ನಗರದಲ್ಲಿ ಫ್ಲೆಕ್ಸ್‌ಗಳಿಗೆ ಬೀಳಲಿಲ್ಲ ಕಡಿವಾಣ

7
ಜಯಂತಿ, ಉತ್ಸವ, ಹಬ್ಬಗಳ ನೆಪದಲ್ಲಿ ಪೈಪೋಟಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ಸ್‌ಗಳ ಅಳವಡಿಕೆ, ಅಧಿಕಾರಿಗಳ ಜಾಣ ಕುರುಡಿಗೆ ಪ್ರಜ್ಞಾವಂತರ ಬೇಸರ

ನಗರದಲ್ಲಿ ಫ್ಲೆಕ್ಸ್‌ಗಳಿಗೆ ಬೀಳಲಿಲ್ಲ ಕಡಿವಾಣ

Published:
Updated:
Deccan Herald

ಚಿಕ್ಕಬಳ್ಳಾಪುರ: ಅತ್ತ ರಾಜಧಾನಿ ಬೆಂಗಳೂರಿನಲ್ಲಿ ಹೈಕೋರ್ಟ್ ಬೀಸಿದ ಚಾಟಿ ಏಟಿಗೆ ಎಚ್ಚೆತ್ತುಕೊಂಡ ಬಿಬಿಎಂಪಿಯ ಅಧಿಕಾರಿಗಳು ನಗರದ ಮೂಲೆ ಮೂಲೆಯಲ್ಲಿನ ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್ಸ್, ಬಂಟಿಂಗ್ಸ್‌, ಬ್ಯಾನರ್ಸ್‌ ತೆರವುಗೊಳಿಸುತ್ತಿದ್ದಾರೆ. ಇಷ್ಟಾದರೂ ಜಿಲ್ಲಾ ಕೇಂದ್ರದಲ್ಲಿರುವ ನಗರಸಭೆ ಅಧಿಕಾರಿಗಳು ಮಾತ್ರ ಇಂದಿಗೂ ಈ ವಿಚಾರದಲ್ಲಿ ಎಂದಿನಂತೆ ಜಾಣ ಕುರುಡು ಪ್ರದರ್ಶನ ಮುಂದುವರಿಸಿದ್ದಾರೆ.

ಪರಿಣಾಮ, ಮಾರುಕಟ್ಟೆಯಲ್ಲಿ ಎಗ್ಗಿಲ್ಲದೆ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ, ಬಳಕೆಯಾಗುತ್ತಿರುವ ಜತೆಗೆ ನಗರದಲ್ಲಿ ಜಯಂತಿ, ಉತ್ಸವ, ಹಬ್ಬಗಳ ನೆಪದಲ್ಲಿ ಪೈಪೋಟಿಯಲ್ಲಿ ಫ್ಲೆಕ್ಸ್‌, ಬ್ಯಾನರ್‌ ಕಟ್ಟುವುದಕ್ಕೆ ಕಡಿವಾಣ ಹಾಕಲು ಮುಂದಾಗಿಲ್ಲ. ಸ್ವಚ್ಛಗೊಳ್ಳುತ್ತಿರುವ ಬೆಂಗಳೂರಿನ ವಿದ್ಯಮಾನ ನೋಡಿದ ನಗರದ ಪ್ರಜ್ಞಾವಂತ ಜನರು ಅಧಿಕಾರಿಗಳ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪರಿಸರಕ್ಕೆ ಹಾನಿ ಉಂಟು ಮಾಡುವ ಹಲವು ಬಗೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧಿಸಿ ಅರಣ್ಯ, ಪರಿಸರ ಮತ್ತು ಜೀವ ವಿಜ್ಞಾನ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿ ಎರಡು ವರ್ಷಗಳು ಕಳೆದಿವೆ. ಆದರೆ ಈವರೆಗೆ ಜಿಲ್ಲೆಯಲ್ಲಿ ಈ ಕಾನೂನು ಉಲ್ಲಂಘಿಸಿದವರ ವಿರುದ್ಧ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ!

ಪರಿಸರಕ್ಕೆ ಹಾನಿ ಉಂಟು ಮಾಡುವ ಹಲವು ಬಗೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧಕ್ಕೆ ಸಂಬಂಧಿಸಿದಂತೆ 2015ರ ಅಕ್ಟೋಬರ್ 28ರಂದು ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿತ್ತು. ಬಳಿಕ ಸಾರ್ವಜನಿಕರ ಸಲಹೆ–ಆಕ್ಷೇಪಗಳನ್ನು ಪರಿಶೀಲಿಸಿದ ಕಳೆದ ಮಾರ್ಚ್11ರಂದು ಅಂತಿಮ ಅಧಿಸೂಚನೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿತ್ತು. ಅಂದಿನಿಂದ ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಅಧಿಕೃತವಾಗಿ ಜಾರಿಗೆ ಬಂದಿದೆ. ಅದು ಮಾತ್ರ ಜಿಲ್ಲೆಯಲ್ಲಿ ಈವರೆಗೆ ಪಾಲನೆಯಾಗಿಲ್ಲ.

ಪರಿಸರ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 5ರ ಅನ್ವಯ ಕಾನೂನು ಉಲ್ಲಂಘಿಸಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡುವವರ ವಿರುದ್ಧ 1986ರ ಪರಿಸರ ಸಂರಕ್ಷಣಾ ಕಾಯ್ದೆಯ ಸೆಕ್ಷನ್19ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲು ಅನೇಕ ಇಲಾಖೆಗಳ ಅಧಿಕಾರಿಗಳಿಗೆ ಅಧಿಕಾರವಿದ್ದರೂ ಅದು ತನಗೆ ಸಂಬಂಧಿಸಿದ ಕೆಲಸವಲ್ಲ ಎನ್ನುವಂತೆ ಪ್ರತಿಯೊಬ್ಬ ಅಧಿಕಾರಿ ವರ್ತಿಸುತ್ತಿದ್ದಾರೆ.

ಪರಿಣಾಮ, ಯಾರ ಭಯವೂ ಇಲ್ಲದೆ ಬಿಟ್ಟಿ ಪ್ರಚಾರಕ್ಕಾಗಿ ಎಲ್ಲೆಂದರಲ್ಲಿ ಫ್ಲೆಕ್ಸ್, ಬಂಟಿಂಗ್ಸ್‌, ಬ್ಯಾನರ್ಸ್‌ ಅಳವಡಿಸಿ ನಗರದ ಸೌಂದರ್ಯಕ್ಕೆ ಮಸಿ ಬಳಿಯುವ, ವಿಕಾರಗೊಳಿಸುವ ಕೆಲಸಕ್ಕೆ ಕಡಿವಾಣ ಬಿದ್ದಿಲ್ಲ. ಜತೆಗೆ ನಗರಸಭೆ ಅಪಾರ ಪ್ರಮಾಣದ ಜಾಹೀರಾತು ತೆರಿಗೆ ಆದಾಯ ನಷ್ಟವಾಗುತ್ತಿರುವುದು ಸಹ ನಿಂತಿಲ್ಲ.
ನಗರದಲ್ಲಿ ಫ್ಲೆಕ್ಸ್, ಬಂಟಿಂಗ್ಸ್‌, ಬ್ಯಾನರ್ಸ್‌ ಅಳವಡಿಸಲು ನಗರಸಭೆಯ ಅನುಮತಿ ಕಡ್ಡಾಯ. ಪರವಾನಗಿ ಪಡೆದವರು ಅಳವಡಿಸಿದ್ದು ‘ಪರಿಸರ ಸ್ನೇಹಿ’ ಉತ್ಪನ್ನವಾಗಿದೆಯೇ ಎಂದು ಪರಿಶೀಲಿಸುವುದು ನಗರಸಭೆ ಅಧಿಕಾರಿಗಳ ಜವಾಬ್ದಾರಿ.

‘ನಗರದಲ್ಲಿ ರಾಜಕಾರಣಿಗಳ ಚೇಲಾಗಳು, ಮರಿ ಪುಡಾರಿಗಳು ಆಡಿದ್ದೇ ಆಟವಾಗಿದೆ. ಬಿಟ್ಟಿ ಪ್ರಚಾರಕ್ಕಾಗಿ ಅನೇಕರು ಸಣ್ಣ ಸಣ್ಣ ನೆಪಗಳನ್ನಿಟ್ಟುಕೊಂಡು ನಗರದ ತುಂಬಾ ಎಲ್ಲೆಂದರಲ್ಲಿ ಫ್ಲೆಕ್ಸ್, ಬಂಟಿಂಗ್ಸ್‌, ಬ್ಯಾನರ್ಸ್‌ ಮೆತ್ತಿ ಗಲೀಜುಗೊಳಿಸುತ್ತಾರೆ. ಇದನ್ನೆಲ್ಲ ಕಂಡರೂ ಅಧಿಕಾರಿಗಳು ಮಾತ್ರ ರಾಜಕಾರಣಿಗಳ ಕೈಗೊಂಬೆಯಾಗಿ ತಮ್ಮ ಕರ್ತವ್ಯವನ್ನೇ ಮರೆತಿದ್ದಾರೆ’ ಎಂದು ಚಾಮರಾಜಪೇಟೆ ನಿವಾಸಿ ಸೀತಾರಾಂ ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !