ಶನಿವಾರ, ಏಪ್ರಿಲ್ 1, 2023
32 °C
ಚುನಾವಣೆಗೆ ಮೂರೇ ತಿಂಗಳು; ಸದಸ್ಯರಲ್ಲಿ ಈಗಲೇ ಗರಿಗೆದರಿದ ಮಾತುಕತೆ

ಚಿಕ್ಕಬಳ್ಳಾಪುರ | ನಗರಸಭೆ ಅಧ್ಯಕ್ಷ ಸ್ಥಾನ: ಮೀಸಲಾತಿ ಚರ್ಚೆ

ಡಿ.ಎಂ.ಕುರ್ಕೆ ಪ್ರಶಾಂತ್ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರದ ಅವಧಿ ಏಪ್ರಿಲ್‌ ಕೊನೆಗೆ ಪೂರ್ಣವಾಗಲಿದೆ. ಚುನಾವಣೆಗೆ ಇನ್ನೂ ಮೂರು ತಿಂಗಳ ಅವಧಿ ಇದೆ. ಆದರೆ ಈಗಾಗಲೇ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ವಿಚಾರ ಸದಸ್ಯರ ನಡುವೆ ಚರ್ಚೆಗೆ ಕಾರಣವಾಗಿದೆ.

ಈ ಬಾರಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗುತ್ತದೆ ಎನ್ನುವ ಮಾತುಗಳು ಕೆಲವು ಸದಸ್ಯರದ್ದಾದರೆ ಸಚಿವರ ಸುಧಾಕರ್ ತಮ್ಮ ಆಪ್ತ ಸದಸ್ಯರಿಗೆ ಹುದ್ದೆ ನೀಡಲು ‌ಮೀಸಲಾತಿ ಬದಲಾವಣೆಗೆ ಕೈ ಹಾಕುತ್ತಾರೆಯೇ ಎನ್ನುವ ಗುಸುಗುಸು ಮಾತುಗಳು ಸದಸ್ಯರಲ್ಲಿದೆ. 

2020ರಲ್ಲಿ ರಾಜ್ಯ ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಿತ್ತು. ಆಗ ಅಧ್ಯಕ್ಷ ಸ್ಥಾನ ಎಸ್‌ಸಿ ವರ್ಗಕ್ಕೆ ಮೀಸಲಾಗಿತ್ತು. ಮತ್ತೆ ರಾಜ್ಯ ಸರ್ಕಾರ ಮೀಸಲಾತಿ ಪರಿಷ್ಕೃತಗೊಳಿಸಿತು. ಆಗ ಎಸ್‌ಸಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ದಕ್ಕಿತು. 2020ರ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷೇತರ ಸದಸ್ಯೆ ಡಿ.ಎಸ್.ಆನಂದ ರೆಡ್ಡಿ ಬಾಬು ಅಧ್ಯಕ್ಷರಾದರು. ಬಿಸಿಎಂ–ಎ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನ ಜೆಡಿಎಸ್‌ನ ವೀಣಾ ರಾಮು ಪಾಲಾಯಿತು. ಇದೆಲ್ಲವೂ ಇತಿಹಾಸ.

ಆನಂದರೆಡ್ಡಿ ಮತ್ತು ವೀಣಾ ರಾಮು ಅವರ ಅಧಿಕಾರದ ಅವಧಿ ಮುಂದಿನ 90 ದಿನಗಳಲ್ಲಿ ಪೂರ್ಣವಾಗಲಿದೆ. ಅಷ್ಟರಲ್ಲಿಯೇ ಸದಸ್ಯರ ನಡುವೆ ಚರ್ಚೆಗಳು ಆರಂಭವಾಗಿವೆ. 

2020ರ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ವಿಪ್ ಉಲ್ಲಂಘನೆಯ ಆರೋಪ ಹೊತ್ತ ಕಾಂಗ್ರೆಸ್‌ನ ಐದು ಮಂದಿ ಸದಸ್ಯರು ಇತ್ತೀಚೆಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ‘ನಾವು ಪಕ್ಷದಲ್ಲಿಯೇ ಇದ್ದೇವೆ’ ಎಂದಿದ್ದರು. ಈ ಐದು ಮಂದಿ ಮತ್ತೆ ‘ನಾವು ಕಾಂಗ್ರೆಸ್ ಸದಸ್ಯರು’ ಎನ್ನುತ್ತಿರುವುದು ಮುಂದೆ ನಡೆಯುವ ಚುನಾವಣೆಯ ತಂತ್ರಗಳ ಭಾಗ ಎಂದೇ ವಿಶ್ಲೇಷಿಸಲಾಗುತ್ತಿದೆ. 

ಚಿಕ್ಕಬಳ್ಳಾಪುರ ನಗರ ಹಾಗೂ ಕ್ಷೇತ್ರದಲ್ಲಿ ಪರಿಶಿಷ್ಟ ಸಮುದಾಯದ ಮತದಾರರು ಗಣನೀಯವಾಗಿ ಇದ್ದಾರೆ. ವಿಧಾನಸಭಾ ಚುನಾವಣೆಯೂ ಮೇನಲ್ಲಿ ನಡೆಯುವ ಸಾಧ್ಯತೆ ಇದೆ. ಈ ಎಲ್ಲ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟರ ಪಾಲಾಗಲಿದೆಯೇ? ಸಚಿವ ಡಾ.ಕೆ.ಸುಧಾಕರ್ ಪರಿಶಿಷ್ಟರಿಗೆ ಅಧ್ಯಕ್ಷ ಸ್ಥಾನ ದೊರಕಿಸಿಕೊಡುವರೇ ಅಥವಾ ತಮ್ಮ ಆಪ್ತರಿಗೆ ಅಧಿಕಾರ ಕೊಡಿಸಲು ಮೀಸಲಾತಿಯ ಬದಲಾವಣೆಗೆ ಸರ್ಕಾರದ ಮಟ್ಟದಲ್ಲಿ ಕೈಯಾಡಿಸುವರೇ ಎನ್ನುವ ಚರ್ಚೆ ಸದಸ್ಯರಲ್ಲಿದೆ. 

ನಗರಸಭೆಯಲ್ಲಿ ಕಾಂಗ್ರೆಸ್‌ನ 16, ಜೆಡಿಎಸ್ 2, ಬಿಜೆಪಿ 9 ಮತ್ತು ನಾಲ್ಕು ಮಂದಿ ಪಕ್ಷೇತರ ಸದಸ್ಯರು ಇದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ವೇಳೆ ಕಾಂಗ್ರೆಸ್‌ನ 7 ಸದಸ್ಯರು ವಿಪ್ ಉಲ್ಲಂಘಿಸಿದ್ದರು. ಈ ಹಿನ್ನೆಲೆಯಲ್ಲಿ ಮುಂದೆ ನಡೆಯುವ ಚುನಾವಣೆಯಲ್ಲಿ ಮೀಸಲಾತಿಯ ಜತೆಗೆ ಯಾವ ಪಕ್ಷ, ನಾಯಕರು ಯಾವ ರೀತಿಯ ರಾಜಕೀಯ ‘ಆಟ’ ಹೂಡುವರು ಎನ್ನುವ ಕುತೂಹಲ ನಾಗರಿಕರಲ್ಲಿದೆ.

ಹುಸಿಯಾದ ಸ್ಥಾಯಿ ಸಮಿತಿ ರಚನೆ
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆದು ಎರಡು ವರ್ಷಗಳು ದಾಟಿದೆ. ಆದರೆ ಇಂದಿಗೂ ಚಿಕ್ಕಬಳ್ಳಾಪುರ ನಗರಸಭೆಯ ಸ್ಥಾಯಿ ಸಮಿತಿ ರಚನೆಯ ವಿಚಾರ ನನೆಗುದಿಗೆ ಬಿದ್ದಿದೆ. 2022ರ ಜುಲೈನಲ್ಲಿ ನಡೆದ ನಗರಸಭೆ ಸಾಮಾನ್ಯಸಭೆಯ ಅಜೆಂಡಾದಲ್ಲಿ ಸ್ಥಾಯಿ ಸಮಿತಿ ರಚನೆಯ ವಿಷಯ ಇತ್ತು. ಆದರೆ ‘ಮುಂದಿನ ಸಭೆಯಲ್ಲಿ ಚರ್ಚಿಸೋಣ’ ಎಂದು ಸದಸ್ಯರು ಹೇಳಿದರು. ಸ್ಥಾಯಿ ಸಮಿತಿ ರಚನೆಯ ವಿಚಾರ ಈ ಹಿಂದಿನ ಸಾಮಾನ್ಯ ಸಭೆಯಲ್ಲಿಯೂ ತೀವ್ರ ಚರ್ಚೆಗೆ ಕಾರಣವಾಗಿತ್ತು. ಆ ಸಭೆಯಲ್ಲಿ ಶೀಘ್ರದಲ್ಲಿಯೇ ಸ್ಥಾಯಿ ಸಮಿತಿ ರಚಿಸುವುದಾಗಿ ಅಧ್ಯಕ್ಷರು ಮತ್ತು ಸದಸ್ಯರು ಒಮ್ಮತದಿಂದ ತೀರ್ಮಾನಿಸಿದ್ದರು. ಆದರೆ ಇಂದಿನವರೆಗೂ ಸ್ಥಾಯಿ ಸಮಿತಿ ರಚನೆಯೇ ಆಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು