ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ; ನಾಳೆ ಫಲಿತಾಂಶ ಘೋಷಣೆ

ಹೈಕೋರ್ಟ್‌ನಿಂದ ಅರ್ಜಿ ವಾಪಸ್ ಪಡೆದ ಡಿ.ಎಸ್. ಆನಂದರೆಡ್ಡಿ
Published : 15 ಸೆಪ್ಟೆಂಬರ್ 2024, 19:15 IST
Last Updated : 15 ಸೆಪ್ಟೆಂಬರ್ 2024, 19:15 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಫಲಿತಾಂಶ ಮಂಗಳವಾರ (ಸೆ.17) ಘೋಷಣೆ ಆಗಲಿದೆ. ಅಂದೇ ಅಧ್ಯಕ್ಷ, ಉಪಾಧ್ಯಕ್ಷರು ಅಧಿಕಾರ ಸಹ ಸ್ವೀಕರಿಸುವರು.

ಗುರುವಾರ (ಸೆ.12) ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದಿತ್ತು. ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಮತಗಳನ್ನು ಪಡೆದಿದ್ದರು. ಆದರೆ ವಿಧಾನ ಪರಿಷತ್ ಸದಸ್ಯರಿಗೆ ಮತದಾನದ ಹಕ್ಕು ನೀಡಿದ್ದ ವಿಚಾರವು ಹೈಕೋರ್ಟ್‌ನಲ್ಲಿ ಇದ್ದ ಕಾರಣ ಫಲಿತಾಂಶ ಘೋಷಣೆ ಆಗಿರಲಿಲ್ಲ. ಚುನಾವಣಾ ಪ್ರಕ್ರಿಯೆಗಳನ್ನು ಚುನಾವಣಾ ಅಧಿಕಾರಿ ಡಿ.ಎಚ್.ಅಶ್ವಿನ್ ಕುಮಾರ್ ಹೈಕೋರ್ಟ್‌ಗೆ ಸಲ್ಲಿಸಿದ್ದರು.

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ.ಆರ್.ಸೀತಾರಾಂ ಮತ್ತು ಎಂ.ಎಲ್‌.ಅನಿಲ್‌ ಕುಮಾರ್ ಅವರ ಮತದಾನಕ್ಕೆ ಆಕ್ಷೇಪಿಸಿ ಚಿಕ್ಕಬಳ್ಳಾಪುರ ನಗರಸಭೆ ಸದಸ್ಯ ಡಿ.ಎಸ್‌.ಆನಂದ ರೆಡ್ಡಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು.

ಚುನಾವಣೆಯಲ್ಲಿ ಎಂ.ಆರ್.ಸೀತಾರಾಂ ಮತ್ತು ಎಂ.ಎಲ್‌.ಅನಿಲ್‌ ಕುಮಾರ್‌  ಮತದಾನ ಮಾಡಬಹುದು. ಆದರೆ, ಅವರ ಮತಗಳನ್ನು ಎಣಿಕೆ ಮಾಡದೆ ಅಮಾನತಿನಲ್ಲಿ ಇರಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿತ್ತು.

ಈ ರಿಟ್ ಅರ್ಜಿಯನ್ನು ಆನಂದರೆಡ್ಡಿ ಚುನಾವಣೆ ನಡೆದ ಮರುದಿನ ಸೆ.13ರಂದು ವಾಪಸ್ ಪಡೆದಿದ್ದಾರೆ. ಆದ್ದರಿಂದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸುಗಮವಾಗಿದ್ದು ಮಂಗಳವಾರ ಫಲಿತಾಂಶ ಘೋಷಣೆ ಆಗಲಿದೆ. 

ಅಧ್ಯಕ್ಷ  ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ನಾಲ್ಕನೇ ವಾರ್ಡ್‌ನ ಎ.ಗಜೇಂದ್ರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಐದನೇ ವಾರ್ಡ್‌ನ ಜೆ.ನಾಗರಾಜ್ 19 ಮತಗಳನ್ನು ಪಡೆದಿದ್ದರು. ಈ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳಿಗಿಂತ ಹೆಚ್ಚು ಮತಗಳನ್ನು ಪಡೆದಿದ್ದರು.

‘ಚುನಾವಣಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಆದರೆ ಫಲಿತಾಂಶ ಘೋಷಿಸಬೇಡಿ ಎಂದು ಹೈಕೋರ್ಟ್ ಸೂಚಿಸಿತ್ತು. ಗುರುವಾರ ಚುನಾವಣೆ ನಡೆದಿದ್ದು ಶುಕ್ರವಾರ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ. ಅಂದೇ ಹೈಕೋರ್ಟ್ ಚುನಾವಣಾ ಫಲಿತಾಂಶ ಪ್ರಕಟಿಸಬಹುದು ಎಂದು ನಿರ್ದೇಶನ ನೀಡಿದೆ’ ಎಂದು ಚಿಕ್ಕಬಳ್ಳಾಪುರ ನಗರಸಭೆ ಪೌರಾಯುಕ್ತ ಉಮಾಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘17ರಂದು ಬೆಳಿಗ್ಗೆ 11ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಇಬ್ಬರು ವಿಧಾನ ಪರಿಷತ್ ಸದಸ್ಯರ ಮತಗಳನ್ನು ಪರಿಗಣನೆ ಮಾಡಬಾರದು ಎಂದು ನ್ಯಾಯಾಲಯಕ್ಕೆ ಹೋಗಿದ್ದರು. ಆದರೆ ನ್ಯಾಯಾಲಯಕ್ಕೆ ದಾವೆ ಹೂಡಿದ್ದವರೇ ತಮ್ಮ ದಾವೆ ವಾಪಸ್ ಪಡೆದಿದ್ದಾರೆ. ಆದ್ದರಿಂದ ಪರಿಷತ್ ಸದಸ್ಯರ ಮತಗಳನ್ನೂ ಪರಿಗಣನೆಗೆ ತೆಗೆದುಕೊಂಡೇ ಫಲಿತಾಂಶ ಘೋಷಿಸಲಾಗುವುದು ಎಂದು ತಿಳಿಸಿದರು.

ನಾಗರಾಜ್
ನಾಗರಾಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT