ಬುಧವಾರ, ಜುಲೈ 6, 2022
22 °C
2015ರ ಭರವಸೆ ಇಂದಿಗೂ ಈಡೇರಿಲ್ಲ; ಮಾವು ಅಭಿವೃದ್ಧಿ ನಿಗಮದ ಮನವಿಗೂ ಸ್ಪಂದನೆಯಿಲ್ಲ

ಚಿಕ್ಕಬಳ್ಳಾಪುರ: ವೈನ್ ಪಾರ್ಕ್‌ಗೆ ಮತ್ತೆ ಕೂಗು

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಮಾವಿನ ರಸ ಸಂಸ್ಕರಣ ಘಟಕ, ವೈನ್ ಪಾರ್ಕ್ ಮತ್ತು ಟೊಮೆಟೊ ಸಂಸ್ಕರಣ ಘಟಕಗಳು ಜಿಲ್ಲೆಗೆ ಬೇಕು ಎನ್ನುವ ಕೂಗು ಮತ್ತೆ ರೈತರು ಹಾಗೂ ರೈತ ಸಂಘದ ಮುಖಂಡರಿಂದ ಪ್ರಬಲವಾಗಿ ಪ್ರವಹಿಸುತ್ತಿದೆ. 

ಇತ್ತೀಚೆಗೆ ಸುರಿದ ಮಳೆಯಿಂದ ಜಿಲ್ಲೆಯಲ್ಲಿ 210ಕ್ಕೂ ಹೆಚ್ಚು ಹೆಕ್ಟೇರ್ ತೋಟಗಾರಿಕಾ ಬೆಳೆಗಳು ನೆಲಕಚ್ಚಿವೆ. ದ್ರಾಕ್ಷಿಗೆ ಬೆಲೆಯೂ ಇಲ್ಲ. ಜಿಲ್ಲೆಯಲ್ಲಿಯೇ ಮಾವಿನ ರಸ ತೆಗೆಯುವ ಘಟಕ ಮತ್ತು ವೈನ್ ಪಾರ್ಕ್ ನಿರ್ಮಾಣವಾಗಿದ್ದರೆ ರೈತರು ಕಷ್ಟ, ನಷ್ಟ ಅನುಭವಿಸಬೇಕಾಗಿರಲಿಲ್ಲ ಎನ್ನುವುದು ರೈತ ಮುಖಂಡರ ಪ್ರತಿಪಾದನೆ. 

ಜಿಲ್ಲೆಯಲ್ಲಿ ಪ್ರಮುಖವಾಗಿ ದ್ರಾಕ್ಷಿ, ಮಾವು ಮತ್ತು ಟೊಮೆಟೊ ಬೆಳೆಯಲಾಗುತ್ತದೆ. ಪ್ರತಿ ಮಳೆಗಾಲದಲ್ಲಿಯೂ ದ್ರಾಕ್ಷಿ, ಮಾವು, ಟೊಮೆಟೊಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಆಗುತ್ತದೆ. ಕೆಲವು ವೇಳೆ ಬೆಲೆ ಸಹ ಕಳೆದುಕೊಳ್ಳುತ್ತದೆ. ಕಟಾವಿಗೆ ಬಂದ ದ್ರಾಕ್ಷಿಯನ್ನು ಹೊರಗಿನ ವ್ಯಾಪಾರಿಗಳು ಬಂದು ಖರೀದಿಸಬೇಕು. ಅಲ್ಲಿಯವರೆಗೂ ರೈತರು ಕಾಯಬೇಕು. ಈ ನಡುವೆ ಪ್ರಾಕೃತಿಕ ಅವಘಡಗಳು ಸಂಭವಿಸಿದರೆ ಬೆಳೆ ನಷ್ಟ ಅನುಭವಿಸಬೇಕು. 

ವೈನ್ ಪಾರ್ಕ್ ನಿರ್ಮಾಣವಾದರೆ ಜಿಲ್ಲೆಯಲ್ಲಿ ರೈತರು ಬೆಳೆಯುವ ದ್ರಾಕ್ಷಿಗೆ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆ ದೊರೆಯುತ್ತಿತ್ತು. ಮಾವು ರಸ ಸಂಸ್ಕರಣ ಘಟಕ ನಿರ್ಮಾಣವಾಗಿದ್ದರೆ ಮಾವಿನ ಜತೆಗೆ ಟೊಮೆಟೊ ಸಹ ಸಂಸ್ಕರಣೆ ಆಗುತ್ತಿತ್ತು.  

ದ್ರಾಕ್ಷಿ, ಮಾವು ಮತ್ತು ಟೊಮೆಟೊ ಬೆಳೆಗಾರರ  ಹಿತ ದೃಷ್ಟಿಯಿಂದ ಜಿಲ್ಲೆಯಲ್ಲಿ ವೈನ್ ಪಾರ್ಕ್, ಮಾವಿನ ರಸ ತೆಗೆಯುವ ಮತ್ತು ಟೊಮೆಟೊ ಸಂಸ್ಕರಣ ಘಟಕ ಸ್ಥಾಪಿಸಬೇಕು ಎಂದು ಈ ಹಿಂದಿನಿಂದಲೂ ರೈತರು ಆಗ್ರಹಿಸುತ್ತಿದ್ದಾರೆ. ಆದರೆ ಸರ್ಕಾರಗಳು ಮಾತ್ರ ಜಾಣಕಿವುಡುತನ ಪ್ರದರ್ಶಿಸುತ್ತಿವೆ. 

‘ಹುಳಿ’ಯಾದ ದ್ರಾಕ್ಷಿ ಉದ್ಯಮ: ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯುವ ಈ ಜಿಲ್ಲೆಯಲ್ಲಿ ವೈನ್‌ ತಯಾರಿಕೆ ಘಟಕ ಸ್ಥಾಪಿಸುವುದಾಗಿ 2015ರಲ್ಲಿ ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷರು ಘೋಷಿಸಿದ್ದರು. ಅದು ಈವರೆಗೆ ಕಾರ್ಯಗತಗೊಂಡಿಲ್ಲ. ಸದ್ಯ ಸ್ಥಳೀಯ ರೈತರು ದ್ರಾಕ್ಷಿ ಬೆಳೆದರೆ ಮಧ್ಯವರ್ತಿಗಳಿಗಷ್ಟೇ ಅದರ ಲಾಭ ದೊರೆಯುತ್ತಿದೆ. ವೈನ್ ಪಾರ್ಕ್ ಆಸೆ ಈಡೇರುತ್ತಿಲ್ಲ.

ವೈನ್ ಪಾರ್ಕ್ ಸ್ಥಾಪನೆಯಿಂದ ಸ್ಥಳೀಯ ದ್ರಾಕ್ಷಿ ಬೆಳೆಯು ಉದ್ದಿಮೆಯ ರೂಪು ಪಡೆಯಲಿದೆ. ಸಹಜವಾಗಿ ರೈತರಿಗೆ ಆರ್ಥಿಕ ಅನುಕೂಲ ಹೆಚ್ಚಾಗಲಿದೆ. ಪ್ರಾಕೃತಿಕ ವಿಕೋಪ ಹಾಗೂ ಬೆಲೆ ನೆಲಕಚ್ಚಿದ ವೇಳೆ ‌ವೈನ್ ಪಾರ್ಕ್ಆಸರೆ ಆಗಲಿದೆ. ಉದ್ಯೋಗದ ಅವಕಾಶಗಳೂ ದೊರೆಯಲಿವೆ. ಈ ಬಗ್ಗೆ ಈ ಹಿಂದಿನಿಂದಲೂ ರೈತ ಮುಖಂಡರು, ಹೋರಾಟಗಾರರು ಆಗ್ರಹಿಸುತ್ತಲೇ ಇದ್ದಾರೆ. ಆದರೆ  ವೈನ್ ಪಾರ್ಕ್ ನಿರ್ಮಾಣಕ್ಕೆ ಕಾಲ ಕೂಡಿಲ್ಲ.

ಮಾವಿನದ್ದೂ ಇದೇ ಕಥೆ: ರಾಜ್ಯದಲ್ಲಿ ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಪ್ರಮುಖವಾಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕು ಮಾವಿನ ಕಣಜಗಳು ಎನಿಸಿವೆ. ಈ ಎರಡೂ ತಾಲ್ಲೂಕು ನೆರೆಹೊರೆಯಲ್ಲಿವೆ. ಇಂತಹ ಕಡೆಯಲ್ಲಿ ಮಾವಿನ ರಸ ಸಂಸ್ಕರಣ ಘಟಕವನ್ನು ನಿರ್ಮಿಸಬೇಕು ಎಂದು ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್ ಸರ್ಕಾರಕ್ಕೆ ಎರಡು ಮೂರು ಬಾರಿ ಮನವಿ ಸಹ ಸಲ್ಲಿಸಿದ್ದಾರೆ. ಯಥಾ ಪ್ರಕಾರ ರಾಜ್ಯ ಸರ್ಕಾರ ನಿರ್ಲಕ್ಷ್ಯವನ್ನು ತಾಳಿದೆ. 

ಖಾಸಗಿ ಸಂಸ್ಥೆಗಳು ಶ್ರೀನಿವಾಸಪುರದಲ್ಲಿ ಮಾವಿನ ರಸ ಸಂಸ್ಕರಣ ಘಟಕವನ್ನು ಹೊಂದಿವೆ. ಸರ್ಕಾರವೇ ಈ ಘಟಕವನ್ನು ನಿರ್ಮಿಸಿದರೆ ಬೆಳೆಗಾರರಿಗೆ ಅನುಕೂಲವಾಗಲಿದೆ. 

****

‘ಮನವಿ ಸಲ್ಲಿಸಿದ್ದೇವೆ’

ಮಾವು ರಸ ಸಂಗ್ರಹದ (ಪಲ್ಪ್) ಘಟಕವನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರದ ಒಂದು ಕಡೆ ನಿರ್ಮಿಸುವಂತೆ ಈ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೇನೆ’ ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು. 

ಈ ವಿಚಾರವಾಗಿ ತೋಟಗಾರಿಕಾ ಸಚಿವರು ಸಕಾರಾತ್ಮಕವಾಗಿ ಇದ್ದಾರೆ. ಮಾವು ಋತುಮಾನದ ಬೆಳೆ. ಮೂರು ತಿಂಗಳು ಇರುತ್ತವೆ. ಬೆಳೆ ಹೆಚ್ಚು ಬಂದಾಗ ಮತ್ತು ಬೆಲೆ ಇಲ್ಲದ ಸಮಯದಲ್ಲಿ ರಸವನ್ನು ತೆಗೆದು ವಿದೇಶಗಳಿಗೆ ಕಳುಹಿಸಬಹುದು. ವಿದೇಶಗಳಲ್ಲಿ ಮಾವಿನ ರಸಕ್ಕೆ ಬೇಡಿಕೆ ಇದೆ ಎಂದು ಹೇಳಿದರು. 

ಈ ಘಟಕ ನಿರ್ಮಾಣದಿಂದ ಮಾವಷ್ಟೇ ಅಲ್ಲ ಟೊಮೆಟೊ ಸಂಸ್ಕರಣೆಗೂ ಅನುಕೂಲವಾಗಲಿದೆ. ಸರ್ಕಾರ ದೊಡ್ಡ ಮನಸ್ಸು ಮಾಡಿ ಘಟಕ ನಿರ್ಮಿಸಿದರೆ ಅನುಕೂಲವಾಗಲಿದೆ ಎಂದರು.

***

ರಾಜಕೀಯ ಇಚ್ಛಾಶಕ್ತಿ ಇಲ್ಲ

ಜಿಲ್ಲೆಯಲ್ಲಿ ವೈನ್‌ಘಟಕ ಸ್ಥಾಪಿಸುವ ವಿಚಾರವಾಗಿ ಈ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಆದರೆ ಈ ವಿಚಾರವಾಗಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಘಟಕ ಆರಂಭವಾಗಲಿಲ್ಲ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು. 

ವೈನ್ ಪಾರ್ಕ್ ನಿರ್ಮಾಣದ ವಿಚಾರದಲ್ಲಿ ಜಿಲ್ಲೆಯ ಸಚಿವರು ಮತ್ತು ಶಾಸಕರು ರೈತರ ಬಗ್ಗೆ ಕಾಳಜಿ ಇಟ್ಟುಕೊಂಡು ಗಟ್ಟಿಯಾದ ಧ್ವನಿ ಎತ್ತುತ್ತಿಲ್ಲ. ದ್ರಾಕ್ಷಿ ಮತ್ತು ಮಾವು ಸಂಸ್ಕರಣೆ ಮತ್ತು ಮೌಲ್ಯವರ್ಧನೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು