ಭಾನುವಾರ, ಆಗಸ್ಟ್ 18, 2019
21 °C

ರೇಷ್ಮೆ ಬೆಳೆಗಾರರ ಹಿತ ಕಾಪಾಡಿ: ಜಿಲ್ಲಾಧಿಕಾರಿ ಅವರಿಗೆ ಮನವಿ

Published:
Updated:
Prajavani

ಚಿಕ್ಕಬಳ್ಳಾಪುರ: ಜಿಲ್ಲೆಯ ರೇಷ್ಮೆ ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಮೂಲಕ ಬೆಳೆಗಾರರ ಹಿತ ಕಾಪಾಡಬೇಕು ಎಂದು ರೈತಸಂಘದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಲಕ್ಷ್ಮಿನಾರಾಯಣ ರೆಡ್ಡಿ, ‘ರಾಜ್ಯದಲ್ಲಿ ಉತ್ಪಾದನೆಯಾಗುವ ಒಟ್ಟು ರೇಷ್ಮೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳೇ ಶೇ60 ರಷ್ಟು ಉತ್ಪಾದನೆ ಮಾಡುವ ಮೂಲಕ ಸರ್ಕಾರಕ್ಕೆ ಕೋಟಿಗಟ್ಟಲೇ ತೆರಿಗೆ ಆದಾಯ ಒದಗಿಸುತ್ತವೆ. ಆದ್ದರಿಂದ ರೇಷ್ಮೆ ಬೆಳೆಗಾರರನ್ನು ಉಳಿಸಿ, ನೂಲು ಬಿಚ್ಚಾಣಿಕೆದಾರರನ್ನು ಪ್ರೋತ್ಸಾಹಿಸುವ ಕೆಲಸಗಳಾಗಬೇಕಿದೆ’ ಎಂದು ಹೇಳಿದರು.

‘ಜಿಲ್ಲೆಯ ರೇಷ್ಮೆ ಹೊರ ರಾಜ್ಯಗಳಿಗೆ ರಫ್ತಾಗಿ ಅಲ್ಲಿಂದ ವಿವಿಧ ಉತ್ಪನ್ನಗಳಾಗಿ ಪರಿವರ್ತನೆ ಹೊಂದಿ ಪುನಃ ಜಿಲ್ಲೆಯ ಮಾರುಕಟ್ಟೆಗೆ ಬರುತ್ತದೆ. ಇದರಿಂದ ಹೊರ ರಾಜ್ಯದವರಿಗೆ ಹೆಚ್ಚಿನ ಲಾಭ ಮತ್ತು ಉದ್ಯೋಗ ಸಿಗುತ್ತಿದೆ. ಈ ಚಿತ್ರಣ ಬದಲಾಗಬೇಕಿದೆ. ಸ್ಥಳೀಯವಾಗಿಯೇ ರೇಷ್ಮೆಯ ಉತ್ಪನ್ನಗಳನ್ನು ತಯಾರಿಸುವ ಘಟಕಗಳ ಸ್ಥಾಪನೆಗೆ ಕ್ರಮಕೈಗೊಳ್ಳಬೇಕು’ ಎಂದು ತಿಳಿಸಿದರು.

‘ಚೀನಾದಿಂದ ಆಮದು ಮಾಡಿಕೊಳ್ಳುವ ರೇಷ್ಮೆ ಮೇಲಿನ ಸುಂಕವನ್ನು ಮತ್ತಷ್ಟು ಹೆಚ್ಚಿಸಿ ಸ್ಥಳೀಯ ರೇಷ್ಮೆಗೆ ಬೆಂಬಲ ಬೆಲೆ ನೀಡಿದರೆ ರೇಷ್ಮೆ ಉತ್ಪಾದನೆ ಹೆಚ್ಚಳವಾಗಿ, ರೈತರ ಆದಾಯ ದ್ವಿಗುಣಗೊಳ್ಳಲಿದೆ. ಈ ಹಿಂದೆ ರೇಷ್ಮೆ ಗೂಡಿನ ಬೆಲೆ ಕೆ.ಜಿಗೆ ₨400ರ ವರೆಗೆ ಇತ್ತು. ಸದ್ಯ ಅದು ₨300ಕ್ಕೆ ಕುಸಿತಗೊಂಡಿದೆ. ಇದಕ್ಕೆ ಕಾರಣ ಏನು ಪರಿಶೀಲಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ ಮಾತನಾಡಿ, ‘ರೈತರು ವೈಜ್ಞಾನಿಕ ರೀತಿಯಲ್ಲಿ ಒಂದು ಕೆ.ಜಿ.ಗೂಡು ಬೆಳೆಯಲು ₹350 ಖರ್ಚು ಮಾಡುತ್ತಿದ್ದಾರೆ. ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ ಗೂಡು ₹400ಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾದರೆ ಸರ್ಕಾರದಿಂದ ₹100 ಸಹಾಯಧನ ಕಲ್ಪಿಸಬೇಕು. ಕನಿಷ್ಠ ₹500 ಬೆಲೆ ಸಿಕ್ಕರೆ ರೈತರ ಬದುಕು ಹಸನಾಗಲು ಸಾಧ್ಯ’ ಎಂದರು.

‘ಶಿಡ್ಲಘಟ್ಟದಲ್ಲಿ ಹೈಟೆಕ್ ಮಾರುಕಟ್ಟೆ ಸ್ಥಾಪನೆಗೆ ಕ್ರಮಕೈಗೊಳ್ಳಬೇಕು. ಕಚ್ಚಾ ರೇಷ್ಮೆ ಮಾರುಕಟ್ಟೆ ಸ್ಥಾಪಿಸಿದರೆ ಉದ್ಯೋಗ ಸೃಷ್ಟಿಯಾಗುವ ಜತೆಗೆ ರೇಷ್ಮೆಗೆ ನ್ಯಾಯಯುತ ಬೆಲೆ ದೊರೆಯಲಿದೆ. ಧರ್ಮಾವರಂ, ಕಂಚಿ, ಸೂರತ್ ಕಡೆಯ ವ್ಯಾಪಾರಿಗಳು ಜಿಲ್ಲೆಗೆ ಖರೀದಿಗೆ ಬರುವಂತಹ ವಾತಾವರಣ ಸೃಷ್ಟಿಸಬೇಕು. ರೇಷ್ಮೆ ಗೂಡಿನ ಬಿಚ್ಚಾಣಿಕೆಯಿಂದ ಹಿಡಿದು ನಂತರದ ಪ್ರಕ್ರಿಯೆಯಲ್ಲಿ ತಾಂತ್ರಿಕತೆಗೆ ಹೆಚ್ಚಿನ ಒತ್ತು ನೀಡಿದರೆ ಅಭಿವೃದ್ಧಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

‘ಶಿಡ್ಲಘಟ್ಟದಲ್ಲಿ ರೀಲರ್‌ಗಳು ಗೂಡಿನಿಂದ ದಾರ ತೆಗೆದ ನಂತರ ಉಳಿಯುವ ಪ್ಯೂಪಾ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ. ಹೀಗಾಗಿ ದುರ್ವಾಸನೆ ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಜನಜಾನುವಾರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಮನೆ ಮಾಡಿದೆ. ಈ ಬಗ್ಗೆ ಹಿಂದೆ ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಅರುಣ್‌ ಕುಮಾರ್, ಶಿಡ್ಲಘಟ್ಟ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಉಪಾಧ್ಯಕ್ಷ ರವಿ, ಪ್ರಧಾನ ಕಾರ್ಯದರ್ಶಿ ದೇವರಾಜ್ ಹಾಜರಿದ್ದರು.

Post Comments (+)