ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ರಕ್ಷಣೆ, ಪ್ರತಿಯೊಬ್ಬರ ಹೊಣೆ

‘ದೋಸ್ತಿ ಸಪ್ತಾಹ’ ಅಂಗವಾಗಿ ಮಕ್ಕಳ ಹಕ್ಕುಗಳ ಜಾಗೃತಿ ಅಭಿಯಾನಕ್ಕೆ ಚಾಲನೆ
Last Updated 14 ನವೆಂಬರ್ 2019, 16:07 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಮಕ್ಕಳ ರಕ್ಷಣೆ ಮತ್ತು ಪೋಷಣೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಆದ್ದರಿಂದ ಅಧಿಕಾರಿಗಳು ಮಕ್ಕಳ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು’ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫೌಜಿಯಾ ಬಿ.ತರನ್ನುಮ್ ಹೇಳಿದರು.

‘ದೋಸ್ತಿ ಸಪ್ತಾಹ’ ಅಂಗವಾಗಿ ಮಕ್ಕಳ ಸಹಾಯವಾಣಿ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಚಿಕ್ಕಬಳ್ಳಾಪುರದ ಅಸೆಡ ಸಂಸ್ಥೆ ಮತ್ತು ಚಿಂತಾಮಣಿ ರಿವಾರ್ಡ್ಸ್‌ ಸಂಸ್ಥೆ ಸಹಯೋಗದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮಕ್ಕಳು ದೇಶಕ್ಕೆ ಬೆನ್ನೆಲುಬು ಇದ್ದಂತೆ. ಅವರ ಬಗ್ಗೆ ಪೋಷಕರು ಕಾಳಜಿ ವಹಿಸಿ, ಜ್ಞಾನ ಸಂಪಾದಿಸುವ ಉಡುಗೊರೆಗಳನ್ನು ಕೊಡಿಸಬೇಕು. ಎಳೆ ವಯಸ್ಸಿನಲ್ಲೇ ಮಕ್ಕಳಿಗೆ ಉನ್ನತ ಹುದ್ದೆಗೆ ಏರುವಂತಹ ಕನಸುಗಳನ್ನು ರೂಪಿಸಬೇಕು. ಮಹನೀಯರ ವಿಚಾರಧಾರೆಗಳನ್ನು ತಿಳಿಸಿಕೊಡಬೇಕು. ಆಗ ನಾವು ಉತ್ತಮ ಸಮಾಜ ಕಟ್ಟಲು ಸಾಧ್ಯವಾಗುತ್ತದೆ’ ಎಂದರು.

‘ಉತ್ತಮ ಸಮಾಜ ಕಟ್ಟುವ ನಿಟ್ಟಿನಲ್ಲಿ ಮಕ್ಕಳನ್ನು ಉತ್ತಮ ರೀತಿಯಲ್ಲಿ ಮೌಲ್ಯಯುತ ಶಿಕ್ಷಣ ನೀಡಿ ಬೆಳೆಸಬೇಕಿದೆ. ತಾಯಂದಿರಿಗೆ ಮಕ್ಕಳಿಗಿಂತ ದೊಡ್ಡ ಆಸ್ತಿ ಬೇರಿಲ್ಲ. ಹೀಗಾಗಿ ಪೋಷಕರು ಸದಾ ಮಕ್ಕಳನ್ನು ಪ್ರೀತಿ, ಗೌರವದಿಂದ ಕಾಣಬೇಕು. ವಿದ್ಯೆ ಯಾರು ಕದಿಯಲಾಗದ ಸಂಪತ್ತು. ವಿದ್ಯಾರ್ಥಿಗಳು ಟಿ.ವಿ, ಮೊಬೈಲ್‌ಗಳ ದಾಸರಾಗದೆ ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ನೀಡಬೇಕು’ ಎಂದು ತಿಳಿಸಿದರು.

‘ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಭಿಕ್ಷಾಟನೆ, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಮಕ್ಕಳ ಸಹಾಯವಾಣಿ (1098) ಕಾರ್ಯಕ್ಕೆ ಕೈಜೋಡಿಸಬೇಕು. ಮಕ್ಕಳು ದೌರ್ಜನ್ಯಕ್ಕೊಳಗಾದಾಗ ತಕ್ಷಣ ಸಹಾಯವಾಣಿಗೆ ಕರೆ ಮಾಡಿ, ನಿಮಗೆ ಆಗುತ್ತಿರುವ ತೋದರೆಗಳ ಬಗ್ಗೆ ಮುಕ್ತವಾಗಿ ಹಂಚಿಕೊಂಡು ಪರಿಹಾರ ಕಂಡುಕೊಳ್ಳಬೇಕು’ ಎಂದು ಹೇಳಿದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಡಿಡಿಪಿಐ ನಾಗೇಶ್, ಪ್ರಾಂಶುಪಾಲ ಮೋಹನ್ ಕುಮಾರ್, ಮತದಾರರ ಸಾಕ್ಷರತಾ ಸಂಘದ ಸತೀಶ್, ಮಕ್ಕಳ ರಕ್ಷಣಾ ಸಮಿತಿಯ ಅಧಿಕಾರಿಗಳಾದ ಮಂಜುನಾಥ್, ಮಹಮ್ಮದ್, ಬಾಲಗಂಗಾಧರ್ ಹಾಜರಿದ್ದರು.

ಅಣಕು ಅಧಿವೇಶನ
ತಾಲ್ಲೂಕಿನ ಅಂಗರೇಖನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಗುರುವಾರ ಅಣಕು ವಿಧಾನಸಭೆ ಅಧಿವೇಶನ ಆಯೋಜಿಸಲಾಗಿತ್ತು.

ಅಧಿವೇಶನದಲ್ಲಿ ನೆರೆ ಪರಿಹಾರ, ಕುಡಿಯುವ ನೀರಿನ ಸಮಸ್ಯೆ, ಜನಸಂಖ್ಯಾ ಸ್ಫೊಟದ ವಿಚಾರಗಳು ಪ್ರತಿಧ್ವನಿಸಿ ಅಧಿವೇಶನ ಗಮನ ಸೆಳೆಯುವಂತೆ ಮಾಡಿದವು.

ಮಕ್ಕಳಿಗೆ ಕಠಿಣವಾಗುತ್ತಿರುವ ಗಣಿತವನ್ನು ಸರಳವಾಗಿ ಬೋಧಿಸುವುದು, ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಭಯ ಹೋಗಲಾಡಿಸುವುದು, ನಾಗರಿಕರಲ್ಲಿ ಸ್ವಚ್ಛತೆ ಅರಿವು, ಪ್ಲಾಸ್ಟಿಕ್ ಮುಕ್ತ ಸಮಾಜಕ್ಕಾಗಿ ಪ್ರತಿಯೊಬ್ಬರು ಪಣ ತೊಡುವ ಬಗ್ಗೆ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆಯ ಮುಖ್ಯಶಿಕ್ಷಕಿ ಆಶಾ, ‘ಪ್ರತಿ ಮಗುವಿನಲ್ಲೂ ಒಂದು ವಿಶೇಷ ಗುಣವಿರುತ್ತದೆ. ಅದನ್ನು ಗುರುತಿಸಿ ಪೋಷಕರು, ಶಿಕ್ಷಕರು ಪ್ರೋತ್ಸಾಹಿಸಿದರೆ, ಪ್ರತಿ ಮಗುವೂ ಸತ್ಪ್ರಜೆಯಾಗಿ ರೂಪುಗೊಳ್ಳುತ್ತದೆ’ ಎಂದರು.
ಸಹಶಿಕ್ಷಕರಾದ ರಮೇಶ್, ರಾಮಲಿಂಗಪ್ಪ, ನಾಗರತ್ನಮ್ಮ, ರಾಜಣ್ಣ, ಮಂಜುನಾಥ್, ಅರ್ಷಿಯಾ, ಅಂಜುಳಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT