ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ಪಕ್ಷದಲ್ಲಿ ಮುಸುಕಿನ ಗುದ್ದಾಟ?

ಚಿಕ್ಕಬಳ್ಳಾಪುರ ನಗರಸಭೆ ಆಡಳಿತ ಪಕ್ಷದ ಸದಸ್ಯರ ನಡುವೆ ಶೀತಲ ಸಮರ
Last Updated 24 ಸೆಪ್ಟೆಂಬರ್ 2022, 5:22 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆಯ ಆಡಳಿತ ಪಕ್ಷದ ಸದಸ್ಯರ ನಡುವೆ ಮುಸುಕಿನ ಗುದ್ದಾಟವಿದೆ. ಆಡಳಿತ ಪಕ್ಷದ ಸದಸ್ಯರು ಎರಡು ಗುಂಪುಗಳಾಗಿದ್ದಾರೆ.ಒಂದು ಬಣಕ್ಕೆ ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ಮತ್ತು ಮತ್ತೊಂದು ಬಣಕ್ಕೆ ನಗರಸಭೆ ಸದಸ್ಯ ಎ.ಗಜೇಂದ್ರ ನಾಯಕರು–ಹೀಗೊಂದು ಚರ್ಚೆ ನಗರದಲ್ಲಿ ತೀವ್ರವಾಗಿದೆ.

ಪರಸ್ಪರ ಉತ್ತರ ಮತ್ತು ದಕ್ಷಿಣ ಧ್ರುವಗಳಂತೆ ಎರಡೂ ಬಣಗಳು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿವೆ ಎನ್ನುತ್ತಾರೆ ನಗರಸಭೆಯ ಆಳ ಅಗಲ ಬಲ್ಲವರು. ಈ ಬಣ ರಾಜಕಾರಣಕ್ಕೆ ಅಧ್ಯಕ್ಷ ಗಾದಿಯೇ ಕಾರಣ ಎನ್ನುವುದು ಬಹಿರಂಗ ಸತ್ಯ.

ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ, ಕಾಂಗ್ರೆಸ್ 16, ಬಿಜೆಪಿ 9, ಜೆಡಿಎಸ್ 2 ಹಾಗೂ 4 ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಕಾಂಗ್ರೆಸ್‌ಗೆ ಬಹುತಮವೂ ಇತ್ತು. 2020ರಅ.30ರಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ರಾಜಕೀಯ ತಂತ್ರಗಾರಿಕೆಯ ಪರಿಣಾಮ ಕಾಂಗ್ರೆಸ್‌ಗೆ ಅಧಿಕಾರ ಕೈತಪ್ಪಿತು.

ಪಕ್ಷೇತರರಾಗಿ ಗೆಲುವು ಸಾಧಿಸಿದ್ದ ಡಿ.ಎಸ್.ಆನಂದರೆಡ್ಡಿ ಬಾಬು ಅಧ್ಯಕ್ಷರಾಗಿ ಮತ್ತು ಜೆಡಿಎಸ್‌ನ ವೀಣಾ ರಾಮು ಉಪಾಧ್ಯಕ್ಷರಾಗಿ ಆಯ್ಕೆಯಾದರು.ಕಾಂಗ್ರೆಸ್‌ನ ನಾಲ್ವರು ಸದಸ್ಯರು ಆನಂದರೆಡ್ಡಿ ಅವರಿಗೆ ಮತಹಾಕಿದ್ದರು. ಮೂವರು ಗೈರಾಗಿದ್ದರು. ಹೀಗೆ ಪಕ್ಷೇತರರಾಗಿ ಗೆಲುವು ಸಾಧಿಸಿದ ಆನಂದರೆಡ್ಡಿ ಅವರು ಬಿಜೆಪಿ ಸದಸ್ಯರು ಮತ್ತು ಸಚಿವ ಡಾ.ಕೆ.ಸುಧಾಕರ್ ಅವರ ಬೆಂಬಲದಿಂದ ಅಧ್ಯಕ್ಷ ಸ್ಥಾನ ಪಡೆದರು. ಆ ಮೂಲಕ ಬಿಜೆಪಿ ಬಲವೂ ನಗರಸಭೆಯಲ್ಲಿ ಹೆಚ್ಚಿತು. ಚಿಕ್ಕಬಳ್ಳಾಪುರ ನಗರಸಭೆ ಇತಿಹಾಸದಲ್ಲಿ ಇದೇ ಮೊದಲ ಬಾರಿ ಬಿಜೆಪಿ ಬೆಂಬಲಿತರು ಅಧ್ಯಕ್ಷರಾದರು. ಇದೆಲ್ಲವೂ ಇತಿಹಾಸ.

ಒಗ್ಗಟ್ಟಿನ ಮಂತ್ರ ಜಪಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸದಸ್ಯರಲ್ಲಿ ಈಗ ಗುಂಪುಗಾರಿಕೆ ಜೋರಾಗಿದೆ ಎನ್ನುವ ಮಾತುಗಳು ಇವೆ. ಇದನ್ನು ನಗರಸಭೆ ಸದಸ್ಯರೇ ಒಪ್ಪುವರು. ಆದರೆ ಬಹಿರಂಗವಾಗಿ ಹೇಳಲು ಹಿಂಜರಿಯುವರು.

ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ.ಕೆ.ಸುಧಾಕರ್ ಅವರೇ ಬಿಜೆಪಿ ಹೈ ಕಮಾಂಡ್. ಡಿ.ಎಸ್.ಆನಂದರೆಡ್ಡಿ ಬಾಬು ಮತ್ತು ಎ.ಗಜೇಂದ್ರ ಇಬ್ಬರೂ ಸಚಿವರ ಆಪ್ತ ವಲಯದಲ್ಲಿ ಇದ್ದಾರೆ.ಸಚಿವರಿಗೂ ಆಡಳಿತ ಪಕ್ಷದ ಸದಸ್ಯರ ನಡುವಿನ ಮುಸುಕಿನ ಗುದ್ದಾಟದ ಬಗ್ಗೆ ತಿಳಿದಿದೆ ಎನ್ನುತ್ತಾರೆ ಬಿಜೆಪಿ ಮುಖಂಡರು ಮತ್ತು ಆಡಳಿತ ಪಕ್ಷದ ಸದಸ್ಯರು. ಗಜೇಂದ್ರ ಸಹ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು.

ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆ ಸಮೀಪ ‘ನಗರಸಭೆ ಕಾರ್ಯಾಲಯ ಚಿಕ್ಕಬಳ್ಳಾಪುರ’ ಎನ್ನುವ ನಾಮಫಲಕ ತೆರವು ಮತ್ತು ಆ ಸುತ್ತಲಿನ ವಿದ್ಯಮಾನಗಳು ಸಹ ನಗರಸಭೆ ಆಡಳಿತ ಪಕ್ಷದ ಸದಸ್ಯರ ನಡುವೆಯೇ ಗಿರಕಿಹೊಡೆಯುತ್ತಿವೆ. ಈ ವಿಚಾರವಾಗಿ ಡಿ.ಎಸ್.ಆನಂದರೆಡ್ಡಿ ಬಾಬು ಅವರ ಮೇಲೆ ಗಜೇಂದ್ರ ಅಸಮಾಧಾನ ಸಹ ವ್ಯಕ್ತಪಡಿಸಿದ್ದರು. ‘ನಗರಸಭೆ ಆಸ್ತಿ ರಕ್ಷಿಸುತ್ತೇವೆ’ ಎಂದು ಆನಂದರೆಡ್ಡಿ ನುಡಿದಿದ್ದರು.

ಕ್ರಯದ ಖಾತೆಗಳನ್ನು ಮಾಡಿಕೊಡುವಂತೆ ಆಗ್ರಹಿಸಿ ಸಾಮಾನ್ಯಸಭೆಗಳಲ್ಲಿ ಆಡಳಿತ ಪಕ್ಷದ ಸದಸ್ಯರೇ ಧ್ವನಿ ಎತ್ತಿದ್ದರು. ನಗರಸಭೆ ಮುಂಭಾಗ ಧರಣಿ ನಡೆಸುವಎಚ್ಚರಿಕೆ ನೀಡಿದ್ದರು.

ಈ ಎಲ್ಲ ವಿದ್ಯಮಾನಗಳು ನಗರಸಭೆ ಆಡಳಿತ ಪಕ್ಷವಾದ ಬಿಜೆಪಿ ಸದಸ್ಯರಲ್ಲಿ ಒಮ್ಮತವಿಲ್ಲ ಎನ್ನುವುದನ್ನು ಸಾರುತ್ತಿದೆ. ಈ ಶೀತಲ ಸಮರದ ಆಗಾಗ್ಗೆ ನಗರಸಭೆ ಸಾಮಾನ್ಯ ಸಭೆಗಳಲ್ಲಿ ಸ್ಫೋಟವಾಗುತ್ತದೆ.ಆಂತರಿಕವಾಗಿ ಮುಸುಕಿನ ಗುದ್ದಾಟ ಹೆಚ್ಚುತ್ತಲೇ ಇದೆ ಎನ್ನುತ್ತವೆ ನಗರಸಭೆ ಮೂಲಗಳು. ಸದಸ್ಯರ ನಡುವಿನ ಈ ಶೀತಲ ಸಮರ ಅಧಿಕಾರಿಗಳನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT