ಗುರುವಾರ , ನವೆಂಬರ್ 14, 2019
19 °C
‘ಮಕ್ಕಳ ಚಲನಚಿತ್ರೋತ್ಸವ’ಕ್ಕೆ ಚಾಲನೆ

ಮನೋವಿಕಾಸಕ್ಕೆ ಸಿನೆಮಾ ಪರಿಣಾಮಕಾರಿ ಮಾಧ್ಯಮ

Published:
Updated:
Prajavani

ಚಿಕ್ಕಬಳ್ಳಾಪುರ: ‘ಮಕ್ಕಳ ಮನೋವಿಕಾಸ ವೃದ್ಧಿಸುವಲ್ಲಿ ಚಲನಚಿತ್ರವು ಅತ್ಯಂತ ಪ್ರಬಲ ಹಾಗೂ ಪರಿಣಾಮಕಾರಿ ಮಾಧ್ಯಮ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಬಾಲಾಜಿ ಚಿತ್ರಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಮಕ್ಕಳ ಚಲನಚಿತ್ರೋತ್ಸವ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸದಾ ಪೋಷಕರು, ಶಿಕ್ಷಕರು ಹಾಗೂ ಪಠ್ಯಕ್ರಮದ ಒತ್ತಡದಲ್ಲಿರುವ ಮಕ್ಕಳಿಗೆ ಮನರಂಜನೆ ಕೂಡ ತುಂಬಾ ಅಗತ್ಯ. ಸಿನಿಮಾ ವೀಕ್ಷಣೆಯಿಂದ ಮಕ್ಕಳಿಗೆ ಮನರಂಜನೆಯ ಜತೆಗೆ ಒತ್ತಡ ಕಡಿಮೆಯಾಗುತ್ತದೆ. ಕಲ್ಪನಾಶಕ್ತಿ ಹಾಗೂ ಕ್ರೀಯಾಶೀಲತೆ ಹೆಚ್ಚುತ್ತದೆ. ಆ ನಿಟ್ಟಿನಲ್ಲಿ ಅನುಕೂಲಕರ ವಾತಾವರಣ ಕಲ್ಪಿಸುವಲ್ಲಿ ಈ ಚಲನಚಿತ್ರೋತ್ಸವ ಸಹಕಾರಿಯಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯ ಆರು ತಾಲ್ಲೂಕಿನ 13 ಚಿತ್ರಮಂದಿರಗಳಲ್ಲಿ ಶುಕ್ರವಾರದಿಂದ ಭಾನುವಾರ ಹೊರತುಪಡಿಸಿ ಜುಲೈ 18ರ ವರೆಗೆ ಮಕ್ಕಳಿಗಾಗಿ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. 3 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸಿನೆಮಾ ತೋರಿಸಲಾಗುತ್ತದೆ. ಒಬ್ಬ ವಿದ್ಯಾರ್ಥಿಗೆ ₹15 ಶುಲ್ಕ ನಿಗದಿಪಡಿಸಲಾಗಿದೆ. ನಿತ್ಯ 8,255 ವಿದ್ಯಾರ್ಥಿಗಳು ಸಿನಿಮಾ ವೀಕ್ಷಿಸಲಿದ್ದಾರೆ’ ಎಂದರು.

ತಹಶೀಲ್ದಾರ್ ನರಸಿಂಹಮೂರ್ತಿ ಮಾತನಾಡಿ, ‘ಮಕ್ಕಳ ಮನಸ್ಸಿನಲ್ಲಿ ಉಂಟಾಗುವ ಒತ್ತಡವನ್ನು ದೂರ ಮಾಡಿ ಸರಿದಾರಿಯಲ್ಲಿ ನಡೆಯುವಂತೆ ತಿದ್ದುವ ಕೆಲಸವನ್ನು ಸಿನಿಮಾ ಮಾಡುತ್ತವೆ. ಮಕ್ಕಳು ಚಿತ್ರದಲ್ಲಿರುವ ಉತ್ತಮ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಲಾ, ಮಕ್ಕಳ ಚಿತ್ರ ಸಂಸ್ಥೆಯ ವ್ಯವಸ್ಥಾಪಕ ಎಸ್.ರಮೇಶ್, ಬಾಲಾಜಿ ಚಿತ್ರಮಂದಿರದ ವ್ಯವಸ್ಥಾಪಕ ವೇಣು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)