ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಡೇರದ ಸಿ.ಎಂ ಭರವಸೆ

ಕಂದವಾರ ಕೆರೆಯಿಂದ ಅಮಾನಿಗೋಪಾಲಕೃಷ್ಣ ಕೆರೆಗೆ ರಾಜಕಾಲುವೆ
Last Updated 6 ಜೂನ್ 2022, 15:47 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಂದವಾರ ಕೆರೆಯಿಂದ ಅಮಾನಿಗೋಪಾಲಕೃಷ್ಣ ಕೆರೆಗೆ ರಾಜಕಾಲುವೆ ನಿರ್ಮಿಸಲಾಗುವುದು. ಇದಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಗೊಳಿಸುವಂತೆ ಸೂಚಿಸಲಾಗಿದೆ. ಎಷ್ಟು ಹಣ ಅಗತ್ಯವಿದೆಯೋ ಅದನ್ನು ಬಿಡುಗಡೆ ಮಾಡಲಾಗುವುದು– 2021ರ ನವೆಂಬರ್ 21ರಂದು ನಗರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದ ಭರವಸೆ ಇದು.

ಹೀಗೆ ಸಾರ್ವಜನಿಕವಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ನಂತರ ಹಣ ಬಿಡುಗಡೆಗೆ ಮಾತ್ರ ಮೀನಮೇಷ ಎಣಿಸುತ್ತಿದ್ದಾರೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ರಾಜಕಾಲುವೆಗೆ ಸಂಬಂಧಿಸಿದಂತೆ ಡಿಪಿಆರ್ ಸಿದ್ಧಗೊಳಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಆದರೆ ಹಣ ಮಾತ್ರ ಇನ್ನೂ ಬಿಡುಗಡೆಯೇ ಆಗಿಲ್ಲ.

ಅನುದಾನವಿಲ್ಲ ಎಂದು ಈ ಹಿಂದೆ ಒಮ್ಮೆ ಕಡತ ಮುಖ್ಯಮಂತ್ರಿ ಕಚೇರಿಯಂದವಾಪಸ್ ಸಹ ಬಂದಿತ್ತು. ಈಗ ಮತ್ತೆ ಮುಖ್ಯಮಂತ್ರಿಯ ಕಚೇರಿಯಲ್ಲಿ ಕಡತವಿದೆ.

ಕಳೆದ ವರ್ಷ ಮಳೆಯಿಂದ ಜಿಲ್ಲೆಯ ಹಲವು ಕಡೆಗಳಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು. ಗ್ರಾಮೀಣ ಪ್ರದೇಶಗಳಷ್ಟೇ ಅಲ್ಲ ಚಿಕ್ಕಬಳ್ಳಾಪುರ ನಗರದ ಹಲವು ಪ್ರತಿಷ್ಠಿತ ಬಡಾವಣೆಗಳು, ವಾಣಿಜ್ಯ ಸಂಕೀರ್ಣಗಳು ನೀರಿನಲ್ಲಿ ಮುಳುಗಿದ್ದವು. ನಗರದ ಬಿಬಿ ರಸ್ತೆಯಲ್ಲಿ ಕಂದವಾರ ಕೆರೆಯಿಂದ ಅಮಾನಿಗೋಪಾಲಕೃಷ್ಣ ಕೆರೆಗೆ ನೀರು ಹರಿಯುವ ಕಾಲುವೆಯು ತುಂಬಿ ತುಳುಕಿತ್ತು. ಈ ಪರಿಣಾಮ ಸುತ್ತಲಿನ ಪ್ರದೇಶಗಳು ಜಲಾವೃತವಾಗಿದ್ದವು.

ಆಗ ಈ ಕಾಲುವೆಯನ್ನು ವೀಕ್ಷಿಸಿದ್ದ ಬಸವರಾಜ ಬೊಮ್ಮಾಯಿ, ಹೊಸ ಕಾಲುವೆ ನಿರ್ಮಾಣದ ಭರವಸೆ ನೀಡಿದ್ದರು. ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದರು. ಮುಖ್ಯಮಂತ್ರಿ ಸೂಚನೆ ನೀಡಿ ಆರು ತಿಂಗಳು ಪೂರೈಸಿದೆ. ಮತ್ತೊಂದು ಮಳೆಗಾಲ ಸಮೀಪಿಸಿದೆ. ಹೀಗಿದ್ದರೂ ರಾಜಕಾಲುವೆ ಮಾತ್ರ ನಿರ್ಮಾಣವಾಗಿಲ್ಲ.ಮತ್ತೊಂದು ಜಲಸಂಕಷ್ಟ ಎದುರಿಸಬೇಕಾಗಿದೆ ಎನ್ನುವ ಗೋಳು ಕಾಲುವೆ ಆಸುಪಾಸಿನ ವಾಣಿಜ್ಯ ಮಳಿಗೆಗಳ ಮಾಲೀಕರು ಮತ್ತು ಬಾಡಿಗೆದಾರರದ್ದು.

ಕಂದವಾರ ಕೆರೆಯಿಂದ ಅಮಾನಿ ಗೋಪಾಲ ಕೃಷ್ಣಕೆರೆಗೆ ನೀರು ಸರಾಗವಾಗಿ ಹರಿಯಲು ನಾಲ್ಕುರಾಜಕಾಲುವೆಗಳಿವೆ. ಈ ಕಾಲುವೆಗಳು ಕೆಲವು ಕಡೆಗಳಲ್ಲಿ ಒತ್ತುವರಿ ಸಹ ಆಗಿದ್ದವು. ಮುಖ್ಯಮಂತ್ರಿ ಬಿಬಿ ರಸ್ತೆಯಲ್ಲಿ ಹಾದು ಹೋಗಿರುವ ಕಾಲುವೆ ವೀಕ್ಷಿಸಿದ ನಂತರ ಜಿಲ್ಲಾಡಳಿತ ಚುರುಕಾಯಿತು.

ಅಲ್ಲಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಲಾಯಿತು. ಜಿಲ್ಲಾಧಿಕಾರಿ ಆರ್.ಲತಾ ಸೇರಿದಂತೆ ತಾಲ್ಲೂಕು ಆಡಳಿತದ ಅಧಿಕಾರಿಗಳು ಮುಂದೆ ನಿಂತು ಒತ್ತುವರಿ ತೆರವುಗೊಳಿಸಿದರು. ಹೀಗೆ ಒತ್ತುವರಿ ತೆರವಾದರೂ ಕಾಲುವೆ ಅಭಿವೃದ್ಧಿಗೊಳ್ಳಲಿಲ್ಲ.

ಮುಖ್ಯಮಂತ್ರಿ ಒತ್ತುವರಿ ತೆರವುಗೊಳಿಸಿ ರಾಜಕಾಲುವೆ ನಿರ್ಮಾಣಕ್ಕೆ ಸೂಚಿಸಿದ್ದರಿಂದ ಸುತ್ತಲಿನ ಅಂಗಡಿಗಳ ಮಾಲೀಕರು, ಕಲ್ಯಾಣ ಮಂಟಪಗಳ ಮಾಲೀಕರು ಮತ್ತು ಬಡಾವಣೆ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಮುಂದಿನಗಳ ದಿನಗಳಲ್ಲಿ ತೊಂದರೆ ತಪ್ಪಿತು ಎಂದಿದ್ದರು. ಆದರೆ ಇಲ್ಲಿಯವರೆಗೂ ರಾಜಕಾಲುವೆಯನಿರ್ಮಾಣಕ್ಕೆ ಕಾಲವೇ ಕೂಡಿಲ್ಲ.

ಕಳೆದ ವರ್ಷದಂತೆಯೇ ಈ ಬಾರಿಯೂ ಭಾರಿ ಮಳೆ ಬಿದ್ದರೆ ವ್ಯಾಪಾರ ವಹಿವಾಟಿನ ಗತಿಯೇನೂ ಎನ್ನುವ ಆತಂಕ ವ್ಯಾಪಾರಿಗಳದ್ದು. ಈ ಕಾಲುವೆಗಳ ಸುತ್ತ ಪ್ರಮುಖ ವಾಣಿಜ್ಯ ಮಳಿಗೆಗಳು, ಕಲ್ಯಾಣ ಮಂಟಪಗಳು, ದೇಗುಲಗಳು, ವಾಹನ ಮಾರಾಟ ಮಳಿಗೆಗಳು ಇವೆ.

**

ಸರ್ಕಾರದ ಹಂತದಲ್ಲಿ ಕಡತ

ಮುಖ್ಯಮಂತ್ರಿ ಅವರ ಸೂಚನೆ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ರಾಜಕಾಲುವೆಗೆ ಸಂಬಂಧಿಸಿದಂತೆ ಡಿಪಿಆರ್ ಸಿದ್ಧಗೊಳಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ ಮೊದಲ ಬಾರಿಗೆ ಹಣ ಇಲ್ಲ ಎಂದು ಕಡತ ವಾಪಸ್ ಆಯಿತು ಎನ್ನುತ್ತವೆ ಇಲಾಖೆ ಮೂಲಗಳು.

ನಂತರ ಮತ್ತೆ ಕಡತವನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ರಾಜಕಾಲುವೆಗೆ ಸಂಬಂಧಿಸಿದ ಕಡತಗಳು ಮುಖ್ಯಮಂತ್ರಿ ಕಚೇರಿಯಲ್ಲಿ ಇದೆ. ಅಲ್ಲಿಂದ ಹಣ ಬಿಡುಗಡೆಯಾದ ತಕ್ಷಣವೇ ಕಾಮಗಾರಿ ಆರಂಭವಾಗುತ್ತದೆ ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT