ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಬಾಯಿ ಮಾತಿಗೆ ಸೀಮಿತವಾದ ಸಚಿವರ ಭರವಸೆಗಳು

ಬೆಳೆಗಾರರ ಮೂಗಿಗೆ ತುಪ್ಪ ಸವರಿದ ಸರ್ಕಾರ, ನೆರವಿಗೆ ಧಾವಿಸುವಂತೆ ರೈತ ಮುಖಂಡರ ಆಗ್ರಹ
Last Updated 13 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಿಪ್ಪೆಗೆ ಸೇರುತ್ತಿರುವ ತೋಟಗಳ ಫಸಲು, ಖರೀದಿಗಾರರಿಲ್ಲದೆ ಭೂಮಿಯಲ್ಲೇ ಗೊಬ್ಬರವಾಗುತ್ತಿರುವ ತರಕಾರಿ, ಮಣ್ಣು ಪಾಲಾಗುತ್ತಿರುವ ಹೂವಿನ ಬೆಳೆ, ಕಡುಕಷ್ಟಗಳ ನಡುವೆ ಬಂಡವಾಳ ಹಾಕಿ ಲಾಭದ ನಿರೀಕ್ಷೆಯಲ್ಲಿದ್ದವರ ಮೊಗದಲ್ಲಿ ಕಣ್ಣೀರ ಹೊಳೆ.

ಇದು ಸದ್ಯ ಜಿಲ್ಲೆಯನ್ನು ಒಂದು ಸುತ್ತು ಹಾಕಿದರೆ ಹಳ್ಳಿ ಹಳ್ಳಿಗಳಲ್ಲಿ ಕಾಣುವ ಚಿತ್ರಣ. ಕಳೆದ ಮೂರು ವಾರಗಳಿಂದ ರಾಜ್ಯವನ್ನೇ ಕಟ್ಟಿ ಹಾಕಿದ ಕೊರೊನಾ ಭೀತಿ ಮತ್ತು ಲಾಕ್‌ಡೌನ್‌ ತಂದಿಟ್ಟ ಫಜೀತಿಗೆ ಜಿಲ್ಲೆಯ ರೈತರು ನಲುಗಿ ಹೋಗಿದ್ದಾರೆ.

ಮಳೆಯ ಜೂಜಾಟ, ಅಂತರ್ಜಲ ಕುಸಿತ, ಬತ್ತಿ ಬರಡಾಗುತ್ತಿರುವ ಕೊಳವೆಬಾವಿಗಳು, ಅತಿಯಾದ ರೋಗ ಬಾಧೆ... ಹೀಗೆ ಹತ್ತು ಹಲವು ಸಮಸ್ಯೆಗಳ ನಡುವೆ ಸಾಲಸೋಲ ಮಾಡಿ ಬೆಳೆದ ಬೆಳೆ ಕಣ್ಣೆದುರೇ ಮಣ್ಣು ಪಾಲಾಗಿ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುವುದು ಕಂಡು ರೈತರು ಹತಾಶೆಗೆ ಒಳಗಾಗಿದ್ದಾರೆ. ಅನೇಕ ರೈತರು ಕಣ್ಣೇದುರಿನ ಬೆಳೆ ನೋಡಿ ಸಹಿಸಿಕೊಳ್ಳಲಾಗದೆ ಬೆಳೆಗಳನ್ನು ಕಿತ್ತು ಹಾಕಿಸಿ, ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆಗಳು ಅಸ್ತವ್ಯಸ್ತಗೊಂಡು, ಸರಕು ಸಾಗಣೆ ವ್ಯವಸ್ಥೆಗೆ ಗ್ರಹಣ ಹಿಡಿದು, ಶುಭಕಾರ್ಯಗಳು ಮುಂದೂಡಿಕೆಯಾಗಿ, ಹಬ್ಬ ಹರಿದಿನಗಳು ಮರೀಚಿಕೆಯಾದ ಕಾರಣ ರೈತರ ಪರಿಸ್ಥಿತಿ ಬಿಗಡಾಯಿಸಿ ಹೋಗಿದೆ.

ರೈತರ ಹಿತ ಕಾಯುವುದಾಗಿ ಹೇಳುತ್ತಿರುವ ಸರ್ಕಾರ ಜಾರಿಗೆ ತಂದ ‘ಅಗ್ರಿ ವಾರ್‌ ರೂಂ’, ಸಹಾಯವಾಣಿ, ಗ್ರೀನ್‌ ಪಾಸ್‌ ಯಾವುದೊಂದು ರೈತರ ಕಣ್ಣೀರು ಒರೆಸಲು ನೆರವಾಗಿಲ್ಲ ಎನ್ನುವ ಆಕ್ರೋಶಭರಿತ ಆರೋಪ ನೋವುಂಟ ರೈತರದು.

ಜಿಲ್ಲೆಯಲ್ಲಿ ಸುಮಾರು 39,565 ಎಕರೆಗಳಲ್ಲಿ (15,826 ಹೆಕ್ಟೇರ್) ಹೂವು, ತರಕಾರಿ, ಹಣ್ಣುಗಳನ್ನು ಬೆಳೆಯಲಾಗುತ್ತದೆ. ಅವುಗಳಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಮಾತ್ರವೇ 1.13 ಲಕ್ಷ ಟನ್‌ ತೋಟಗಾರಿಕೆ ಉತ್ಪನ್ನಗಳು ಕಟಾವಿಗೆ ಬರುತ್ತವೆ. ಇದರಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ದ್ರಾಕ್ಷಿಯ ಪಾಲೇ 44 ಸಾವಿರ್ ಟನ್ ಇದೆ. ಖರೀದಿದಾರರೇ ಇಲ್ಲದೆ, ಪಾತಾಳಕ್ಕೆ ಕುಸಿದ ಬೆಲೆಯಿಂದಾಗಿ ರೈತರು ಅನುಭವಿಸುತ್ತಿರುವ ನಷ್ಟ ಸದ್ಯ ಅಂದಾಜಿಗೆ ನಿಲುಕದಾಗಿದೆ.

ಜಿಲ್ಲೆಯಲ್ಲಿ ಪರಿಸ್ಥಿತಿ ಹೀಗೆ ಮುಂದುವರಿದರೆ ಒಂದು ಅಂದಾಜಿನ ಪ್ರಕಾರ ಸುಮಾರು ₹500 ಕೋಟಿಗೂ ಅಧಿಕ ಹಾನಿ ರೈತರ ಕೊರಳಿಗೆ ಉರುಳಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಲಕ್ಷಗಟ್ಟಲೇ ಸಾಲ ಮಾಡಿ ಬೆಳೆ ಬೆಳೆದವರು ಈಗಾಗಲೇ ದಿಕ್ಕೇ ತೋಚದಂತಾಗಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಇದನ್ನೆಲ್ಲ ಕಂಡಿರುವ ರೈತ ಮುಖಂಡರು ಇದೀಗ ತೋಟಗಾರಿಕೆ, ಕೃಷಿ ಸಚಿವರಿಗೆ ರೈತರ ಕಷ್ಟಕ್ಕೆ ಪರಿಹಾರವೇನು ಹೇಳಿ ಎಂದು ಪ್ರಶ್ನಿಸುತ್ತಿದ್ದಾರೆ.

‘ಬರೀ ಹಾರಿಕೆ ಉತ್ತರ, ಬಾಯಿ ಮಾತಿನ ಭರವಸೆಗಳು ಸಾಲದು. ಸಂಕಷ್ಟದಲ್ಲಿರುವ ರೈತರಿಗೆ ಯಾವ ರೀತಿಯಲ್ಲಿ ನೇರವಾಗಿ ಸರ್ಕಾರ ನೆರವಾಗುತ್ತದೆ. ಅದರಿಂದ ಅನ್ನದಾತನನ್ನು ಕಷ್ಟದಿಂದ ಹೊರತರಬಹುದೇ ಉದಾಹರಣೆ ಸಹಿತ ಹೇಳಿ. ಬರೀ ಮೂಗಿಗೆ ತುಪ್ಪ ಸವರುವುದು ಬಿಟ್ಟು ಸಮರೋಪಾದಿಯಲ್ಲಿ ರೈತರ ಹಿತ ಕಾಯಲು ಮುಂದಾಗಿ. ಇಲ್ಲದಿದ್ದರೆ ಮುಂದೊಂದು ದಿನ ಗಂಡಾಂತರ ಎದುರಿಸಬೇಕಾದೀತು’ ಎಂದು ಎಂದು ರೈತ ಮುಖಂಡರು ಆಗ್ರಹಿಸುತ್ತಿದ್ದಾರೆ. ಇದಕ್ಕೆ ಸರ್ಕಾರ ಹೇಗೆ ಸ್ಪಂದಿಸುತ್ತದೆ ಕಾಯ್ದು ನೋಡಬೇಕು.

ಜಿಲ್ಲೆಯಲ್ಲಿ ಏಪ್ರಿಲ್, ಮೇನಲ್ಲಿ ಕಟಾವಿಗೆ ಬರುವ ಉತ್ಪನ್ನಗಳು


ಬೆಳೆ; ವಿಸ್ತೀರ್ಣ (ಹೇಕ್ಟರ್‌); ಉತ್ಪನ್ನ (ಟನ್‌)
ದ್ರಾಕ್ಷಿ; 1,757; 44,129
ಮಾವು; 10,865; 10,542
ಟೊಮೊಟೊ; 440; 15,400
ಗುಲಾಬಿ ಈರುಳ್ಳಿ; 1,200; 24,200
ಕೋಸು ಜಾತಿ; 189; 2,838
ಕ್ಯಾರೆಟ್; 350; 5,600
ದೊಣ್ಣೆಮೆಣಸಿನಕಾಯಿ; 90; 1,300
ಕುಂಬಳ ಜಾತಿ; 70; 2,400
ಗುಲಾಬಿ; 384; 725
ಸೇವಂತಿಗೆ; 115; 1,150
ಚೆಂಡೂ ಹೂವು; 141; 1,087
ಚಿಕ್ಕು; 170; 2,040
ಪೇರಲ; 20; 360
ಪಪ್ಪಾಯ; 35; 2,100
ಒಟ್ಟು; 15,826; 1,13,871

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT