ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆ ಮುಂಭಾಗದಲ್ಲಿರುವ ಮಂಜುನಾಥ ಸ್ವೀಟ್ ಸ್ಟಾಲ್‌ಗೆ ಶತಮಾನ ಪೂರ್ಣವಾಗಿದೆ. ಈ ಅಂಗಡಿಯ ದೊಮರೊಟ್ಟು ಸಿಹಿಯ ರುಚಿಗೆ ಮನಸೋಲದವರಿಲ್ಲ. ದೊಮರೊಟ್ಟು ತಿನ್ನುವಾಗ ಆಹಾ ಎಂತಹ ರುಚಿ ಎನ್ನುವ ಉದ್ಗಾರ ಖಚಿತ.
ಅಲ್ಲದೆ ಈ ದೊಮರೊಟ್ಟು ಈ ಸಿಹಿ ತಿನಿಸಿನ ಅಂಗಡಿಯಲ್ಲಿ ನಿತ್ಯವೂ ದೊರೆಯುವುದಿಲ್ಲ. ಪ್ರತಿ ಶನಿವಾರ ಮಾತ್ರ ಲಭ್ಯ. ಶತಮಾನದಿಂದಲೂ ನಮ್ಮದು ಇದೇ ರುಚಿ. ಆ ಕಾರಣಕ್ಕೆ ದುಮರೊಟ್ಟು ಪ್ರಸಿದ್ಧ ಎನ್ನುವುದು ಅಂಗಡಿ ಮಾಲೀಕರ ನುಡಿ.
1922ರಲ್ಲಿ ಈಗ ಅಂಗಡಿ ಇರುವ ಸ್ಥಳದಲ್ಲಿಯೇ ವೆಂಕಟಾಚಲಯ್ಯ ಅವರು ಮಂಜುನಾಥ ಸ್ವೀಟ್ ಸ್ಟಾಲ್ ಆರಂಭಿಸಿದರು. ಅವರ ನಂತರ ಪುತ್ರ ಗೋಪಾಲ್ ಅಂಗಡಿಯನ್ನು ಮುನ್ನಡೆಸಿದರು. ಈಗ ಗೋಪಾಲ್ ಅವರ ಪುತ್ರ ಪ್ರಕಾಶ್ ಮತ್ತು ಪ್ರಕಾಶ್ ಅವರ ಸಹೋದರನ ಪುತ್ರ ಅಂಗಡಿ ನಡೆಸುತ್ತಿದ್ದಾರೆ. ಈ ಮೂಲಕ ಮಂಜುನಾಥ ಸ್ವೀಟ್ ಸ್ಟಾಲ್ ಅನ್ನು ನಾಲ್ಕನೇ ತಲೆಮಾರು ಮುನ್ನಡೆಸುತ್ತಿದೆ.
ಮೊದಲಿಗೆ ವೆಂಕಟಾಚಲಯ್ಯ ಅವರು ಮೈಸೂರು ಪಾಕ್ ಮತ್ತು ದೊಮರೊಟ್ಟು ಸಿಹಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದರು. ಈಗ ಇವುಗಳ ಜೊತೆಗೆ ತುಪ್ಪದ ಅವಲಕ್ಕಿ, ಓಂಪುಡಿ, ಬಾದುಶಾ, ಹಲ್ವ ಸೇರಿದಂತೆ ವಿವಿಧ ಸಿಹಿ ತಿನಿಸುಗಳು ಅಂಗಡಿಯಲ್ಲಿ ದೊರೆಯುತ್ತವೆ.
ಆದರೆ ಇಲ್ಲಿನ ಮುಖ್ಯ ಆಕರ್ಷಣೆ ದೊಮರೊಟ್ಟು ಮತ್ತು ಮೈಸೂರ್ ಪಾಕ್. ಈ ಎರಡು ತಿನಿಸುಗಳಿಗಾಗಿ ಅಂಗಡಿಯನ್ನು ಗ್ರಾಹಕರು ಹುಡುಕಿ ಬರುವರು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಂಗಡಿಯ ಬಗ್ಗೆ ವಿಡಿಯೊಗಳು ಸಹ ಹೆಚ್ಚು ಸದ್ದು ಮಾಡುತ್ತಿವೆ. ಹೊರ ಜಿಲ್ಲೆಯ ಜನರು ಸಹ ಗ್ರಾಹಕರಾಗಿದ್ದಾರೆ.
‘ಮೊದಲಿನಿಂದಲೂ ದೊಮರೊಟ್ಟು ಸಿಹಿಗಾಗಿ ಗ್ರಾಹಕರು ಹೆಚ್ಚು ಬರುತ್ತಿದ್ದಾರೆ. ಈಗ ಸಂಖ್ಯೆ ಮತ್ತಷ್ಟು ಹೆಚ್ಚಿದೆ. ಶನಿವಾರ ಮಾತ್ರ ಇದು ದೊರೆಯುತ್ತದೆ. ದೊಮರೊಟ್ಟು ಮಾಡುವ ದಿನ ಬೇರೆ ಸಿಹಿ ತಿಂಡಿಗಳನ್ನು ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಮಾಲೀಕ ಪ್ರಕಾಶ್ ತಿಳಿಸುವರು.
ಸಿಹಿ ಬೂದುಗುಂಬಳ, ಕೋವಾ, ಸಕ್ಕರೆ, ತುಪ್ಪ, ದ್ರಾಕ್ಷಿ, ಗೋಡಂಬಿ, ಜಾಕಾಯಿ ಸೇರಿಸಿ ದೊಮರೊಟ್ಟು ಸಿದ್ಧಗೊಳಿಸುತ್ತೇವೆ. ಒಲೆ ಮೇಲೆಯೇ ಧಮ್ ಕಟ್ಟಬೇಕು. ಈ ಹಿಂದೆ ಈ ಸಿಹಿಯ ಬಗ್ಗೆ ಸ್ಥಳೀಯರು ಮತ್ತು ಅವರ ಸಂಬಂಧಿಕರಿಗೆ ಮಾತ್ರ ಗೊತ್ತಿತ್ತು. ಹಳೆ ಸಿಹಿ ತಿನಿಸು ಇದು. ಆದರೆ ಈಗ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಜನರಿಗೆ ತಲುಪಿದೆ ಎನ್ನುತ್ತಾರೆ.
ನಮ್ಮಲ್ಲಿ ಯಾವುದೇ ಸಿಹಿ ತಿಂಡಿಗಳನ್ನು ಗ್ಯಾಸ್‌ನಲ್ಲಿ ಮಾಡುವುದಿಲ್ಲ. ಸೌಧೆಗಳು, ಮರದ ಹೊಟ್ಟು ಬಳಸುತ್ತೇವೆ. ದೊಮರೊಟ್ಟು ಮತ್ತು ಮೈಸೂರು ಪಾಕ್ ಅನ್ನು ಬೇರೆ ಬೇರೆ ರಾಜ್ಯಗಳಿಗೆ ಕೊಂಡೊಯ್ಯುವರು. ನಮ್ಮ ತಾತ ಮೈಸೂರು ಪಾಕ್ ಮತ್ತು ದೊಮರೊಟ್ಟು ಸಿಹಿ ತಿನಿಸಿನಿಂದ ಅಂಗಡಿ ಆರಂಭಿಸಿದರು ಎಂದರು.
ನಮ್ಮಲ್ಲಿ ಕೊಬ್ಬರಿ ಮಿಠಾಯಿ ಪ್ರಸಿದ್ಧವಾಗಿತ್ತು. ಆದರೆ ನಂತರ ಅದು ಕಡಿಮೆ ಆಯಿತು. ಒಬ್ಬರಿಂದ ಒಬ್ಬರಿಗೆ ಬಾಯಿ ಮಾತಿನ ಮೂಲಕ ಪ್ರಚಾರವಾಗಿಯೇ ಜನರು ಬರುತ್ತಿದ್ದಾರೆ. ಗ್ರಾಹಕರಿಗೆ ಗುಣಮಟ್ಟದ ಸಿಹಿ ತಿನಿಸು ನೀಡಿದರೆ ಅವರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ನಮ್ಮ ಕಾಯಂ ಗ್ರಾಹಕರಾಗುತ್ತಾರೆ. ಅವರ ಮೂಲಕ ಅವರ ಸಂಬಂಧಿಕರು, ಪರಿಚಿತರನ್ನೂ ಕರೆ ತರುತ್ತಾರೆ. ಮೊದಲಿನಿಂದಲೂ ಗುಣಮಟ್ಟ ಕಾಯ್ದುಕೊಂಡಿರುವ ಕಾರಣ ಮಂಜುನಾಥ ಸ್ವೀಟ್ ಸ್ಟಾಲ್‌ನ ಸಿಹಿ ತಿನಿಸುಗಳು ಜನರಿಗೆ ಅಚ್ಚುಮೆಚ್ಚು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.