ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: 2023ಕ್ಕೆ ಸಂಭ್ರಮದ ಸ್ವಾಗತ

ಜಿಲ್ಲೆಯಲ್ಲಿ ಸಿಹಿ ಹಂಚಿ ಸಂಭ್ರಮ; ಬೇಕರಿಗಳಲ್ಲಿ ನಾನಾ ಬಗೆಯ ಕೇಕ್‌ಗಳು
Last Updated 1 ಜನವರಿ 2023, 6:25 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಶನಿವಾರ ಮಧ್ಯರಾತ್ರಿ ಗಂಟೆ 12ಕ್ಕೆ ತಲುಪುತ್ತಿದ್ದಂತೆ ಜನರು ಪಟಾಕಿ, ಬಾಣ-ಬಿರುಸುಗಳನ್ನು ಸಿಡಿಸಿ ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಂಡರು. ಕೇಕ್‌ ಕತ್ತರಿಸಿದರು. ಪರಸ್ಪರ ಸಿಹಿ ಹಂಚಿದರು. ಆಪ್ತರಿಗೆ ಹೊಸ ವರ್ಷದ ಶುಭಾಶಯಗಳ ಸಂದೇಶವನ್ನು ಕಳುಹಿಸಿದರು.

ಹೊಸ ವರ್ಷಾಚರಣೆ ಪ್ರಯುಕ್ತ ಶನಿವಾರ ನಗರದ ಬೇಕರಿಗಳಲ್ಲಿ ಸಾವಿರಾರು ತರಹೇವಾರಿ ಕೇಕ್‌ಗಳ ಮಾರಾಟ ಜೋರಾಗಿತ್ತು. ವೆನಿಲಾ, ಚಾಕೋಲೆಟ್, ಸ್ಟ್ರಾಬೇರಿ, ಮ್ಯಾಂಗೊ ಸೇರಿದಂತೆ ವಿವಿಧ ಸ್ವಾದಗಳಲ್ಲಿದ್ದ ಕೇಕ್‌ಗಳು ಬಾಯಲ್ಲಿ ನೀರೂರಿಸುತ್ತಿದ್ದವು. ಚಿಟ್ಟೆ, ಚಂದ್ರ, ನಕ್ಷತ್ರ ಮತ್ತು ಹೃದಯ ಸೇರಿದಂತೆ ನಾನಾ ಆಕಾರದ ಕೇಕ್‌ಗಳು ಜನರನ್ನು ಆಕರ್ಷಿಸುತ್ತಿದ್ದವು.

ಕೆಲ ಬೇಕರಿಗಳಲ್ಲಿ ಜನರು ಹೊಸ ವರ್ಷಾಚರಣೆಗಾಗಿ ಮುಂಗಡವಾಗಿ ಕೇಕ್‌ಗಳಿಗೆ ಬೇಡಿಕೆ ಸಲ್ಲಿಸಿದ್ದರು. ಇನ್ನು ಕೆಲವೆಡೆ ಜನರ ಅಭಿರುಚಿ ಅರಿತು ಅದರಂತೆ ವಿವಿಧ ಆಕಾರ, ಬಣ್ಣಗಳಲ್ಲಿ ಕೇಕ್‌ಗಳನ್ನು ಸಿದ್ಧಪಡಿಸಿ ಮಾರಾಟಕ್ಕೆ ಇಡಲಾಗಿತ್ತು. ಕೆಲವರು ಗ್ರಾಹಕರನ್ನು ಸೆಳೆಯಲು ವಿಶೇಷ ರಿಯಾಯಿತಿ ಘೋಷಿಸಿದ್ದರು.

‘ಪ್ರತಿ ಹೊಸ ವರ್ಷದ ಸಂದರ್ಭದಲ್ಲಿ 50 0ರಿಂದ 1 ಸಾವಿರ ಕೇಕ್ ಮಾಡುತ್ತೇವೆ. ಈ ಬಾರಿ 600 ಕೇಕ್ ಮಾಡಿದ್ದೇವೆ. ಒಂದು ಕೆ.ಜಿಯ ಬೆಲೆ ₹ 250ರಿಂದ ಆರಂಭವಾಗಿ ₹ 800ವರೆಗೂ ಇದೆ. ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ’ ಎಂದು ಗಣೇಶ್ ಬೇಕರಿ ಆ್ಯಂಡ್ ಸ್ವೀಟ್ಸ್‌ ಮಾಲೀಕರಾದ ರಾಘವೇಂದ್ರ ಮತ್ತು ಚೆಲುವರಾಜು ತಿಳಿಸಿದರು.

ಜನರು ಹೊಸ ಸಂವತ್ಸರವನ್ನು ಸ್ವಾಗತಿಸಲು ಸಜ್ಜಾಗಿದ್ದರು. ತಾಲ್ಲೂಕು ಕೇಂದ್ರಗಳಲ್ಲಿ ಮತ್ತು ನಗರದಲ್ಲಿ ಶನಿವಾರ ಸಂಜೆಯಿಂದ ಕೇಕ್‌, ಸಿಹಿ ತಿಂಡಿಗಳ ಖರೀದಿ ಜೋರಾಗಿ ಕಂಡುಬಂದಿತು. ಜಿಲ್ಲೆಯಲ್ಲಿ ಪೊಲೀಸ್ ಕಣ್ಗಾವಲು ಹಾಕಲಾಗಿತ್ತು. ಜನರು ನವ ಸಂವತ್ಸರದ ಶುಭಾಶಯಗಳನ್ನು ರಾತ್ರಿ ತಮ್ಮ ಸ್ನೇಹಿತರು, ಆಪ್ತರಿಗೆ ವಾಟ್ಸ್‌ಆ್ಯಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ವಿನಿಮಯ ಮಾಡಿಕೊಂಡರು.

ಪೊಲೀಸರ ಕಣ್ಗಾವಲು

ನಂದಿಬೆಟ್ಟಕ್ಕೆ ಶನಿವಾರ ಸಂಜೆ 6ರಿಂದ ಭಾನುವಾರ ಬೆಳಿಗ್ಗೆ 6ರವರೆಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಹೀಗಿದ್ದರೂ ಕೆಲವರು ಬೆಟ್ಟದ ತಪ್ಪಲಿನವರೆಗೂ ಬಂದು ವಾಪಸ್ ಆದರು. ನಂದಿಗಿರಿಧಾಮದ ಪ್ರವೇಶ ದ್ವಾರದಲ್ಲಿಯೇ ಪೊಲೀಸ್ ಪಹರೆ ಹಾಕಲಾಗಿತ್ತು. ಚಿಕ್ಕಬಳ್ಳಾಪುರ ನಗರ ಸೇರಿದಂತೆ ಜಿಲ್ಲೆಯ ಬಹಳಷ್ಟು ಕಡೆಗಳಲ್ಲಿ ಪೊಲೀಸರ ಕಣ್ಗಾವಲು ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT