ಚಿಕ್ಕಬಳ್ಳಾಪುರ: ಆ.23,2007. ಚಿಕ್ಕಬಳ್ಳಾಪುರ ಜಿಲ್ಲೆಯ ಜನರ ಸ್ಮೃತಿಪಟದಲ್ಲಿ ಈ ದಿನಾಂಕ ಅಚ್ಚಳಿಯದೆ ಉಳಿದಿದೆ. ಕೋಲಾರ ಜಿಲ್ಲೆಯಿಂದ ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಗೌರಿಬಿದನೂರು, ಬಾಗೇಪಲ್ಲಿ ಮತ್ತು ಗುಡಿಬಂಡೆಯನ್ನು ಪ್ರತ್ಯೇಕಿಸಿ ‘ಚಿಕ್ಕಬಳ್ಳಾಪುರ ಜಿಲ್ಲೆ’ಯನ್ನು ರಚಿಸಿದ ಸುದಿನ. ಹಲವು ವರ್ಷಗಳ ಕಾಲ ಕೋಲಾರ ಜಿಲ್ಲೆಯ ಉಪವಿಭಾಗವಾಗಿದ್ದ ಚಿಕ್ಕಬಳ್ಳಾಪುರವು 29ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ಗಳಿಗೆ ಅದು.
ನಂದಿಬೆಟ್ಟ, ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮಸ್ಥಳ, ಐತಿಹಾಸಿಕ ಮುರುಗಮಲೆ, ದ್ರಾಕ್ಷಿಯ ಬೀಡು...ಹೀಗೆ ನಾನಾ ಕಾರಣದಿಂದ ರಾಜ್ಯದಲ್ಲಿ ತನ್ನದೇ ಆದ ವಿಶಿಷ್ಟ ಹೆಗ್ಗುರುತು ಸಹ ಪಡೆದಿದೆ. ಈ ಹದಿನೇಳು ವರ್ಷಗಳಲ್ಲಿ ಜಿಲ್ಲೆಗೆ ಆಗಿದ್ದೇನೆ ಮತ್ತು ಆಗಬೇಕಾದುದ್ದೇನೆ ಎಂದು ವಿಶ್ಲೇಷಿಸಲು ಹೊರಟರೆ ಜಿಲ್ಲೆಯು ಅಭಿವೃದ್ಧಿಯ ನಾಗಾಲೋಟದಲ್ಲಿದೆ ಎಂದು ಹೇಳಲು ಸಾಧ್ಯವಿಲ್ಲ. ಅಂದಮಾತ್ರಕ್ಕೆ ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದೇನೂ ಇಲ್ಲ.
ಆದರೆ ಹದಿನೆಂಟರ ಪ್ರಾಯಕ್ಕೆ ಬಂದರೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀರಿಗೆ ಹೋರಾಟ ತಪ್ಪಿಲ್ಲ. ಶಾಶ್ವತ ನೀರಾವರಿ ಯೋಜನೆಗಳು ಜಿಲ್ಲೆಗೆ ಮರೀಚಿಕೆಯಾಗಿವೆ.
ಬರದ ಹಣೆಪಟ್ಟಿಯನ್ನು ಹೊತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದಿಗೂ ಶಾಶ್ವತ ನೀರಾವರಿ ವಿಚಾರದಲ್ಲಿ ಹೋರಾಟಗಳು ನಿಂತಿಲ್ಲ. ನೀರಿನ ವಿಚಾರ ಜಿಲ್ಲೆಯ ರಾಜಕಾರಣ, ಸಾಮಾಜಿಕ ನೀರಿನ ಕೂಗು ಕೇಳುತ್ತಲೇ ಇದೆ. ಜಿಲ್ಲೆಯು ರಚನೆಯಾಗಿ 18 ವರ್ಷ ಪ್ರಾಯವಾಗುತ್ತಿದ್ದರೂ ನೀರಾವರಿ ವಿಚಾರದಲ್ಲಿ ಇನ್ನೂ ಶೈಶವಾವಸ್ಥೆಯಲ್ಲಿದೆ.
ಎಚ್.ಎನ್.ವ್ಯಾಲಿ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ 210 ಎಂಎಲ್‌ಡಿ ನೀರು ಕೊಡಬೇಕು. ಯೋಜನೆಯಡಿ ಜಿಲ್ಲೆಯ 44 ಕೆರೆಗಳನ್ನು ತುಂಬಿಸಬೇಕು. ಆದರೆ ಇಲ್ಲಿಯವರೆಗೂ ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಕೊಡುವ ಈ ನೀರು ಜಿಲ್ಲೆಗೆ ಪೂರ್ಣ ಪ್ರಮಾಣದಲ್ಲಿ ಲಭ್ಯವೂ ಆಗುತ್ತಿಲ್ಲ. ಚಿಂತಾಮಣಿ ತಾಲ್ಲೂಕಿಗೆ ಮಾತ್ರ ಕೆ.ಸಿ.ವ್ಯಾಲಿ ಯೋಜನೆಯ ನೀರು ದೊರೆತಿದೆ.
ಸದ್ಯ ಈ ಕೊಳಚೆ ನೀರನ್ನು ಎರಡು ಹಂತದಲ್ಲಿ ಸಂಸ್ಕರಿಸಿ ನೀಡಲಾಗುತ್ತಿದೆ. ಆದರೆ ಮೂರನೇ ಹಂತದಲ್ಲಿ ನೀರು ಸಂಸ್ಕರಿಸಿ ನೀಡಬೇಕು ಎನ್ನುವುದು ಜಿಲ್ಲೆಯ ನೀರಾವರಿ ಹೋರಾಟಗಾರರ ಆಗ್ರಹ. ಅದಕ್ಕೆ ಕಾರಣ, ಈಗ ಜಿಲ್ಲೆಗೆ ಹರಿದುಬರುತ್ತಿರುವ ನೀರಿನಲ್ಲಿ ಲವಣಾಂಶಗಳು ಹೇರಳವಾಗಿವೆ. ಭವಿಷ್ಯದಲ್ಲಿ ಭೂಮಿ ವಿಷಯುಕ್ತವಾಗುತ್ತದೆ. ಆದ್ದರಿಂದ ಮೂರನೇ ಹಂತದಲ್ಲಿ ಸಂಸ್ಕರಿಸಿ ನೀಡಿದರೆ ಒಳ್ಳೆಯದು ಎನ್ನುವ ಆಗ್ರಹ ಯೋಜನೆ ಸಾಕಾರಗೊಂಡ ದಿನದಿಂದಲೂ ಇದೆ. ಆದರೆ ಸರ್ಕಾರದ ಕಿವಿಗೆ ಮಾತ್ರ ಈ ಕೂಗು ಮುಟ್ಟುತ್ತಿಲ್ಲ.
ಎತ್ತಿನಹೊಳೆಯತ್ತ ಚಿತ್ತ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಹರಿಸುವ ಉದ್ದೇಶದ ಯೋಜನೆ ಎಂದು ಆರಂಭಗೊಂಡ ಎತ್ತಿನಹೊಳೆ ಯೋಜನೆಯ ವ್ಯಾಪ್ತಿಗೆ ಈಗ ಹಲವು ತಾಲ್ಲೂಕುಗಳು ಸೇರಿವೆ. 2014ರಿಂದ ಈ ಯೋಜನೆ ಸದ್ದು ಮಾಡುತ್ತಿದೆ. ಎರಡು ವರ್ಷದಲ್ಲಿ ಎತ್ತಿನಹೊಳೆ ನೀರು ಬರುತ್ತದೆ ಎಂದು ಸರ್ಕಾರಗಳು ಹೇಳುತ್ತಲೇ ಇವೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಮಗಾರಿಯೇ ಭರದಿಂದ ನಡೆಯುತ್ತಿಲ್ಲ.
ಚಿಕ್ಕಬಳ್ಳಾಪುರ ಜಿಲ್ಲೆಗೆ ಎತ್ತಿನಹೊಳೆ ಯೋಜನೆಯಡಿ ಐದು ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿರುವುದಾಗಿ ಸರ್ಕಾರ ಆರಂಭದಿಂದಲೂ ಹೇಳುತ್ತಿತ್ತು. ಆದರೆ ಈಗಿನ ಸನ್ನಿವೇಶದಲ್ಲಿ ಸರ್ಕಾರವೇ ಎತ್ತಿನಹೊಳೆ ಯೋಜನೆಯಿಂದ 8 ಟಿಎಂಸಿ ಅಡಿ ನೀರು ದೊರೆಯುತ್ತದೆ ಎಂದು ಹೇಳುತ್ತಿದೆ. ಹೀಗೆ ಎತ್ತಿನಹೊಳೆ ನೀರಿನ ಬಗ್ಗೆ ಜಿಲ್ಲೆಯ ಜನರು ಮತ್ತು ರೈತರ ನಿರೀಕ್ಷೆಗಳು ಇಂದಿಗೂ ಈಡೇರಿಲ್ಲ.
ಎತ್ತಿನಹೊಳೆಯ ನೀರು ಬಂದರೆ ಜಿಲ್ಲೆಯ ಕೆರೆಗಳು ಸಮೃದ್ಧಗೊಳ್ಳುತ್ತದೆ. ರೈತರ ಬದುಕು ಹಸನಾಗುತ್ತದೆ ಎನ್ನುವ ಆಶಾವಾದ ರೈತರದ್ದು.
ಎತ್ತಿನಹೊಳೆ, ಎಚ್.ಎನ್.ವ್ಯಾಲಿ ನೀರು ಮೂರನೇ ಹಂತದ ಶುದ್ಧೀಕರಣ ಹೀಗೆ ನೀರಾವರಿ ವಿಚಾರದಲ್ಲಿ ಜಿಲ್ಲೆಯ ಜನರು ಮನಸ್ಸು ಇನ್ನೂ ತಣಿದಿಲ್ಲ. ಈ ಕಾರಣದಿಂದ ಇಂದಿಗೂ ನೀರಿಗಾಗಿ ಜಿಲ್ಲೆಯಲ್ಲಿ ಹಕ್ಕೊತ್ತಾಯಗಳು ಕೇಳಿ ಬರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.