ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ | ಕೈಗಾರಿಕೆಗೆ 5,200 ಎಕರೆ ಭೂಮಿ

ಜಿಲ್ಲೆಯಲ್ಲಿ ಕೈಗಾರಿಕೀಕರಣಕ್ಕೆ ವೇಗ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್
Published 6 ಜುಲೈ 2024, 5:33 IST
Last Updated 6 ಜುಲೈ 2024, 5:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೈಗಾರಿಕೀಕರಣದ ಪರ್ವ ದೊಡ್ಡ ಮಟ್ಟದಲ್ಲಿ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ನೇತೃತ್ವದಲ್ಲಿ ಈ ಸಂಬಂಧ ಸಭೆಗಳೂ ನಡೆಯುತ್ತಿವೆ. 

ಶಿಡ್ಲಘಟ್ಟದಲ್ಲಿ ಕೈಗಾರಿಕೀಕರಣಕ್ಕೆ ಪ್ರಾಥಮಿಕ ಅಧಿಸೂಚನೆಗಳನ್ನು ಹೊರಡಿಸಲಾಗಿದ್ದರೆ, ಬಾಗೇಪಲ್ಲಿಯಲ್ಲಿ ಅಂತಿಮ ಅಧಿಸೂಚನೆ ಬಾಕಿ ಇದೆ. ಕೆಲವು ಕಡೆಗಳಲ್ಲಿ ಪರಿಹಾರ ನೀಡಬೇಕಾಗಿದೆ. ಗೌರಿಬಿದನೂರು ಮತ್ತು ಚಿಂತಾಮಣಿಯಲ್ಲಿ ಕೈಗಾರಿಕೀಕರಣ ವಿಸ್ತರಣೆಗೆ ಹೆಜ್ಜೆ ಇಡಲಾಗಿದೆ.

ಶಿಡ್ಲಘಟ್ಟದಲ್ಲಿ ದೊಡ್ಡ ಮಟ್ಟದ ಯೋಜನೆ: ಶಿಡ್ಲಘಟ್ಟ ತಾಲ್ಲೂಕಿನ ಜಂಗಮ ಕೋಟೆ ಹೋಬಳಿಯ ಸಂಜೀವಪುರ, ತೋಟ್ಲಗಾನಹಳ್ಳಿ, ಅರಿಕೆರೆ, ಬಸವಾ‍ಪಟ್ಟಣ, ಹೊಸಪೇಟೆ, ಚೊಕ್ಕೊಂಡನಹಳ್ಳಿ, ಯದ್ದಲತಿಪ್ಪೇನಹಳ್ಳಿ, ಕುಲುಮೆ ಹೊಸೂರು, ನಡಪಿನಾಯಕನಹಳ್ಳಿ, ತಾದೂರು, ಯಣ್ಣಂಗೂರು, ದೇವಗಾನಹಳ್ಳಿ, ಗೊಲ್ಲಹಳ್ಳಿ ಗ್ರಾಮಗಳ ಬಳಿ 2823 ಎಕರೆಯಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ.  ಈ ಕುರಿತು ಸಚಿವ ಡಾ.ಎಂ.ಸಿ.ಸುಧಾಕರ್  ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆಸಿ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿದರು.

ಈ ಯೋಜನೆ ಕಾರ್ಯಗತವಾದರೆ ಶಿಡ್ಲಘಟ್ಟ ತಾಲ್ಲೂಕಿಗೆ ಬೃಹತ್ ಪ್ರಮಾಣದಲ್ಲಿ ಜಾರಿಯಾದ ಕೈಗಾರಿಕಾ ಯೋಜನೆ ಇದಾಗುತ್ತದೆ. ಜಂಗಮಕೋಟೆ ಹೋಬಳಿಯ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಮೀಪವಾಗುತ್ತದೆ. ಈ ಹೋಬಳಿಯ ಅಮರಾವತಿ ಬಳಿಯೇ ಬೆಂಗಳೂರು ಉತ್ತರ ವಿವಿ ಕ್ಯಾಂಪಸ್ ನಿರ್ಮಾಣಕ್ಕೆ ಶಂಕು ಸ್ಥಾಪನೆ ನಡೆದಿದೆ. ಈ ಎಲ್ಲ ಬೆಳವಣಿಗೆಗಳು ಕೃಷಿಯೇ ಪ್ರಧಾನವಾಗಿರುವ ಶಿಡ್ಲಘಟ್ಟ ತಾಲ್ಲೂಕಿನ ಆರ್ಥಿಕ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ.

ಕೊಂಡರೆಡ್ಡಿ ಪಲ್ಲಿ ಬಳಿ ಜಮೀನು: ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಬಾಗೇಪಲ್ಲಿಯಲ್ಲಿ ಈ ಹಿಂದೆ ಕೈಗಾರಿಕೀಕರಣಕ್ಕೆ ನಡೆದ ಪ್ರಯತ್ನಗಳು ವಿಫಲವಾಗಿವೆ. ನೆರೆಯ ಆಂಧ್ರಪ್ರದೇಶದಲ್ಲಿ ಕೊರಿಯಾ ದೇಶದ ಕಿಯಾ ಮೋಟರ್ಸ್ ಈಗಾಗಲೇ ದೊಡ್ಡ ಕೈಗಾರಿಕಾ ಘಟಕಗಳನ್ನು ಹೊಂದಿದೆ. ಅವರು ನೆರೆಯ ಬಾಗೇಪಲ್ಲಿಯಲ್ಲಿ ತಮ್ಮ ನೆಲೆ ವಿಸ್ತರಿಸಲು ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಸಹ ಮಾಡಿದ್ದರು. ಆದರೆ ಆ ಯಾವ ಯೋಜನೆಗಳು ಕಾರ್ಯರೂಪಕ್ಕೆ ಬರಲಿಲ್ಲ. 

15 ವರ್ಷಗಳ ಹಿಂದೆ ಇಲ್ಲಿ ಕೈಗಾರಿಕೆಗಳಿಗಾಗಿ ಭೂಮಿ ಗುರುತಿಸಲಾಗಿತ್ತು. ಆದರೆ ಯೋಜನೆಗಳ ಕಾರ್ಯಗತವಾಗಿರಲಿಲ್ಲ. ಈಗ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕೈಗಾರಿಕೀಕರಣಕ್ಕೆ ಮತ್ತೆ ಜಮೀನು ಗುರುತಿಸಲಾಗಿದೆ. ಕೊಂಡರೆಡ್ಡಿ ಪಲ್ಲಿ ಬಳಿ 684 ಎಕರೆ ಜಮೀನು ಗುರುತಿಸಲಾಗಿದೆ. ಈ ಹಿಂದೆ ಗುರುತಿಸಿದ್ದ 200 ಎಕರೆಯಲ್ಲಿಯೂ ಕೈಗಾರಿಕೀಕರಣದ ಚಟುವಟಿಕೆಗಳು ಆರಂಭವಾಗುವ ಸಾಧ್ಯತೆ ಹೆಚ್ಚಿದೆ. ಅಂತಿಮ ಅಧಿಸೂಚನೆ ಬಾಕಿ ಇದೆ. 

ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿರುವ ಗೌರಿಬಿದನೂರು ತಾಲ್ಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶ ಈಗಾಗಲೇ ಅಭಿವೃದ್ಧಿ ಹೊಂದಿದೆ. ಇಲ್ಲಿ 820 ಎಕರೆಯಲ್ಲಿ ಮೂರನೇ ಹಂತದ ಘಟಕ ವಿಸ್ತರಣೆಗೆ ಹೆಜ್ಜೆ ಇಡಲಾಗಿದೆ.

ಡಾ.ಎಂ.ಸಿ.ಸುಧಾಕರ್ ಚಿಂತಾಮಣಿ ಶಾಸಕರಾಗಿದ್ದ ವೇಳೆ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಶಂಕುಸ್ಥಾಪನೆ ನಡೆದಿತ್ತು. ಆದರೆ ಆ ನಂತರದ ದಿನಗಳಲ್ಲಿ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಿಂದ ಹಿನ್ನಡೆ ಆಯಿತು. ಈಗ ಮತ್ತೆ ಸ್ವಕ್ಷೇತ್ರದಲ್ಲಿ ಕೈಗಾರಿಕೆಗಳನ್ನು ಬೆಳೆಸುವ ದೊಡ್ಡ ಗುರಿಯನ್ನು ಸಚಿವರು ಹೊಂದಿದ್ದಾರೆ. ಈ ಕಾರಣದಿಂದ ಈಗಾಗಲೇ ಜಮೀನುಗಳನ್ನು ಸಹ ಕೈಗಾರಿಕಾಭಿವೃದ್ಧಿ ಮಂಡಳಿಯ ಮೂಲಕ ಗುರುತಿಸಲಾಗಿದೆ.

ಮಸ್ತೇನಹಳ್ಳಿ ಬಳಿ ಮೊದಲ ಮತ್ತು ಎರಡನೇ ಹಂತದಲ್ಲಿ 1,300 ಎಕರೆ ಜಮೀನನ್ನು ವಶಪಡಿಸಿಕೊಳ್ಳಲಾಗಿತ್ತು. ಡೀಮ್ಡ್ ಅರಣ್ಯದ ಕಾರಣಕ್ಕೆ ಇಲ್ಲಿ ಗೊಂದಲಗಳು ಸಹ ಮೂಡಿದ್ದವು. 13 ವರ್ಷಗಳಿಂದಲೂ ಒಂದೂ ಕಟ್ಟಡ ಅಥವಾ ಕಾಂಪೌಂಡ್ ಸಹ ನಿರ್ಮಾಣವಾಗಿರಲಿಲ್ಲ. ಡಾ.ಎಂ.ಸಿ.ಸುಧಾಕರ್ ಸಚಿವರಾಗುತ್ತಿದ್ದಂತೆ ಮಸ್ತೇನಹಳ್ಳಿ ಕೈಗಾರಿಕಾ ಪ್ರಾಂಗಣದಲ್ಲಿ ಎದುರಾಗಿದ್ದ ಸಮಸ್ಯೆಗಳ ನಿವಾರಣೆಗೆ ಮುಂದಾದರು.

ಇದಿಷ್ಟೇ ಅಲ್ಲ ಮತ್ತಷ್ಟು ಪ್ರಮಾಣದಲ್ಲಿ ಕೈಗಾರಿಕೆಗಳನ್ನು ಸ್ವಕ್ಷೇತ್ರಕ್ಕೆ ತರಲು ಮುಂದಾಗಿದ್ದಾರೆ. ‌ಕನಿಶೆಟ್ಟಿಹಳ್ಳಿ ಬಳಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಲು ಸಹ ಸಚಿವರು ಆಲೋಚಿಸುತ್ತಿದ್ದಾರೆ. ಹೀಗೆ ಸ್ವಕ್ಷೇತ್ರ ಚಿಂತಾಮಣಿಯ ಜೊತೆಗೆ ಉಳಿದ ತಾಲ್ಲೂಕುಗಳಲ್ಲಿಯೂ ಕೈಗಾರಿಕೀರಣ ವೇಗ ನೀಡಲು ಸಚಿವರು ಮುಂದಾಗಿದ್ದಾರೆ.

ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆಯ ಹಂತದಲ್ಲಿರುವ ಈ ಯೋಜನೆಗಳು ಯಾವುದೇ ಅಡೆತಡೆಗಳು ಇಲ್ಲದೆ ಜಾರಿಯಾದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಕೈಗಾರಿಕಾ ಬೆಳವಣಿಗಳು ಆಗಲಿವೆ. ಆ ಮೂಲಕ ಉದ್ಯೋಗ ಸೃಷ್ಟಿಯಾಗಲಿದೆ.

ಚಿಂತಾಮಣಿಯ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶ
ಚಿಂತಾಮಣಿಯ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶ

ಶಿಡ್ಲಘಟ್ಟ ತಾಲ್ಲೂಕಿನ ಜಂಗಮ ಕೋಟೆ ಹೋಬಳಿಯಲ್ಲಿ ಪ್ರಾಥಮಿಕ ಅಧಿಸೂಚನೆ ಬಾಗೇಪಲ್ಲಿಯ ಕೊಂಡರೆಡ್ಡಿ ಪಲ್ಲಿ ಬಳಿ 684 ಎಕರೆ ಜಮೀನು ಕುಡುಮಲಕುಂಟೆ, ಚಿಂತಾಮಣಿಯಲ್ಲಿ ಕೈಗಾರಿಕೀಕರಣ ವಿಸ್ತರಣೆ

‘ದೊಡ್ಡ ಪ್ರಮಾಣದ ಯೋಜನೆ’ ರಾಜ್ಯದಲ್ಲಿಯೇ ದೊಡ್ಡ ಪ್ರಮಾಣದ ಕೈಗಾರಿಕಾ ಯೋಜನೆಗಳು ಜಿಲ್ಲೆಯಲ್ಲಿ ಜಾರಿಯಾಗುತ್ತವೆ. ಇದರಿಂದ ಸಹಜವಾಗಿ ಜಿಲ್ಲೆಯು ಕೈಗಾರಿಕೀಕರಣದಲ್ಲಿ ದೊಡ್ಡ ಮಟ್ಟದಲ್ಲಿ ವೇಗ ಪಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ‘ಪ್ರಜಾವಾಣಿ’ಗೆ ತಿಳಿಸಿದರು. ಶಿಡ್ಲಘಟ್ಟ ಚಿಂತಾಮಣಿ ಬಾಗೇಪಲ್ಲಿ ಗೌರಿಬಿದನೂರಿನಲ್ಲಿ ಕೈಗಾರಿಕೀಕರಣಕ್ಕೆ ಒಟ್ಟು 5200 ಎಕರೆ ಗುರುತಿಸಲಾಗುತ್ತದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕೈಗಾರಿಕೀಕರಣಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಬಾಗೇಪಲ್ಲಿ ತಾಲ್ಲೂಕಿನಲ್ಲಿ 15 ವರ್ಷಗಳ ಹಿಂದೆ ಗುರುತಿಸಿದ್ದ ಜಮೀನು ನನೆಗುದಿಗೆ ಬಿದ್ದಿತ್ತು. ನಾನು ಮತ್ತು ಶಾಸಕ ಸುಬ್ಬಾರೆಡ್ಡಿ ಅವರು ಚರ್ಚಿಸಿ ಕೈಗಾರಿಕೀಕರಣಕ್ಕೆ ವೇಗ ನೀಡಲು ಮುಂದಾಗಿದ್ದೇವೆ ಎಂದರು.  ಕೊಂಡರೆಡ್ಡಿಪಲ್ಲಿ ಬಳಿ 684 ಎಕರೆ ಮತ್ತು ಈ ಹಿಂದೆ ಗುರುತಿಸಿದ್ದ  200 ಜಮೀನು ಇದೆ. ಜಮೀನು ಕಳೆದುಕೊಳ್ಳುವವರಿಗೆ ಪರಿಹಾರ ನೀಡುವುದು ಬಾಕಿ ಇದೆ. ಗೌರಿಬಿದನೂರು ತಾಲ್ಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ 820 ಎಕರೆ ಮೂರನೇ ಹಂತದ ಯೋಜನೆಗೆ ಅವಾರ್ಡ್ ಆಗಿದೆ ಎಂದರು. ನಾನು ಶಾಸಕನಾಗಿದ್ದ ವೇಳೆ ಚಿಂತಾಮಣಿ ತಾಲ್ಲೂಕಿನ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶ ಕಾರ್ಯಾರಂಭ ಮಾಡಿತು. 1300 ಎಕರೆಯನ್ನು ಈ ಕೈಗಾರಿಕಾ ಪ್ರದೇಶಕ್ಕೆ ಗುರುತಿಸಲಾಗಿತ್ತು. ಕೆಲವು ಗೊಂದಲಗಳು ಇಲ್ಲಿ ಇದ್ದವು. ಅಂತಿಮವಾಗಿ 791 ಎಕರೆಗೆ ನೋಟಿಫಿಕೇಷನ್ ಮಾಡಿಸಿದ್ದೆ. ಇದರಲ್ಲಿ 404 ಎಕರೆ ಅಂತಿಮ ಅಧಿಸೂಚನೆಯಾಗಿದೆ. 664 ಎಕರೆ ಜಂಟಿ ಸರ್ವೆ ಕಾರ್ಯ ನಡೆಯುತ್ತಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT