ಸೋಮವಾರ, ಜುಲೈ 26, 2021
26 °C

ಬಾಗೇಪಲ್ಲಿ: ಬಸ್‌ ಸೌಲಭ್ಯಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ಲಾಕ್‌ಡೌನ್‌ ಸಡಿಲಿಕೆಯಾಗಿದ್ದರೂ ಪಟ್ಟಣದಿಂದ ಪಕ್ಕದ ತಾಲ್ಲೂಕು ಹಾಗೂ ಹೋಬಳಿ ಕೇಂದ್ರಕ್ಕೆ ತೆರಳಲು ಸಮರ್ಪಕ ಬಸ್‌ ಸೌಲಭ್ಯ ಇಲ್ಲದೆ ಜನರು ಪರದಾಡುತ್ತಿದ್ದಾರೆ.

ಸಮಯಕ್ಕೆ ಸರಿಯಾಗಿ ಬಸ್‌ ಸೌಲಭ್ಯ ಇಲ್ಲದಿರುವುದರಿಂದ ಸರ್ಕಾರಿ ನೌಕರರು ಬಸ್‌ ನಿಲ್ದಾಣಗಳಲ್ಲಿಯೇ ಕಾಯುವಂತಾಗಿದೆ.

ಶಾಲೆಗಳಲ್ಲಿ ವಿದ್ಯಾರ್ಥಿಗಳು ಇಲ್ಲದಿದ್ದರೂ ಶಿಕ್ಷಕರು ಕಡ್ಡಾಯವಾಗಿ ಶಾಲೆಯಲ್ಲಿ ಇರಬೇಕು ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಹಾಗಾಗಿ ನಿತ್ಯ ಬೆಳಿಗ್ಗೆ 6ರಿಂದ 10 ಹಾಗೂ ಸಂಜೆ 3ರಿಂದ 5 ಗಂಟೆವರೆಗೆ ಬಸ್‌ಗಳನ್ನು ಬಿಡಬೇಕು ಎಂದು ಸರ್ಕಾರಿ ನೌಕರರು ಮನವಿ ಮಾಡಿದ್ದಾರೆ.

ತಾಲ್ಲೂಕಿನ ಚೇಳೂರು, ಚಾಕವೇಲು, ಬಿಳ್ಳೂರು, ಗೂಳೂರು, ಮಿಟ್ಟೇಮರಿ, ಪಾತಪಾಳ್ಯಕ್ಕೆ ತೆರಳಲು ತೊಂದರೆಯಾಗುತ್ತಿದೆ. 20- 30 ಕಿ.ಮೀ. ಆಟೊಗಳಲ್ಲಿ ಪ್ರಯಾಣಿಸಬೇಕಾಗಿದೆ. ಬೆಳಿಗ್ಗೆ, ಸಂಜೆ ಹೆಚ್ಚಿನ ಬಸ್‌ಗಳನ್ನು ಬಿಡಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.

ಚಿಂತಾಮಣಿಯಿಂದ ತಾಲ್ಲೂಕಿನ ವಿವಿಧ ಶಾಲೆಗಳಿಗೆ 10 ಶಿಕ್ಷಕಿಯರು ಪ್ರಯಾಣ ಮಾಡುತ್ತಿದ್ದಾರೆ. ಬೆಳಿಗ್ಗೆ 8.30ರ ವರೆಗೂ ಬಸ್‌ ಇಲ್ಲ. ಕನಿಷ್ಠ 2 ಗಂಟೆ ಪ್ರಯಾಣಿಸಬೇಕು. ನಿಗದಿತ ಸಮಯಕ್ಕೆ ಶಾಲೆ ತಲುಪಲು ಸಾಧ್ಯವಾಗುತ್ತಿಲ್ಲ. ಸಂಜೆ 4.30ಕ್ಕೆ ಶಾಲೆಯಿಂದ ಹೊರಟರೂ ಬಸ್‌ಗಳು ಇರುವುದಿಲ್ಲ ಎಂದು ಶಿಕ್ಷಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ಬಾಗೇಪಲ್ಲಿ ಸಾರಿಗೆ ಘಟಕದಿಂದ 35 ಬಸ್‌ಗಳು ಸಂಚರಿಸುತ್ತಿವೆ. ಪ್ರಯಾಣಿಕರ ಸಂಖ್ಯೆ ಆಧರಿಸಿ ಬಸ್‌ಗಳನ್ನು ಬಿಡಲಾಗುತ್ತಿದೆ. ಅಧಿಕಾರಿಗಳ ಜೊತೆ ಚರ್ಚಿಸಿ ಬೆಳಿಗ್ಗೆ ಮತ್ತು ಸಂಜೆ ಹೆಚ್ಚು ಬಸ್‌ ಸಂಚರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಾರಿಗೆ ಘಟಕದ ಸಂಚಾರಿ ಪ್ರಭಾರಿ ಅಧಿಕಾರಿ ಗಣೇಶ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು