ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಒಂದು ವಳಲೆ ಕತ್ತೆ ಹಾಲಿಗೆ ₹100

ಹಾಲು ಬೇಕಾ ಹಾಲು ಕತ್ತೆ ಹಾಲು..
Last Updated 31 ಜನವರಿ 2022, 3:39 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ‘ಕತ್ತೆಹಾಲು ಬೇಕಾ ಕತ್ತೆ ಹಾಲು, ದಮ್ಮು, ಕೆಮ್ಮು, ವಾಯು, ಕಫ, ಶೀತ, ನೆಗಡಿ ಎಲ್ಲಾ ಮಾಯ ಕತ್ತೆಹಾಲು... ಮಕ್ಳು ಮರಿ, ದೊಡ್ಡೋರ್‌, ಚಿಕ್ಕೋರ್‌ ಎಲ್ಲರಿಗೂ ಕತ್ತೆಹಾಲು....!’ ಇದು ಯಾವುದೋ ನಾಟಕದ ಸಂಭಾಷಣೆಯಲ್ಲ, ಬದಲಾಗಿ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಈಚೆಗೆ ಈ ರೀತಿಯ ಧ್ವನಿಯೊಂದು ಕೇಳಿ ಬರುತ್ತಿತ್ತು.

ಈ ಧ್ವನಿ ಕೇಳಿದೊಡನೇ ಮಹಿಳೆಯರು ಅಡುಗೆ ಮನೆಯಲ್ಲಿದ್ದ ಪುಟ್ಟ ಲೋಟವನ್ನು ಒಂದು ಕೈಲಿ ಹಿಡಿದು ಕಂಕುಳಲ್ಲಿ ಮಗುವನ್ನು ಇನ್ನೊಂದು ಕೈಲಿ ಹಿಡಿದುಕೊಂಡು ಓಡುತ್ತಿದ್ದುದು ಮತ್ತೂ ವಿಶೇಷವಾಗಿತ್ತು.

ಕತ್ತೆಯನ್ನಿಡಿದುಕೊಂಡು ಬಂದಿದ್ದ ಮಂಚೇನಹಳ್ಳಿ ಮೂಲದ ಜಗದೀಶಪ್ಪ, ಒಂದು ವಳಲೆ ಹಾಲನ್ನು ಕರೆದು ಮಹಿಳೆಯರು ತಂದಿದ್ದ ಲೋಟಕ್ಕೆ ಸುರಿದು ₹100 ಪಡೆಯುತ್ತಿದ್ದ. ಮಹಿಳೆಯರು ಬೆಚ್ಚಗಿರುವ ಆ ಹಾಲನ್ನು ಮಕ್ಕಳನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕುಡಿಸುತ್ತಿದ್ದರು. ಇದನ್ನು ನೋಡಿದ ದೊಡ್ಡವರೂ ₹100 ನೀಡಿ ತಾವೂ ಕುಡಿದರೆ, ಇನ್ನು ಕೆಲವರು ಮನೆಗಳಿಗೆ ಕೊಂಡೊಯ್ಯುತ್ತಿದ್ದರು.

ಕತ್ತೆ ಎಂಬುದು ಅಪಹಾಸ್ಯಕ್ಕೊಳಗಾದ ಪ್ರಾಣಿಯೂ ಹೌದು. ಆದರೆ, ಕತ್ತೆಯ ಹಾಲಿನ ಪೌಷ್ಟಿಕಾಂಶದ ಗುಣ ನಗೆಯ ವಿಷಯವಲ್ಲ. ಕತ್ತೆಯ ಹಾಲು ಈಜಿಪ್ಟಿನ ರಾಜಕುಮಾರಿ ಕ್ಲಿಯೋಪಾತ್ರಾಳ ಮಿಂಚುವ ಸೌಂದರ್ಯಕ್ಕೆ ಕಾರಣವಾಗಿತ್ತೆನ್ನಲಾಗಿದೆ. ನವಜಾತ ಶಿಶುಗಳಿಗೆ ಉತ್ತಮ ಔಷಧೀಯ ಸತ್ತ್ವ ಕತ್ತೆಯ ಹಾಲಿನಲ್ಲಿದೆಯೆಂಬುದು ಬಹುತೇಕರ ನಂಬಿಕೆ. ಕತ್ತೆಯ ಹಾಲು ತಾಯಿಯ ಹಾಲಿಗೆ ಸಮಾನವಾದುದಾದರೂ, ಅದರಲ್ಲಿ ಪ್ರೋಟೀನ್ ಹಾಗೂ ಕೊಬ್ಬಿನಾಂಶ ಕಡಿಮೆಯಿದ್ದು, ಲ್ಯಾಕ್ಟೋಸ್‌ನ ಅಂಶ ಹೆಚ್ಚಿದೆ. ಕತ್ತೆಯ ಹಾಲು ಅಸ್ತಮಾದಿಂದ ಬಳಲುವ ನವಜಾತ ಶಿಶುಗಳಿಗೆ ಅತ್ಯುತ್ತಮ ಔಷಧಿ, ಕ್ಷಯ ಹಾಗೂ ಗಂಟಲು ಬೇನೆಗಳನ್ನು ಅದು ನಿವಾರಿಸುತ್ತದೆಂದು ಆಯುರ್ವೇದದ ತಜ್ಞರೂ ಹೇಳಿರುವುದರಿಂದ ಅದಕ್ಕೆ ಬೇಡಿಕೆ ಕುದುರಿದೆ.

‘ಒಂದು ಕತ್ತೆಯು ದಿನವೊಂದಕ್ಕೆ ಸುಮಾರು 300 ಎಂ.ಎಲ್‌. ನಿಂದ ಅರ್ಧ ಲೀಟರ್‌ ಹಾಲು ನೀಡುತ್ತದೆ. ಕತ್ತೆಮರಿಗಳಿಗಳು ಕುಡಿದು ಬಿಟ್ಟಿದ್ದನ್ನು ನಾವು ಹಳ್ಳಿ ಹಳ್ಳಿ ತಿರುಗಿ ಮಾರಾಟ ಮಾಡಬೇಕು. ಹೆಚ್ಚೆಂದರೆ ದಿನಕ್ಕೆ ₹600ರಿಂದ ₹800ರೂ ಸಂಪಾದಿಸುತ್ತೇವೆ. ಸದಾ ಇದನ್ನೇ ನಂಬುವುದೂ ಕಷ್ಟ. ಒಂದೊಂದು ಪ್ರದೇಶದಲ್ಲಿ ಬೀಡುಬಿಟ್ಟು ಸುತ್ತಲಿನ ಹಳ್ಳಿಗಳಲ್ಲಿ ಸುತ್ತಾಡಿ ನಂತರ ವಾಪಸ್‌ ನಮ್ಮ ಸ್ಥಳಗಳಿಗೆ ತೆರಳುತ್ತೇವೆ’ ಎನ್ನುತ್ತಾರೆ ಕತ್ತೆಯ ಮಾಲೀಕ ಮಂಚೇನಹಳ್ಳಿಯಿಂದ ಬಳಿಯಿಂದ ಬಂದ ಜಗದೀಶಪ್ಪ.

‘ಕಾರ್ಯವಾಸಿ ಕತ್ತೆಕಾಲು ಹಿಡಿ’ ಎಂಬ ಹಳೆಗಾದೆಯನ್ನು ಈಗ ‘ಕಾಯಿಲೆ ವಾಸಿಗೆ ಕತ್ತೆ ಹಾಲು ಕುಡಿ’ ಎಂದು ಬದಲಾಯಿಸಿಕೊಳ್ಳುವಂತೆ ಕತ್ತೆಹಾಲು ಮಾರಾಟವಾಗುತ್ತಿದೆ. ಇತ್ತ ₹25ಗಳಿಗೆ ಒಂದು ಲೀಟರ್‌ ಹಸುವಿನ ಹಾಲು ಕೊಡುತ್ತೀವಿ ಎಂದರೂ ಮುಖಹಾಯಿಸದ ಜನರು ಕತ್ತೆಹಾಲಿಗೆ ಮುಗಿಬಿದ್ದಿರುವುದು ಸೋಜಿಗ’ ಎಂದು ಅಪ್ಪೇಗೌಡನಹಳ್ಳಿಯ ಎ.ಎಂ.ತ್ಯಾಗರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT