ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಪ್ರಜಾ ಸಂಘರ್ಷ ಸಮಿತಿ ಕಾರ್ಯಕರ್ತರಿಗೆ ಅನ್ಯ ಪಕ್ಷಗಳ ನಾಯಕರ ಗಾಳ

Last Updated 19 ಮೇ 2022, 10:19 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿ.ವಿ.ಶ್ರೀರಾಮರೆಡ್ಡಿ ನಿಧನದ ನಂತರ ಪ್ರಜಾ ಸಂಘರ್ಷ ಸಮಿತಿಯಲ್ಲಿ (ಪಿಎಸ್‌ಎಸ್) ರಾಜಕೀಯ ನಿರ್ವಾತ ಉಂಟಾಗಿದೆ. ಪಿಎಸ್‌ಎಸ್ ಕಾರ್ಯಕರ್ತರನ್ನು ಸೆಳೆಯಲು ವಿವಿಧ ರಾಜಕೀಯ ಪಕ್ಷಗಳು ಮತ್ತು ಮುಖಂಡರು ಕಸರತ್ತು ನಡೆಸಿದ್ದಾರೆ.

ಪಿಎಸ್‌ಎಸ್ ರಾಜಕೀಯ ಹಾದಿಯ ಕುರಿತು ಸಾಮಾಜಿಕ ಜಾಲತಾಣಗಳು ಮತ್ತು ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದೆ.

ಗುಡಿಬಂಡೆ, ಬಾಗೇಪಲ್ಲಿ ಮತ್ತು ಗೌರಿಬಿದನೂರು ತಾಲ್ಲೂಕಿನಲ್ಲಿ ಪಿಎಸ್‌ಎಸ್ ತನ್ನದೇ ಪಡೆಯನ್ನು ಹೊಂದಿದೆ. ಅದರಲ್ಲಿಯೂ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕು ಒಳಗೊಂಡ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಬಲ್ಯ ಹೆಚ್ಚಿದೆ. ಶಿಡ್ಲಘಟ್ಟ, ಚಿಂತಾಮಣಿ ತಾಲ್ಲೂಕಿನಲ್ಲಿಯೂ ಘಟಕಗಳು ಇವೆ.

ಸಿಪಿಎಂನಿಂದ ಶ್ರೀರಾಮರೆಡ್ಡಿ ಹೊರ ಹೋದ ನಂತರ ಪ್ರಜಾ ಸಂಘರ್ಷ ಸಮಿತಿ ಸ್ಥಾಪಿಸಿದರು. ಇದರ ಜಿಲ್ಲಾ ಸಂಚಾಲಕರಾದ ಶ್ರೀರಾಮರೆಡ್ಡಿ ಅವರೇ ಪಿಎಸ್‌ಎಸ್‌ನ ವರಿಷ್ಠರೂ ಆಗಿದ್ದರು. ಅವರ ನಿಧನ ಪಿಎಸ್‌ಎಸ್ ಕಾರ್ಯಕರ್ತರನ್ನು ಚದುರುವಂತೆ ಮಾಡಿದೆ. ನಾಯಕತ್ವದ ಕೊರತೆಯನ್ನು ಮೂಡಿಸಿದೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಾಯಕರ ಗಾಳಕ್ಕೆ ಸಮಿತಿಯ ಸದಸ್ಯರು ಚದುರದಂತೆ ಮಾಡುವುದು ಪಿಎಸ್‌ಎಸ್ ಮುಖಂಡರಿಗೂ ಸವಾಲಾಗಿದೆ.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಪಿಎಸ್‌ಎಸ್ ಕಾರ್ಯಕರ್ತರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ನಾನಾ ಆಟಗಳನ್ನು ಹೂಡಿದ್ದಾರೆ. ಜಿ.ವಿ.ಶ್ರೀರಾಮರೆಡ್ಡಿ ಅವರ ಮಾತೃಪಕ್ಷ ಸಿಪಿಎಂ ಸಹ ಪಿಎಸ್‌ಎಸ್ ಮುಖಂಡರನ್ನು ಸಂಪರ್ಕಿಸಿದೆ. ಈ ಹಿಂದೆ ಸಿಪಿಎಂನಲ್ಲಿ ಇದ್ದವರೇ ಈಗ ಪಿಎಸ್‌ಎಸ್‌ನಲ್ಲಿ ಇದ್ದಾರೆ.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿಯೂ ಪಿಎಸ್‌ಎಸ್ ಕಾರ್ಯಕರ್ತರು ಇದ್ದಾರೆ. ಈ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಚುನಾವಣೆಗಳನ್ನು ಶ್ರೀರಾಮರೆಡ್ಡಿ ನಡೆಸಿದ್ದಾರೆ. ಸಹಜವಾಗಿ ಅವರ ಅಭಿಮಾನಿ ಬಳಗ ದೊಡ್ದದಿದೆ. ಅವರ ನಿಧನದ ರಾಜಕೀಯ ಲಾಭವನ್ನು ಪಡೆಯಲು ಈಗ ಎಲ್ಲ ಪಕ್ಷಗಳು ಸಹ ಮುಂದಾಗಿವೆ.

ಪಿಎಸ್‌ಎಸ್ ಕಾರ್ಯಕರ್ತರು, ಮುಖಂಡರ ಮನವೊಲಿಸಿ ತಮ್ಮ ಪಕ್ಷದ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ಭಾಗವಾಗಿ ಮುಖಂಡರನ್ನು ಸಂಪರ್ಕಿಸುತ್ತಿದ್ದಾರೆ. ಪಿಎಸ್‌ಎಸ್ ಒಲವು ಯಾವ ಕಡೆ ಎನ್ನುವ ಚರ್ಚೆ ಬಿರುಸಾಗಿ ನಡೆಯುತ್ತಿದೆ.

‘ನಮ್ಮ ಮೇಲೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯವರು ದೊಡ್ಡ ಮಟ್ಟದಲ್ಲಿ ಒತ್ತಡ ಹೇರುತ್ತಿದ್ದಾರೆ.ಇವರು ನಮ್ಮ ಕಡೆ ಬರುತ್ತಾರೆ. ಇವರು ಆ ಕಡೆ ಸೇರುವುದಿಲ್ಲ ಎನ್ನುವ ಚರ್ಚೆಗಳು ನಡೆಯುತ್ತಿವೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ಇದೆ. ನಿಮ್ಮ ಮುಂದಿನ ನಡೆ ಏನು ಎಂದು ಎಲ್ಲರೂ ಕೇಳುತ್ತಿದ್ದಾರೆ’ ಎಂದು ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಹ ಸಂಚಾಲಕ ಚನ್ನರಾಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆರಳೆಣಿಕೆಯಷ್ಟು ಕಾರ್ಯಕರ್ತರು ಮಾತ್ರ ಚದುರಬಹುದು. ಜಿವಿಎಸ್ ಮೇಲೆ ಅಭಿಮಾನ ಇದ್ದವರು ತುಂಬಾ ಇದ್ದಾರೆ. ಶ್ರೀರಾಮರೆಡ್ಡಿ ಅವರನ್ನು ಪಕ್ಷದಿಂದ ಹೊರಗೆ ಹಾಕಿದರು ಎಂದು ಕೆಲವರಿಗೆ ಸಿಪಿಎಂ ಮೇಲೆ ಸಿಟ್ಟು ಇದೆ. ನಾವು ಇಲ್ಲಿಯವರೆಗೂ ವಿರೋಧಿಸಿಕೊಂಡ ಬಂದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಜತೆ ಹೋಗಲು ಸಾಧ್ಯವಿಲ್ಲ. ಮೇ 25ರ ನಂತರ ಪಿಎಸ್‌ಎಸ್ ರಾಜಕೀಯ ನಡೆಯು ತೀರ್ಮಾನವಾಗಲಿದೆ’ ಎಂದರು.

ಬಾಗೇಪಲ್ಲಿಯಲ್ಲಿ ಶ್ರೀರಾಮರೆಡ್ಡಿ ಅವರ ಪುತ್ಥಳಿ ಮತ್ತು ಸ್ಥೂಪ ನಿರ್ಮಾಣವಾಗಬೇಕು. ಅವರ ಪುಸ್ತಕಗಳು, ಸದನದಲ್ಲಿನ ಮಾತುಗಳು ಹೀಗೆ ಎಲ್ಲವನ್ನೂ ಸಂಗ್ರಹಿಸಿ ಅವರ ಹೆಸರಿನಲ್ಲಿ ವಸ್ತು ಸಂಗ್ರಹಾಲಯ ಮಾಡಬೇಕು ಎನ್ನುವ ಉದ್ದೇಶವಿದೆ ಎಂದು ಹೇಳಿದರು.

***

‘ಕಾರ್ಯಕರ್ತರ ಅಭಿಪ್ರಾಯಕ್ಕೆ ಮಣೆ’

ಮುಂದಿನ ವಿಧಾನಸಭಾ ಚುನಾವಣೆಯಲ್ಲಿಪಿಎಸ್‌ಎಸ್ ಅಸ್ತಿತ್ವ ಉಳಿಸಿಕೊಳ್ಳಬೇಕೆ ಅಥವಾ ಸಿಪಿಎಂ ಸೇರಿದಂತೆ ಯಾವ ಪಕ್ಷದ ಜತೆ ಹೋಗಬೇಕು ಎನ್ನುವ ಚರ್ಚೆ ಕಾರ್ಯಕರ್ತರು ಮತ್ತು ಮುಖಂಡರಲ್ಲಿದೆಎಂದು ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಹ ಸಂಚಾಲಕ ಚನ್ನರಾಯಪ್ಪ ತಿಳಿಸಿದರು.

ಮೇ 25ರಂದು ಜಿ.ವಿ.ಶ್ರೀರಾಮರೆಡ್ಡಿ ಅವರ ಶ್ರದ್ಧಾಂಜಲಿ ಸಭೆ ಇದೆ. ಆ ತರುವಾಯ ಪಿಎಸ್‌ಎಸ್ ಕಾರ್ಯಕರ್ತರ ಅಭಿಪ್ರಾಯ ಆಧರಿಸಿ ಮುಂದಿನ ನಡೆ ಅನುರಿಸುತ್ತೇವೆ. ಈಗಾಗಲೇ ಪಿಎಸ್‌ಎಸ್ ಬಗ್ಗೆ ಅಪಪ್ರಚಾರಗಳು ನಡೆಯುತ್ತಿವೆ ಎಂದರು.

ಸದ್ಯ ರಾಜಕೀಯವಾಗಿ ಯಾವುದೇ ತೀರ್ಮಾನಕೈಗೊಂಡಿಲ್ಲ.ನಮ್ಮ ಕಾರ್ಯಕರ್ತರು ಮತ್ತು ಮುಖಂಡರನ್ನು ಬೇರೆ ಪಕ್ಷಗಳವರು ಸಂಪರ್ಕಿಸುತ್ತಿದ್ದಾರೆ. ಬೇರೆ ಪಕ್ಷಗಳವರೇ ನಮ್ಮಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ದೂರಿದರು.

***

ಶ್ರದ್ಧಾಂಜಲಿ ಸಭೆ; ಪಕ್ಷಾತೀತ ಆಹ್ವಾನ

ಮೇ 25ರಂದು ಬಾಗೇಪಲ್ಲಿಯಲ್ಲಿ ಜಿ.ವಿ.ಶ್ರೀರಾಮರೆಡ್ಡಿ ಅವರ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿದೆ. ಪಿಎಸ್‌ಎಸ್ ಮತ್ತು ಶ್ರೀರಾಮರೆಡ್ಡಿ ಅವರು ಅಭಿಮಾನಿಗಳು ಹಮ್ಮಿಕೊಂಡಿರುವ ಈ ಸಭೆಗೆ ಪಕ್ಷಾತೀತವಾಗಿ ರಾಜಕೀಯ ಮುಖಂಡರನ್ನು ಆಹ್ವಾನಿಸಲಾಗಿದೆ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಡಾ.ಕೆ.ಸುಧಾಕರ್, ಶಾಸಕರಾದ ಕೆ.ಆರ್.ರಮೇಶ್ ಕುಮಾರ್, ವಿ.ಮುನಿಯಪ್ಪ, ಶಿವಶಂಕರರೆಡ್ಡಿ, ಸುಬ್ಬಾರೆಡ್ಡಿ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್,ಸಿಪಿಎಂ ರಾಜ್ಯ ಕಾರ್ಯದರ್ಶಿ ಬಸವರಾಜು ಮತ್ತಿತರರು ಪಾಲ್ಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT