ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ರಾಜಕೀಯ ಆಟಕ್ಕೆ ದಾಳವಾದ ‘ಪೌರಾಯುಕ್ತ’

ಪ್ರಭಾರ ಹುದ್ದೆಯಿಂದ ಏಕಾಏಕಿ ಉಮಾಶಂಕರ್ ಬಿಡುಗಡೆ: ‘ಕಾಯಂ’ ನೇಮಕಕ್ಕೆ ಗಮನವಹಿಸುವರೇ ಡಾ.ಎಂ.ಸಿ.ಸುಧಾಕರ್
Published : 18 ಸೆಪ್ಟೆಂಬರ್ 2024, 6:51 IST
Last Updated : 18 ಸೆಪ್ಟೆಂಬರ್ 2024, 6:51 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆ ಪೌರಾಯುಕ್ತರ ಹುದ್ದೆ ಈಗ ರಾಜಕೀಯ ನಾಯಕರ ಆಟಗಳಿಗೆ ದಾಳವಾಗಿ ಬಳಕೆ ಆಗುತ್ತಿದೆ. ಕೆಲವು ಸದಸ್ಯರೂ ಈ ‘ಆಟ’ದಲ್ಲಿ ಭಾಗಿಯಾಗಿದ್ದಾರೆ. 

‘ಅರ್ಹತೆ’ಯುಳ್ಳ ಕಾಯಂ ಪೌರಾಯಕ್ತರು ಯಾವಾಗ ನಗರಸಭೆಗೆ ಬರುತ್ತಾರೆ ಎನ್ನುವ ಪ್ರಶ್ನೆ ನಗರಸಭೆ ಆವರಣ ಹಾಗೂ ಚಿಕ್ಕಬಳ್ಳಾಪುರ ನಾಗರಿಕ ವಲಯದಲ್ಲಿದೆ. ಜಿಲ್ಲಾ ಕೇಂದ್ರವಾದ ಕಾರಣ ಚಿಕ್ಕಬಳ್ಳಾಪುರ ನಗರದ ಅಭಿವೃದ್ಧಿಯ ವಿಚಾರದಲ್ಲಿ ಮುತುವರ್ಜಿವಹಿಸುವ  ಜಿಲ್ಲಾ ಉಸ್ತುವಾರಿ ಡಾ.ಎಂ.ಸಿ.ಸುಧಾಕರ್ ಈ ಬಗ್ಗೆ ಗಮನವಹಿಸಬೇಕು ಎನ್ನುವ ಆಗ್ರಹ ಪ್ರಜ್ಞಾವಂತ ವಲಯದಲ್ಲಿ ಇದೆ.

ಇತ್ತೀಚಿನ ವರ್ಷಗಳಲ್ಲಿ ನಗರಸಭೆ ಪೌರಾಯುಕ್ತರ ಹುದ್ದೆ ರಾಜಕೀಯ ದಾಳವಾಗುತ್ತಿದೆ ಎನ್ನುವುದಕ್ಕೆ ಅವರ ವರ್ಗಾವಣೆಗಳೇ ಸಾಕ್ಷಿ. 2021ರ ತರುವಾಯ ಅಧಿಕಾರವಹಿಸಿಕೊಂಡ ಯಾವ ಪೌರಾಯುಕ್ತರೂ ಸಹ ಒಂದು ವರ್ಷ ಅಧಿಕಾರವನ್ನು ಪೂರ್ಣಗೊಳಿಸಿಲ್ಲ. 2021ರ ತರುವಾಯ ಆರು ಮಂದಿ ಪೌರಾಯುಕ್ತರ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ. 

2016ರಿಂದ 2019ರಲ್ಲಿ ಉಮಾಕಾಂತ್ ಮತ್ತು 2019ರಿಂದ 2021ರವರೆಗೆ ಡಿ.ಲೋಹಿತ್ ನಗರಸಭೆಯ ಪೌರಾಯುಕ್ತರಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಅವಧಿಯಲ್ಲಿ ಪೌರಾಯುಕ್ತರಾಗಿ ಕೆಲಸ ಮಾಡಿದವರು ಈ ಇಬ್ಬರಾಗಿದ್ದಾರೆ. 

2021 ಆಗಸ್ಟ್ 18ರಿಂದ 19ರವರೆಗೆ ಅಂದರೆ ಕೇವಲ ಒಂದೇ ದಿನ ಮಾತ್ರ ಡಿ.ಎನ್.ಮಾಧವನ್ ಪ್ರಭಾರ ಪೌರಾಯುಕ್ತರಾಗಿದ್ದರು. 2021 ಆ.19ರಿಂದ 2022ರ ಜು.15ರವರೆಗೆ ಎನ್.ಮಹಾಂತೇಶ್, 2022ರಜು.15ರಿಂದ 2022ರ ಸೆ.2ರವರೆಗೆ ಎಂ.ರೇಣುಕ ಈ ಹುದ್ದೆಯಲ್ಲಿ ಇದ್ದರು.

ಉಮಾಶಂಕರ್ 2022ರ ಸೆ.2ರಿಂದ 2023ರ ಮಾ.20ರವರೆಗೆ ಪ್ರಭಾರ ಪೌರಾಯುಕ್ತರಾಗಿ ಕೆಲಸ ನಿರ್ವಹಿಸಿದರು. ನಂತರ 2023ರ ಮಾ.21ರಿಂದ 2023ರ ಆ.16ರವರೆಗೆ ಪಂಪಾಶ್ರೀ ಯು.ಪಿ ಕೆಲಸ ಮಾಡಿದರು. 2023ರ ಆ.16ರಿಂದ ಮಂಜುನಾಥ್ ಪೌರಾಯುಕ್ತರಾಗಿ ನೇಮಕವಾದರು. ಮಂಜುನಾಥ್ ವರ್ಗಾವಣೆಯ ನಂತರ ಮತ್ತೆ ಉಮಾಶಂಕರ್ ಅವರಿಗೆ ಪ್ರಭಾರ ಜವಾಬ್ದಾರಿ ನೀಡಲಾಯಿತು.

ಈಗ ನಗರಸಭೆ ಪೌರಾಯುಕ್ತರ ಹುದ್ದೆಯಲ್ಲಿದ್ದ ಸಹಾಯಕ ಪರಿಸರ ಎಂಜಿನಿಯರ್ ಉಮಾಶಂಕರ್ ಅವರನ್ನು ಪೌರಾಯುಕ್ತರ ಹುದ್ದೆಯಿಂದ ಏಕಾಏಕಿ ಬಿಡುಗಡೆಗೊಳಿಸಲಾಗಿದೆ. ಉಪವಿಭಾಗಾಧಿಕಾರಿ ಅವರನ್ನು ಪ್ರಭಾರ ಪೌರಾಯುಕ್ತರನ್ನಾಗಿ ನೇಮಿಸಲಾಗಿದೆ. 

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಫಲಿತಾಂಶ ಮಂಗಳವಾರ ಘೋಷಿಸಲಾಯಿತು. ಇದೇ ದಿನವೇ ಉಮಾಶಂಕರ್ ಅವರನ್ನು ಪ್ರಭಾರ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. ಪ್ರಭಾರದಲ್ಲಿದ್ದಾಗ ಅವರು ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು. ನಾಗರಿಕರು ಮತ್ತು ಸದಸ್ಯರು ಸಮಸ್ಯೆಗಳ ಬಗ್ಗೆ ದೂರು ನೀಡಿದ ತಕ್ಷಣವೇ ಸ್ಪಂದಿಸುತ್ತಿದ್ದರು ಎನ್ನುವ ಮಾತು ನಾಗರಿಕ ಮತ್ತು ಸದಸ್ಯ ವಲಯದಲ್ಲಿ ಇದೆ. ಈಗ ಅವರ ಬದಲಾವಣೆಯು ‘ರಾಜಕೀಯ ಆಟ’ದ ಭಾಗವೇ ಆಗಿದೆ ಎನ್ನುವ ಮಾತುಗಳು ನಗರಸಭೆ ಅಂಗಳದಲ್ಲಿ ಕೇಳಿ ಬರುತ್ತಿವೆ.

ನಗರಸಭೆ ಪೌರಾಯುಕ್ತರು ‘ಹೊಂದಿಕೊಳ್ಳದಿದ್ದರೆ’ ಅವರನ್ನು ವರ್ಗಾವಣೆ ಮಾಡಿಸುವ ಗುಂಪೇ ನಗರಸಭೆಯಲ್ಲಿ ಇದೆ. ಪೌರಾಯುಕ್ತರಾಗಿ ಉತ್ತಮವಾಗಿ ಹೆಸರುಗಳಿಸಿದ್ದ ಮತ್ತು ಆದಾಯ ಸೋರಿಕೆ ತಡೆಗೆ ಕ್ರಮವಹಿಸಿದ್ದ ಮುಂಜುನಾಥ್ ಅವರನ್ನು ‘ಹರಾಜಿನ ಲಾಬಿ’ ವರ್ಗಾವಣೆ ಮಾಡಿಸಿತು. 

ಕಾಯಂ ಪೌರಾಯುಕ್ತರ ಬಗ್ಗೆ ಗಮನವಹಿಸುವರೇ ಸಚಿವರು:

30 ವರ್ಷಗಳ ಹಿಂದೆ ನಗರದ ಸಂತೆ ಮಾರುಕಟ್ಟೆಯಲ್ಲಿರುವ ನಗರಸಭೆಯ ಮಳಿಗೆಗಳ ಹರಾಜು ನಡೆದಿತ್ತು. ಪೌರಾಡಳಿತ ನಿಯಮಗಳ ಪ್ರಕಾರ 12 ವರ್ಷಗಳಿಗೆ ಮರು ಹರಾಜು ನಡೆಯಬೇಕು. ಈ ಹರಾಜು ನಡೆಸಲು ಮುಂದಾದ ತಕ್ಷಣವೇ ಮಂಜುನಾಥ್ ವರ್ಗಾವಣೆ ಆಯಿತು. 

‘ಅರ್ಹ ಪೌರಾಯುಕ್ತರನ್ನು ನೇಮಿಸುವಂತೆ ನ್ಯಾಯಾಲಯವು ಆದೇಶಿಸಿದೆ. ಹರಾಜು ನಡೆಸಿದರೆ ಯಾರಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಆದ್ದರಿಂದ ಬೇರೊಬ್ಬ ಪೌರಾಯುಕ್ತರು ಬಂದ ನಂತರ ಹರಾಜು ಪ್ರಕ್ರಿಯೆ ನಡೆಸಲಾಗುವುದು’ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ಹರಾಜಿನ ತಡೆ ನೀಡಿದ್ದ ಸಮಯದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದರು.

ಮಳಿಗೆ ಹರಾಜು ಸೇರಿದಂತೆ ವಿವಿಧ ಹರಾಜು ಪ್ರಕ್ರಿಯೆಗಳು ಇಂದಿಗೂ ನಡೆದಿಲ್ಲ. ಇದರಿಂದ ನಗರಸಭೆಯ ಆದಾಯ ಸೋರಿಕೆ ಆಗುತ್ತಿರುವುದು ಎದ್ದು ಕಾಣುತ್ತಿದೆ.  

ಸಚಿವರು ನಗರಸಭೆಗೆ ಕಾಯಂ ಮತ್ತು ಅರ್ಹ ಪೌರಾಯುಕ್ತರ ನೇಮಕಕ್ಕೆ ಕ್ರಮವಹಿಸಬೇಕು. ಆ ಮೂಲಕ ಆದಾಯ ಸೋರಿಕೆಗೆ ತಡೆ ನೀಡಬೇಕು ಎಂದು ಚಿಕ್ಕಬಳ್ಳಾಪುರದ ಪ್ರಜ್ಞಾವಂತ ನಾಗರಿಕರು ಆಗ್ರಹಿಸುವರು. 

ಮುಂದಾದರೂ ಬರುವರೆ ‘ಅರ್ಹರು’  

ಚಿಕ್ಕಬಳ್ಳಾಪುರ ನಗರಸಭೆ ಇತಿಹಾಸದಲ್ಲಿ ನ್ಯಾಯಾಲಯದ ಮೊರೆ ಹೋಗಿ ‘ಅರ್ಹತೆ’ಯ ಕಾರಣದಿಂದ ‍ಪೌರಾಯುಕ್ತರನ್ನು ಬದಲಾಯಿಸಿದ್ದು ಇದೇ ಮೊದಲು. ಈ ಹಿಂದಿನ ಪೌರಾಯುಕ್ತರಲ್ಲಿ ಬಹಳಷ್ಟು ಮಂದಿ ‘ಅರ್ಹತೆ’ ಇಲ್ಲದಿದ್ದರೂ ಈ ಬಗ್ಗೆ ಯಾರೂ ಪ್ರಶ್ನಿಸಿರಲಿಲ್ಲ. ಜಿಲ್ಲೆಯ ಇತರೆ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ‘ಅರ್ಹತೆ’ ಹೊಂದಿರುವವರು ಪೌರಾಯುಕ್ತರಾಗಿ ಕೆಲಸ ನಿರ್ವಹಿಸುತ್ತಿಲ್ಲ. ಹೀಗಿದ್ದರೂ ಚಿಕ್ಕಬಳ್ಳಾಪುರ ಪೌರಾಯುಕ್ತರ ಅರ್ಹತೆಯನ್ನು ಮಾತ್ರ ಪ್ರಶ್ನಿಸಲಾಯಿತು. ಈ ಅರ್ಹತೆಯ ಪ್ರಶ್ನೆಯ ಹಿಂದಿದ್ದು ಸಹ ರಾಜಕೀಯ ಆಟಗಳೇ ಆಗಿವೆ.  ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ನಗರಸಭೆಗೆ ನೇಮಕವಾಗುವ ಪೌರಾಯುಕ್ತರನ್ನು ಅರ್ಹರನ್ನೇ ನೇಮಿಸಲಾಗುತ್ತದೆಯೇ? ಅಥವಾ ಹೀಗೆ ಕಾಲವನ್ನು ದೂಡಲಾಗುತ್ತದೆಯೇ ಎನ್ನುವ ‍ಪ್ರಶ್ನೆ ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT