ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ| ಮತ್ತೆ ಅಧಿಕಾರಕ್ಕೆ ‘ಕೈ’ ಪಾಳಯ ಕಸರತ್ತು

ಜಿಲ್ಲಾ ಪಂಚಾಯಿತಿ ಚುನಾವಣೆ; ಮೂವರು ಕಾಂಗ್ರೆಸ್‌ ಶಾಸಕರಿಗೆ ಪ್ರತಿಷ್ಠೆ
Last Updated 7 ಮಾರ್ಚ್ 2021, 3:42 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆ ಕಾಂಗ್ರೆಸ್‌ನ ಭದ್ರಕೋಟೆ. ಕಳೆದ ಬಾರಿಯ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ 21 ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು. ಈ ಬಾರಿ ಮತ್ತೆ ಅಧಿಕಾರ ಉಳಿಸಿಕೊಳ್ಳುವ ಸವಾಲಿದೆ.

ಗೌರಿಬಿದನೂರು ಶಾಸಕ ಎನ್.ಎಚ್‌. ಶಿವಶಂಕರರೆಡ್ಡಿ, ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ ಹಾಗೂ ಬಾಗೇಪಲ್ಲಿ ಶಾಸಕ ಎಸ್‌.ಎನ್. ಸುಬ್ಬಾರೆಡ್ಡಿ ಅವರಿಗೂ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಬಾವುಟವನ್ನು ಮತ್ತೆ ಹಾರಿಸುವುದು ಪ್ರತಿಷ್ಠೆಯೇ ಆಗಿದೆ.

ತಮ್ಮ ಕ್ಷೇತ್ರಗಳ ಜತೆ ನೆರೆಹೊರೆಯ ವಿಧಾನಸಭಾ ಕ್ಷೇತ್ರಗಳ ಮೇಲೂ ಈ ನಾಯಕರು ಪ್ರಭಾವ ಬೀರಬಲ್ಲರು. ಜಿಲ್ಲೆಯಲ್ಲಿ ಶಿವಶಂಕರರೆಡ್ಡಿ ಅವರೇ ಕಾಂಗ್ರೆಸ್ ಹೈಕಮಾಂಡ್ ಎನಿಸಿದ್ದಾರೆ. ಈ ಹಿಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಗಮನಿಸಿದಾಗ ಕಾಂಗ್ರೆಸ್‌ಗೆ ತನ್ನದೇ ಆದ ಗಟ್ಟಿಯಾದ ನೆಲೆ ಇದೆ ಎನ್ನುವುದನ್ನು ತೋರುತ್ತದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರಿಗೆ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜಿಲ್ಲಾ ಮತ್ತು ತಾಲ್ಲೂಕು ಚುನಾವಣೆಯ ಜವಾಬ್ದಾರಿವಹಿಸಲಾಗಿದೆ.

ಸಚಿವ ಡಾ.ಕೆ. ಸುಧಾಕರ್ ಕಾಂಗ್ರೆಸ್ ತೊರೆದ ಕಾರಣ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕೈ ಪಕ್ಷಕ್ಕೆ ಹಿನ್ನಡೆ ಆಗಿದೆ. ಜಿಲ್ಲೆಯ ಕೆಲವು ಕಡೆಗಳಲ್ಲಿ ಬಿಜೆಪಿಯತ್ತ ಅನ್ಯಪಕ್ಷಗಳ ಮುಖಂಡರು ಸಹ ವಲಸೆ ಹೋಗಲು ಸಜ್ಜಾಗಿದ್ದಾರೆ. ಈ ಎಲ್ಲ ಸವಾಲುಗಳ ನಡುವೆ ಮತ್ತೆ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳ ಬೇಕಾಗಿದೆ.

ಜಿಲ್ಲಾ ಪಂಚಾಯಿತಿ ಕಾಂಗ್ರೆಸ್‌ ಸದಸ್ಯರ ನಡುವಿನ ಜಗಳ ಮೂರು ಅಧ್ಯಕ್ಷರನ್ನು ಕಾಣುವಂತೆ ಮಾಡಿತು. ಕಾಂಗ್ರೆಸ್ ಪಕ್ಷದ ಸದಸ್ಯರಲ್ಲಿಯೇ ಗುಂಪುಗಾರಿಕೆ ಅಧ್ಯಕ್ಷರ ಬದಲಾವಣೆಗಳಿಗೂ ‌‌ಮುನ್ನುಡಿ ಆಯಿತು.

ಜಿಲ್ಲಾ ಪಂಚಾಯಿತಿಯಲ್ಲಿ 2016ರಲ್ಲಿ ಅಧ್ಯಕ್ಷರಾದ ಪಿ.ಎನ್. ಕೇಶವರೆಡ್ಡಿ ವಿರುದ್ಧ ಆರು ತಿಂಗಳಲ್ಲಿಯೇ ಕಾಂಗ್ರೆಸ್ ಸದಸ್ಯರು ತಿರುಗಿಬಿದ್ದರು. 2017ರಲ್ಲಿ ಆರಂಭವಾದ ಅಂತಃಕಲಹ 2018ರ ಆರಂಭದಲ್ಲಿ ಹೆಚ್ಚಿತು. ಒತ್ತಡಕ್ಕೆ ಮಣಿದು ಕೇಶವರೆಡ್ಡಿ ರಾಜೀನಾಮೆ ನೀಡಿದರು. 2018ರ ಮಾರ್ಚ್‌ 7ರಂದು ಹೊಸೂರು ಕ್ಷೇತ್ರದ ಸದಸ್ಯ ಎಚ್‌.ವಿ. ಮಂಜುನಾಥ್‌ ಅಧ್ಯಕ್ಷರಾಗಿ ಆಯ್ಕೆಯಾದರು. ಸುಧಾಕರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಜಿಲ್ಲಾ ಪಂಚಾಯಿತಿ ರಾಜಕೀಯ ಆಟಗಳು ಮತ್ತೊಂದು ಮಗ್ಗುಲಿಗೆ ಹೊರಳಿತು. 2019ರ ಸೆಪ್ಟೆಂಬರ್ 23ರಂದು ಮಂಜುನಾಥ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸುಧಾಕರ್ ತಂತ್ರಗಾರಿಕೆಯ ಫಲವಾಗಿ ಸ್ವಪಕ್ಷೀಯರಲ್ಲೇ ಬಂಡಾಯ ಎದ್ದ ಬಾಗೇಪಲ್ಲಿ ಕಸಬಾ ಕ್ಷೇತ್ರದ ಸದಸ್ಯ ಎಂ.ಬಿ. ಚಿಕ್ಕನರಸಿಂಹಯ್ಯ ಅಧ್ಯಕ್ಷರಾದರು.

ಹೀಗೆ ಕಾಂಗ್ರೆಸ್ ಬಹುಮತ ಪಡೆದಿದ್ದರೂ ಸದಸ್ಯರ ನಡುವೆ ಒಮ್ಮತವಿಲ್ಲದ್ದು ಅಧಿಕಾರದ ವಿಚಾರದಲ್ಲಿ ಹಲವು ರಾಜಕೀಯ ಆಟಗಳಿಗೆ ಕಾರಣವಾಯಿತು. ಈ ಒಡಕುಗಳನ್ನು ದೂರ ಮಾಡಿ ಮತ್ತೆ ಅಧಿಕಾರ ಹಿಡಿಯುವುದು ಕಾಂಗ್ರೆಸ್‌ಗೆ ಪ್ರಮುಖ ಸವಾಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT