ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಛತ್ರಗಳಿಗೆ ತಂತ್ರಜ್ಞಾನದ ಸ್ಪರ್ಶ; ಮಕ್ಕಳ ಕಲಿಕಾ ಕೇಂದ್ರವಾದ ಶತಮಾನದ ಕಟ್ಟಡ

Last Updated 29 ನವೆಂಬರ್ 2022, 6:46 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಹಿಂದಿನ ಕಾಲದಲ್ಲಿ ದಾರಿ ಹೋಕರು, ಊರೂರು ಸುತ್ತಿ ವ್ಯಾಪಾರ ಮಾಡುವವರು ಮತ್ತು ಶುಭ ಸಮಾರಂಭಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಧರ್ಮಛತ್ರಗಳನ್ನು ನಿರ್ಮಿಸಲಾಗುತ್ತಿತ್ತು. ಆದರೆ, ಹಲವೆಡೆ ಧರ್ಮಛತ್ರಗಳು ಪಾಳುಬಿದ್ದಿರುವುದನ್ನು ಕಾಣಬಹುದು.

ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಪಾಳುಬಿದ್ದಿದ್ದ ಧರ್ಮಛತ್ರವನ್ನು ಪುನರುಜ್ಜೀವನಗೊಳಿಸಿ ಮಕ್ಕಳ ಕಲಿಕಾ ಕೇಂದ್ರವನ್ನಾಗಿಸಲಾಗಿದೆ. ಇದರಿಂದ ಸಂಜೆ ವೇಳೆ ಮಕ್ಕಳು ಇಲ್ಲಿ ಕುಳಿತು ಓದು ಮತ್ತು ಮನೆಪಾಠ ಮಾಡಿಕೊಳ್ಳಲು ಅನುಕೂಲವಾಗಿದೆ.

ವಿಶೇಷವೆಂದರೆ 1922ರಲ್ಲಿ ನಿರ್ಮಿಸಲಾದ ಈ ಕಟ್ಟಡವು ನವೆಂಬರ್ 28ಕ್ಕೆ ನೂರು ವರ್ಷ ಪೂರೈಸಿದೆ. ಈ ಕಟ್ಟಡದ ಮೇಲೆ ಮಡಿವಾಳಿ ನಂದೆಪ್ಪನಧರ್ಮಮಂಟಪ ಎಂದು ಬರೆಯಲಾಗಿದೆ.

ಹಾಳುಬಿದ್ದ ಕಟ್ಟಡಗಳು ಅನೈತಿಕ ಚಟುವಟಿಕೆಗಳ ತಾಣಗಳಾಗುತ್ತಿವೆ ಎಂಬ ಅಪವಾದದ ಮಧ್ಯೆಯೇ ಗ್ರಾಮಾಭಿವೃದ್ಧಿಗೆ ಪೂರಕವಾಗುವಂತೆ ಸಮುದಾಯ ಬಳಸಿಕೊಳ್ಳಬಹುದಾದ ಸಾಧ್ಯತೆಗಳಿಗೆ ಮಾದರಿಯಾಗಿದ್ದಾರೆ ಮುತ್ತೂರು ಗ್ರಾಮಸ್ಥರು ಮತ್ತು ಗ್ರಾಮಾಂತರ ಟ್ರಸ್ಟ್ ಸಂಸ್ಥೆ.

ನೂರು ವರ್ಷಗಳ ಹಿಂದೆ ಮುತ್ತೂರು ಗ್ರಾಮದ ಮಡಿವಾಳಿ ನಂದೆಪ್ಪ ಎಂಬುವವರು ಗ್ರಾಮಕ್ಕೆ ಬಂದು ಹೋಗುವವರ ಅನುಕೂಲಕ್ಕಾಗಿ ಪುಟ್ಟ ಕಟ್ಟಡವೊಂದನ್ನು ನಿರ್ಮಿಸಿದ್ದರು. ಅದು ಜನರ ಬಾಯಲ್ಲಿ ನಂದೆಪ್ಪನ ಮಠ ಎಂದಾಗಿತ್ತು.

ಹಿಂದೆ ಕೋಲಾರದ ಜಿಲ್ಲಾಧಿಕಾರಿಯಾಗಿದ್ದ ದಿ. ಸಂಜಯ್ ದಾಸ್ ಗುಪ್ತ ಅವರ ನೆನಪಿನ ‘ಗ್ರಾಮಾಂತರ ಟ್ರಸ್ಟ್’ ಸಂಸ್ಥೆಯು ಗ್ರಾಮಸ್ಥರ ಸಹಕಾರದಿಂದ ಶಿಥಿಲಗೊಂಡಿದ್ದ ನಂದೆಪ್ಪನ ಮಠವನ್ನು ಪುನರುಜ್ಜೀವನಗೊಳಿಸಿದೆ. ಗ್ರಾಮದ ಮಹಿಳೆಯರು ಸ್ವಾವಲಂಬಿಗಳಾಗಲು ಟೈಲರಿಂಗ್ ತರಬೇತಿ ಹಾಗೂ ವಿವಿಧ ಉತ್ಪನ್ನಗಳ ತಯಾರಿಕಾ ಘಟಕವನ್ನಾಗಿಸಿತು. ನಂತರ ಇದೀಗ ಮಕ್ಕಳ ಕಲಿಕಾ ಕೇಂದ್ರವನ್ನಾಗಿಸಿದೆ.

ಈ ಸಂಬಂಧ ಗ್ರಾಮಾಂತರ ಟ್ರಸ್ಟ್ ಸಂಸ್ಥೆಯ ಉಷಾಶೆಟ್ಟಿ ಮಾತನಾಡಿ, ‘ಇದು ಒಬ್ಬರಿಂದಾದ ಕೆಲಸವಲ್ಲ. ಗ್ರಾಮಸ್ಥರ ಅನುಮತಿ ಮತ್ತು ಸಹಕಾರದೊಂದಿಗೆ ಹಲವಾರು ಉದಾರ ಹೃದಯಿಗಳು ಒಗ್ಗೂಡಿದ್ದರಿಂದ ಸಾಧ್ಯವಾಯಿತು. ಹಳೆಯ ಕಲ್ಲಿನ ಕಟ್ಟಡವನ್ನು ಹಾಗೆಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗೋಡೆಯ ಮಣ್ಣು ಪರೀಕ್ಷೆ ಮಾಡಿಸಲಾಯಿತು. ಕಟ್ಟಡವು ಗಟ್ಟಿಮುಟ್ಟಾಗಿದೆ ಎಂದು ವರದಿ ನೀಡಿದ ಬಳಿಕವಷ್ಟೇ ವಿನ್ಯಾಸದ ಕೆಲಸವನ್ನು ಆರಂಭಿಸಲಾಯಿತು’ ಎಂದರು.

‘ನಮ್ಮ ಈ ಕಾರ್ಯಕ್ಕೆ ಸ್ವಸ್ಥಿ ಸೇವಾ ಸಂಸ್ಥೆ ಮತ್ತು ಎಡಿಫೈಸ್ ಕನ್ಸಲ್ಟೆಂಟ್ ಆರ್ಥಿಕ ನೆರವು ನೀಡಿತು. ರಿಷ್ಮಾ ಕೌರ್ ಕಟ್ಟಡಕ್ಕೆ ಬಣ್ಣವನ್ನು ಒದಗಿಸಿದರು. ಹಳೆಯ ಕಟ್ಟಡಕ್ಕೆ ನವೀನ ತಂತ್ರಜ್ಞಾನದ ಲೇಪನವಾಗಿದೆ. ಗ್ರಾಮದ ಮಹಿಳೆಯರಿಗೆ ಸ್ವಾವಲಂಬನೆಯ ಕೇಂದ್ರವಾಗಿಸಿದೆವು. ಇದೀಗ ಮಕ್ಕಳು ಸಂಜೆ ವೇಳೆ ಓದಲು, ಹಿರಿಯ ಮಕ್ಕಳಿಂದ ಪಾಠ ಹೇಳಿಸಿಕೊಳ್ಳಲು ಅನುಕೂಲ ಕಲ್ಪಿಸಿದ್ದೇವೆ’ಎಂದರು.

ಇದೇ ಕಟ್ಟಡದಲ್ಲಿದ್ದ ಪ್ರೌಢಶಾಲೆ
ದಾರಿಹೋಕರು ಮತ್ತು ನಿರ್ಗತಿಕರ ಆಶ್ರಯ ತಾಣವಾಗಿತ್ತು. ಕಾಲಾನಂತರ ಗ್ರಾಮದಲ್ಲಿ ಮೊಟ್ಟಮೊದಲು ಪ್ರೌಢಶಾಲೆ ಪ್ರಾರಂಭಿಸಿದಾಗ ಸ್ವಂತ ಕಟ್ಟಡ ಇಲ್ಲದ ಕಾರಣ ನಂದೆಪ್ಪನ ಮಠದಲ್ಲೇ ಶಾಲೆ ಶುರುವಾಯಿತು. ಮುಂದೆ ಶಾಲೆಯು ತನ್ನದೇ ಸ್ವಂತ ಕಟ್ಟಡಕ್ಕೆ ವರ್ಗಾಯಿಸಲ್ಪಟ್ಟಿತು. ಅಲ್ಲೀಂದಾಚೆಗೆ ಈ ಕಟ್ಟಡವು ದನಕರು ಕಟ್ಟುವ ಮತ್ತು ಮೇವು ಸಂಗ್ರಹಿಸುವ ತಾಣವಾಯಿತು. ಹೀಗಾಗಿ ಸೂಕ್ತ ನಿರ್ವಹಣೆಯಿಲ್ಲದೆ ಶಿಥಿಲಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT