ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಮಳೆ: ಕೃಷಿ ಚಟುವಟಿಕೆ ಬಿರುಸು

ರೈತರ ಮುಖದಲ್ಲಿ ಮಂದಹಾಸ
Last Updated 27 ಸೆಪ್ಟೆಂಬರ್ 2019, 15:56 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಕೃಷಿ ಚಟುವಟಿಕೆಗಳು ಚೇತರಿಸಿಕೊಂಡಿದ್ದು ರೈತರ ಮುಖದಲ್ಲಿ ಮಂದಹಾಸ ಮಿನುಗುತ್ತಿದೆ.

ಮಳೆ ಇಲ್ಲದೆ ಪೂರ್ಣ ಪ್ರಮಾಣದಲ್ಲಿ ಬಿತ್ತನೆಯೂ ಆಗದೆ, ಬಿತ್ತನೆಯಾಗಿರುವ ಬೆಳೆಯೂ ಒಣಗುತ್ತಿದ್ದುದರಿಂದ ರೈತರು ಆತಂಕಕ್ಕೆ ಒಳಗಾಗಿ ಆಕಾಶದ ಕಡೆಗೆ ದಿಟ್ಟಿಸುವಂತಾಗಿತ್ತು. ವಾರದಿಂದ ಸುರಿಯುತ್ತಿರುವ ಮಳೆಗೆ ಕೆರೆ, ಕುಂಟೆಗಳಿಗೂ ಅಲ್ಪ-ಸ್ವಲ್ಪ ನೀರು ಬಂದಿದೆ. ಚೆಕ್ ಡ್ಯಾಂಗಳು ಭರ್ತಿಯಾಗಿರುವುದರಿಂದ ಅಂತರ್ಜಲಮಟ್ಟವೂ ಏರಿಕೆಯಾಗಬಹುದು.

ಜನವರಿಯಿಂದ ಸೆಪ್ಟೆಂಬರ್ 24 ರವರೆಗೆ ತಾಲ್ಲೂಕಿನಲ್ಲಿ 468 ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು, 467 ಮಿ.ಮೀ ಮಳೆಯಾಗಿದೆ. ಸೆಪ್ಟೆಂಬರ್ ಮಾಹೆಯಲ್ಲಿ 110 ಮಿ.ಮೀ ಮಳೆಯಾಗಬೇಕಿದ್ದು, 155 ಮಿ.ಮೀ ಮಳೆಯಾಗಿದೆ. ಆದರೆ ಜುಲೈ, ಆಗಸ್ಟ್ ಮಾಹೆಯಲ್ಲಿ ಸಮರ್ಪಕವಾಗಿ ಮಳೆಯಾಗಿರಲಿಲ್ಲ. ಅಲ್ಪ-ಸ್ವಲ್ಪ ಮಳೆಗೆ ಎರಡು-ಮೂರು ಹಂತಗಳಲ್ಲಿ ಬಿತ್ತನೆಯಾಗಿತ್ತು. ಸೆಪ್ಟೆಂಬರ್ ಮಾಹೆಯಲ್ಲಿ ಹದವಾದ ಮಳೆಯಾಗಿರುವುದರಿಂದ ರೈತರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 35,928 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿಯನ್ನು ಹೊಂದಲಾಗಿತ್ತು. ಜುಲೈ, ಆಗಸ್ಟ್ ತಿಂಗಳಲ್ಲಿ ಮಳೆಯ ಕೊರತೆಯಿಂದ 25,429 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಶೇ 71ರಷ್ಟು ಮಾತ್ರ ಬಿತ್ತನೆಯ ಸಾಧನೆಯಾಗಿದೆ.

ತಾಲ್ಲೂಕಿನಲ್ಲಿ ರಾಗಿ, ತೊಗರಿ, ನೆಲಗಡಲೆ, ಮುಸುಕಿನ ಜೋಳ ಪ್ರಮುಖ ಬೆಳೆಗಳಾಗಿವೆ. ರಾಗಿ 16,145 ಬಿತ್ತನೆಯ ಗುರಿ ಹೊಂದಿದ್ದು, 14,581 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ತೊಗರಿ 2,658 ಹೆಕ್ಟೇರ್‌ಗೆ ಕೇವಲ 873 ಹೆಕ್ಟೇರ್, ನೆಲಗಡಲೆ 9,818 ಹೆಕ್ಟೇರ್‌ಗೆ 6,930 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಹೈಬ್ರೀಡ್ ಮುಸುಕಿನ ಜೋಳ 4,299 ಹೆಕ್ಟೇರ್ ಬಿತ್ತನೆಯ ಗುರಿಯಾಗಿದ್ದು, 2,310 ಹೆಕ್ಟೇರ್ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ತಿಳಿಸಿದರು.

ತಡವಾಗಿ ಬಿತ್ತನೆಯಾಗಿರುವ ಪ್ರದೇಶದಲ್ಲಿ ಗುಂಟಿವೆ ಹಾಕುವುದು, ಖಾಲಿ ಜಾಗಗಳಲ್ಲಿ ಪೈರು ನಾಟಿ ಮಾಡುವುದು, ಮುಂದಿನ ಬಿತ್ತನೆಯಲ್ಲಿ ಕಳೆ ಕೀಳುವ ಕೆಲಸಗಳಲ್ಲಿ ರೈತರು ನಿರತರಾಗಿರುವುದು ಹೊಲಗಳಲ್ಲಿ ಕಂಡುಬರುತ್ತದೆ. ಆತಂಕಗೊಂಡಿದ್ದ ರೈತರು ಲಘುಬಗೆಯಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ರೈತರ ಸಹಾಯಕ್ಕಾಗಿ ಕೃಷಿ ಇಲಾಖೆ ಸಜ್ಜುಗೊಂಡಿದೆ. ಔಷಧಿಗಳು, ರಸಗೊಬ್ಬರ ಸೇರಿದಂತೆ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಬಿತ್ತನೆಯ ಅವಧಿ ಮುಗಿದುಹೋಗಿದೆ. ರಸಗೊಬ್ಬರಗಳು ಸಾಕಷ್ಟು ದಾಸ್ತಾನು ಇದೆ. ಇದುವರೆಗೆ ಯಾವುದೇ ರೋಗರುಜಿನುಗಳ ಬಗ್ಗೆ ದೂರುಗಳು ಬಂದಿಲ್ಲ. ರೈತರು ಬೆಳೆಗಳಿಗೆ ಯೂರಿಯಾವನ್ನು ಮಾತ್ರ ಉಪಯೋಗಿಸದೆ ಕೃಷಿ ಅಧಿಕಾರಿಗಳ ಸಲಹೆಯಂತೆ ರಸಗೊಬ್ಬರಗಳನ್ನು ಉಪಯೋಗಿಸಬೇಕು ಎಂದು ಶ್ರೀನಿವಾಸ್ ತಿಳಿಸಿದರು.

ಆಶಾಭಾವ
ಸದ್ಯಕ್ಕೆ ಉತ್ತಮವಾದ ಮಳೆ ಬಿದ್ದಿದೆ. ಆದರೆ ಇಷ್ಟಕ್ಕೆ ಸಂತೋಷ ಪಡುವ ಹಾಗಿಲ್ಲ. ತಾಲ್ಲೂಕಿನಲ್ಲಿ ತಡವಾಗಿ ಬಿತ್ತನೆಯಾಗಿದ್ದು, ಇನ್ನೂ ಒಂದು ತಿಂಗಳು ಮಳೆ ಅಗತ್ಯವಿದೆ. ಕೆರೆ, ಕುಂಟೆಗಳು ಭರ್ತಿಯಾಗಬೇಕು. ಈ ವರ್ಷ ವರುಣ ಆಶಾಭಾವ ಮೂಡಿಸಿದ್ದಾನೆ. ಉತ್ತಮ ಮಳೆಯಾಗಿ ಕೆರೆ, ಕುಂಟೆಗಳು ತುಂಬಿ ಒಳ್ಳೆಯ ಬೆಳೆಯಾಗುವ ಆಶಾಭಾವ ಹೊಂದಿದ್ದೇವೆ.
-ಶಿವಾನಂದ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT