ಚಿಂತಾಮಣಿ: ನಗರದ ಹೊರವಲಯದಲ್ಲಿರುವ ಗೋಪಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದ್ದರೂ ಮೂಲ ಸೌಕರ್ಯ ಕಲ್ಪಿಸುವಲ್ಲಿ ಹಿಂದೆ ಬಿದ್ದಿದೆ.
ಶಾಲೆಗೆ ತಡೆಗೋಡೆ ಇಲ್ಲದೆ, ಪೀಠೋಪಕರಣ ಮತ್ತು ಡಿಜಿಟಲ್ ಉಪಕರಣ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಕಲಿಕೆ ತೊಂದರೆ ಆಗುತ್ತಿದೆ. ಶಾಲೆಯ ಮದ್ಯದಲ್ಲಿ ಚರಂಡಿ ಹರಿಯುತ್ತಿದ್ದು, ಗಬ್ಬು ನಾರುತ್ತಿರುತಿದೆ. ದುರ್ನಾತಯೊಂದಿಗೆ ಪಾಠ ಕೇಳುತ್ತಿದ್ದಾರೆ ವಿದ್ಯಾರ್ಥಿಗಳು.
ಇಂತಹ ಹಲವು ಸಮಸ್ಯೆಗಳ ನಡುವೆಯೂ ಶಾಲೆಯಲ್ಲಿ ಉತ್ತಮ ದಾಖಲಾತಿ ಇದೆ. ಮಕ್ಕಳು ಉತ್ಸವದಿಂದ ಕಲಿಯುತ್ತಿದ್ದಾರೆ. 1ರಿಂದ 7ನೇ ತರಗತಿಯವರೆಗೆ 65 ಮಕ್ಕಳು ಓದುತ್ತಿದ್ದಾರೆ. ನಾಲ್ವರು ಶಿಕ್ಷಕರ ಬದ್ಧತೆಯಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುತ್ತಿದ್ದಾರೆ.
ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಪ್ರತಿ ಶುಕ್ರವಾರ ಪ್ರಬಂಧ, ರಸಪ್ರಶ್ನೆ, ಭಾಷಣ, ಚರ್ಚಾ ಸ್ಪರ್ಧೆ ಸೇರಿದಂತೆ ಹಲವು ಶೈಕ್ಷಣಿಕ ಚಟುವಟಿಕೆ ನಡೆಸಲಾಗುತ್ತದೆ. ತಿಂಗಳಿಗೊಮ್ಮೆ ಯೋಗ, ಧ್ಯಾನ ತರಬೇತಿ ನೀಡಲಾಗುತ್ತದೆ.
ತಡೆಗೋಡೆ ಇಲ್ಲದಿರುವುದರಿಂದ ಶಾಲಾ ಅವಧಿ ಬಳಿಕ ಶಾಲಾ ಆವರಣ ಪ್ರವೇಶಿಸುವ ಜನ ಗಲಿಜು ಮಾಡುತ್ತಾರೆ. ರಾತ್ರಿ ಸಮಯದಲ್ಲಿ ಕುಡುಕರು, ಅನೈತಿಕ ಚಟುವಟಿಕೆಗಳ ತಾಣವಾಗುತ್ತದೆ. ದನ,ಕರು ನುಗ್ಗಿ ಗಿಡಗಳನ್ನು ನಾಶಪಡಿಸುತ್ತವೆ. ಪ್ರತಿ ದಿನ ಬೆಳಿಗ್ಗೆ ಬಂದ ಕೂಡಲೇ ಸ್ವಚ್ಛಗೊಳಿಸುವುದೇ ದೊಡ್ಡ ಕೆಲಸವಾಗುತ್ತದೆ ಎಂದು ಶಿಕ್ಷಕರು ಅಸಮದಾನ ವ್ಯಕ್ತಪಡಿಸುತ್ತಾರೆ.
ತಡೆಗೋಡೆ ನಿರ್ಮಿಸಿಕೊಡಿ ಎಂದು ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ಶಾಲೆಯ ಹಳೆಯ ವಿದ್ಯಾರ್ಥಿ ಅನಿಲ್ ಕುಮಾರ್ ಶಾಲೆಗೆ ಟಿ.ವಿ ಯನ್ನು ಕೊಡುಗೆಯಾಗಿ ನೀಡಿದ್ದಾರೆ. ತಾಂತ್ರಿಕ ಯುಗಕ್ಕೆ ತಕ್ಕಂತೆ ಡಿಜಿಟಲ್ ತರಗತಿಗಳ ಮೂಲಕ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಪ್ರೊಜೆಕ್ಟರ್ ಮತ್ತಿತರ ಡಿಜಿಟಲ್ ಉಪಕರಣ ಅಗತ್ಯವಿದೆ. ಶಾಲೆಯಲ್ಲಿ ಕಲಿತು ಹೊರಹೋಗಿರುವ ಹಳೆಯ ವಿದ್ಯಾರ್ಥಿಗಳು ಹಾಗೂ ದಾನಿಗಳು ಮುಂದೆ ಬಂದು ಸಹಾಯ ಮಾಡಿದರೆ ಅನುಕೂಲವಾಗುತ್ತದೆ ಎಂದು ಎನ್ನುತ್ತಾರೆ ಶಿಕ್ಷಕರು.
ಬೆಂಗಳೂರಿನಲ್ಲಿ ನೆಲೆಸಿರುವ ಗ್ರಾಮದ ನಿವಾಸಿ ಹೈಕೋರ್ಟ್ ವಕೀಲ ಶ್ರೀರಾಮರೆಡ್ಡಿ ಪ್ರತಿವರ್ಷ ಮಕ್ಕಳಿಗೆ ಲೇಖನ ಸಾಮಗ್ರಿ ಮತ್ತು ಸಮವಸ್ತ್ರ ನೀಡುತ್ತಾರೆ. ವರ್ಷಪೂರ್ತಿ ಆಗುವಷ್ಟು ಲೇಖನ ಸಾಮಗ್ರಿವನ್ನು ಪ್ರತಿವರ್ಷ ಶಾಲೆಯ ಆರಂಭದಲ್ಲೇ ವಿತರಿಸುತ್ತಾರೆ. ಇದೇ ರೀತಿಯಲ್ಲಿ ದಾನಿಗಳ ಸಹಾಯ ಹಸ್ತ ಚಾಚಿದರೆ ಅನುಕೂಲ ಆಗುತ್ತದೆ ಎಂದು ಶಿಕ್ಷಕರು ಕೋರಿದ್ದಾರೆ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಮಕ್ಕಳು ಮಾತ್ರ ನಮ್ಮ ಶಾಲೆಗೆ ದಾಖಲಾಗುತ್ತಾರೆ. ಆ ಮಕ್ಕಳಿಗೆ ಗ್ರಾಮಸ್ಥರ ಸಹಕಾರದಿಂದ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದ್ದೇವೆ vಕೆ.ಎಸ್.ಇಂದಿರಾ ಮುಖ್ಯ ಶಿಕ್ಷಕಿ
ಗೋಪಸಂದ್ರ ಸರ್ಕಾರಿ ಶಾಲೆಯು ಮೊದಲಿನಿಂದಲೂ ಕ್ಲಸ್ಟರ್ ನಲ್ಲಿ ಪ್ರಥಮ ಸ್ಥಾನದಲ್ಲಿದೆ. ಮಕ್ಕಳಿಗೆ ಖಾಸಗಿ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಗುರಿ.ಪ್ರಮೀಳಾ ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ
ಶಾಲೆಗೆ ತಡೆಗೋಡೆ ಇಲ್ಲದೆ ಶಾಲಾ ಆವರಣದಲ್ಲಿ ಗಿಡಮರ ಬೆಳೆಸಲು ಸಾಧ್ಯವಾಗುತ್ತಿಲ್ಲ. ಬೇಗೆ ತಡೆಗೋಡೆ ನಿರ್ಮಿಸಿಕೊಡಬೇಕು. ಶಾಲೆಯ ಆವರಣದಲ್ಲಿರುವ ಚರಂಡಿಯನ್ನು ಬೇರೆ ಕಡೆಗೆ ತಿರುಗಿಸಬೇಕು.ಸುಹಾಸ್ ವಿದ್ಯಾರ್ಥಿ
ತರಗತಿಗೆ ನುಗ್ಗುವ ಹಾವು ಶಾಲೆಯ ಮದ್ಯದಲ್ಲಿ ಇರುವ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ಕೊಚ್ಚೆಯಾಗಿ ದುರ್ವಾಸನೆ ಬೀರುತ್ತಿದೆ. ಚರಂಡಿಯಲ್ಲಿ ಗಿಡಗೆಂಟಿ ಬೆಳೆದಿರುವುದರಿಂದ ಹಾವುಗಳ ಕಾಟ ವಿಪರೀತವಾಗಿದೆ. 2-3 ಬಾರಿ ತರಗತಿಯ ಕೊಠಡಿಗಳಿಗೆ ಹಾವುಗಳು ನುಗ್ಗಿದ್ದವು. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಚರಂಡಿಯನ್ನು ಬೇರೆ ಕಡೆ ತಿರುಗಿಸಬೇಕು. ಸದ್ಯಕ್ಕೆ ತುರ್ತಾಗಿ ಚರಂಡಿ ನೀರು ನಿಲ್ಲದಂತೆ ಸರಾಗವಾಗಿ ಹರಿದುಹೋಗುವಂತೆ ಕ್ರಮಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.