ರೈತರ ಸಾಲ ಮನ್ನಾಕ್ಕೆ ಬದ್ಧ

7
ಚಿಕ್ಕಬಳ್ಳಾಪುರದ ಎಪಿಎಂಸಿ ಆವರಣದಲ್ಲಿ ನಿರ್ಮಿಸಿದ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಸದ ವೀರಪ್ಪ ಮೊಯಲಿ ಹೇಳಿಕೆ

ರೈತರ ಸಾಲ ಮನ್ನಾಕ್ಕೆ ಬದ್ಧ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ರೈತರ ಸಾಲ ಮನ್ನಾ ಮಾಡಲು ನಾವು ಬದ್ಧರಾಗಿದ್ದೇವೆ. ಹಿಂದಿನ ಸರ್ಕಾರ ಮಾಡಿರುವ ಯೋಜನೆಗಳನ್ನು ಅನುಷ್ಠಾನ ಮಾಡುವುದಲ್ಲದೆ, ಇನ್ನು ಹೆಚ್ಚಿನ ಯೋಜನೆಗಳು ಜಾರಿಗೆ ತರುತ್ತೇವೆ’ ಎಂದು ಸಂಸದ ವೀರಪ್ಪ ಮೊಯಿಲಿ ಹೇಳಿದರು.

ನಗರದ ಎಪಿಎಂಸಿಯಲ್ಲಿ ಆವರಣದಲ್ಲಿ ಬುಧವಾರ ನಡೆದ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇನ್ನು ಮುಂದೆ ಎಪಿಎಂಸಿಯಲ್ಲಿ ಕಾರ್ಮಿಕರು, ರೈತರು ಹಸಿವಿನ ಚಿಂತೆ ಮಾಡಬಾರದು. ಕ್ಯಾಂಟೀನ್‌ನಲ್ಲಿ ಸಹ ವಿಶೇಷವಾಗಿ ಗುಣಮಟ್ಟ ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳುಬೇಕು. ಈ ಯೋಜನೆ ಯಶಸ್ವಿಯಿಂದ ಯಶಸ್ಸಿನ ಕಡೆಗೆ ಸಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ಎತ್ತಿನಹೊಳೆ ಯೋಜನೆ ಅನೇಕ ಅಡೆತಡೆಗಳನ್ನು ಗೆದ್ದು ಯಾವುದೇ ಆತಂಕ ಇಲ್ಲದೆ ಅನುಷ್ಟಾನಗೊಳ್ಳುತ್ತಿದೆ. ಸಮರೋಪಾದಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಹೆಬ್ಬಾಳ ನಾಗವಾರ ಕಣಿವೆಗಳ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ಸಹ ಭರದಿಂದ ಸಾಗುತ್ತಿದೆ. ಕೆಲವೇ ತಿಂಗಳಲ್ಲಿ ಕೆರೆಗಳಿಗೆ ನೀರು ಹರಿಯಲಿದೆ’ ಎಂದು ತಿಳಿಸಿದರು.

ಶಾಸಕ ಡಾ.ಕೆ ಸುಧಾಕರ್ ಮಾತನಾಡಿ, ‘ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳ ಮುಂದುವರೆದ ಭಾಗವೇ ಇಂದಿರಾ ಕ್ಯಾಂಟೀನ್. ಈ ಯೋಜನೆ ಶೇ 99 ರಷ್ಟು ಯಶಸ್ವಿಯಾಗಿದೆ. ಕಳೆದ ಐದು ವರ್ಷದಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ಆದರೂ ನಮಗೆ ಪೂರ್ಣ ಪ್ರಮಾಣದ ಯಶಸ್ಸು ಸಿಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನೀರಾವರಿ ಯೋಜನೆಗಳ ವಿಳಂಬ ಕುರಿತು ಟೀಕೆ ಮಾಡುವುದು ಬಹಳ ಸುಲಭ. ಆದರೆ ಈ ದೇಶದಲ್ಲಿ ಎಲ್ಲಾ ನೀರಾವರಿ ಯೋಜನೆಗಳು 15 ರಿಂದ 20 ವರ್ಷಗಳಷ್ಟು ಕಾಲಾವಕಾಶ ಪಡೆದುಕೊಂಡಿವೆ. ಯಾವುದೂ ಐದು ವರ್ಷಗಳಲ್ಲಿ ಮುಗಿದಿಲ್ಲ ಎನ್ನುವುದು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಯಾರು ನಿಮ್ಮ ಪರವಾಗಿ ಕೆಲಸ ಮಾಡುವ ಪ್ರತಿನಿಧಿಗಳ ಕೈ ಹಿಡಿದಾಗ ಮಾತ್ರ ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ’ ಎಂದು ಹೇಳಿದರು.

‘ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಅನೇಕ ನಿರ್ಧಾರಗಳು ಜನಸಾಮಾನ್ಯರನ್ನು ಸಂಕಷ್ಟಕ್ಕೆ ನೂಕಿವೆ. ರೈತರಿಗೆ ಯಾವುದೇ ಕಾರ್ಯಕ್ರಮಗಳು ನೀಡಿಲ್ಲ. ಪೆಟ್ರೋಲ್, ಡೀಸೆಲ್ ದರ ಗಗನಮುಖಿಯಾಗಿವೆ. ಆದ್ದರಿಂದ ಬಿಜೆಪಿಯವರ ಭಾಷಣಕ್ಕೆ ಮರುಳಾಗಬೇಡಿ. ನುಡಿದಂತೆ ನಡೆಯುವವರ ಪ್ರಾಮಾಣಿಕರ ಕೈ ಹಿಡಿಯಬೇಕು. ಇಲ್ಲದಿದ್ದರೆ ಈ ದೇಶಕ್ಕೆ ಅಪಕಾರ ಮಾಡಿದಂತೆ’ ಎಂದು ತಿಳಿಸಿದರು.

ಎಪಿಎಂಸಿ ಆವರಣದಲ್ಲಿ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ವತಿಯಿಂದ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.

ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ, ನಿರ್ದೇಶಕರಾದ ಕೆ.ವಿ.ನಾಗರಾಜ್, ಅಶ್ವತ್ಥರೆಡ್ಡಿ, ಸುನಂದಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ನಗರಸಭೆ ಅಧ್ಯಕ್ಷ ಮುನಿಕೃಷ್ಣ, ಉಪಾಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ಆಯುಕ್ತ ಉಮಾಕಾಂತ್, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗೇಶ್, ಮುಖಂಡರಾದ ಎಸ್.ಎಂ.ಮುನಿಯಪ್ಪ, ಯಲುವಹಳ್ಳಿ ಎನ್.ರಮೇಶ್, ಮರಳಕುಂಟೆ ಕೃಷ್ಣಮೂರ್ತಿ, ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !