ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ ನಗರಸಭೆ | ದಕ್ಕದ ಮೀಸಲಾತಿ: ಪರಿಶಿಷ್ಟ ಸದಸ್ಯರಲ್ಲಿ ಚರ್ಚೆ

Published : 8 ಆಗಸ್ಟ್ 2024, 6:47 IST
Last Updated : 8 ಆಗಸ್ಟ್ 2024, 6:47 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಈಗ ಈ ಮೀಸಲಾತಿ ವಿಚಾರವೂ ಸದಸ್ಯರ ನಡುವೆ ಬೇಸರ, ಆಕ್ರೋಶಕ್ಕೆ ಕಾರಣವಾಗಿದೆ. ಪರಿಶಿಷ್ಟ ಸಮುದಾಯದ ಸದಸ್ಯರ ನಡುವೆ ಚರ್ಚೆಗೆ ಕಾರಣವಾಗಿದೆ.

1996ರಲ್ಲಿ ಚಿಕ್ಕಬಳ್ಳಾಪುರವು ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೆಗೇರಿತು. ಅಲ್ಲಿಂದ ಇಲ್ಲಿಯವರೆಗೆ ನಗರಸಭೆ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಸದಸ್ಯೆಗೆ ದೊರೆತಿಲ್ಲ. 2020ರಲ್ಲಿ ಪರಿಶಿಷ್ಟ ಜಾತಿಗೆ ಅಧ್ಯಕ್ಷ ಸ್ಥಾನದ ಮೀಸಲಾತಿ ಬಂದಿತ್ತು. ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡಲಾಗಿದೆ ಎನ್ನುವ ಮಾತುಗಳಿವೆ. 

ಈ ಬಾರಿ ಅಧ್ಯಕ್ಷ ಸ್ಥಾನ ಎಸ್‌ಸಿ ಮೀಸಲಾತಿಗೆ ದೊರೆಯುತ್ತದೆ ಎನ್ನುವ ನಿರೀಕ್ಷೆ ಅಪಾರವಾಗಿತ್ತು. ಕಾಂಗ್ರೆಸ್‌ ಸದಸ್ಯರಾದ ಮೀನಾಕ್ಷಿ ಮತ್ತು ಕಣಿತಹಳ್ಳಿ ವೆಂಕಟೇಶ್ ಅವರು ಅಧ್ಯಕ್ಷ ಸ್ಥಾನದ ಮೇಲೆ ಪ್ರಮುಖವಾಗಿ ದೃಷ್ಟಿ ಇಟ್ಟಿದ್ದರು. ಆದರೆ ಈಗ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾದ ಕಾರಣ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರು ಅಸಮಾಧಾನಗೊಂಡಿದ್ದಾರೆ.

ಪಕ್ಷೇತರ ಸದಸ್ಯರೂ ಸೇರಿದಂತೆ ಪಕ್ಷಾತೀತವಾಗಿ ಈ ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಸದಸ್ಯರು ಒಟ್ಟುಗೂಡಿದಾಗ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಶಾಸಕ ಪ್ರದೀಪ್ ಈಶ್ವರ್ ಅವರೇ ಇದಕ್ಕೆ ಕಾರಣ ಎಂದು ಕೆಲವು ಸದಸ್ಯರು ದೂರುತ್ತಿದ್ದಾರೆ.

ಈ ಮೀಸಲಾತಿಯಿಂದ ಅಸಮಾಧಾನಗೊಂಡಿರುವ ಪರಿಶಿಷ್ಟ ಸಮುದಾಯದ ಕಾಂಗ್ರೆಸ್ ಸದಸ್ಯರು ಶಾಸಕರು ಮತ್ತು ಪಕ್ಷದ ಜಿಲ್ಲಾ ಅಧ್ಯಕ್ಷರು ಬೆಂಗಳೂರಿನಲ್ಲಿ ಮಂಗಳವಾರ ನಡೆಸಿದ ಸಭೆಗೂ ಗೈರಾಗಿದ್ದಾರೆ. ಕೆಲವು ಸದಸ್ಯರು ಬಹಿರಂಗವಾಗಿಯೇ ಆಕ್ರೋಶ ಹೊರಹಾಕುತ್ತಿದ್ದಾರೆ.

ಚಿಕ್ಕಬಳ್ಳಾಪುರ ನಗರಸಭೆಯ 31 ಸದಸ್ಯ ಬಲದಲ್ಲಿ ಕಾಂಗ್ರೆಸ್‌ನ 16, ಜೆಡಿಎಸ್ 2, ಬಿಜೆಪಿ 9 ಮತ್ತು ನಾಲ್ಕು ಮಂದಿ ಪಕ್ಷೇತರ ಸದಸ್ಯರು ಇದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರುವುದರಿಂದ ಅಧಿಕಾರ ಹಿಡಿಯಬಹುದು ಎನ್ನುವ ನಿರೀಕ್ಷೆ ‘ಕೈ’ ಮುಖಂಡರಲ್ಲಿ ಇದೆ. 

‌ಕಾಂಗ್ರೆಸ್‌ ಸಂಪರ್ಕದಲ್ಲಿ ಬಿಜೆಪಿ ಸದಸ್ಯರು?: ಕಾಂಗ್ರೆಸ್ ಮುಖಂಡರ ಸಂಪರ್ಕದಲ್ಲಿ ಬಿಜೆಪಿಯ ಐದು ಮಂದಿ ನಗರಸಭೆ ಸದಸ್ಯರು ಇದ್ದಾರೆ ಎನ್ನುವ ಚರ್ಚೆಗಳು ಸಹ ಜೋರಾಗಿವೆ. ಈ ಸದಸ್ಯರು ಮುಂದೆ ನಡೆಯುವ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದರೆ ‘ಕೈ’ ಹಿಡಿಯುವುದಾಗಿಯೂ ತಿಳಿಸಿದ್ದಾರೆ ಎನ್ನಲಾಗುತ್ತಿದೆ. 

ಹೀಗೆ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಘೋಷಣೆಯ ತರುವಾಯ ಚಿಕ್ಕಬಳ್ಳಾಪುರದ ನಗರ ಸದಸ್ಯರಲ್ಲಿ ರಾಜಕೀಯ ತೀವ್ರವಾಗಿ ಪ್ರವಹಿಸಿದೆ.

‘ಉದ್ದೇಶಪೂರ್ವಕವಾಗಿ ತಪ್ಪಿಸಿದ್ದಾರೆ’

ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಆಗಲೂ ಬದಲಾವಣೆ ಮಾಡಿದರು. ಈಗ ಶಾಸಕ ಪ್ರದೀಪ್ ಈಶ್ವರ್ ಅವರು ಉದ್ದೇಶಪೂರ್ವಕವಾಗಿ ಸಾಮಾನ್ಯ ಸ್ಥಾನಕ್ಕೆ ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲಾವಣೆ ಮಾಡಿಸಿದ್ದಾರೆ ಎಂದು ನಗರಸಭೆ ಕಾಂಗ್ರೆಸ್‌ನ ಸದಸ್ಯೆ ಮೀನಾಕ್ಷಿ ಅವರ ಪತಿ ಮಿಲ್ಟನ್ ವೆಂಕಟೇಶ್ ಆರೋಪಿಸಿದರು. ಪರಿಶಿಷ್ಟ ವರ್ಗದ ನಾವು ಸಾಮಾನ್ಯ ಕ್ಷೇತ್ರದಲ್ಲಿಯೇ ಗೆಲುವು ಸಾಧಿಸಿದ್ದೇವೆ. ಈಗ ಸಾಮಾನ್ಯ ಸ್ಥಾನಕ್ಕೆ ಅಧ್ಯಕ್ಷ ಸ್ಥಾನವಿದೆ. ನಮಗೂ  ಅವಕಾಶವನ್ನು ಮಾಡಿಕೊಡಲಿ ಎಂದರು.

ಶಾಸಕರಿಂದ ಸಮುದಾಯಕ್ಕೆ ಅನ್ಯಾಯ

‘ಪರಿಶಿಷ್ಟ ಜಾತಿಗೆ ಅಧ್ಯಕ್ಷ ಸ್ಥಾನ ದೊರೆಯಬೇಕಾಗಿತ್ತು. ಆದರೆ ಶಾಸಕರು ಆ ಸ್ಥಾನ ತಪ್ಪಿಸಿದ್ದಾರೆ. ಶಾಸಕರಿಂದ ಪರಿಶಿಷ್ಟ ಸಮುದಾಯಕ್ಕೆ ಅನ್ಯಾಯವಾಗಿದೆ’ ಎಂದು ನಗರಸಭೆ ಪಕ್ಷೇತರ ಸದಸ್ಯೆ ರುಕ್ಷ್ಮಿಣಿ ಮುನಿರಾಜು ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ಸಮುದಾಯದ ಯಾರಾದರೂ ಅಧ್ಯಕ್ಷರಾಗಲಿ. ಆದರೆ ಈಗ ಅ ಅವಕಾಶ ತಪ್ಪಿದೆ ಎಂದರು.

ಮುಸ್ಲಿಮರಿಗೂ ಅವಕಾಶ ನೀಡಿ

ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ನಗರಸಭಾ ಸದಸ್ಯರನ್ನು ಆಯ್ಕೆ ಮಾಡಬೇಕು ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಬಿ.ಎಸ್ ರಫಿಉಲ್ಲಾ ಆಗ್ರಹಿಸಿದ್ದಾರೆ. ನಗರಸಭೆಯಲ್ಲಿರುವ 31 ಸದಸ್ಯರ ಪೈಕಿ ನಾಲ್ಕು ಮುಸ್ಲಿಂ ಸದಸ್ಯರು ಇದ್ದಾರೆ. ಇವರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಬೇಕು.  ಮುಸ್ಲಿಮರು ಒಗ್ಗಟ್ಟಿನಿಂದ ಪ್ರದೀಪ್ ಈಶ್ವರ್ ಅವರಿಗೆ ಮತ ನೀಡಿದ್ದಾರೆ. 2002ರಲ್ಲಿ ಅಂದಿನ ಸಂಸದ ಆರ್‌.‌ಎಲ್ ಜಾಲಪ್ಪ ಹಾಗೂ ಜಿ.ಎಚ್ ನಾಗರಾಜ್ ಅವರ ಬೆಂಬಲದಿಂದ ಮೊಹಮ್ಮದ್ ಇಕ್ಬಾಲ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಸಮುದಾಯದ ಯಾರೂ ಅಧ್ಯಕ್ಷರಾಗಿಲ್ಲ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT