ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಗ್ಲಿಪೀರ್ ದರ್ಗಾಕ್ಕೆ ಮುಜಾವರ್ ನೇಮಕ

ಸಮೀವುಲ್ಲಾ ಪರ ನ್ಯಾಯಾಲಯ ತೀರ್ಪು
Last Updated 5 ಆಗಸ್ಟ್ 2022, 3:51 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಮುರುಗಮಲ್ಲ ಸಮೀಪವಿರುವ ಹಜರತ್ ಜಂಗ್ಲಿಪೀರ್ ದರ್ಗಾದ ಮುಜಾವರ್ ಸ್ಥಾನವನ್ನು ಸಮೀವುಲ್ಲಾ ಅವರಿಗೆ ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿ ರಜಿಯಾ ಸುಲ್ತಾನಾ ಹಸ್ತಾಂತರಿಸಿದರು.

ದರ್ಗಾದ ಮುಜಾವರ್ ಅಧಿಕಾರದ ಕುರಿತು ಹಾಲಿ ಮುಜಾವರ್ ಬಾಬಾಜಾನ್ ಮತ್ತು ಸಮೀವುಲ್ಲಾ ನಡುವೆ ವಿವಾದ ವಕ್ಫ್ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯವು ಸಮೀವುಲ್ಲಾ ಪರವಾಗಿ ತೀರ್ಪು ನೀಡಿತ್ತು.

ನ್ಯಾಯಾಲಯದ ತೀರ್ಪಿನಂತೆ ದರ್ಗಾ ಮುಜಾವರ್ ಸ್ಥಾನವನ್ನು ಹಸ್ತಾಂತರಿಸುವಂತೆ ಕೋರಿದ್ದರು. ಸಮೀವುಲ್ಲಾ 2 ಬಾರಿ ಕೆಂಚಾರ್ಲಹಳ್ಳಿ ಪೊಲೀಸರ ರಕ್ಷಣೆಯಲ್ಲಿ ತೆರಳಿದ್ದರೂ ಬಾಬಾಜಾನ್ ಅಧಿಕಾರ ಬಿಟ್ಟುಕೊಡಲು ಒಪ್ಪಿರಲಿಲ್ಲ. ಗ್ರಾಮದ ಎರಡು ಗುಂಪುಗಳ ನಡುವೆ ಉದ್ರಿಕ್ತ ವಾತಾವರಣ ಉಂಟಾಗಿತ್ತು. ನ್ಯಾಯಾಲಯದ ಆದೇಶವಿದ್ದರೂ ಅಧಿಕಾರ ಹಸ್ತಾಂತರಿಸದಿರುವುದು ಮತ್ತು ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿಗಳು ಗಮನಹರಿಸದಿರುವುದರ ಬಗ್ಗೆ ಮುಸ್ಲಿಂ ಮುಖಂಡರಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿ ರಜಿಯಾ ಸುಲ್ತಾನ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಜಂಗ್ಲಿಪೀರ್ ದರ್ಗಾಗೆ ಭೇಟಿ ನೀಡಿ ನ್ಯಾಯಾಲಯದ ಆದೇಶದಂತೆ ಸಮೀವುಲ್ಲಾ ಅವರಿಗೆ ಮುಜಾವರ್ ಅಧಿಕಾರವನ್ನು ಹಸ್ತಾಂತರಿಸಿದರು.

ನ್ಯಾಯಾಲಯದ ತೀರ್ಪಿನಲ್ಲಿ ಕೆಲ ವಿಷಯಗಳ ಕುರಿತು ಗೊಂದಲವಿತ್ತು. ಸ್ಪಷ್ಟೀಕರಣಕ್ಕಾಗಿ ರಾಜ್ಯ ವಕ್ಫ್ ಬೋರ್ಡ್ ಮನವಿ ಮಾಡಿದೆ. ಅಲ್ಲಿಂದ ಮಾಹಿತಿ ಬರಲು ತಡವಾದುದರಿಂದ ಇಲ್ಲಿಗೆ ಬರಲಾಗಲಿಲ್ಲ. ಈಗ ಸಮೀವುಲ್ಲಾಗೆ ಮುಜಾವರ್ ಸ್ಥಾನವನ್ನು ಹಸ್ತಾಂತರ ಮಾಡಿದ್ದೇವೆ ಎಂದು ರಜಿಯಾ ಸುಲ್ತಾನಾ ತಿಳಿಸಿದರು.

ಮುರುಗಮಲ್ಲ ದರ್ಗಾ ವ್ಯವಸ್ಥಾಪಕ ತಯ್ಯೂಬ್ ನವಾಜ್, ಆಡಳಿತಾಧಿಕಾರಿ ಸಿ.ಎಸ್.ಬಾಷಾ, ಗ್ರಾಮದ ಮುಖಂಡರಾದ ಅಮಾನುಲ್ಲಾ, ಶಂಕರ್, ಸಲಾಂ, ಚೌಡರೆಡ್ಡಿ ಪಾಳ್ಯದ ಅಫ್ಸರ್ ಪಾಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT