ದಶಕದಿಂದ ಮುಚ್ಚಿದ್ದ ಶಾಲೆ ಪುನರಾರಂಭ

ಚಿಂತಾಮಣಿ: ತಾಲ್ಲೂಕಿನ ಗಡಿಭಾಗದಲ್ಲಿರುವ ಧರ್ಮವಾರಹಳ್ಳಿಯಲ್ಲಿ ಕಳೆದ 10 ವರ್ಷಗಳಿಂದ ಮುಚ್ಚಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಕನ್ನಡ ರಾಜ್ಯೋತ್ಸವ ದಿನವಾದ ಸೋಮವಾರ ಪುನರಾರಂಭ
ಮಾಡಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣವು ರಾಜ್ಯದಲ್ಲಿ 186 ಶಾಲೆಗಳನ್ನು ದತ್ತು ಪಡೆದುಕೊಂಡು ಅಭಿವೃದ್ಧಿಪಡಿಸುತ್ತಿದೆ ಎಂದುಜಿಲ್ಲಾ ಘಟಕದ ಅಧ್ಯಕ್ಷ ಅಗ್ರಹಾರ ಮೋಹನ್ ತಿಳಿಸಿದರು.
ಸ್ವಾಭಿಮಾನಿ ಬಣವು ಕನ್ನಡ ಭಾಷೆ ಹಾಗೂ ಕನ್ನಡ ಶಾಲೆಗಳ ಉಳಿವಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ದತ್ತುಪಡೆದುಕೊಂಡಿರುವ ಶಾಲೆಗಳಿಗೆ ವಿವಿಧ ಉದ್ಯಮಿಗಳಿಂದ ಅನುದಾನವನ್ನು ಕೊಡಿಸಿ ಮೂಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಮುಚ್ಚಿರುವ ಸರ್ಕಾರಿ ಶಾಲೆಗಳ ಪುನರಾರಂಭಕ್ಕೂ ಸಹಕಾರ ನೀಡುತ್ತಿದೆ ಎಂದರು.
ಕನ್ನಡದಲ್ಲೇ ಮಾತನಾಡಬೇಕು. ಕನ್ನಡವೇ ಜಾತಿ, ಧರ್ಮ, ದೇವರು ಎಂದು ರಕ್ತಗತ ಮಾಡಿಕೊಳ್ಳಬೇಕು. ಕೇವಲ ತೋರಿಕೆಗೆ ಹೋರಾಟ ಮಾಡುವುದು, ರಾಜ್ಯೋತ್ಸವ ಆಚರಣೆಗೆ ಮಾತ್ರ ಸೀಮಿತಗೊಳಿಸುವುದು ಸರಿಯಲ್ಲ. ಗಡಿಭಾಗದಲ್ಲಿ ಇತರೆ ಭಾಷೆ ಮಾತನಾಡಿದರೂ ಕನ್ನಡದಲ್ಲೇ ಉತ್ತರಿಸುವುದನ್ನು ಕಲಿಯಬೇಕು ಎಂದರು.
ಏನಿಗದಲೆಯ ನವೋದಯ ಶಾಲೆಯ ಉಪಪ್ರಾಂಶುಪಾಲ ಸಿ.ವಿ.ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮುಖಂಡ ಕೆ.ವಿ.ಚೌಡಪ್ಪ ಮಾತನಾಡಿ ಸರ್ಕಾರಿ ಶಾಲೆಗಳನ್ನು ಉಳಿಸಿ, ಅಭಿವೃದ್ಧಿಪಡಿಸಲು ಪೋಷಕರ ಸಹಕಾರ ಅಗತ್ಯ. ಖಾಸಗಿ ಶಾಲೆಗಳ ವ್ಯಾಮೋಹವನ್ನು ತ್ಯಜಿಸಿ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಬೇಕು ಎಂದು ಮನವಿ ಮಾಡಿದರು.
ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್, ನಾಗರಾಜ್, ಎಸ್‌ಡಿಎಂಸಿ ಅಧ್ಯಕ್ಷ ಮಧು, ಕರವೇ ಸ್ವಾಭಿಮಾನಿ ಬಣದ ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ.ವಿ.ವಿನಯ್ ಕುಮಾರ್, ಗ್ರಾಮಸ್ಥರಾದ ಡಿ.ಎ.ಮಂಜುನಾಥ್, ರಮೇಶ್, ಡಿ.ಎಸ್.ಮಂಜುನಾಥ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.