ಶನಿವಾರ, ಜುಲೈ 24, 2021
25 °C
ಕರ್ನಾಟಕ ರೈತ ಸಂಘದ ಮುಖಂಡರ ಆರೋಪ; ಕ್ರಮಕ್ಕೆ ಒತ್ತಾಯ

ಎಪಿಎಂಸಿಯಲ್ಲಿ ಕಮಿಷನ್‌ ದಂಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬರುವ ರೈತರಿಂದ ಕಮಿಷನ್ ಪಡೆಯುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಬುಧವಾರ ಮಾರುಕಟ್ಟೆ ಮುಂದೆ ಪ್ರತಿಭಟನೆ ನಡೆಸಿ ಎಪಿಎಂಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಎಪಿಎಂಸಿ ಮಾರುಕಟ್ಟೆಗೆ ತಾಲ್ಲೂಕು ಹಾಗೂ ಸುತ್ತಲಿನ ತಾಲ್ಲೂಕುಗಳಿಂದ ತರಕಾರಿ, ಟೊಮೆಟೊ, ಧವಸ ಧಾನ್ಯ, ಹುಣಸೆಹಣ್ಣು, ಕಡಲೆಕಾಯಿ ಸೇರಿದಂತೆ ಹಲವು ಉತ್ಪನ್ನಗಳನ್ನು ರೈತರು ಮಾರಾಟಕ್ಕೆ ತರುತ್ತಾರೆ. ಬೆಲೆ ಇರಲಿ, ಇಲ್ಲದೆ ಇರಲಿ ಶೇ 10ರಷ್ಟು ಕಮೀಷನ್ ವಸೂಲಿಯನ್ನು ನಿಲ್ಲಿಸುವುದಿಲ್ಲ.

ಮಾರಾಟದ ಬಗ್ಗೆ ಯಾವುದೇ ಅಧಿಕೃತ ರಸೀದಿ ನೀಡುವುದಿಲ್ಲ. ಬಿಳಿ ಹಾಳೆಯಲ್ಲಿ ಬರೆದುಕೊಡುತ್ತಾರೆ. ತೆರಿಗೆ ನೀಡದೆ ಸರ್ಕಾರಕ್ಕೂ ವಂಚಿಸುತ್ತಾರೆ. ರೈತರಿಗೂ ಮೋಸ ಮಾಡುತ್ತಾರೆ ಎಂದು ಆರೋಪಿಸಿದರು.

ಟೊಮೆಟೊ ಬಾಕ್ಸ್‌ಗೆ ₹ 2 ಬಾಡಿಗೆಯನ್ನು ರೈತರಿಂದಲೇ ವಸೂಲಿ ಮಾಡುತ್ತಾರೆ. ತೂಕದಲ್ಲೂ ಮೋಸ ಮಾಡುತ್ತಾರೆ. ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಮಾರುಕಟ್ಟೆ ಆವರಣದಲ್ಲಿ ಕೃಷಿ ಭವನವಿದ್ದರೂ ಪ್ರಯೋಜನವಾಗುತ್ತಿಲ್ಲ. ಪ್ರತಿದಿನ ಮಾರುಕಟ್ಟೆಗೆ ಬರುವ ರೈತರು ತಂಗಲು, ಕುಡಿಯುವ ನೀರು, ಶೌಚಾಲಯವಿಲ್ಲದೆ ತೊಂದರೆಯಾಗಿದೆ. ರೈತರಿಗೆ ಮೂಲ ಸೌಲಭ್ಯ ದೊರೆಯುತ್ತಿಲ್ಲ. ಬೆಳಿಗ್ಗೆ ನಸುಕಿನಲ್ಲೇ ಹರಾಜು ಆರಂಭವಾಗುವುದರಿಂದ ರಾತ್ರಿಯೇ ರೈತರು ಸರಕುಗಳನ್ನು ತರುತ್ತಾರೆ. ಹೀಗಾಗಿ ಅವರಿಗೆ ಸೂಕ್ತ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಿದರು.

ಮಾರುಕಟ್ಟೆಯ ಎಲ್ಲ ಕಡೆ ಅದರಲ್ಲೂ ತೂಕ ಮಾಡುವ ಕಡೆ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಬೇಕು. ಮಾರುಕಟ್ಟೆಗೆ ಬರುವ ಕುರಿ, ಮೇಕೆ, ಎಮ್ಮೆ, ಹಸು, ಎತ್ತುಗಳ ಸಂತೆಗೆ ಪ್ರತ್ಯೇಕ ಸ್ಥಳವಿಲ್ಲ. ಸ್ವಚ್ಛತೆ ಮರೀಚಿಕೆಯಾಗಿದೆ. ಈ ಬಗ್ಗೆಯೂ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘದ ಮುಖಂಡರಾದ ಜೆ.ವಿ.ರಘುನಾಥರೆಡ್ಡಿ, ಕೆ.ವೆಂಕಟರಾಮಯ್ಯ, ಎಸ್.ವೆಂಕಟಸುಬ್ಬಾರೆಡ್ಡಿ, ತಿಮ್ಮರಾಯಪ್ಪ, ಬಿ.ವಿ. ಶ್ರೀರಾಮರೆಡ್ಡಿ, ಜಯರಾಮರೆಡ್ಡಿ, ನಾರಾಯಣಸ್ವಾಮಿ, ಎಸ್.ವಿ. ಗಂಗುಲಪ್ಪ, ವೈ.ಎಂ. ಅಶ್ವತ್ಥಗೌಡ, ಮಿಲ್ ನಾರಾಯಣಸ್ವಾಮಿ, ಅಂಕಾಲಮಡುಗು ಶ್ರೀರಾಮರೆಡ್ಡಿ, ವೆಂಕಟರೆಡ್ಡಿ  ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.