ಚಿಂತಾಮಣಿ: ಜನಸಂಖ್ಯಾ ಸ್ಫೋಟ ನಿಯಂತ್ರಣಕ್ಕೆ ಸರ್ಕಾರ ಕುಟುಂಬ ನಿಯಂತ್ರಣ ಕಲ್ಯಾಣ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಗೆ ಒಳಪಡುವ ಮಹಿಳೆಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ. ಪುರುಷರು ಮಾತ್ರ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿರುವುದು ಆರೋಗ್ಯ ಇಲಾಖೆ ಮಾಹಿತಿಗಳು ಸಾರಿ ಹೇಳುತ್ತವೆ.
ಇತ್ತೀಚೆಗಷ್ಟೇ ವಿಶ್ವ ಜನಸಂಖ್ಯಾ ದಿನ ಆಚರಿಸಿ, ಜನಸಂಖ್ಯಾ ಸ್ಫೋಟದ ಕುರಿತು ಗಂಭೀರವಾಗಿ ಚರ್ಚಿಸಲಾಗಿತ್ತು. ಮಕ್ಕಳ ಸಂಖ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ತಾತ್ಕಾಲಿಕ ಗರ್ಭ ನಿರೋಧಕಗಳಾದ ಕಾಂಡೋಮ್ ಬಳಕೆ, ವಂಕಿಧಾರಣೆ(ಕಾಪರ್-ಟಿ), ದೈನಂದಿನ ಗರ್ಭನಿರೋಧಕ ಗುಳಿಗೆಗಳು, ತುರ್ತು ಗರ್ಭನಿರೋಧಕ ಗುಳಿಗೆ, ಗರ್ಭನಿರೋಧಕ ಚುಚ್ಚುಮದ್ದುಗಳನ್ನು ಆರೋಗ್ಯ ಇಲಾಖೆ ಜಾರಿಗೆ ತಂದಿದೆ.
ಅದೇ ರೀತಿ ಮಹಿಳೆಯರ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ-ಟ್ಯೂಬೆಕ್ಟಮಿ, ಮಹಿಳೆಯರಿಗಾಗಿ ಉದರ ಶಸ್ತ್ರಚಿಕಿತ್ಸೆ-ಲ್ಯಾಪ್ರೊಸ್ಕೋಪಿ, ಪುರುಷರ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ-ವ್ಯಾಸೆಕ್ಟಮಿಗಳು ಸಂತಾನಶಕ್ತಿ ಹರಣದ ಶಾಶ್ವತ ವಿಧಾನಗಳಾಗಿವೆ.
ಶಾಶ್ವತ ಗರ್ಭಧಾರಣೆ ತಡೆಯುವ ಉದ್ದೇಶದಿಂದ ಪುರುಷರಿಗೆ ವ್ಯಾಸೆಕ್ಟಮಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಇದ್ದರೂ ತಾಲ್ಲೂಕಿನಲ್ಲಿ 2019-20 ರಿಂದ 2023-24(ಇದುವರೆಗೆ) ಈ ಶಸ್ತ್ರಚಿಕಿತ್ಸೆಗೆ ಒಳಗಾದವರ ಸಂಖ್ಯೆ ಒಂದಂಕಿಗೆ ಸೀಮಿತವಾಗಿದೆ. ಆದರೆ ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರ ಸಂಖ್ಯೆ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇರುವುದು ಅಂಕಿ ಅಂಶಗಳಿಂದ ಸಾಬೀತಾಗಿದೆ.
ಸರ್ಕಾರ ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರಿಗೆ ₹1,100 ಪ್ರೋತ್ಸಾಹಧನ ನೀಡುತ್ತಿದೆ. ಚಿಕಿತ್ಸೆಗೆ ಒಳಗಾಗಲು ಪುರುಷರನ್ನು ಮನವೊಲಿಸುವ ಆಶಾ ಕಾರ್ಯಕರ್ತೆಯರಿಗೆ ₹200 ಪ್ರೋತ್ಸಾಹಧನವನ್ನೂ ನೀಡಲಾಗುತ್ತದೆ. ಇಷ್ಟಾದರೂ ತಾಲ್ಲೂಕಿನಲ್ಲಿ ಪುರುಷರು ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ಕುಟುಂಬ ಕಲ್ಯಾಣಾಧಿಕಾರಿಗಳು ಅಲವತ್ತುಕೊಳ್ಳುತ್ತಾರೆ.
2022ರ ಏಪ್ರಿಲ್‌ನಿಂದ 2023 ಮಾರ್ಚ್‌ವರೆಗೆ ಮೂವರು ಪುರುಷರು ಮಾತ್ರ ಈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೆ ಇದೇ ಅವಧಿಯಲ್ಲಿ 1,137 ಮಹಿಳೆಯರು ಸಂತಾನಶಕ್ತಿ ಹರಣ ಚಿಕಿತ್ಸೆಗೆ ಒಳಗಾಗಿದ್ದಾರೆ.
ಮಗುವು ಹೆರುವಾಗಲೂ ಬಹುತೇಕ ಸಿಜೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮಹಿಳೆಯರು ನೋವು ಅನುಭವಿಸುತ್ತಾರೆ. ಮಗುವಿನ ಲಾಲನೆ, ಪಾಲನೆಯ ಹೊರೆಯೂ ಮಹಿಳೆಯರದ್ದೇ. ಕೊನೆಗೆ ಸಂತಾನಶಕ್ತಿ ಹರಣ ವಿಷಯದಲ್ಲೂ ಮಹಿಳೆಯರೇ ನೋವು ಅನುಭವಿಸಬೇಕಿದೆ. ಪುರುಷರಿಗೆ ಅತ್ಯಂತ ಸರಳ, ನೋವು ರಹಿತ ವಿಧಾನವಿದ್ದರೂ ಪುರುಷರು ಈ ನೋವನ್ನು ಸಹಿಸಲು ಸಿದ್ಧರಿಲ್ಲ. ಸಮಾಜದಲ್ಲಿ ಸಾಕಷ್ಟು ಬದಲಾವಣೆ ಆಗಿದ್ದರೂ ಮಹಿಳೆಯರ ಮೇಲೆ ಈ ರೀತಿಯ ಪುರುಷರ ಅನಧಿಕೃತ ದೌರ್ಜನ್ಯ, ದರ್ಬಾರು ಮುಂದುವರೆದಿದೆ ಎಂದು ದೂರುತ್ತಾರೆ ಮಹಿಳೆಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.