ಚಿಂತಾಮಣಿ: ತಾಲ್ಲೂಕಿನ ಕೋಟಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ರಾಗುಟ್ಟಹಳ್ಳಿಯಲ್ಲಿರುವ ಸಮಾಜಕಲ್ಯಾಣ ಇಲಾಖೆಯ ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಬುಧವಾರ ಬೆಳಗಿನ ಉಪಾಹಾರ ಸೇವಿಸಿದ 26 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.
ಅವರನ್ನು ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ.
ವಿದ್ಯಾರ್ಥಿ ನಿಲಯದಲ್ಲಿ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಎಸ್.ಎಲ್.ಎನ್ ಪ್ರಾಢಶಾಲೆ ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಮಂಗಳವಾರ ರಾತ್ರಿ ಕೋಳಿ ಮಾಂಸದ ಊಟ ಮಾಡಿದ್ದಾರೆ. ಯಾವುದೇ ತೊಂದರೆ ಇಲ್ಲದೆ ಮಲಗಿ ನಿದ್ದೆ ಮಾಡಿದ್ದಾರೆ.
ಬುಧವಾರ ಬೆಳಿಗ್ಗೆ ಉಪಾಹಾರಕ್ಕಾಗಿ ಇಡ್ಲಿ ಮತ್ತು ಸಾಂಬಾರ್ ತಯಾರಿಸಲಾಗಿತ್ತು. ಮಕ್ಕಳು ಎಂದಿನಂತೆ ಇಡ್ಲಿ ತಿಂದಿದ್ದಾರೆ. ಇದಾಗಿ ಕೆಲವೇ ಹೊತ್ತಿನಲ್ಲಿ ವಿದ್ಯಾರ್ಥಿಗಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಜತೆಗೆ ಕೆಲವರಿಗೆ ವಾಂತಿಯೂ ಆಗಿತ್ತು ಎಂದು ತಿಳಿದುಬಂದಿದೆ.
ಇದರಿಂದ ಗಾಬರಿಗೊಂಡ ವಿದ್ಯಾರ್ಥಿಗಳು ಶಿಕ್ಷಕರ ಗಮನಕ್ಕೆ ತಂದಿದ್ದರು. ಈ ವೇಳೆ ಶಿಕ್ಷಕರು ಅಸ್ವಸ್ಥ ವಿದ್ಯಾರ್ಥಿಗಳಿಗೆ ಒಆರ್‌ಎಸ್ ಕುಡಿಸಿದ್ದು, ಐದಾರು ವಿದ್ಯಾರ್ಥಿಗಳು ಚೇತರಿಸಿಕೊಂಡಿದ್ದಾರೆ. ಉಳಿದ 19 ವಿದ್ಯಾರ್ಥಿಗಳನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ವೈದ್ಯ, ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಆಹಾರದಲ್ಲಿ ವ್ಯತ್ಯಾಸವಾಗಿದ್ದರಿಂದಾಗಿ ಈ ರೀತಿಯ ಸಮಸ್ಯೆ ಆಗಿರಬಹುದು ಎಂದು ತಿಳಿಸಿದ್ದಾರೆ.
ಘಟನೆ ಬಗ್ಗೆ ಸತ್ಯ ಸಂಗತಿ ಅರಿಯಲು ಇಲಾಖಾ ಮಟ್ಟದ ವಿಚಾರಣೆ ನಡೆಸಬೇಕು. ಅಲ್ಲಿಯವರೆಗೆ ಮೇಲ್ವಿಚಾರಕಿಯನ್ನು ವರ್ಗಾವಣೆ ಮಾಡಬೇಕು. ಆ ಜಾಗಕ್ಕೆ ಪ್ರಭಾರವನ್ನು ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್ ನಿಟ್ಟಾಲಿ ಆದೇಶಿಸಿದ್ದಾರೆ.
ವಿದ್ಯಾರ್ಥಿನಿಲಯದ ಕೆಲವು ವಿದ್ಯಾರ್ಥಿಗಳು ಬೆಳಗಿನ ಉಪಾಹಾರ ಸೇವನೆ ನಂತರ ಅಸ್ವಸ್ಥಗೊಂಡಿದ್ದರು. ಎಲ್ಲರಿಗೂ ಚಿಕಿತ್ಸೆ ಕೊಡಿಸಲಾಗಿದೆ. ತನಿಖೆ ನಂತರ ಘಟನೆಗೆ ಕಾರಣವೇನು ಎಂಬುದು ತಿಳಿಯಲಿದೆ. ಸದ್ಯಕ್ಕೆ ಮೇಲ್ವಿಚಾರಕಿ ನಾಗವೇಣಿಯನ್ನು ವರ್ಗಾವಣೆ ಮಾಡಿ, ಆ ಸ್ಥಾನವನ್ನು ದೊಡ್ಡಬೊಮ್ಮನಹಳ್ಳಿಯ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಕೆ.ಎಚ್.ಮುನಿರತ್ನಮ್ಮ ಅವರಿಗೆ ಪ್ರಭಾರಿಯಾಗಿ ವಹಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ತೇಜಾನಂದರೆಡ್ಡಿ ತಿಳಿಸಿದರು.
ತಹಶೀಲ್ದಾರ್ ಸುದರ್ಶನ್ ಯಾದವ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಯರಾಮರೆಡ್ಡಿ, ತೇಜಾನಂದರೆಡ್ಡಿ, ಎಎಸ್‌ಪಿ ಕುಶಾಲ್ ಚೌಕ್ಸೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆನಂದ್, ಗ್ರಾಮ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಇಡ್ಲಿಗೆ ತಂಗಳು ಅನ್ನ ಸೇರಿಕೆ ಸಾಧ್ಯತೆ ರಾತ್ರಿ ಸುಮಾರು 50 ಮಕ್ಕಳು ಊಟ ಮಾಡಿದ್ದರು. ಬೆಳಿಗ್ಗೆ ಸುಮಾರು 30 ಮಕ್ಕಳು ಇಡ್ಲಿ ಸಾಂಬಾರ್ ತಂದಿದ್ದರು. ಆದರೆ ಇಡ್ಲಿ ಹುಳಿಯಾಗಿದ್ದು ವಾಸನೆ ಬರುತ್ತಿತ್ತು. ಒಂದೆರಡು ಇಡ್ಲಿ ಸೇವಿಸಿ ಉಳಿದ ಇಡ್ಲಿಗಳನ್ನು ಬಿಸಾಡಿದ್ದರು. ಬಹುಶಃ ಮಂಗಳವಾರ ಉಳಿಕೆಯಾಗಿದ್ದ ತಂಗಳು ಅನ್ನ ಸೇರಿಸಿದ್ದರಿಂದಾಗಿ ಹೀಗೆ ಆಗಿರಬಹುದು. ಭರತ್ ವಿದ್ಯಾರ್ಥಿ
ಇಂಥ ಘಟನೆ ಇದೇ ಮೊದಲಲ್ಲ! ವಿದ್ಯಾರ್ಥಿನಿಲಯದಲ್ಲಿ ಹಿಂದೆಯೂ ಒಮ್ಮೆ ಇದೇ ರೀತಿಯ ಘಟನೆ ನಡೆದಿತ್ತು. ಅದಕ್ಕೆ ಕಾರಣರಾಗಿದ್ದ ಒಬ್ಬರನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಂದಿನಿಂದಲೂ ವಿದ್ಯಾರ್ಥಿನಿಲಯದ ಸಿಬ್ಬಂದಿಯಲ್ಲಿ ಹೊಂದಾಣಿಕೆ ಕೊರತೆ ಇದೆ. ವಿದ್ಯಾರ್ಥಿನಿಲಯದ ಸಿಬ್ಬಂದಿ ಒಬ್ಬರ ಮೇಲೆ ಒಬ್ಬರು ದ್ವೇಷ ಸೇಡು ತೀರಿಸಿಕೊಳ್ಳಲು ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಿರಬಹುದು. ಈ ಕುರಿತು ಸಮರ್ಪಕವಾಗಿ ತನಿಖೆ ಕೈಗೊಂಡು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.