ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಪರಿಹಾರವಾಗದಿದ್ದರೆ ಕಚೇರಿಗೆ ಬನ್ನಿ: ಫೋನ್‌ ಇನ್‌ನಲ್ಲಿ ಎಸ್‌ಪಿ ಸಲಹೆ

‘ಪ್ರಜಾವಾಣಿ’ ಫೋನ್ ಇನ್; ಸಾರ್ವಜನಿಕರ ಸಮಸ್ಯೆಗಳಿಗೆ ಎಸ್ಪಿ ಮಿಥುನ್ ಕುಮಾರ್ ಸ್ಪಂದನೆ
Last Updated 13 ಜೂನ್ 2022, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸರ್... ನಮ್ಮೂರಲ್ಲಿ ಜೂಜಾಟ ಹೆಚ್ಚಿದೆ. ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ನಮ್ಮ ಮಗ ಕಾಣಿಯಾಗಿ ಮೂರು ತಿಂಗಳಾಯಿತು...ಹೀಗೆ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಸಾರ್ವಜನಿಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರ ಗಮನಕ್ಕೆ ತಂದರು.

ಸೋಮವಾರ ‘ಪ್ರಜಾವಾಣಿ’ಯು ಎಸ್ಪಿ ಅವರ ಜತೆ ‘ಫೋನ್ ಇನ್‌’ ಕಾರ್ಯಕ್ರಮ ಹಮ್ಮಿಕೊಂಡಿತ್ತು. ವೈಯಕ್ತಿಕ ಸಮಸ್ಯೆಗಳು ಮತ್ತು ಸಾರ್ವಜನಿಕ ವಿಷಯಗಳ ಕುರಿತು ಜನರು ದೂರವಾಣಿ ಕರೆ ಮೂಲಕ ಎಸ್ಪಿ ಅವರಿಗೆ ದೂರಿತ್ತರು. ‘ಸಮಸ್ಯೆಗಳು ಪರಿಹಾರ ಆಗದಿದ್ದರೆ ಕಚೇರಿಗೆ ಬಂದು ನನ್ನ ಸಂಪರ್ಕಿಸಿ’ ಎಂದು ಕರೆ ಮಾಡಿದವರಿಗೆ ತಿಳಿಸಿದರು.

‘ಫೋನ್ ಇನ್‌’ ಕಾರ್ಯಕ್ರಮದ ಆಯ್ದ ಪ್ರಶ್ನೋತ್ತರ ಮಾಲಿಕೆ ಇಲ್ಲಿದೆ.

* ವೆಂಕಟರಮಣಪ್ಪ, ಹಳ್ಳಿಮಕ್ಕಳ ಸಂಘ ಮತ್ತು ಸುಬ್ಬಾರೆಡ್ಡಿ, ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಬಜಾರ್ ರಸ್ತೆ, ಎಂ.ಜಿ.ರಸ್ತೆ ಮತ್ತಿತರ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ಆಗಿದೆ. ಎಂ.ಜಿ ರಸ್ತೆಯಿಂದ ಗಂಗಮ್ಮನ ಗುಡಿ ಸಂಪರ್ಕಿಸುವ ರಸ್ತೆಯಲ್ಲಿ ಏಕ ಮುಖ ಸಂಚಾರದ ವ್ಯವಸ್ಥೆ ಮಾಡಿ.

ಎಸ್ಪಿ: ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ನಿರ್ದಾಕ್ಷ್ಯಿಣ್ಯವಾಗಿ ತೆರವುಗೊಳಿಸಲಾಗುವುದು. ಏಕಮುಖ ಸಂಚಾರದ ಬಗ್ಗೆ ಪರಿಶೀಲಿಸಲಾಗುವುದು.

* ಲೋಕೇಶ್, ಮೂಡಚಿಂತಲಹಳ್ಳಿ, ಚಿಂತಾಮಣಿ: ಗೊಲ್ಲಹಳ್ಳಿ ಮಾರ್ಗದಲ್ಲಿ ತೋಟಗಳಿಗೆ ಹೋಗುವ ರಸ್ತೆ ಅಗೆದಿದ್ದು ಓಡಾಟಕ್ಕೆ ತೊಂದರೆಯಾಗಿದೆ.ದೂರು ನೀಡಿದ್ದು ಕ್ರಮಕೈಗೊಳ್ಳಿ.

ಎಸ್ಪಿ: ಸ್ಥಳಕ್ಕೆ ಪಿಎಸ್‌ಐ ಮತ್ತು ಕಂದಾಯ ಇಲಾಖೆ ಅಧಿಕಾರಿಗಳನ್ನು ಕಳುಹಿಸಲಾಗುವುದು. ಪರಿಶೀಲಿಸಿ ಸಮಸ್ಯೆ ಪರಿಹರಿಸಲಾಗುವುದು. ‌

* ಅಜಯ್, ತೊಂಡೆಬಾವಿ, ಗೌರಿಬಿದನೂರು: ಅಲಿಪುರ ಕ್ರಾಸ್‌ನಿಂದ ಎಸಿಸಿ ಸಿಮೆಂಟ್ ಕಾರ್ಖಾನೆವರೆಗಿನ ರಸ್ತೆಯ ಎರಡೂ ಬದಿಯಲ್ಲಿ ಲಾರಿಗಳು ನಿಲ್ಲುತ್ತವೆ. ‌ಸಂಚಾರ ಕಷ್ಟವಾಗಿದೆ.

ಎಸ್ಪಿ: ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಕಲ್ಪಿಸೋಣ. ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸುವೆ. ಗೌರಿಬಿದನೂರು ತಾಲ್ಲೂಕಿನಲ್ಲಿ ಕಳುವಾಗಿದ್ದ 30 ಬೈಕ್‌ಗಳನ್ನು ವಶಪಡಿಸಿಕೊಂಡು ಮಾಲೀಕರಿಗೆ ನೀಡಲಾಗಿದೆ. ಯಾವುದೇ ಸಮಸ್ಯೆಗಳು ಇದ್ದರೂ ಗಮನಕ್ಕೆ ತನ್ನಿ.

* ರಮೇಶ್, ವ್ಯಾಪಾರಿ, ಚಿಂತಾಮಣಿ: ಗಜಾನನ ಸರ್ಕಲ್, ಬಾಗೇಪಲ್ಲಿ ರಸ್ತೆ, ಪಿಸಿಆರ್ ವಾಣಿಜ್ಯ ಸಂಕೀರ್ಣ, ರಾಘವೇಂದ್ರ ಸ್ವಾಮಿ ದೇಗುಲ ಸೇರಿದಂತೆ ಚಿಂತಾಮಣಿ ನಗರದ ಬಹುತೇಕ ರಸ್ತೆಗಳು ವಾಹನ ನಿಲುಗಡೆಯ ತಾಣಗಳಾಗಿವೆ. ಖಾಸಗಿ ಬಸ್‌ಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಲಾಗುತ್ತದೆ. ನಗರದಲ್ಲಿ ಸಂಚಾರ ದಟ್ಟಣೆ ಎದುರಾಗಿದೆ.

ಎಸ್ಪಿ: ಈ ವಿಚಾರವಾಗಿ ಹಿಂದೆಯೂ ಒಮ್ಮೆ ಸಭೆ ನಡೆಸಿದ್ದೆವು. ಈಗ ನೀವು ಮತ್ತೆ ವಿಚಾರ ಗಮನಕ್ಕೆ ತಂದಿದ್ದೀರಿ. ನಾನೇ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡುವೆ. ಆಗ ನೀವು ನಗರಠಾಣೆಗೆ ಬನ್ನಿ.

* ಲೋಕೇಶ್, ಗೊರಮಡಗು, ಶಿಡ್ಲಘಟ್ಟ: ಗ್ರಾಮದಲ್ಲಿ ಶೇ 80ರಷ್ಟು ಪರಿಶಿಷ್ಟರು ಇದ್ದಾರೆ. ನಮ್ಮ ಹಳ್ಳಿ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ರಾಜಾರೋಷವಾಗಿ ಜೂಜಾಟ ನಡೆಯುತ್ತಿದೆ. ಮನೆಗಳಲ್ಲಿಯೇ ಮದ್ಯ ಮಾರಾಟ ಮಾಡುವರು. ಕಳ್ಳತನಗಳು ಹೆಚ್ಚುತ್ತಿವೆ. ಪೊಲೀಸರಿಂದ ಸ್ಪಂದನೆ ಇಲ್ಲ.

ಎಸ್ಪಿ: ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದಂತೆ ಈ ವರ್ಷ 650 ಪ್ರಕರಣ ದಾಖಲಿಸಿದ್ದೇವೆ. ಜೂಜು, ಅಕ್ರಮ ಮದ್ಯ ಮಾರಾಟ ಮತ್ತಿತರ ಅಕ್ರಮಗಳು ಕಂಡು ಬಂದರೆ ತಕ್ಷಣವೇ 112ಗೆ ಕರೆ ಮಾಡಿ ಮಾಹಿತಿ ನೀಡಿ.

* ನಟರಾಜ್, ಆಲನಹಳ್ಳಿ, ಗೌರಿಬಿದನೂರು. ಚಿಕ್ಕಬಳ್ಳಾಪುರದಿಂದ ವಿದುರಾಶ್ವತ್ಥ ಮಾರ್ಗದ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಹುಬ್ಬುಗಳನ್ನು (ಹಂಪ್‌) ಹಾಕಿದ್ದಾರೆ. ಈ ಬಗ್ಗೆ ಸಂಬಂಧಿಸಿದವರಿಗೆ ಪತ್ರ ಸಹ ಬರೆದಿದ್ದೇವೆ.

ಎಸ್ಪಿ: ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಹಂಪ್ ಹಾಕುವಂತಿಲ್ಲ. ನೀವು ಬರೆದ ಪತ್ರಗಳನ್ನು ನನಗೆ ವಾಟ್ಸ್‌ಆ್ಯಪ್ ಮಾಡಿ. ಸಂಬಂಧಿಸಿದವರ ಜತೆ ಮಾತನಾಡುವೆ.

* ಮಂಜುನಾಥ್, ಪ್ರಭಾಕರ್ ಎಚ್‌.ಕ್ರಾಸ್, ಶಿಡ್ಲಘಟ್ಟ: ಎಚ್‌.ಕ್ರಾಸ್‌ನಲ್ಲಿ ಸಂಚಾರ ದಟ್ಟಣೆ ಹೆಚ್ಚಿದೆ.

ಎಸ್ಪಿ: ವಾಹನಗಳ ಓಡಾಟ ಇಲ್ಲಿ ಹೆಚ್ಚಿರುವುದರಿಂದ ಸಂಚಾರ ದಟ್ಟಣೆ ಇದೆ. ಪೊಲೀಸರನ್ನು ನಿಯೋಜಿಸಿ ಸಮಸ್ಯೆ ಪರಿಹರಿಸಲಾಗುವುದು.

* ನಂದಿ ಪುರುಷೋತ್ತಮ್, ಸಾಮಾಜಿಕ ಹೋರಾಟಗಾರ, ಚಿಕ್ಕಬಳ್ಳಾಪುರ: ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದುಕೊರತೆ ಸಭೆ ನಿಯಮಿತವಾಗಿ ನಡೆಯುತ್ತಿಲ್ಲ. ಇಲಾಖೆಯಿಂದ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಿ.

ಎಸ್ಪಿ: ಪ್ರತಿ ಠಾಣೆ ಹಂತದಲ್ಲಿ ತಿಂಗಳಿಗೆ ಒಮ್ಮೆ ಪರಿಶಿಷ್ಟರ ಕುಂದುಕೊರತೆ ಸಭೆ ನಡೆಯುತ್ತಿದೆ. 4ನೇ ಶನಿವಾರ ನೀವೇ ಠಾಣೆಗಳಿಗೆ ನೇರವಾಗಿ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ತಿಳಿಸಬಹುದು. ಮುಂದಿನ ದಿನಗಳಲ್ಲಿ ಕಾನೂನು ಅರಿವು ಕಾರ್ಯಕ್ರಮಗಳನ್ನು ಮತ್ತಷ್ಟು ಮಾಡೋಣ.

* ಶಂಕರಪ್ಪ, ಚಿಂತಾಮಣಿ: ನನ್ನ ಮಗಳನ್ನು ಪ್ರೀತಿ ವಿವಾಹವಾಗಿದ್ದವನು ಈಗ ಓಡಿಹೋಗಿದ್ದಾನೆ. ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ.

ಎಸ್ಪಿ: ಈ ಬಗ್ಗೆ ಚಿಂತಾಮಣಿ ನಗರಠಾಣೆ ಇನ್‌ಸ್ಪೆಕ್ಟರ್ ಜತೆ ಮಾತನಾಡುತ್ತೇನೆ. ಆತನನ್ನು ಹಿಡಿಸಿಕೊಡುತ್ತೇವೆ.

* ನರಸಾರೆಡ್ಡಿ, ವಕೀಲ, ದೇವರೆಡ್ಡಿಪಲ್ಲಿ ಬಾಗೇಪಲ್ಲಿ: ಗ್ರಾಮದ ಸರ್ಕಾರಿ ಜಮೀನು, ಗುಂಡು ತೋಪನ್ನು ಖಾಸಗಿ ಕಂಪನಿ ಮತ್ತು ವ್ಯಕ್ತಿಗಳು ಕಬಳಿಸಿದ್ದಾರೆ.

ಎಸ್ಪಿ: ಸರ್ಕಾರಿ ಜಮೀನು ಕಬಳಿಸುವುದು ಅಪರಾಧ. ಈ ಬಗ್ಗೆ ಬಾಗೇಪಲ್ಲಿ ಇನ್‌ಸ್ಪೆಕ್ಟರ್‌ಗೆ ಅರ್ಜಿ ಕೊಡಿ. ನಾನೂ ಅವರ ಜತೆ ಮಾತನಾಡುವೆ. ಕಂದಾಯ ಇಲಾಖೆ ಅಧಿಕಾರಿಗಳ ಜತೆ ತೆರಳಿ ಪರಿಶೀಲಿಸುವರು.

* ಆಂಜನೇಯರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ, ಚಿಕ್ಕಬಳ್ಳಾಪುರ: ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯವನ್ನು ಟ್ಯಾಂಕರ್‌ಗಳಲ್ಲಿ ತಂದು ಕೆರೆಗಳಿಗೆ ಬಿಡಲಾಗುತ್ತಿದೆ. ಇಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ.

ಎಸ್ಪಿ: ಶ್ರೀನಿವಾಸ ಸಾಗರಕ್ಕೆ ರಾಸಾಯನಿಕ ತ್ಯಾಜ್ಯವನ್ನು ಹರಿಸಿದಾಗ ಭೇಟಿ ನೀಡಿ ಪರಿಶೀಲಿಸಿದ್ದೆವು. ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪೊಲೀಸರು ಇಂತಹದ್ದನ್ನು ಗಂಭೀರವಾಗಿ ಪರಿಗಣಿಸುವರು.

* ಮಂಜುನಾಥ್ ಗುಡಿಬಂಡೆ: ಹಳ್ಳಿಗಳಿಗೆ ಪೊಲೀಸರು ಬರುತ್ತಿಲ್ಲ.

ಎಸ್ಪಿ: ಒಂದು ತಿಂಗಳಲ್ಲಿ ಸುವ್ಯವಸ್ಥಿತವಾದ ಹೊಸ ಬೀಟ್ ವ್ಯವಸ್ಥೆ ಜಾರಿಗೆ ಬರಲಿದೆ. ತಿಂಗಳಲ್ಲಿ ಎರಡು ಬಾರಿ ಬೀಟ್ ಪೊಲೀಸರು ಹಳ್ಳಿಗೆ ಭೇಟಿ ನೀಡುವರು. ಬೀಟ್ ವ್ಯವಸ್ಥೆಯಲ್ಲಿ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತನ್ನಿ.

*****

ಎಸ್‌ಪಿ ಅವರಿಗೆ ಕರೆ ಮಾಡಿದವರು

ರವಿಕುಮಾರ್, ಬೈಚಾಪುರ, ಗೌರಿಬಿದನೂರು.ಮಂಜುನಾಥ್, ಕೂಲಿಕಾರ್ಮಿಕ, ಚಿಕ್ಕಬಳ್ಳಾಪುರ.ವಂದನಾ, ಚಿಂತಾಮಣಿ. ಕೆ.ಸಿ.ಆಂಜನಪ್ಪ, ಕರಿಯಪ್ಪನಹಳ್ಳಿ, ಶಿಡ್ಲಘಟ್ಟ. ರಾಜಕುಮಾರ್ ಬಾಗೇಪಲ್ಲಿ. ತಸ್ಲಿಮ್, ತಗಳವಾರ, ಚಿಂತಾಮಣಿ. ನಾಗರಾಜ್, ದೊಡ್ಡಕುರುಗೋಡು, ಗೌರಿಬಿದನೂರು. ಚಂದ್ರಕುಮಾರ್, ಮಂಚೇನಹಳ್ಳಿ. ಅನಿತಾ ನಾಗರಾಜ್, ಶಿಡ್ಲಘಟ್ಟ. ಗುರುನಾಥ್, ಚಿಂತಾಮಣಿ. ಸುರೇಶ್ ಎದ್ದೆಲ ತಿಪ್ಪೇನಹಳ್ಳಿ, ಶಿಡ್ಲಘಟ್ಟ. ನಾಗರಾಜ್, ಹಿರೇಕಟ್ಟಿಗೆನಹಳ್ಳಿ, ಚಿಂತಾಮಣಿ. ಪದ್ಮರಾಜ್ ಜೈನ್, ಕುದುರೆ ಬ್ಯಾಲ್ಯ, ಗೌರಿಬಿದನೂರು. ರಾಘವೇಂದ್ರ, ಚಿಕ್ಕಬಳ್ಳಾಪುರ. ಜಮೀರ್, ಗಂಜಿಗುಂಟಿ, ಶಿಡ್ಲಘಟ್ಟ. ಛತ್ರಂ ಶ್ರೀಧರ್, ಗೌರಿಬಿದನೂರು. ಮಂಜುನಾಥ್, ಹುಲುಗಮ್ಮನಹಳ್ಳಿ, ಚಿಂತಾಮಣಿ. ಆಕಾಶ್, ಚಿಕ್ಕಬಳ್ಳಾಪುರ. ಪುಟ್ಟರಂಗಯ್ಯ, ರಮಾಪುರ, ಗೌರಿಬಿದನೂರು. ‌

****

‘ಸಿಬ್ಬಂದಿ ತಪ್ಪು ಮಾಡಿದರೆ ಕ್ರಮ’

ಜಿಲ್ಲೆಯ ಕೆಲವು ಠಾಣೆಗಳ ಪೊಲೀಸರು ಸ್ಪಂದಿಸುತ್ತಿಲ್ಲ. ಅವಾಚ್ಯವಾಗಿ ನಿಂದಿಸುವರು ಎಂದು ಚಿಕ್ಕಬಳ್ಳಾಪುರದ ಕೃಷ್ಣ ಮತ್ತಿತರರು ಎಸ್‌ಪಿ ಅವರ ಗಮನಕ್ಕೆ ತಂದರು. ‘ಕಾನೂನಿನ ಮುಂದೆ ಎಲ್ಲರೂ ಸಮಾನರು. ನೀವು ದೂರು ಕೊಟ್ಟರೆವಿಚಾರಣೆ ನಡೆಸುತ್ತೇವೆ. ತಪ್ಪು ಮಾಡುವ ಸಿಬ್ಬಂದಿ ವಿರುದ್ಧ ಮುಲಾಜಿಲ್ಲದೆ ಕ್ರಮಜರುಗಿಸುತ್ತೇವೆ’ ಎಂದು ಮಿಥುನ್ ಕುಮಾರ್ ಭರವಸೆ ನೀಡಿದರು.

‘ಪೊಲೀಸರೆಲ್ಲರೂ ಕೆಟ್ಟವರಲ್ಲ. ಒಳ್ಳೆಯ ಕೆಲಸಗಳು ಸಹ ಆಗಿವೆ’ ಎಂದರು. ದಿಬ್ಬೂರಹಳ್ಳಿಯ ಎಸ್‌.ಸಿ.ವೆಂಕಟೇಶ್ ಮತ್ತಿತರರು ಪೊಲೀಸರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಸ್ಯೆ ಎದುರಾದರೆ 112 ಸಂಪರ್ಕಿಸಿ

ಅಪಘಾತ, ಜೂಜು, ಜಗಳ, ಅಕ್ರಮ ಮದ್ಯ ಮಾರಾಟ ಮತ್ತಿತರ ಅಕ್ರಮಗಳ ವಿಚಾರವಾಗಿ ಹೆಚ್ಚು ಕರೆಗಳು ಬಂದವು. ‘ಈ ಅಕ್ರಮಗಳು ಕಂಡು ಬಂದರೆ ತಕ್ಷಣವೇ 112ಗೆ ಕರೆ ಮಾಡಿ. ಅವರು ತಕ್ಷಣ ಸ್ಥಳಕ್ಕೆ ಬರುವರು. ದೂರು ನೀಡಿದವರ ಹೆಸರನ್ನು ಗೋಪ್ಯವಾಗಿ ಇರಿಸಲಾಗುವುದು. ನಿತ್ಯ ಸರಾಸರಿ 16 ಕರೆಗಳು 112ಗೆ ಬರುತ್ತಿವೆ. 112ಅನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಿ ಎಂದು ಎಸ್ಪಿ ಸಲಹೆ ನೀಡಿದರು.
***

‘ಪೊಲೀಸ್‌ ಭಾವನ ದೌರ್ಜನ್ಯ’

‘ನಮ್ಮ ಅಕ್ಕನನ್ನು ಪೊಲೀಸ್ ಇಲಾಖೆಯ ಸಿಬ್ಬಂದಿ ವಿವಾಹವಾಗಿದ್ದಾರೆ. ಆಕೆಯ ಮೇಲೆ ಹಲ್ಲೆ ನಡೆಸುತ್ತಾರೆ’ ಎಂದು ವ್ಯಕ್ತಿಯೊಬ್ಬರು ಎಸ್ಪಿ ಗಮನಕ್ಕೆ ತಂದರು.‘ಆ ಸಿಬ್ಬಂದಿ ಹೆಸರು ದಾಖಲಿಸಿಕೊಂಡ ಎಸ್ಪಿ, ‘ನೀವು ಮತ್ತು ನಿಮ್ಮ ಅಕ್ಕ ಖುದ್ದಾಗಿ ನನ್ನ ಬಳಿ ಬನ್ನಿ. ಸಿಬ್ಬಂದಿಯನ್ನು ಕರೆಯಿಸಿ ಮಾತನಾಡುವೆ’ ಎಂದರು.

**

ಮೈಕ್; ನಿಯಮ ಉಲ್ಲಂಘಿಸಿದರೆ ಪ್ರಕರಣ

* ಶಿವಣ್ಣ, ರೇಷ್ಮೆ ಹಿತರಕ್ಷಣಾ ವೇದಿಕೆ ಸಂಚಾಲಕರು, ಮಳ್ಳೂರು, ಶಿಡ್ಲಘಟ್ಟ: ಮಸೀದಿ, ದೇಗುಲಗಳಲ್ಲಿ ಮೈಕ್ ಹಾವಳಿ ಹೆಚ್ಚಿದೆ.

ಎಸ್ಪಿ: ಮೈಕ್‌ಗಳನ್ನು ಅಳವಡಿಸುವ ಸಂಬಂಧ ಡಿವೈಎಸ್‌ಪಿ ಕಚೇರಿಯಲ್ಲಿ ₹ 450 ಹಣ ಪಾವತಿಸಿ ಪರವಾನಗಿ ಪಡೆಯಬೇಕು. ಮಾಲಿನ್ಯ ನಿಯಂತ್ರಣ ಇಲಾಖೆ ನಿಗದಿಪಡಿಸಿರುವ ಪ್ರಮಾಣದಲ್ಲಿಯೇ ಶಬ್ಧವಿರಬೇಕು. ಉಲ್ಲಂಘನೆಯಾದರೆ ಕ್ರಮವಹಿಸಲಾಗುವುದು. ಉತ್ಸವಗಳ ಸಂದರ್ಭದಲ್ಲಿಯೂ ಮೈಕ್ ಅಳವಡಿಸಲು ಅನುಮತಿ ಕಡ್ಡಾಯ. ಇಲ್ಲದಿದ್ದರೆ ಎಫ್‌ಐಆರ್ ಆಗುತ್ತದೆ.

***

‘ಪ್ರಜಾವಾಣಿ ಸಂಪರ್ಕ ಸೇತುವೆ’

‘ಸಾರ್ವಜನಿಕರನ್ನು ನಾವು ಭೇಟಿಯಾದಾಗ ಅಥವಾ ಕುಂದುಕೊರತೆ ಸಭೆಗಳಲ್ಲಿ ಜನರು ಸಮಸ್ಯೆಗಳನ್ನು ಗಮನಕ್ಕೆ ತರುತ್ತಿದ್ದರು. ಸಮಸ್ಯೆಗಳನ್ನು ಪರಿಹರಿಸುವ ದಿಕ್ಕಿನಲ್ಲಿ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ‘ಪ್ರಜಾವಾಣಿ’ಯು ಫೋನ್ ಇನ್ ಮೂಲಕ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಿದೆ. ‘ಪ್ರಜಾವಾಣಿ’ಯ ಈ ಕೆಲಸ ಶ್ಲಾಘನೀಯ. ಪತ್ರಿಕೆಯ ಜತೆ ಮತ್ತಷ್ಟು ಫೋನ್ ಇನ್ ಕಾರ್ಯಕ್ರಮಗಳನ್ನು ನಡೆಸಲು ಇಲಾಖೆ ಉತ್ಸುಕವಾಗಿದೆ’ ಎಂದು ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT