ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2021: ಎತ್ತಿನಹೊಳೆಯತ್ತಲೇ ಹೆಚ್ಚು ನಿರೀಕ್ಷೆ

ರಾಜ್ಯ ಬಜೆಟ್; ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ಅಭಿವೃದ್ಧಿ ನಿರೀಕ್ಷೆ; ಕೈಗಾರಿಕೀಕರಣದ ಕೂಗು
Last Updated 5 ಮಾರ್ಚ್ 2021, 11:21 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾ.8ರಂದು ಮಂಡಿಸುವ ಬಜೆಟ್‌ ಮೇಲೆ ಜಿಲ್ಲೆಯ ಜನರ ದೃಷ್ಟಿ ನೆಟ್ಟಿದೆ. ಜಿಲ್ಲೆಯಲ್ಲಿ ತೆವಳುತ್ತ ಸಾಗಿರುವ ಎತ್ತಿನಹೊಳೆ ಯೋಜನೆಯನ್ನು ಚುರುಕುಗೊಳಿಸಿ ನೀರು ಹರಿಸಲಾಗುತ್ತದೆಯೇ ಎನ್ನುವ ಲೆಕ್ಕಾಚಾರ ಹೆಚ್ಚಿದೆ.

ಪ್ರತಿ ಬಾರಿಯ ರಾಜ್ಯ ಬಜೆಟ್‌ನಲ್ಲಿ ನಮ್ಮ ಜಿಲ್ಲೆಗೆ ಏನೆಲ್ಲ ದಕ್ಕುತ್ತದೆ ಎಂದು ಕಾಯ್ದು ನೋಡುವ ಜನರಿಗೆ ಬಜೆಟ್ ನಿರಾಸೆ ಮೂಡಿಸಿದ್ದೇ ಹೆಚ್ಚು. ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ರೂಪುಗೊಂಡು 12 ವರ್ಷಗಳು ಪೂರೈಸಿದರೂ ಜಿಲ್ಲೆಗೆ ದೊರೆಯಬೇಕಾದ ನ್ಯಾಯ ಈವರೆಗೆ ಸಿಕ್ಕಿಲ್ಲ. ಈ ಬಜೆಟ್‌ನಲ್ಲಾದರೂ ನಮ್ಮ ಕನಸುಗಳು ಕೈಗೂಡಿವೆಯೇ ಎನ್ನುವ ಆಸೆ ಬಯಲುಸೀಮೆ ಜಿಲ್ಲೆಯ ಜನರದ್ದು.

ನೀರಾವರಿ ತಜ್ಞ ಜಿ.ಎಸ್‌. ಪರಮ­ಶಿವಯ್ಯ ವರದಿ ಆಧಾರಿತ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕು ಎಂಬ ನೀರಾವರಿ ಹೋರಾಟಗಾರರ ಬೇಡಿಕೆ ಬದಿಗೊತ್ತಿ ರಾಜ್ಯ ಸರ್ಕಾರ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಿ ಆರು ವರ್ಷಗಳೇ ಸಮೀಪಿಸುತ್ತಿದೆ. ಆದರೆ ಇಲ್ಲಿಯವರೆಗೂ ಯೋಜನೆಯ ಕಾಮಗಾರಿ ತೆವಳುತ್ತಲೇ ಸಾಗಿದೆ. ಒಂದು ಕೆರೆಗೂ ನೀರು ಹರಿಸಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ!

ಕಳೆದ ವರ್ಷದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಎತ್ತಿನಹೊಳೆ ಕಾಮಗಾರಿಗಳಿಗೆ ₹1,500 ಕೋಟಿ ಮೀಸಲಿಟ್ಟಿದ್ದರು. ಆಗ ಜಿಲ್ಲೆಯ ಜನರಲ್ಲಿ ಒಂದಿಷ್ಟು ಆಸೆಗಳು ಮೊಳೆತವು. ಆದರೆ ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎನ್ನುವಂತೆ ₹20 ಸಾವಿರ ಕೋಟಿಯ ಯೋಜನೆಗೆ ₹1,500 ಕೋಟಿ ಯಾವುದಕ್ಕೂ ಸಾಲದು ಎನ್ನುವಂತೆ ಆಯಿತು. ಆ ಹಣ ಚಿಕ್ಕಬಳ್ಳಾಪುರ ಜಿಲ್ಲೆಗೆ ಇಂತಿಷ್ಟು ಮೀಸಲು ಎಂದೇನೂ ಇರಲಿಲ್ಲ. ಈ ಎಲ್ಲ ಕಾರಣದಿಂದ ಕಳೆದ ಬಜೆಟ್ ಜಿಲ್ಲೆಯ ಪಾಲಿಗೆ ನಿರಾಶೆಯನ್ನೇ ತಂದಿತ್ತು. ಈ ಬಾರಿ ಬಜೆಟ್‌ನಲ್ಲಿಯಾದರೂ ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯುವುದೇ ಎನ್ನುವ ನಿರೀಕ್ಷೆ ರೈತರು, ಹೋರಾಟಗಾರರು ಹಾಗೂ ಜನರಲ್ಲಿದೆ.

ಕೈಗಾರಿಕೀರಣದತ್ತ ಆಸೆ: ಬೆಂಗಳೂರಿಗೆ ಸಮೀಪದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆ ಇದೆ. ಬೆಂಗಳೂರು ನೆರೆಹೊರೆಯ ತುಮಕೂರು, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಈಗಾಗಲೇ ಕೈಗಾರಿಕೀಕರಣದ ಪರ್ವ ಆರಂಭವಾಗಿದೆ. ಬೆಂಗಳೂರಿಗೆ 75 ಕಿ.ಮೀ ದೂರದ ತುಮಕೂರಿನಲ್ಲಿಯೇ ವಸಂತ ನರಸಾಪುರ ಬೃಹತ್ ಕೈಗಾರಿಕಾ ಪ್ರದೇಶ ತಲೆ ಎತ್ತುತ್ತಿದೆ. ಆದರೆ 60 ಕಿ.ಮೀ ದೂರದ ಚಿಕ್ಕಬಳ್ಳಾಪುರದಲ್ಲಿ ಕೈಗಾರಿಕೀಕರಣಕ್ಕೆ ಏಕೆ ಒತ್ತು ಸಿಗುತ್ತಿಲ್ಲ ಎನ್ನುವ ಪ್ರಶ್ನೆಯೂ ಜಿಲ್ಲೆಯ ಯುವಸಮುದಾಯದ್ದಾಗಿದೆ. ಕೈಗಾರಿಕೆಗಳ ಸ್ಥಾಪನೆಯು ನೇರವಾಗಿ ಉದ್ಯೋಗಗಳ ಸೃಷ್ಟಿಗೆ ದಾರಿ ಆಗುತ್ತದೆ. ಅಲ್ಲದೆ ಪರೋಕ್ಷವಾಗಿ ನಾನಾ ವಲಯಗಳಿಗೂ ಅನುಕೂಲವಾಗುತ್ತದೆ. ಹೀಗಿದ್ದರೂ ಜಿಲ್ಲೆಯಲ್ಲಿ ಕೈಗಾರಿಕೀಕರಣ ನಗಣ್ಯವಾಗಿದೆ.

ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆ ಸ್ಥಾಪನೆ ಈ ಭಾಗದ ಬಹುಸಂಖ್ಯಾತ ಜನರ ಮತ್ತೊಂದು ಪ್ರಮುಖ ಬೇಡಿಕೆ. ದ್ರಾಕ್ಷಿ, ಟೊಮ್ಯಾಟೊ ಸೇರಿದಂತೆ ವಿವಿಧ ತರಕಾರಿಗಳು ಬೆಲೆ ಕಳೆದುಕೊಂಡಾಗ ಸ್ಥಳೀಯವಾಗಿ ಅವುಗಳನ್ನು ಸಂಸ್ಕರಿಸಿ, ಮೌಲ್ಯವರ್ಧನೆ ಮಾಡುವ ಕೈಗಾರಿಕೆಗಳು ಇಂದಿನ ತುರ್ತು ಅಗತ್ಯ. ಅವುಗಳಿಂದ ಉದ್ಯೋಗ ಸೃಷ್ಟಿ ಕೂಡ ಆಗುತ್ತದೆ ಎಂದು ಹಣ್ಣು, ತರಕಾರಿ ಬೆಳೆಗಾರರು ಪ್ರತಿಪಾದಿಸುತ್ತಾರೆ. ಆದರೆ ಅವರ ಬೇಡಿಕೆಗೆ ಈ ಬಾರಿ ಕೂಡ ಸರ್ಕಾರ ಸ್ಪಂದಿಸಿಲ್ಲ ಎನ್ನುವ ಬೇಸರ ಆ ಬೆಳೆಗಾರರಲ್ಲಿ ಮೂಡಿದೆ. ಈ ಬಾರಿಯಾದರೂ ಸರ್ಕಾರ ಈ ವಿಚಾರದತ್ತ ಗಮನ ಹರಿಸಲಿ ಎನ್ನುವ ಕೂಗು ಕೇಳಿಬರುತ್ತಿದೆ.

ಶಿಡ್ಲಘಟ್ಟದಲ್ಲಿ ಜವಳಿ ಪಾರ್ಕ್‌ ಸ್ಥಾಪನೆಯ ಭರವಸೆ ಸಹ ಈಡೇರಿಲ್ಲ. ಜಿಲ್ಲೆಯಲ್ಲಿ ದ್ರಾಕ್ಷಿಯ ಜತೆ ರೇಷ್ಮೆಯೂ ಪ್ರಮುಖ ಬೆಳೆಯಾಗಿದೆ. ಶಿಡ್ಲಘಟ್ಟದ ರೇಷ್ಮೆಗೂಡು ಮಾರುಕಟ್ಟೆ ರಾಜ್ಯದ ಪ್ರಮುಖ ರೇಷ್ಮೆ ಮಾರುಕಟ್ಟೆಯಾಗಿದೆ. ಜವಳಿ ಪಾರ್ಕ್ ಜಿಲ್ಲೆಯ ರೈತರನ್ನು ಆರ್ಥಿಕವಾಗಿ ಮೇಲೆತ್ತಲಿದೆ ಎನ್ನುವ ಆಸೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT