂಲಕ ಮತ್ತೆ ಲಾಭದತ್ತ ಹೆಜ್ಜೆಹಾಕಿದ್ದಾರೆ ತಾಲ್ಲೂಕಿನ ಆನೂರಿನ ರೈತ ದೇವರಾಜು.

ದೇವರಾಜು ಅವರು ಪಾಲಿಹೌಸ್‌ನಲ್ಲಿ ಬೆಳೆದಿದ್ದ ಕ್ಯಾಪ್ಸಿಕಂ ರೋಗಕ್ಕೆ ತುತ್ತಾದಾಗ ಅದರ ಆಸೆಯನ್ನೇ ಬಿಟ್ಟಿದ್ದರು. ಲಾಕ್‌ಡೌನ್‌ನಲ್ಲಿ ಮಾರುಕಟ್ಟೆ ಸಮಸ್ಯೆಯೂ ಎದುರಾಗಿದ್ದರಿಂದ ಬೆಳೆ ತ್ಯಜಿಸಲು ಆಲೋಚಿಸಿದ್ದರು. ಆದರೆ ನಂತರ ಸೂಕ್ತ ಮಾರ್ಗದರ್ಶನ ಪಡೆದ ಅವರು ಬೆಳೆಗೆ ಪೂರಕ ಪೋಷಕಾಂಶ ಒದಗಿಸಿ ಉತ್ತಮ ಬೆಳೆ ಬೆಳೆದಿದ್ದಾರೆ.

ದೇವರಾಜು ಅವರು ಪಾಲಿಹೌಸ್‌ನಲ್ಲಿ ಕ್ಯಾಪ್ಸಿಕಂ ಬೆಳೆದಿರುವುದರಿಂದ ಗುಣಮಟ್ಟದ ಕಾಯಿಗಳಿದ್ದು, ವ್ಯಾಪಾರಿಗಳೇ ತೋಟಕ್ಕೆ ಬಂದು ಖರೀದಿಸುತ್ತಿದ್ದಾರೆ.

‘ಮಾರ್ಚ್ 31ರಂದು 3,500 ನಾರುಗಳನ್ನು ಹತ್ತು ಗುಂಟೆಯ ಪಾಲಿಹೌಸ್‌ನಲ್ಲಿ ನಾಟಿ ಮಾಡಿದ್ದೆವು. ರೋಗಬಂದು ಸುಮಾರು ಆರು ನೂರು ಗಿಡ ಹಾಳಾದವು. ಉಳಿದದ್ದು ಕೂಡ ಹಾಳಾಗುವ ಸ್ಥಿತಿಯಲ್ಲಿತ್ತು. ಆ ಸಮಯದಲ್ಲಿ ಗ್ರೀನ್ ಪ್ಲಾನೆಟ್ ಜೈವಿಕ ಪೋಷಕಾಂಶ ಕೊಟ್ಟು ಗಿಡಗಳನ್ನು ಕಾಪಾಡಿದೆ. ಸಾವಯವ ಗೊಬ್ಬರ ಹಾಗೂ ಕ್ರಿಮಿನಾಶಕ ಬಳಸದೇ ಜೈವಿಕ ಅಂಶಗಳಿಂದ ಬೆಳೆದ ಕ್ಯಾಪ್ಸಿಕಂ ಬೇಗ ಕೆಡುವುದಿಲ್ಲ. ಹಾಗಾಗಿ ಹೊರ ರಾಜ್ಯ, ದೇಶಗಳಿಗೆ ರಫ್ತಾಗುತ್ತದೆ. ಕೆಂಪು ಮತ್ತು ಹಳದಿ ಬಣ್ಣದ ಕ್ಯಾಪ್ಸಿಕಂ ಕೆ.ಜಿಗೆ ₹ 100 ಇದೆ. ಹಸಿರುಬಣ್ಣದ ಕ್ಯಾಪ್ಸಿಕಂಗೆ ₹ 70 ಇದೆ’ ಎಂದು ಆನೂರು ದೇವರಾಜು ವಿವರಿಸಿದರು.

ಇದುವರೆಗೆ ₹ 2 ಲಕ್ಷ ವೆಚ್ಚ ಮಾಡಿದ್ದೇನೆ. ₹ 1.85 ಲಕ್ಷ ಲಾಭ ಬಂದಿದೆ. ಇವರೆಗೆ ಎಂಟು ಬಾರಿ ಕಾಯಿ ಕಟಾವು ಮಾಡಿದ್ದೇವೆ. ವಾರಕ್ಕೊಮ್ಮೆ ಕಟಾವು ಮಾಡುತ್ತಿದ್ದು, ಇನ್ನೂ ಐದಾರು ತಿಂಗಳು ಕಟಾವು ಮಾಡುತ್ತೇವೆ. ಇನ್ನೂ ₹ 3ರಿಂದ ₹ 4 ಲಕ್ಷ ಆದಾಯ ನಿರೀಕ್ಷೆ ಇದೆ. ಲಾಕ್‌ಡೌನ್‌ ಅವಧಿಯಲ್ಲಿ ಬೆಳೆಯ ಆಸೆಯನ್ನೇ ಬಿಟ್ಟಿದ್ದೆ. ಆದರೆ ಈಗ ಲಾಭದ ಹಾದಿಯಲ್ಲಿದ್ದೇನೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT