ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ಹೆಚ್ಚಿಸಿದ ಎಚ್‌.ಎನ್.ವ್ಯಾಲಿ, ಮಳೆ

ಭೂಜಲ ಇಲಾಖೆ ವ್ಯಾಪ್ತಿಯ 51 ಅಧ್ಯಯನ ನಿರೀಕ್ಷಣಾ ಕೊಳವೆ ಬಾವಿಗಳಿಂದ ಮಾಹಿತಿ
Last Updated 31 ಜುಲೈ 2022, 5:54 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕೃಷಿ ಪ್ರಧಾನವಾದತಾಲ್ಲೂಕು. ಇಂತಿಪ್ಪ ತಾಲ್ಲೂಕಿನಲ್ಲಿ ಏಳೆಂಟು ವರ್ಷಗಳ ಹಿಂದಿನ ನೀರಿನ ಚಿತ್ರಣ ಮತ್ತು ಇಂದಿನ ಚಿತ್ರಣಕ್ಕೆ ಬಹಳಷ್ಟು ವ್ಯತ್ಯಾಸವಾಗಿದೆ. ಬರದ ಹಣೆಪಟ್ಟಿಯನ್ನು ಹೊತ್ತಿದ್ದ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಈಗ ಅಂತರ್ಜಲ ಸಮೃದ್ಧವಾಗಿದೆ.

ಒಂದು ಸಾವಿರ ಅಡಿಯವರೆಗೂ ಕೊರೆದರೂ ಕೊಳವೆಬಾವಿಗಳಲ್ಲಿ ನೀರು ದೊರೆಯುತ್ತಿರಲಿಲ್ಲ. ಆಳವಾದ ಕೊಳವೆಬಾವಿಗಳು ಬರಡಾಗಿದ್ದವು. ಇಂತಿಪ್ಪ ಕೊಳವೆಬಾವಿಗಳಲ್ಲಿ ಈಗ ನೀರು ಸಮೃದ್ಧವಾಗಿದೆ. 300, 400 ಅಡಿಗಳಿಗೆ ನೀರು ದೊರೆಯುತ್ತಿದೆ.

ಹೀಗೆ ಅಂತರ್ಜಲ ಗಣನೀಯವಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಹೆಚ್ಚಲು ಪ್ರಮುಖ ಕಾರಣ ಮಳೆ ಮತ್ತು ಎಚ್‌.ಎನ್.ವ್ಯಾಲಿ ನೀರು. ಎಚ್.ವ್ಯಾಲಿ ಯೋಜನೆಯಡಿ ಚಿಕ್ಕಬಳ್ಳಾಪುರ ತಾಲ್ಲೂಕಿನ 22 ಕೆರೆಗಳು ಸಹ ಭರ್ತಿಯಾಗಿವೆ.

ಕಳೆದ ಮೂರು ದಶಕಗಳಲ್ಲಿಯೇ ಸುರಿಯದಷ್ಟು ಮಳೆ ಕಳೆದ ವರ್ಷ ಚಿಕ್ಕಬಳ್ಳಾಪುರದಲ್ಲಿ ಸುರಿದಿದೆ. ಪದೇ ಪದೇ ಜಲಾಶಯಗಳು, ಕೆರೆ, ಕಟ್ಟೆಗಳಲ್ಲಿ ನೀರು ತುಂಬಿ ಕೋಡಿ ಹರಿದಿವೆ. ರೈತರು, ನಾಗರಿಕರು ‘ಸಾಕು’ ಎನ್ನುವಷ್ಟು ಮಳೆ ಸುರಿದಿದೆ.‌ ಇಷ್ಟೆಲ್ಲ ಮಳೆ ಸುರಿದ ಪರಿಣಾಮ ಬರದ ನಾಡು ಎನಿಸಿದ್ದ ಚಿಕ್ಕಬಳ್ಳಾಪುರ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಿದೆ. ಕೆಲವು ಕಡೆಗಳಲ್ಲಿ ತೆರೆದ ಬಾವಿಗಳಲ್ಲಿಯೂ ನೀರು ಸಮೃದ್ಧವಾಗಿದೆ.

ಜಿಲ್ಲಾ ಭೂಜಲ ಇಲಾಖೆಯ ಅಧ್ಯಯನಗಳ ಪ್ರಕಾರ ಕಳೆದ ಎರಡು ವರ್ಷಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆ ಕಂಡಿದೆ. ಜಿಲ್ಲೆಯ ಭೂಜಲ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 51 ಅಧ್ಯಯನ ನಿರೀಕ್ಷಣಾ ಕೊಳವೆ ಬಾವಿಗಳು ಇವೆ.

ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 7, ಶಿಡ್ಲಘಟ್ಟ 9 ಬಾಗೇಪಲ್ಲಿ 11, ಚಿಂತಾಮಣಿ 11, ಗುಡಿಬಂಡೆ 3 ಮತ್ತು ಗೌರಿಬಿದನೂರು ತಾಲ್ಲೂಕಿನಲ್ಲಿ 10 ಅಧ್ಯಯನ ನಿರೀಕ್ಷಣಾ ಕೊಳವೆ ಬಾವಿಗಳು ಇವೆ. ಈ ಕೊಳವೆ ಬಾವಿಗಳಲ್ಲಿ ‌ಪ್ರತಿ ತಿಂಗಳು ಜಲಮಟ್ಟವನ್ನು ಮಾಪನ ಮಾಡುತ್ತದೆ. ಆಯಾ ವರ್ಷದ ಸರಾಸರಿಯ ಮಳೆಯ ಪ್ರಮಾಣವನ್ನು ಪರಿಗಣಿಸಿ ಅಂತರ್ಜಲ ಮಟ್ಟವನ್ನು ನಿರ್ಧರಿಸಲಾಗುತ್ತದೆ.

51 ಕೊಳವೆ ಬಾವಿಗಳಲ್ಲಿನ ಅಂತರ್ಜಲ ಮಟ್ಟವನ್ನು ಆಧರಿಸಿ ಜಿಲ್ಲೆಯಲ್ಲಿ ಅಂತರ್ಜಲದ ಪ್ರಮಾಣ ಹೆಚ್ಚಿದೆಯಾ? ಕುಸಿದಿದೆಯಾ? ಎನ್ನುವ ಲೆಕ್ಕಾಚಾರ ಮಾಡಲಾಗುತ್ತದೆ. ಇದು ಜಿಲ್ಲೆಯ ಅಂತರ್ಜಲ ಮಟ್ಟಕ್ಕೆ ಕೈಗನ್ನಡಿಯಾಗಿದೆ. 2020ರ ಅಕ್ಟೋಬರ್‌ ಹಾಗೂ 2022ರ ಜೂನ್‌ವರೆಗಿನ ಅಧ್ಯಯನ ಕೊಳವೆ ಬಾವಿಗಳ ಅಂಕಿ ಅಂಶಗಳನ್ನು ಆಧರಿಸಿ ನೋಡುವುದಾದರೆ ಅಂತರ್ಜಲ ಮಟ್ಟ ಹೆಚ್ಚಿದೆ.

ಕಳೆದ ವರ್ಷ ಅಧ್ಯಯನ ಕೊಳವೆ ಬಾವಿಗಳಲ್ಲಿ ದೊರೆಯುವ ನೀರಿನ ಮಟ್ಟ ಕೆಳಗಿತ್ತು. ಚಿಕ್ಕಬಳ್ಳಾಪುರ ತಾಲ್ಲೂಕಿನ ಅಧ್ಯಯನ ಕೊಳವೆಬಾವಿಗಳಲ್ಲಿ 62.56 ಮೀಟರ್‌ ಆಳದಲ್ಲಿ ನೀರು ದೊರೆಯುತ್ತಿತ್ತು. ಆದರೆ ಈಗ 32.73 ಮೀಟರ್‌ ಆಳದಲ್ಲಿ ನೀರು ದೊರೆಯುತ್ತಿದೆ. ಈ ಅಂಕಿ ಅಂಶಗಳೇ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಅಂತರ್ಜಲ ವೃದ್ಧಿಗೆ
ಸಾಕ್ಷಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT