ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆ ಜೀವವೈವಿಧ್ಯದ ತಾಣ

ನಂದಿಬೆಟ್ಟದ ಗಿರಿಶ್ರೇಣಿಯನ್ನು ವರ್ಣಿಸಿದ್ದ ರಾಷ್ಟ್ರಕವಿ ಕುವೆಂಪು
Last Updated 21 ಆಗಸ್ಟ್ 2021, 3:17 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ‘ದಾರಿಯಲ್ಲಿ ರಮಣೀಯವಾದ ದೃಶ್ಯಗಳಿದ್ದುವು. ನಂದಿಬೆಟ್ಟ ಸಮೀಪವಾದಂತೆಲ್ಲ ಅದರ ಗಿರಿಶ್ರೇಣಿಯು ದಿಗಂತಕ್ಕೆದುರಾಗಿ ಶೃಂಗಶೃಂಗವಾಗಿ ಮೇಲೆದ್ದಿತು. ಅರ್ಧ ವರ್ತುಲಾಕಾರದ ಕಣಿವೆಯೊಂದು ರಮಣೀಯವಾದುದು.

ಸುಲ್ತಾನಪೇಟೆಯ ಬಸ್‍ನಿಲ್ದಾಣದಲ್ಲಿ ನಮ್ಮ ಸಾಮಾನುಗಳನ್ನೆಲ್ಲ ಇಟ್ಟು ಮೇಲಕ್ಕೆ ಏರಿದೆವು. ನನಗೆ ಮಲೆನಾಡಿನ ಗಿರಿವನಗಳ ನೆನಪಾಯಿತು. ಬೆಟ್ಟವನ್ನಡರಿದ ಅರಣ್ಯಗಳು ನಿಬಿಡ ಶ್ಯಾಮಲವಾಗಿದ್ದುವು. ಹತ್ತುವ ಸೋಪಾನ ಶ್ರೇಣಿಯು ತರುಗಳ ಮಧ್ಯೆ ವಕ್ರವಕ್ರವಾಗಿ ಸರ್ಪಾಕಾರವಾಗಿತ್ತು.

‘ಮೆಟ್ಟಿಲುಗಳನ್ನು ಹತ್ತಿಹತ್ತಿ ನೆತ್ತಿಗೆ ಬಂದೆವು. ನಂದಿಯು ರಮಣೀಯವೂ ಶಾಂತವೂ ಆದ ಸ್ಥಳ. ಅಮೃತಸರೋವರವು ಆದರ್ಶವಾಗಿದೆ. ಕಿನ್ನರ ಪ್ರಪಂಚದಲ್ಲಿ ಇದ್ದಂತೆ! ಸುತ್ತಲೂ ಅನೇಕ ನೂರು ಮೈಲಿಗಳ ವಿಸ್ತಾರವಾದ ಬಯಲುಸೀಮೆಯ ದೃಶ್ಯ. ಇದೊಂದು ಮಾತ್ರ ಮಲೆನಾಡಿನ ಒಂದು ದ್ವೀಪದಂತೆ! ಅಲ್ಲಲ್ಲಿ ಗುಡ್ಡಗಳು ಬೆಳ್ಳಗೆ ಕೆಂಪಗೆ ಹೊಳೆಯುವ ಕೆರೆಗಳು. ಮಂಜು ಕವಿದು ಸುತ್ತಲೂ ಲೋಕವೂ ನಾಕವೂ ಭೂಮಿಯೂ ಆಕಾಶವೂ ಒಂದು ಹಾಲ್ಗಡಲಂತೆ ತೋರಿತು’

ನಂದಿಬೆಟ್ಟದ ಕುರಿತು ರಾಷ್ಟ್ರಕವಿ ಕುವೆಂಪು ಅವರು ತಮ್ಮ ಆತ್ಮಕತೆ ‘ನೆನಪಿನ ದೋಣಿಯಲ್ಲಿ’ಯಲ್ಲಿ ದಾಖಲಿಸಿರುವ ಮಾತುಗಳಿವು. ಅವರು ಭೇಟಿ ನೀಡಿದ್ದು 1932ರ ನವೆಂಬರ್ 24 ರಂದು.

85 ವರ್ಷಗಳ ಹಿಂದೆ ಭೇಟಿ ನೀಡಿದ್ದ ಕುವೆಂಪು ಅವರಿಗೆ ಮಲೆನಾಡಿನ ತುಣುಕಿನಂತೆ ನಂದಿಬೆಟ್ಟ ಕಂಡಿತ್ತು. ಆದರೆ ಈಗ ಕಾಂಕ್ರೀಟ್ ಕಟ್ಟಡಗಳು, ಲೇಔಟ್‍ಗಳು ಬೆಟ್ಟದ ಬುಡಕ್ಕೇ ಬಂದಿವೆ. ಆಗಿನ ಮತ್ತು ಈಗಿನ ಸ್ಥಿತಿಗಳನ್ನು ಅವಲೋಕಿಸಿದರೆ ನಿರಾಸೆ ಕಟ್ಟಿಟ್ಟದ್ದು.

ನಂದಿಬೆಟ್ಟ ಜಿಲ್ಲೆಯ ಪ್ರಮುಖ ಜೀವವೈವಿಧ್ಯದ ತಾಣ. ಹಕ್ಕಿಗಳು, ಚಿಟ್ಟೆಗಳ ವೀಕ್ಷಣೆಗೆ ರಾಜ್ಯ, ದೇಶದ ನಾನಾ ಭಾಗಗಳ ತಂಡಗಳು ಇಲ್ಲಿಗೆ ಬರುತ್ತವೆ. ವಲಸೆ ಹಕ್ಕಿಗಳನ್ನು ವೀಕ್ಷಿಸಲು ಮತ್ತು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಹಲವು ಪಕ್ಷಿವೀಕ್ಷಕರಿಗೆ ಈಗಲೂ ನಂದಿಬೆಟ್ಟವು ಸೂಕ್ತ ತಾಣವಾಗಿದೆ. ಟಿಕೆಲ್ಸ್ ಬ್ಲೂ ಫೈಕ್ಯಾಚರ್, ವೈಟ್‍ಐ, ಸೂರಕ್ಕಿ. ಮೈನಾಗಳು, ಬುಲ್‍ಬುಲ್‍ಗಳು, ಥ್ರಷ್‍ಗಳು, ಎತ್ತರದಲ್ಲಿ ಹಾರುವ ವಿವಿಧ ಹದ್ದುಗಳು
ಇಲ್ಲಿ ಕಾಣಸಿಗುತ್ತವೆ.

ತೋಟಗಾರಿಕಾ ಇಲಾಖೆಯಿಂದ ಉದ್ಯಾನದ ನಿರ್ಮಾಣ ಹಾಗೂ ಹಳೆಯ ಗಿಡ, ಮರ, ವೃಕ್ಷಗಳ ನಡುವೆ ಇಲ್ಲಿ ವಿವಿಧ ಹಕ್ಕಿ, ಚಿಟ್ಟೆಗಳು ಹಾಗೂ ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಕಾಣಬಹುದಾಗಿದೆ. ಹಲವಾರು ಬಣ್ಣಗಳ ಹೂಗಳಿದ್ದು ಮಕರಂದ ಹೀರುವ ದುಂಬಿಗಳು, ಚಿಟ್ಟೆಗಳು ಮತ್ತು ಚಿಕ್ಕ ಗಾತ್ರದ ಹಕ್ಕಿಗಳು ಕಣ್ಣಿಗೆ ಬೀಳುತ್ತವೆ.

ನಂದಿಬೆಟ್ಟದ ದಕ್ಷಿಣ ದಿಕ್ಕಿನಿಂದ ಉತ್ತರಕ್ಕೆ ಸುಮಾರು 400 ಕಿ.ಮೀ ವಿಸ್ತೀರ್ಣದಲ್ಲಿ ಹಬ್ಬಿಕೊಂಡಿರುವ ಕುರುಚಲು ಕಾಡು, ಬೆಟ್ಟಗಳ ಸಾಲು ಹಾಗೂ ಕಣಿವೆ ಪ್ರದೇಶವನ್ನು ನರಸಿಂಹದೇವರ ಕಾಡು ಎನ್ನುತ್ತಾರೆ. ಹಿಂದೆ ಇದು ಸೂರ್ಯನ ಕಿರಣಗಳು ನೆಲಕ್ಕೆ ಮುಟ್ಟದಷ್ಟು ದಟ್ಟವಾಗಿತ್ತಂತೆ. ಹುಲಿ, ಆನೆ, ಚಿರತೆಗಳು ಇದ್ದವು ಎಂದು ಹಿರಿಯರು ಹೇಳುತ್ತಾರೆ.

ಜಿಲ್ಲೆಯ ಮುಖ್ಯ ನದಿಗಳಾದ ಉತ್ತರ ಪಿನಾಕಿನಿ ಮತ್ತು ದಕ್ಷಿಣ ಪಿನಾಕಿನಿಗಳ ಉಗಮ ಸ್ಥಾನವಿರುವುದು ಇಲ್ಲಿನ ಬೆಟ್ಟಗಳಲ್ಲಿ. ಇಡೀ ಜಿಲ್ಲೆಯ ಸಾವಿರಾರು ಕೆರೆಗಳ ಪಾಲಿನ ಜಲ ಶೇಖರಣೆಯ ಕೆಲಸ ಈ ಕಾಡು ಮಾಡುತ್ತಿತ್ತು. ಇಂದಿನ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲ ಭಾಗಗಳಿಗೆ ನೀರಿನ ಮೂಲವಾಗಿದ್ದ ಈ ಅರಣ್ಯದಿಂದ 9,500ಕ್ಕೂ ಹೆಚ್ಚು ಕೆರೆಗಳಿಗೆ ನೀರು ದೊರೆಯುತ್ತಿತ್ತು.

ಈ ಕಾಡು ಹಾಗೂ ಇದರಲ್ಲಿನ ಬೆಟ್ಟಗಳ ಸಾಲು ಈಗ ತನ್ನ ನಿಜರೂಪ ಕಳೆದುಕೊಂಡಿವೆ. ಬೋಳಾಗಿ ಕಾಣುತ್ತವೆ. ಕಾಡು ಬರಿದಾಗುತ್ತಿರುವ ಪರಿಣಾಮ ನದಿಗಳು ಬತ್ತತೊಡಗಿದವು. ಇಲ್ಲಿನ ನೀರನ್ನು ನಂಬಿದ್ದ ಕೆರೆಗಳು ಒಣಗಿದವು. ನೂರಾರು ವರ್ಷಗಳಿಂದ ಜಿಲ್ಲೆಯ ಕೆರೆಗಳನ್ನು ಮತ್ತು ಅಂತರ್ಜಲ ಮಟ್ಟವನ್ನೂ ಕಾಪಾಡಿದ್ದ ಈ ಕಾಡನ್ನು ವೃದ್ಧಿಸಬೇಕಿದೆ. ಇದರಿಂದ ಜೀವವೈವಿಧ್ಯತೆಯೂ ವೃದ್ಧಿಸುತ್ತದೆ.

ಬಯಲು ಸೀಮೆ, ನೀರಿನ ಕೊರತೆ, ಒಣಹವೆ ಎನ್ನುವ ನಕಾರಾತ್ಮಕ ಅಂಶಗಳಿದ್ದರೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅದ್ಭುತವಾದ ಹಾಗೂ ವೈವಿಧ್ಯಮಯವಾದ ಜೀವಸಂಕುಲಗಳಿವೆ. ಇಲ್ಲಿ ಕೆಲವು ಅಪರೂಪದ ಕೀಟಗಳು, ಹಕ್ಕಿಗಳು, ಚಿಟ್ಟೆಗಳು, ಹಾವುಗಳು, ಸಣ್ಣ ಪ್ರಾಣಿಗಳೂ ಕಾಣಸಿಗುತ್ತವೆ.

ಹೂವಿನ ಮಕರಂದ ಹೀರುವ ಚಿಟ್ಟೆ, ಚಿಟ್ಟೆಯನ್ನು ತಿನ್ನುವ ಓತಿಕ್ಯಾತ, ಅದನ್ನು ಬೇಟೆಯಾಡುವ ಹಕ್ಕಿಗಳು, ತರಾವರಿ ಜೇಡಗಳು, ವಿಚಿತ್ರ ಕಡ್ಡಿ ಹುಳುಗಳು, ಸಸ್ಯ ವೈವಿಧ್ಯ ಹೀಗೆ ಎಲ್ಲ ಜೀವಸರಪಳಿ ಜಿಲ್ಲೆಯಲ್ಲಿದೆ. ಜಿಲ್ಲೆಯ ಕೆರೆಗಳು ಮತ್ತು
ಕುರುಚಲು ಕಾಡುಗಳು ಪಕ್ಷಿ ಸಂಕುಲಕ್ಕೆ ಆಶ್ರಯತಾಣಗಳಾಗಿವೆ. ಅಪರೂಪದ ಅತಿಥಿಗಳಾಗಿ ವಲಸೆ ಹಕ್ಕಿಗಳೂ ಬಂದು ಹೋಗುತ್ತವೆ.

ಬಾಗೇಪಲ್ಲಿ ತಾಲ್ಲೂಕಿನ ವೀರಾಪುರ ಪ್ರದೇಶಕ್ಕೆ ಪ್ರತೀ ವರ್ಷ ಹಲವಾರು ಹಕ್ಕಿಗಳು ಬರುತ್ತವೆ. ನವೆಂಬರ್ ಡಿಸೆಂಬರ್ ಆಸುಪಾಸಿನಲ್ಲಿ ಬರುವ ಈ ಹಕ್ಕಿಗಳು ಮಾರ್ಚ್ ಏಪ್ರಿಲ್‌ವರೆಗೂ ತಂಗುತ್ತವೆ. ಸೈಬೀರಿಯನ್ ಕೊಕ್ಕರೆಗಳು, ಪೇಂಟೆಡ್ ಸ್ಟಾರ್ಕ್, ಸ್ಪೂನ್ ಬಿಲ್ ಮುಂತಾದ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬಂದು ಮರದ ರೆಂಬೆ, ಕೊಂಬೆಗಳ ಮೇಲೆ ಗೂಡು ಕಟ್ಟಿ ಮರಿ ಮಾಡುತ್ತವೆ.

ಮಿಂಚುಳ್ಳಿ, ಕೋಗಿಲೆ, ಗಿಳಿ, ಬುಲ್‍ಬುಲ್, ಹಸಿರುಗುಟುರ, ಪಿಕಳಾರ, ಮೈನಾ, ಸೊಪ್ಪುಗುಟುರ, ಕಾಮಾಲೆ ಹಕ್ಕಿ ಅಥವಾ ಗೋಲ್ಡನ್ ಓರಿಯೋಲ್, ರೋಸಿ ಪ್ಯಾಸ್ಚರ್, ನೆಲಕುಟುಕ, ಮಡಿವಾಳ, ಬೆಳ್ಳಕ್ಕಿ, ಟಿಟ್ಟಿಭ, ಉಲಿಯಕ್ಕಿ, ಗೀಜುಗ, ಲಾರ್ಕ್, ಗಣಿಗಾರಲು ಹಕ್ಕಿ, ಮುನಿಯಾ, ರಾಮದಾಸ ಹಕ್ಕಿ, ಕುಟುರ, ನೀಲಕಂಠ... ಹೀಗೆ ಪಟ್ಟಿ ಮಾಡುತ್ತಾ ಹೋದರೆ ನಮ್ಮ ಜಿಲ್ಲೆಯಲ್ಲಿ ಕಾಣಸಿಗುವ ಹಕ್ಕಿಗಳ ಮೋಡಿಗೆ ಮನಸೋಲುತ್ತೇವೆ.

‘ಎಲ್ಲಿ ಹಕ್ಕಿಗಳು ಆರೋಗ್ಯವಾಗಿ ಮನೆಮಾಡಿರುತ್ತವೆಯೋ ಅದು ಪರಿಸರ ಸಮತೋಲನದ ಸಾಕ್ಷಿ’ ಎಂಬ ಮಾತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT