ಚಿಂತಾಮಣಿ: ತಾಲ್ಲೂಕಿನ ಮುರುಗಮಲ್ಲ ಹೋಬಳಿ ವ್ಯಾಪ್ತಿಯ ದ್ಯಾಮಲಪಲ್ಲಿಗುಡ್ಡ ಹಾಗೂ ಯರ್ರಕೋಟೆ ಗ್ರಾಮಗಳ ಪ್ರದೇಶಗಳಲ್ಲಿ ಶಿಲಾಯುಗದ ಬೃಹತ್ ಕಲ್ಮನೆಗಳು (ಸಮಾಧಿಗಳು) ಪತ್ತೆಯಾಗಿವೆ.
ರಾಜ್ಯ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯ ವತಿಯಿಂದ ಚಿಂತಾಮಣಿ ತಾಲ್ಲೂಕಿನ ಐತಿಹಾಸಿಕ ಸ್ಮಾರಕ ಮತ್ತು ಶಾಸನ, ವೀರಗಲ್ಲು, ಪುರಾತತ್ವ ಸಾಂಸ್ಕೃತಿಕ ಕುರುಹುಗಳ ಅಧ್ಯಯನಕ್ಕಾಗಿ ನಡೆಯುತ್ತಿರುವ ಗ್ರಾಮವಾರು ಸರ್ವೆ ಕಾರ್ಯದಲ್ಲಿ ಕಲ್ಮನೆಗಳು ಕಂಡುಬಂದಿವೆ.
ರಾಜ್ಯ ಪುರಾತತ್ವ ಮತ್ತು ಸಂಗ್ರಹಾಲಯಗಳ ನಿರ್ದೇಶಕ ಸ್ಮಿತರೆಡ್ಡಿ ನೇತೃತ್ವದಲ್ಲಿ, ಪುರಾತತ್ವ ನೆಲೆಗಳ ಸಂರಕ್ಷಿತ ಯೋಜನೆಯಡಿ ಪವನ್ ಮೌರ್ಯ ಚಕ್ರವರ್ತಿಯ ತಂಡ ಈ ಸರ್ವೆ ಕಾರ್ಯ ನಡೆಸುತ್ತಿದೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಅನೇಕ ಪ್ರಾಗೈತಿಹಾಸದ ಕುರುಹುಗಳು ಹೊಂದಿರುವ ಜಿಲ್ಲೆಗಳಾಗಿವೆ ಎಂದು ಪವನ್ ಮೌರ್ಯ ಚಕ್ರವರ್ತಿ ಮಾಹಿತಿ ನೀಡಿದರು.
ಎರಡು ಜಿಲ್ಲೆಗಳಲ್ಲಿ ಈಗಾಗಲೇ ಕೆಲವು ತಾಲ್ಲೂಕುಗಳ ಸರ್ವೆ ಮಾಡಲಾಗಿದೆ. ಚಿಂತಾಮಣಿ ತಾಲ್ಲೂಕಿನ ಎಲ್ಲ ಗ್ರಾಮಗಳ ಸರ್ವೆ ಕಾರ್ಯ ನಡೆಯುತ್ತಿದೆ. ಸರ್ವೆ ಕಾರ್ಯ ನಡೆಸುವಾಗಲೇ ಮುರುಗಮಲ್ಲ ಹೋಬಳಿಯ ದ್ಯಾಮಲಪಲ್ಲಿಗುಡ್ಡ ಹಾಗೂ ಯರ್ರಕೋಟೆ ಬಳಿ ಬೃಹತ್ ಕಲ್ಮನೆಗಳು ಕಂಡುಬಂದಿದೆ. ಸ್ಥಳಿಯರು ಇವುಗಳನ್ನು ಪಾಂಡವರ ಮನೆ ಎಂದು ಕರೆಯುತ್ತಾರೆ. ಕಲ್ಮನೆಗಳಿಗೆ 3 ರಿಂದ 10 ಸಾವಿರ ವರ್ಷಗಳ ಇತಿಹಾಸವಿದೆ.
ನಿಧಿಗಳ್ಳರು ಕಲ್ಮನೆಗಳನ್ನು ಅಗೆದು ನಾಶ ಮಾಡಿದ್ದಾರೆ. ಮತ್ತೊಂದೆಡೆ ಆ ಪ್ರದೇಶದ ಸುತ್ತಮುತ್ತಲೂ ನಡೆಯುತ್ತಿರುವ ಗಣಿಗಾರಿಕೆಯಿಂದಲೂ ನಾಶವಾಗಿವೆ. ಇಂತಹ ಪ್ರಾಚೀನ ಪರಂಪರೆಯನ್ನು ರಕ್ಷಣೆ ಮಾಡಬೇಕು. ಸ್ಥಳೀಯರು ಹೇಳುವ ಪ್ರಕಾರ ಕಲ್ಮನೆಗಳು 2 ಸಾವಿರ ಸಂಖ್ಯೆಯಲ್ಲಿವೆ. ಪುರಾತತ್ವ ಇಲಾಖೆಯ ಸರ್ವೆ ತಂಡ ಸ್ಥಳಕ್ಕೆ ತೆರಳಿ ಅಧ್ಯಯನ ಮಾಡಿದಾಗ 500ಕ್ಕೂ ಹೆಚ್ಚು ಕಲ್ಮನೆಗಳು ಪತ್ತೆಯಾಗಿವೆ ಎಂದರು.
ಕಲ್ಮನೆಗಳ ಮೇಲ್ಭಾಗದ ಚಪ್ಪಡಿಗಳನ್ನು ಈಗಾಗಲೇ ಕಿತ್ತು ನಾಶ ಮಾಡಿದ್ದಾರೆ. ಈ ಭಾಗದಲ್ಲಿ ಅನಧಿಕೃತ ಗಣಿಗಾರಿಕೆ ನಡೆಯುತ್ತಿದೆ. ಪತ್ತೆಯಾಗಿರುವ ಕಲ್ಮನೆಗಳ ದಾಖಲೀಕರಣ ಮಾಡಿ ಶೀಘ್ರವಾಗಿ ಈ ನೆಲೆಯನ್ನು ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ಇಲಾಖೆ ಸಂರಕ್ಷಣೆ ಮಾಡುತ್ತದೆ’ ಎಂದು ಸರ್ವೆ ತಂಡದ ಪವನ್ ಮೌರ್ಯ ಹೇಳಿದರು.
ಕಲ್ಮನೆಗಳ ಸಂಸ್ಕೃತಿಗೆ ಸುಮಾರು 3 ರಿಂದ 10 ಸಾವಿರ ವರ್ಷಗಳವರೆಗೂ ಪ್ರಾಚೀನ ಪ್ರಾಗೈತಿಹಾಸಿಕ ಇತಿಹಾಸ ಹೊಂದಿದೆ. ಇದುವರೆಗೂ ಕರ್ನಾಟಕದಲ್ಲಿ ಒಂದೇ ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಬೃಹತ್ ಶಿಲಾ ಸಮಾಧಿಗಳು ದೊರೆತಿರುವ ಎರಡನೇ ಸ್ಥಳವಾಗಿದೆ. ವಿಜಯನಗರ ಜಿಲ್ಲೆಯ ಹಿರೇಬೆಳಕಲ್ ಪ್ರದೇಶದಲ್ಲಿ ಬೃಹತ್ ಶಿಲಾ ಸಮಾಧಿಗಳು ದೊರೆತಿರುವ ಪ್ರಥಮ ಸ್ಥಳವಾಗಿದೆ. ಚಿಂತಾಮಣಿ ತಾಲ್ಲೂಕಿನ ದ್ಯಾಮಲಪಲ್ಲಿಗುಡ್ಡ ಹಾಗೂ ಯರ್ರಕೋಟೆ ಗ್ರಾಮಗಳ ಪ್ರದೇಸ ಎರಡನೇ ಸ್ಥಳವಾಗಿದೆ ಎಂದು ಪುರಾತತ್ವ ಸರ್ವೆ ತಂಡವನ್ನು ಮುನ್ನಡೆಸುತ್ತಿರುವ ಸಂಶೋಧಕರು ‘ಪ್ರಜಾವಾಣಿ’ಗೆ ತಿಳಿಸಿದರು.
ಆದಿ ಮಾನವನ ಸಮಾಧಿಗಳಿಂದ ಮಾನವನ ನಾಗರಿಕತೆಯ ಇತಿಹಾಸದ ಬೆಳಕು ಚೆಲ್ಲುತ್ತದೆ. ಪೂರ್ವಘಟ್ಟದ ಕಾಡುಗಳಲ್ಲಿ ಆಂಧ್ರಪ್ರದೇಶದ ಕರ್ನೂಲ್‌ನಿಂದ ತಮಿಳುನಾಡಿನ ನೀಲಗಿರಿ ಬೆಟ್ಟಗಳವರೆಗೂ ಈ ತರಹದ ಸಂಸ್ಕೃತಿ ಕಂಡು ಬರುತ್ತದೆ. ‘ಕುರುಬ್ ಟ್ರೈಬ್ಸ್’ ಎಂಬ ಗುಂಪಿನ ಆದಿ ಮಾನವರು ಈ ರೀತಿ ಸಮಾಧಿಗಳನ್ನು ಮಾಡುತ್ತಿದ್ದರು. ನೀಲಗಿರಿ ಕಾಡುಗಳಲ್ಲಿರುವ ಈ ಜನಾಂಗದವರು ಇಂದಿಗೂ ಅದೇ ರೀತಿ ಸಮಾಧಿ ಮಾಡುತ್ತಾರೆ ಎಂದು ಸಂಶೋಧಕರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.