ಬುಧವಾರ, ಜುಲೈ 6, 2022
22 °C
ಚಿಕ್ಕಬಳ್ಳಾಪುರದ ವಿಶೇಷ ದತ್ತು ಕೇಂದ್ರ; ಕೆನಡಾ ಪೋಷಕರ ಮಡಿಲಿನಲ್ಲಿ ಇಬ್ಬರು ಚಿಣ್ಣರು

ಚಿಕ್ಕಬಳ್ಳಾಪುರ: ಅಮೆರಿಕ, ಸಿಂಗಪುರಕ್ಕೆ ದತ್ತುಮಕ್ಕಳು

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ವಿಶೇಷ ದತ್ತು ಕೇಂದ್ರದಲ್ಲಿರುವ ಇಬ್ಬರು ಹೆಣ್ಣು ಮಕ್ಕಳು ಈಗಾಗಲೇ  ಕೆನಡಾ ದಂಪತಿಯ ಮಡಿಲು ಸೇರಿದ್ದಾರೆ. ಜಿಲ್ಲೆಯ ಮಟ್ಟಿಗೆ ಹೀಗೆ ದತ್ತುಮಕ್ಕಳು ದೇಶದ ಗಡಿದಾಟಿದ ಮೊದಲ ಪ್ರಕರಣ ಇದು. 

ಈಗ ಮತ್ತೆ ಚಿಕ್ಕಬಳ್ಳಾಪುರದ ವಿಶೇಷ ದತ್ತು ಕೇಂದ್ರದ ಇಬ್ಬರು ಮಕ್ಕಳು ಸಿಂಗಪುರ ಮತ್ತು ಅಮೆರಿಕಕ್ಕೆ ದತ್ತು ಮಕ್ಕಳಾಗಿ ತೆರಳುವ ಸಾಧ್ಯತೆ ನಿಚ್ಚಳವಾಗಿದೆ. ಸಿಂಗಪುರ ಮತ್ತು ಅಮೆರಿಕದ ಪೋಷಕರಿಗೆ ಮಕ್ಕಳನ್ನು ನೀಡುವ ವಿಚಾರ ಈಗ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ (ಸಿಎಆರ್‌ಎ) ಹಂತದಲ್ಲಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಎಲ್ಲವೂ ಅಂದುಕೊಂಡ ರೀತಿಯಲ್ಲಿ ನಡೆದರೆ ಮತ್ತು ಕಾನೂನು ಪ್ರಕ್ರಿಯೆಗಳು ಸುಗಮವಾಗಿ ನಡೆದರೆ  ಚಿಕ್ಕಬಳ್ಳಾಪುರದ ಈ ಮಕ್ಕಳು ಅಮೆರಿಕ ಮತ್ತು ಸಿಂಗಪುರಕ್ಕೆ ತೆರಳುವರು. ಜಿಲ್ಲೆಯಿಂದ ಇವರು ಸೇರಿ ಒಟ್ಟು ನಾಲ್ಕು ಮಕ್ಕಳು ವಿದೇಶಗಳ ಪೋಷಕರಿಗೆ ದತ್ತು ಮಕ್ಕಳಾಗಿ ತೆರಳಿದಂತಾಗುತ್ತದೆ.

ದತ್ತು ಮಕ್ಕಳನ್ನು ಪಡೆಯುವ ಆಸಕ್ತಿಯುಳ್ಳ ಅನಿವಾಸಿ ಭಾರತೀಯರು ಸಿಎಆರ್‌ಎ ಜಾಲತಾಣದಲ್ಲಿ ಹೆಸರು ನೋಂದಾಯಿಸಿಕೊಳ್ಳುವರು. ನೋಂದಣಿಯ ವೇಳೆ ರಾಜ್ಯ, ಅಂತರರಾಜ್ಯ, ಅಂತರದೇಶೀಯ ಎನ್ನುವ ವಿಭಾಗಗಳೂ ಇರುತ್ತವೆ. ಹೀಗೆ ಸಿಎಆರ್‌ಎದಲ್ಲಿ ನೋಂದಣಿಯಾದವರಿಗೆ ಮತ್ತು ಅವರು ಇಚ್ಚಿಸುವ ಮಕ್ಕಳಿಗೆ ಹೊಂದಾಣಿಕೆ ಆಗಬೇಕು. ನಂತರ ದತ್ತು ‍ಪ್ರಕ್ರಿಯೆಗಳು ನಡೆಯುತ್ತವೆ. 

ಈ ಹಿಂದೆ ಪಂಜಾಬ್‌ ಮೂಲದ ಕೆನಡಾದಲ್ಲಿ ನೆಲೆಸಿರುವ  ಅಶಿಷ್ ಕೋಸ್ಲ ದಂಪತಿ ಸಹ ಸಿಎಆರ್‌ಎ ಜಾಲತಾಣದಲ್ಲಿ ನೋಂದಾಯಿಸಿಕೊಂಡಿದ್ದರು. ಚಿಕ್ಕಬಳ್ಳಾಪುರದ ಇಬ್ಬರು ಮಕ್ಕಳನ್ನು (ಅಕ್ಕ–ತಂಗಿ) ಇವರು ದತ್ತು ಪಡೆದರು.

ಈಗ ಸಿಂಗಪುರ ಮತ್ತು ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಸಿಎಆರ್‌ಎ ಮೂಲಕ ಚಿಕ್ಕಬಳ್ಳಾಪುರದ ಮಕ್ಕಳನ್ನು ದತ್ತು ಪಡೆಯಲು ಮುಂದಾಗಿದ್ದಾರೆ. 

ಹೊರರಾಜ್ಯಗಳಿಗೂ ಮಕ್ಕಳ ದತ್ತು: ಚಿಕ್ಕಬಳ್ಳಾಪುರದ ವಿಶೇಷ ದತ್ತು ಕೇಂದ್ರದ ಮಕ್ಕಳನ್ನು ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಪೋಷಕರು ದತ್ತು ಪಡೆದಿದ್ದಾರೆ.

‘ದತ್ತು ಮಕ್ಕಳ ಮೇಲೆ ವಿಶೇಷವಾಗಿ ನಿಗಾವಹಿಸಲಾಗುವುದು. ಈ ಬಗ್ಗೆ ಸ್ಥಳೀಯ ಸರ್ಕಾರೇತನ ಸ್ವಯಂ ಸೇವಾ ಸಂಸ್ಥೆಗಳು ಗಮನ ಇಟ್ಟಿರುವರು. ಚಿಕ್ಕಬಳ್ಳಾಪುರದಿಂದ ದತ್ತು ಮಕ್ಕಳಾಗಿ ಹೊರಗೆ ಹೋಗಿರುವವರು ಎಲ್ಲರೂ ಚೆನ್ನಾಗಿ ಇದ್ದಾರೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ನುಡಿಯುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು