ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರಣಿಗರಿಂದ ಸ್ಕಂದಗಿರಿ ಸ್ವಚ್ಛತೆ

ಸಮಾನ ಮನಸ್ಕರ ಗೆಳೆಯರ ಕಾರ್ಯಕ್ಕೆ ಅರಣ್ಯ ಇಲಾಖೆ ಶ್ಲಾಘನೆ
Last Updated 18 ಜನವರಿ 2021, 2:08 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಒಂದೆಡೆ ಕಿರಿಯರಿಗೆ ಪರಿಸರ ಪಾಠ ಮಾಡುತ್ತಾ, ಮತ್ತೊಂದೆಡೆ ಜಿಲ್ಲೆಯ ವಿವಿಧ ಬೆಟ್ಟಗಳನ್ನು ಚಾರಣ ಮಾಡುತ್ತಾ ಜೊತೆಯಲ್ಲಿ ಅಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ತಂದು ವಿಲೇವಾರಿ ಮಾಡುತ್ತಿದ್ದಾರೆ ಸಮಾನ ಮನಸ್ಕರ ಗೆಳೆಯರ ತಂಡದ ಸದಸ್ಯರು.

ಈಚೆಗೆ ಸ್ಕಂದಗಿರಿಗೆ ಈ ತಂಡದ 86 ಸದಸ್ಯರು ಹೋಗಿ ಬೆಟ್ಟದ ಹಾದಿ, ಬೆಟ್ಟದ ಮೇಲೆ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿ, ಕವರ್, ಗಾಜಿನ ಬಾಟೆಲ್‌ಗಳು ಮೊದಲಾದ ತ್ಯಾಜ್ಯಗಳನ್ನು ಸಂಗ್ರಹಿಸಿ ಕೆಳಕ್ಕೆ ತಂದು ವಿಲೇವಾರಿ ಮಾಡಿದರು. ಸ್ಕಂದಗಿರಿ ಚಾರಣ ಮಾಡಲು ಈಗ ಅರಣ್ಯ ಇಲಾಖೆಗೆ ₹ 295 ಶುಲ್ಕ ಪಾವತಿಸಬೇಕು. ಚಾರಣ ಮಾಡಿ ಬೆಟ್ಟವನ್ನು ಸ್ವಚ್ಛಗೊಳಿಸಿದ ಇವರ ಈ ಕಾರ್ಯವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕೂಡಶ್ಲಾಘಿಸಿದರು.

ಚಿಕ್ಕಬಳ್ಳಾಪುರದ ಸುತ್ತಮುತ್ತ ಹಲವಾರು ಬೆಟ್ಟಗಳಿವೆ. ಸ್ಕಂದಗಿರಿ, ನಂದಿಬೆಟ್ಟ, ದಿವ್ಯಗಿರಿ, ಚನ್ನಗಿರಿ, ಬ್ರಹ್ಮಗಿರಿ, ಹೈದರಾಲಿಬೆಟ್ಟ, ಧರ್ಮರಾಯರಬೆಟ್ಟ, ಬಿಸಾಗ್ನಿಬೆಟ್ಟ, ಕೊಡವಲ ಬೆಟ್ಟ, ರಂಗಸ್ಥಳಬೆಟ್ಟ, ಹರಿಹರಬೆಟ್ಟ, ವರ್ಲಕೊಂಡ ಸೇರಿದಂತೆ, ನಂದಿಬೆಟ್ಟದಿಂದ ಆವಲಕೊಂಡದವರೆಗೂ 38 ರಿಂದ 40 ಬೆಟ್ಟಗಳಿವೆ. ಹಲವರು ಚಾರಣ ಕೈಗೊಳ್ಳುತ್ತಾರಾದರೂ ಪರಿಸರ ಸ್ವಚ್ಛತೆಗೆ ಎಲ್ಲರೂ ಮುಂದಾಗುವುದಿಲ್ಲ.

‘2014 ರಲ್ಲಿ ನಾನು ಕೈಲಾಸ ಮಾನಸಸರೋವರ ಯಾತ್ರೆ ಕೈಗೊಂಡೆ. ಈ ಯಾತ್ರೆಗೆ ಹೋಗುವ ಮುನ್ನ ಅಭ್ಯಾಸಕ್ಕಾಗಿಪ್ರತಿ ವಾರ ನಂದಿಬೆಟ್ಟವನ್ನು ಹತ್ತಿ ಇಳಿಯುತ್ತಿದ್ದೆ. ಆನಂತರ 2015ರಲ್ಲಿ ನಾವು ಸಮಾನ ಆಸಕ್ತ ಗೆಳೆಯರು ಚಿಕ್ಕಬಳ್ಳಾಪುರ ಸುತ್ತಮುತ್ತಲಿನ ಯಾವುದಾದರೊಂದು ಬೆಟ್ಟಕ್ಕೆ ಚಾರಣ ಹೋಗಿ ಬರುವ ಪರಿಪಾಠ ರೂಢಿಸಿಕೊಂಡೆವು’ ಎಂದುತಮ್ಮ ಚಾರಣ ಪ್ರಾರಂಭವಾದ ಬಗೆಯನ್ನು ಎನ್.ಆರ್. ವಿನಯಾನಂದ್ ತಿಳಿಸಿದರು.

‘2016ರಲ್ಲಿ ನಾವೆಲ್ಲಾಪ್ರತಿ ತಿಂಗಳು ಎರಡನೇ ಭಾನುವಾರದಂದು ಒಂದು ಬೆಟ್ಟವನ್ನು ಆರಿಸಿಕೊಂಡು ಚಾರಣ ಕೈಗೊಳ್ಳಲು ಪ್ರಾರಂಭಿಸಿದೆವು. ನಾವು ಬೆಟ್ಟಕ್ಕೆ ಹೋದಾಗ ಅಲ್ಲಿ ಬಿದ್ದ ತ್ಯಾಜ್ಯವನ್ನು ಆರಿಸಿ ತರುವುದು ಅಭ್ಯಾಸ ಮಾಡಿಕೊಂಡೆವು. ಮಳೆಗಾಲದಲ್ಲಿ ಚಾರಣ ಕೈಗೊಳ್ಳುವ ಪ್ರತಿಯೊಬ್ಬರೂ ‘ಈಚ್ ವನ್ ಪ್ಲಾಂಟ್ ಒನ್’ ಎಂದು ಪ್ರತಿಯೊಬ್ಬರೂ ಒಂದೊಂದು ಗಿಡ ನೆಡುತ್ತೇವೆ’ ಎಂದರು.

‘ನಾವು ಸಾಮಾನ್ಯವಾಗಿ 20ರಿಂದ 30 ಮಂದಿ ಚಾರಣ ಕೈಗೊಳ್ಳುತ್ತೇವೆ. ಎಲ್ಲರೂ ಪರಸ್ಪರ ಮಾತನಾಡಿಕೊಳ್ಳುತ್ತಾ, ತಂಡ ತಿಂಡಿ ತಿನಿಸುಗಳನ್ನು ಹಂಚಿಕೊಳ್ಳುತ್ತಾ, ತ್ಯಾಜ್ಯವನ್ನು ಆರಿಸಿಕೊಳ್ಳುತ್ತಾ, ಪರಿಸರದ ಕಾಳಜಿಯ ಮಾತನ್ನು ಕೃತಿಯಾಗಿಸಿ, ಸಂತಸಪಡುತ್ತೇವೆ. ಕಳೆದ ತಿಂಗಳು ಹರಿಹರ ಬೆಟ್ಟಕ್ಕೆ ಹೋದಾಗ, ಮುಂದಿನ ತಿಂಗಳು ಸ್ಕಂದಗಿರಿಗೆ ಹೋಗಲು ಎಲ್ಲರೂ ಉತ್ಸಾಹ ತೋರಿದರು. ಗೆಳೆಯರು, ಕುಟುಂಬದವರು, ಮಕ್ಕಳು ಎಲ್ಲರೂ ಸೇರಿ 87 ಮಂದಿ ಆದರು. ಆಗ ನಾವು ಸ್ಕಂದಗಿರಿಯನ್ನು ಸ್ವಚ್ಛಗೊಳಿಸುವ ತೀರ್ಮಾನ ಕೈಗೊಂಡೆವು. ನಮ್ಮೊಂದಿಗೆ ಚಂದನ್, ವಿನೋದ್, ದೀಪಕ್, ವೈಷ್ಣವಿ, ಶ್ರಾವ್ಯ, ಅಮೋಘ ಸದಾ ಜೊತೆಗಿರುತ್ತಾರೆ’ ಎಂದು ವಿವರಿಸಿದರು.

‘ನಮ್ಮೊಂದಿಗೆ ಕಿರಿಯರು, ಮಕ್ಕಳು ಕೂಡ ಆಸಕ್ತಿಯಿಂದ ಚಾರಣಕ್ಕೆ ಬರುತ್ತಾರೆ. ಅವರಿಗೆ ಬೆಟ್ಟ ಹತ್ತುವ ಮುನ್ನ ಬೆಟ್ಟದ ಹೆಸರು, ಇತಿಹಾಸ, ವಿಶೇಷತೆ, ಇಲ್ಲಿನದೇವಸ್ಥಾನಗಳ ವಿವರ, ಅರಣ್ಯದ ಬಗ್ಗೆ ತಿಳಿಸುತ್ತೇವೆ. ದಾರಿಯುದ್ದಕ್ಕೂ ಸ್ವಚ್ಛತೆ ಕೈಗೊಳ್ಳುವ ಬಗೆ, ಕಂಡುಬರುವ ಪಕ್ಷಿ, ಕೀಟ, ಸಸ್ಯಗಳ ವಿವರವನ್ನು ನೀಡುತ್ತೇವೆ. ಪರಿಸರವನ್ನು ಮೈಮನಗಳಲ್ಲಿ ತುಂಬಿಸಿಕೊಂಡು ಆನಂದಿಸಬೇಕು. ಬೆಟ್ಟದ ಮೇಲೆ ಎಲ್ಲರೂ ಶೂ ಬಿಚ್ಚಿ ಬರಿಗಾಲಿನಲ್ಲಿ ಓಡಾಡಿ ಅಲ್ಲಿನ ಸ್ವಚ್ಛ ಶುಭ್ರ ಬಂಡೆಗಲ್ಲಿನ ಸ್ಪರ್ಶವನ್ನು ಹೊಂದುತ್ತೇವೆ. ವರ್ಲಕೊಂಡ ಬೆಟ್ಟದಲ್ಲಿ ರಾಕ್ ಕ್ಲೈಂಬಿಂಗ್ ತರಬೇತಿಯನ್ನು ಸಹ ಮಕ್ಕಳಿಗೆ ಕೊಡಿಸಿದ್ದೆವು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT