ಭಾನುವಾರ, ಏಪ್ರಿಲ್ 2, 2023
31 °C
ಕೆ.ಸಿ. ವ್ಯಾಲಿ, ಎಚ್.ಎನ್‌. ವ್ಯಾಲಿ ನೀರು ತಾಲ್ಲೂಕಿಗೆ ಮರೀಚಿಕೆ

ಚಿಂತಾಮಣಿಗೆ ನೀರಿನದ್ದೇ ಚಿಂತೆ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಶಾಶ್ವತ ನೀರಾವರಿಗಾಗಿ ಎರಡು ದಶಕಗಳ ಕಾಲ ಹೋರಾಟ ನಡೆಯಿತು. ಆ ಫಲವಾಗಿ ರೂಪಿಸಿರುವ ಕೆ.ಸಿ. ವ್ಯಾಲಿ ಮತ್ತು ಎಚ್.ಎನ್. ವ್ಯಾಲಿ ಯೋಜನೆಯ ನೀರು ಚಿಂತಾಮಣಿ ತಾಲ್ಲೂಕಿಗೆ ಮರೀಚಿಕೆಯಾಗಿದೆ.

ಶಾಶ್ವತ ನೀರಾವರಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ತಾಲ್ಲೂಕು ಪ್ರತಿಫಲ ಪಡೆಯುವಲ್ಲಿ ಮಾತ್ರ ವಂಚನೆಗೆ ಒಳಗಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಿಸ್ತಾರ ಹಾಗೂ ಜನಸಂಖ್ಯೆಯಲ್ಲಿ ಹೆಚ್ಚಿನ ಪಾಲನ್ನು ಹೊಂದಿರುವ ತಾಲ್ಲೂಕು ಇದಾಗಿದೆ. ಆದರೆ, ಅಭಿವೃದ್ಧಿ ಯೋಜನೆಗಳ ಪಾಲು ಪಡೆಯುವಲ್ಲಿ ವಂಚನೆಗೆ ಒಳಗಾಗಿದೆ ಎಂಬ ಕೊರಗು ಇಲ್ಲಿನ ಜನರಲ್ಲಿ ಮಡುಗಟ್ಟಿದೆ.

ಚಿಂತಾಮಣಿ ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 546 ಹಾಗೂ ಸಣ್ಣ ನೀರಾವರಿ ಇಲಾಖೆಯ ಅಡಿಯಲ್ಲಿ 19 ಸೇರಿ ಒಟ್ಟು 565 ಕೆರೆಗಳಿವೆ. ನಗರಕ್ಕೆ ಕುಡಿಯುವ ನೀರನ್ನು ಪೂರೈಸಲು ಯೋಜನೆಯನ್ನು ಕೈಗೊಂಡಿರುವ ಭಕ್ತರಹಳ್ಳಿ-ಅರಸೀಕೆರೆ ಒಂದನ್ನು ಹೊರತುಪಡಿಸಿ ಯಾವುದರಲ್ಲಿಯೂ ನೀರಿಲ್ಲ. ಕೆರೆಗಳು ಒಣಗಿ ದಶಕಗಳೇ ಕಳೆದಿವೆ. ಬಹುತೇಕ ಕೆರೆಗಳಲ್ಲಿ ಮರಗಿಡಗಳು, ಗಿಡಗಂಟಿಗಳು ಬೆಳೆದಿದ್ದು, ಹೂಳು ತುಂಬಿದೆ.

ತಾಲ್ಲೂಕಿನಲ್ಲಿ ಅಂತರ್ಜಲ ತೀವ್ರವಾಗಿ ಕುಸಿದಿದೆ. 1,500 ಅಡಿ ಕೊಳವೆಬಾವಿ ಕೊರೆದರೂ ನೀರು ದೊರೆಯುತ್ತಿಲ್ಲ. ಅಲ್ಪಸ್ವಲ್ಪ ನೀರು ದೊರೆತರೂ ಪ್ಲೋರೈಡ್ ಯುಕ್ತವಾಗಿರುತ್ತದೆ. 

ಶಾಶ್ವತ ನೀರಾವರಿ ಹೋರಾಟದ ಹೆಸರಿನಲ್ಲಿ ವಿವಿಧ ಸಂಘ, ಸಂಸ್ಥೆಗಳು ಪರಮಶಿವಯ್ಯ ವರದಿಯನ್ನು ಜಾರಿಗೊಳಿಸುವಂತೆ ‌ಒತ್ತಾಯಿಸಿ ಹೋರಾಟಕ್ಕೆ ಇಳಿದವು. ಜಿಲ್ಲಾ ಕೇಂದ್ರದಲ್ಲಿ 160 ದಿನಗಳ ಕಾಲ ಧರಣಿ ನಡೆಯಿತು. ಒತ್ತಡಕ್ಕೆ ಮಣಿದ ಸರ್ಕಾರ ಕೆ.ಸಿ. ವ್ಯಾಲಿ, ಎಚ್.ಎನ್. ವ್ಯಾಲಿ ಹಾಗೂ ಎತ್ತಿನಹೊಳೆ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿತು.

ಕೆ.ಸಿ. ವ್ಯಾಲಿ ಯೋಜನೆಯಿಂದ ಪ್ರತಿದಿನ 410 ಎಂಎಲ್‌ಡಿ ನೀರು ಪಡೆಯಬಹುದು. ಚಿಂತಾಮಣಿ ತಾಲ್ಲೂಕು ಸೇರಿ ಕೋಲಾರ ಜಿಲ್ಲೆಯ 126 ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದೆ. ಈ ಹಂತದಲ್ಲಿಯೇ ತಾರತಮ್ಯ, ಮಲತಾಯಿ ಧೋರಣೆ ಆರಂಭವಾಯಿತು. ಅತ್ಯಂತ ಹೆಚ್ಚು ಕೆರೆಗಳನ್ನು ಹೊಂದಿರುವ ಚಿಂತಾಮಣಿ ತಾಲ್ಲೂಕಿನನ ಕೇವಲ 5 ಕೆರೆಗಳನ್ನು ಮಾತ್ರ ಈ ಯೋಜನೆಯಡಿ ತುಂಬಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ. ರೈತ ಸಂಘಟನೆಗಳ ಹೋರಾಟದ ನಂತರ ಎರಡನೇ ಹಂತದಲ್ಲಿ ಚಿಂತಾಮಣಿಯ ಹೆಚ್ಚು ಕೆರೆಗಳನ್ನು ಸೇರಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದರು. ಆದರೆ, ಇದು ಬರಿ ತಿಪ್ಪೆ ಸಾರಿಸುವ ಕೆಲಸವಾಯಿತಷ್ಟೇ.

ಕೆ.ಸಿ. ವ್ಯಾಲಿ ಯೋಜನೆ 2018ರಲ್ಲಿ ಆರಂಭವಾಯಿತು. 3 ವರ್ಷ ಕಳೆದರೂ ಒಂದನೇ ಹಂತವೇ ಸಮರ್ಪಕವಾಗಿ ಜಾರಿಯಾಗಿಲ್ಲ. ಇನ್ನು ಎರಡನೇ ಹಂತ ಜಾರಿಯಾಗಲು ಎಷ್ಟು ವರ್ಷಗಳು ಬೇಕಾಗುತ್ತದೆಯೊ ಗೊತ್ತಿಲ್ಲ. ‌ತಾಲ್ಲೂಕಿನ ಕುರುಟಹಳ್ಳಿ, ಹಾದಿಗೆರೆ, ಮೂಡಲಚಿಂತಲಹಳ್ಳಿ, ಆನೂರು, ದಂಡುಪಾಳ್ಯ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಅದೂ ಅರ್ಧ, ಕಾಲು ಭಾಗ ಮಾತ್ರ ನೀರು ಬರುತ್ತಿದೆ.

ಎಚ್.ಎನ್. ವ್ಯಾಲಿ ಯೋಜನೆ ಯಿಂದ 200 ಎಂಎಲ್‌ಡಿ ನೀರು ಹರಿಸಿ 65 ಕೆರೆಗಳಿಗೆ ಹರಿಸುವುದು ಇಲಾಖೆಯ ಉದ್ದೇಶವಾಗಿದೆ. ಈ ಯೋಜನೆಗಳು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿ ಹೊಂದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ 44 ಕೆರೆಗಳನ್ನು ಈ ಯೋಜನೆಯಡಿ ತುಂಬಿಸಲಾಗುತ್ತದೆ. ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಬಾಗೇಪಲ್ಲಿ ತಾಲ್ಲೂಕುಗಳ ಕೆರೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಯೋಜನೆಗೆ ಚಿಂತಾಮಣಿಯ ಯಾವ ಕೆರೆಯೂ ಸೇರಿಲ್ಲ. ಹೀಗಾಗಿ ಅತ್ಯಂತ ಹೆಚ್ಚು 565 ಕೆರೆಗಳನ್ನು ಹೊಂದಿರುವ ತಾಲ್ಲೂಕಿಗೆ ಕೇವಲ 5 ಕೆರೆಗಳಿಗೆ ಮಾತ್ರ ಹರಿಸುತ್ತಿರುವುದು ವಂಚನೆಯಾಗಿದೆ ಎಂದು ತಾಲ್ಲೂಕಿನ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುವರು.

ಎರಡು ಜಿಲ್ಲೆಗಳ 3,800 ಕೆರೆಗಳನ್ನು ವರ್ಷದಲ್ಲಿ ಒಮ್ಮೆ ತುಂಬಿಸಬೇಕಾದರೆ 39 ಟಿಎಂಸಿ ಅಡಿ ನೀರು ಅವಶ್ಯ. ಆದರೆ, ಎರಡು ಯೋಜನೆಗಳಿಂದ ದೊರೆಯುವ ನೀರು 7.5 ಟಿಎಂಸಿ ಅಡಿ ಮಾತ್ರ. ಅಲ್ಲದೆ ಕೊಳಚೆ ನೀರನ್ನು ಎರಡು ಹಂತಗಳಲ್ಲಿ ಮಾತ್ರ ಸಂಸ್ಕರಿಸಲಾಗುತ್ತಿದೆ. ಇದು ಜನರ ಹಾಗೂ ಭೂಮಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎನ್ನುತ್ತಾರೆ ಹೋರಾಟಗಾರರು.

ಎತ್ತಿನಹೊಳೆ ಯೋಜನೆ ಯೋಜನೆ ಇನ್ನೂ ಹೆಸರಿನಲ್ಲಿ ಅಷ್ಟೇ ಉಳಿದಿದೆ. ಎನ್ನು ಎರಡು ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣವಾಗುತ್ತದೆ ಎಂದು ರಾಜಕಾರಣಿಗಳು ಹಲವು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಆದರೆ, ಮುಂದಿನ ಎರಡು ವರ್ಷಗಳಲ್ಲಿಯೂ ಜಿಲ್ಲೆಗೆ ಎತ್ತಿನಹೊಳೆಯ ನೀರು ಪೂರ್ಣವಾಗಿ ಹರಿಯುವ ಲಕ್ಷಣಗಳು ಇಲ್ಲ.

ಎತ್ತಿನಹೊಳೆ ಯೋಜನೆಯಡಿ ತಾಲ್ಲೂಕಿನ ಸಣ್ಣ ನೀರಾವರಿ ಇಲಾಖೆಯ 19 ಕೆರೆಗಳಿಗೆ ನೀರು ಹರಿಯಬೇಕಾಗಿದೆ. ಜಿಲ್ಲಾ ಕೇಂದ್ರದಲ್ಲಿಯೇ ಕನಿಷ್ಠ ಮಟ್ಟದಲ್ಲಿಯೂ ಎತ್ತಿನಹೊಳೆ ಕಾಮಗಾರಿಗಳು ಆರಂಭವಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.