ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯಗಳಿಲ್ಲದೆ ನರಳುತ್ತಿದೆ ವೇಗವಾಗಿ ಬೆಳೆಯುತ್ತಿರುವ ನಗರ ಚಿಂತಾಮಣಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ನಗರ
Last Updated 22 ನವೆಂಬರ್ 2021, 7:48 IST
ಅಕ್ಷರ ಗಾತ್ರ

ಚಿಂತಾಮಣಿ: ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಮತ್ತು ವಾಣಿಜ್ಯ ನಗರ ಎನಿಸಿದೆ ಚಿಂತಾಮಣಿ. ಇಂತಿಪ್ಪ ನಗರ ಕನಿಷ್ಠ ಮೂಲಸೌಕರ್ಯಗಳಿಂದ ಬಳಲುತ್ತಿದೆ. ಇದು ಒಂದು ಸಮಸ್ಯೆಯಾದರೆ ಮತ್ತೊಂದು ಕಡೆ ನಗರಸಭೆಯಿಂದ ಸಕಾಲಕ್ಕೆ ಕೆಲಸಗಳು ಆಗುತ್ತಿಲ್ಲ ಎನ್ನುವ ದೂರು ಸಹ ವ್ಯಾಪಕವಾಗಿದೆ.

ನಗರದ ರಸ್ತೆಗಳಲ್ಲಿ ಜನರು ಸಂಚರಿಸುವುದೇ ಕಷ್ಟವಾಗಿದೆ. ಗುಂಡಿಮುಕ್ತ ರಸ್ತೆಯನ್ನು ಹುಡುಕಬೇಕಾಗಿದೆ. ವಿವಿಧ ಬಡಾವಣೆಗಳ ಒಳ ರಸ್ತೆಗಳು ತೀವ್ರವಾಗಿ ಹದಗೆಟ್ಟಿವೆ. ಸಾರ್ವಜನಿಕರು ಮತ್ತು ದ್ವಿಚಕ್ರವಾಹಗಳ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ.

ಸಣ್ಣ ಮಳೆ ಬಂದರೂ ರಸ್ತೆಗಳು ಚರಂಡಿಗಳಾಗುತ್ತವೆ. ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗುತ್ತದೆ. ರಸ್ತೆಗಳ ಅವ್ಯವಸ್ಥೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತವೆ. ಈ ವಿಚಾರದಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಸ್ಪಂದಿಸುತ್ತಿಲ್ಲ ಎನ್ನುವುದು ನಾಗರಿಕರ ದೂರಾಗಿದೆ.

ನೆಕ್ಕುಂದಿಪೇಟೆ ಕೆರೆ ಯೋಜನೆ ಸ್ಥಗಿತ: ನಗರಕ್ಕೆ ನೀರು ಸರಬರಾಜು ಮಾಡಲು ರೂಪಿಸಿದ್ದ ನೆಕ್ಕುಂದಿಪೇಟೆ ಕೆರೆ ಯೋಜನೆ ಸ್ಥಗಿತಗೊಂಡಿದೆ. ಕೆರೆಗೆ ಯುಜಿಡಿ ನೀರು ಹರಿಯುತ್ತಿದೆ. ಗಿಡಗಂಟಿಗಳು ಬೆಳೆದಿವೆ. ಯುಜಿಡಿ ನೀರು ಮತ್ತು ಗಿಡಗಂಟಿಗಳು ಸೇರಿ ಕೊಳಚೆ ಕೊಂಪೆಯಾಗಿದೆ. ಸೊಳ್ಳೆ ಮತ್ತು ಹಂದಿಗಳ ಆವಾಸ ಸ್ಥಾನವಾಗಿದೆ. ಈ ವರ್ಷ ಉತ್ತಮ ಮಳೆಯಾಗಿದ್ದು ಕೆರೆ ತುಂಬಿ ಕೋಡಿ ಹರಿದಿದ್ದರೂ ಯುಜಿಡಿ ನೀರು ಮಿಶ್ರಣವಾಗುತ್ತಿರುವುದರಿಂದ ನೀರು ಉಪಯೋಗಕ್ಕೆ ಬಾರದಂತಾಗಿದೆ.
ವಾರದ ಸಂತೆ: ಚಿಂತಾಮಣಿ ವಾಣಿಜ್ಯ ನಗರಿಯಾಗಿದೆ. ವ್ಯಾಪಾರ ವಹಿವಾಟುಗಳ ಕೇಂದ್ರವಾಗಿದೆ. ಪ್ರತಿ ಭಾನುವಾರ ದೊಡ್ಡ ಮಟ್ಟದಲ್ಲಿ ಸಂತೆ ನಡೆಯುತ್ತದೆ. ಸಂತೆಗೆ ಸ್ಥಳವೇ ಇಲ್ಲ. ಬಂಬೂ ಬಜಾರ್ ರಸ್ತೆಯಿಂದ ಚೇಳೂರು ರಸ್ತೆಯವರೆಗೂ ಅಡ್ಡ ರಸ್ತೆಯಲ್ಲಿ ಸಂತೆ ನಡೆಯುತ್ತದೆ. ಸಮತಟ್ಟು ಸಹ ಇಲ್ಲದೆ ಹಳ್ಳ ಕೊಳ್ಳಗಳಿಂದ ಈ ಜಾಗವಿದೆ. ಮಳೆ ಬಂದರೆ ಸರಕುಗಳು ನೀರಿನಲ್ಲಿ ಮುಳುಗುತ್ತವೆ. ವ್ಯಾಪಾರಿಗಳು ಪ್ಲಾಸ್ಟಿಕ್ ಪೇಪರ್ ಕಟ್ಟಿಕೊಂಡು ವ್ಯಾಪಾರ ಮಾಡುತ್ತಾರೆ. ಮಳೆ ಬಿಸಿಲಿನಿಂದ ರಕ್ಷಣೆ ಇಲ್ಲ. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಿಲ್ಲ. ತೆರಿಗೆಯನ್ನು ವಸೂಲು ಮಾಡುವ ನಗರಸಭೆ ಸೌಲಭ್ಯಗಳ ಕಡೆ ಮಾತ್ರ ಗಮನಹರಿಸುತ್ತಿಲ್ಲ ಎಂದು ವ್ಯಾಪಾರಿಗಳು ಅಸಮಾಧಾನ ‌ವ್ಯಕ್ತಪಡಿಸುತ್ತಾರೆ.

ಓಟಿ ಕೆರೆ: ನಗರದ 8ನೇ ವಾರ್ಡ್ ಕನಂಪಲ್ಲಿಯ ಓಟಿ ಕೆರೆ ಬೆಂಗಳೂರು ರಸ್ತೆಗೆ ಹೊಂದಿಕೊಂಡಿದೆ. ಈ ಕೆರೆ ಅಭಿವೃದ್ಧಿಪಡಿಸಲು ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಯೋಜನೆ ರೂಪಿಸಿದ್ದರು. ಕೆರೆಯ ಕಟ್ಟೆಯ ಮೇಲೆ ಗಿಡಗಳನ್ನು ಬೆಳೆಸಿ ನಡಿಗೆಪಥ, ಕೆರೆಯ ಮಧ್ಯಭಾಗದಲ್ಲಿ ದ್ವೀಪ ನಿರ್ಮಾಣ,ವಿಶ್ರಾಂತಿಗೆ ಕಲ್ಲಿನ ಬೆಂಚ್ ಸೇರಿದಂತೆ ಅನೇಕ ಕಾಮಗಾರಿಗಳು ಯೋಜನೆಯಲ್ಲಿದ್ದವು. ಈಗಕೆರೆಯ ಕಟ್ಟೆ, ಕೋಡಿ ಹಾಗೂ ಸುತ್ತಲೂ ಗಿಡಗಂಟೆಗಳು ಬೆಳೆದಿವೆ.

27*7 ನೀರು ಪೂರೈಕೆ ಯೋಜನೆ: ನಗರದಲ್ಲಿ ನೀರಿನ ಮೀಟರ್‌ ಅಳವಡಿಸಿ 24*7 ನೀರು ಸರಬರಾಜು ಮಾಡುವ ಯೋಜನೆ ರೂಪಿಸಲಾಗಿತ್ತು. ಪ್ರಭಾಕರ್ ಬಡಾವಣೆಯಿಂದ ಆರಂಭಿಸಿ ನಂತರ ಹಂತ ಹಂತವಾಗಿ ನಗರದ ಎಲ್ಲೆಡೆ ವಿಸ್ತರಿಸಲು ಚಿಂತನೆ ನಡೆದಿತ್ತು. ನೀರಿನ ಸಂಪರ್ಕಕಕ್ಕಾಗಿ ರಸ್ತೆಗಳನ್ನು ಅಗೆದು ಹಾಳು ಮಾಡಬಾರದು ಎಂದು ರಸ್ತೆಗಳನ್ನು ಮಾಡುವಾಗಲೇ ಎರಡು ಬದಿಯಲ್ಲಿ ನೀರಿನ ಸಂಪರ್ಕ ಪೈಪ್‌ಗಳನ್ನು ಹಾಕಲಾಗಿತ್ತು. ಆದರೆ 24 ಗಂಟೆಯೂ ನೀರನ್ನು ಪೂರೈಸಬೇಕು ಎಂಬ ಯೋಜನೆಯು ಸ್ಥಗಿತಗೊಂಡಿದೆ.

ಕಸದ ಸಮಸ್ಯೆ: ನಗರದಲ್ಲಿ ಕಸ ಸಂಗ್ರಹಣೆ, ತ್ಯಾಜ್ಯ ವಿಲೇವಾರಿ ನಿರ್ವಹಣೆಯಲ್ಲೂ ಸಿಬ್ಬಂದಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ನಗರದ ವಿವಿಧ ವಾರ್ಡ್‍ಗಳಲ್ಲಿ ಕಸ ಸಂಗ್ರಹಣೆ ಇಲ್ಲದೆ ರಸ್ತೆಬದಿ ಮತ್ತು ಚರಂಡಿಗಳಲ್ಲಿ ಕೊಳೆತು ನಾರುತ್ತಿದೆ. ಒಳಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಒಳಚರಂಡಿ ಬಂದ್ ಆಗಿ ಮ್ಯಾನ್‌ಹೋಲ್‌ಗಳ ಮೂಲಕ ರಸ್ತೆಗೆ ನೀರು ಹರಿಯುತ್ತಿದೆ.ಈ ಚಿತ್ರಣವನ್ನುಒಂದಲ್ಲ ಒಂದು ರಸ್ತೆಯಲ್ಲಿ ಕಾಣಬಹುದು. ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ.

ಆಡಳಿತ ವೈಫಲ್ಯ: ನಗರಸಭೆಯ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರೈಸಿದೆ. ಒಂದು ವರ್ಷವಾದರೂ ನಗರದಲ್ಲಿ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ನಗರವು ಸಮಸ್ಯೆಗಳ ಅಗರವಾಗಿದ್ದರೂ ಅಧಿಕಾರಿಗಳು ಮತ್ತು ನಗರಸಭೆ ಆಡಳಿತ ಸ್ಪಂದಿಸುತ್ತಿಲ್ಲ ಎನ್ನುವ ದೂರು ವ್ಯಾ‍ಪಕವಾಗಿದೆ.

ನಗರಸಭೆಸಾಮಾನ್ಯ ಸಭೆಗಳಿಗೆ ಶಾಸಕರು, ಸಂಸದರು ತಲೆ ಹಾಕುವುದಿಲ್ಲ. ಸಾಮಾನ್ಯ ಸಭೆಗಳಲ್ಲಿ ಭಾಗವಹಿಸಿ ಸದಸ್ಯರು ಮತ್ತು ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಅಭಿವೃದ್ಧಿಗೆ ಮತ್ತು ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಶಾಸಕ, ಸಂಸದರು, ಒಂದೂ ಸಭೆಗಳಲ್ಲಿಯೂ
ಭಾಗವಹಿಸುವುದಿಲ್ಲ.

ನಗರಸಭೆಯಲ್ಲಿ ಸಾರ್ವಜನಿಕರ ಕೆಲಸಗಳು ನಡೆಯುತ್ತಿಲ್ಲ. ಸಿಬ್ಬಂದಿಯೂ ಇರುವುದಿಲ್ಲ. ಕೆಲಸ ಮಾಡಿಸಿಕೊಡುವ ದಲ್ಲಾಳಿಗಳ ಹಾವಳಿ ಮಿತಿ ಮೀರಿದೆ. ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ನಗರಸಭೆ ಸದಸ್ಯರು ಸಭೆಗಳಲ್ಲಿ ಆಕ್ಷೇಪಿಸುವುದು ಸಾಮಾನ್ಯವಾಗಿದೆ. ಈಚೆಗೆ ನಗರಸಭೆ ಸದಸ್ಯ ಶಫೀಕ್ ಕಚೇರಿ ಮುಂದೆ ಧರಣಿ
ಸಹ ನಡೆಸಿದ್ದರು.

ಇ–ಖಾತೆ, ಖಾತೆ ವರ್ಗಾವಣೆ, ನಕ್ಷೆ ಮಂಜೂರು ಮತ್ತಿತರ ಕೆಲಗಳಿಗಾಗಿ ನಗರಸಭೆ ಕಚೇರಿಗೆ ತೆರಳಿದರೆ ಕೆಲಸವಾಗುವುದಿಲ್ಲ. ಅಧಿಕಾರಿಗಳು ಕುಂಟು ನೆಪಗಳಿಂದ ಅಲೆದಾಡಿಸುತ್ತಾರೆ. ದಲ್ಲಾಳಿಗಳ ಮೂಲಕ ಸಂಪರ್ಕಿಸಿದರೆ ಕೆಲಸವಾಗುತ್ತದೆ. ಭ್ರಷ್ಟಾಚಾರ ವಿಪರೀತವಾಗಿದೆ. ಅಧ್ಯಕ್ಷೆ, ಉಪಾಧ್ಯಕ್ಷೆಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ನಗರಸಭೆಯಲ್ಲಿ ಹೇಳುವವರು, ಕೇಳುವವರೇ ಇಲ್ಲವಾಗಿದೆ ಎಂಬುದು ನಾಗರಿಕರು ದೂರುತ್ತಿದ್ದಾರೆ.

ಇದ್ದೂ ಇಲ್ಲದಂತಿದೆ ನಗರಸಭೆ

ಬೀದಿಬದಿ ಮತ್ತು ತಳ್ಳುವ ಗಾಡಿಗಳ ವ್ಯಾಪಾರಿಗಳ ಸಮಸ್ಯೆ, ಬೀದಿ ದೀಪಗಳು, ಪಾದಚಾರಿ ಮಾರ್ಗಗಳ ಒತ್ತುವರಿ, ವಾಹನಗಳ ಪಾರ್ಕಿಂಗ್, ಗೋಪಸಂದ್ರ ಕೆರೆಯ ಅವನತಿ, ಉದ್ಯಾನಗಳ ನಿರ್ವಹಣೆಯಲ್ಲಿ ಅಸಡ್ಡೆ ಹೀಗೆ ಸಮಸ್ಯೆಗಳ ಸರಮಾಲೆ ಇದೆ. ಸೂಕ್ತಕ್ರಮಗಳನ್ನು ಕೈಗೊಳ್ಳಬೇಕಾದ ಜನಪ್ರತಿನಿಗಳು, ನಗರಸಭೆ ಆಡಳಿತ ಮಾತ್ರ ಜಾಣ ಕುರುಡುತನ ತೋರುತ್ತಿದೆ. ನಗರಸಭೆ ಇದ್ದೂ ಇಲ್ಲದಂತಾಗಿದೆ.

ಶ್ರೀನಿವಾಸ್ಮ,ನಾಗರಿಕ, ಚಿಂತಾಮಣಿ

ಶೇ 60ರಷ್ಟು ಹುದ್ದೆಗಳು ಖಾಲಿ

ನಗರದ ಜನಸಂಖ್ಯೆ ಹೆಚ್ಚಿದೆ. ವಿಸ್ತೀರ್ಣವೂ ದೊಡ್ಡದಾಗಿದೆ.ಅದಕ್ಕೆ ಅನುಗುಣವಾಗಿ ನಗರಸಭೆಯಲ್ಲಿ ನೌಕರರು ಹುದ್ದೆಗಳು ಮಂಜೂರಾಗಿಲ್ಲ. ಯಾವುದೊ ಕಾಲದಲ್ಲಿ ಮಂಜೂರಾಗಿರುವ ಹುದ್ದೆಗಳು ಮುಂದುವರಿಯುತ್ತಿವೆ. ಇರುವ ನೌಕರರಲ್ಲೂ ಶೇ 60 ರಷ್ಟು ಹುದ್ದೆಗಳು ಖಾಲಿ ಇರುವುದರಿಂದ ಸಹಜವಾಗಿ ಕೆಲಸ ಕಾರ್ಯಗಳು ಸ್ವಲ್ಪಮಟ್ಟಿಗೆ ಕುಂಠಿತವಾಗಿರಬಹುದು. ಇರುವ ಸಿಬ್ಬಂದಿಯಿಂದಲೇ ಸಾಧ್ಯವಾದಷ್ಟು ನಾಗರಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಲಾಗುತ್ತಿದೆ.

ಉಮಾಶಂಕರ್, ನಗರಸಭೆಪ್ರಭಾರ ಪೌರಾಯುಕ್ತ, ಚಿಂತಾಮಣಿ

ಇಚ್ಚಾಶಕ್ತಿ ಕೊರತೆ

ನಗರಸಭೆಯಲ್ಲಿ ಅಧಿಕಾರಿಗಳ ಕೊರತೆ ಇದೆ. ಚುನಾಯಿತ ಪ್ರತಿನಿಧಿಗಳಿಗೂ ಜನಪರ ಕೆಲಸ ಮಾಡಬೇಕು ಎಂಬ ಇಚ್ಚಾಶಕ್ತಿ ಇಲ್ಲ. ಗೋಸಂದ್ರ ಕೆರೆ ಕಲುಷಿತಗೊಂಡಿದೆ. ನೆಕ್ಕುಂದಿಕೆರೆಯೂ ಒಳಚರಂಡಿ ನೀರು ಮಿಶ್ರಣವಾಗಿ ಹಾಳಾಗಿದೆ. ಅದನ್ನು ಕಾಪಾಡಿಕೊಂಡಿದ್ದರೆ ನಗರದ ಅರ್ಧ ಭಾಗಕ್ಕೆ ನೀರು ಪೂರೈಸಬಹುದಾದಿತ್ತು. ಸ್ವಚ್ಛತೆಯಂತೂ ಮರೀಚಿಕೆಯಾಗಿದೆ. ಹಂದಿ,ನಾಯಿಗಳ ಕಾಟ ವಿಪರೀತವಾಗಿದೆ. ಎಷ್ಟೇ ಒತ್ತಾಯ ಮಾಡಿದರೂ ಕ್ರಮಕೈಗೊಳ್ಳುವುದಿಲ್ಲ.

ಮಹ್ಮದ್ ಶಫೀಕ್, ನಗರಸಭೆ ಸದಸ್ಯ, ಚಿಂತಾಮಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT