ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಅಭಿವೃದ್ಧಿ: ಸಭೆ ಮರೆತ ಸಚಿವ!

ಉಪ ಲೋಕಾಯುಕ್ತರ ಎದುರೇ ಅವ್ಯವಸ್ಥೆಯ ದರ್ಶನ; ಸಮಸ್ಯೆಗಳನ್ನು ಕೇಳುವವರಿಲ್ಲ
Last Updated 11 ಡಿಸೆಂಬರ್ 2022, 6:49 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸ್ಥಳೀಯ ಶಾಸಕರು ಪದವಿ ಕಾಲೇಜುಗಳು ಮತ್ತು ಪದವಿ ಪೂರ್ವ ಕಾಲೇಜುಗಳ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಆಯಾ ಕಾಲೇಜುಗಳ ಸಮಸ್ಯೆಗಳನ್ನು ಸರಿಪಡಿಸಬೇಕಾದ, ಅಭಿವೃದ್ಧಿಗೆ ಕ್ರಮವಹಿಸಬೇಕಾದ ಮತ್ತು ಕಾಲೇಜಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಕುಂದುಕೊರತೆಗಳು ಇದ್ದರೆ ಗಮನಿಸಬೇಕಾದ ಹೊಣೆ ಇರುತ್ತದೆ.

ಕೆಲವು ಕಡೆ ಪದವಿ ಪೂರ್ವ ಕಾಲೇಜುಗಳ ಅಭಿವೃದ್ಧಿ ಸಮಿತಿಯ ‘ಅಧ್ಯಕ್ಷ’ ಸ್ಥಾನವನ್ನು ಸ್ಥಳೀಯ ಶಾಸಕರು ತಮ್ಮ ‘ಆಪ‍್ತ’ರು ಅಥವಾ ನಂಬಿಕಸ್ತರಿಗೆ ವಹಿಸಿರುತ್ತಾರೆ.

ಚಿಕ್ಕಬಳ್ಳಾಪುರದ ಸರ್ಕಾರಿ ಪದವಿ ಕಾಲೇಜು ಮತ್ತು ಮಹಿಳಾ ಪದವಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಭಿವೃದ್ಧಿ ಸಮಿತಿ ಸಭೆಗಳನ್ನೇ ಮರೆತಿದ್ದಾರೆ!

ಪದವಿ ಕಾಲೇಜು ಒಂದಿಲ್ಲೊಂದು ಕಾರಣದಿಂದ ಆಗಾಗ್ಗೆ ಸುದ್ದಿ ಆಗುತ್ತಿದೆ. ಪ್ರಾಂಶುಪಾಲರ ಕೊಠಡಿಯಲ್ಲಿ ಮಾಟ ಮಂತ್ರದಿಂದ ಹಿಡಿದು ಉಪಲೋಕಾಯುಕ್ತರು ಭೇಟಿ ನೀಡಿ ದೂರು ದಾಖಲಿಸುವವರೆಗೂ ಬೆಳವಣಿಗೆಗಳಾಗಿವೆ. ಹೀಗಿದ್ದರೂ ಕಾಲೇಜು ಅಭಿವೃದ್ಧಿ ಸಮಿತಿ ಸಭೆಗಳು ಮಾತ್ರ ನಡೆಯುತ್ತಿಲ್ಲ.

ಡಾ.ಕೆ.ಸುಧಾಕರ್ ಅವರು, ಆಗೊಮ್ಮೆ ಈಗೊಮ್ಮೆಯಾದರೂ ಕಾಲೇಜಿನ ಸ್ಥಿತಿಗತಿಗಳು ಮತ್ತು ಬೆಳವಣಿಗೆಗಳ ಬಗ್ಗೆ ನಿಗಾವಹಿಸಿದರೆ ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸಭೆ ನಡೆಸಿದರೆ ಒಳ್ಳೆಯದು ಎನ್ನುವ ಭಾವನೆ ಪೋಷಕರಲ್ಲಿದೆ.

ಪದವಿ ಕಾಲೇಜಿನಲ್ಲಿ ಆಡಳಿತ ಸರಿಯಾದ ಹಾದಿಯಲ್ಲಿ ನಡೆಯುತ್ತಿಲ್ಲ ಎನ್ನುವುದು ಉಪಲೋಕಾಯುಕ್ತರು ಕಾಲೇಜುಗಳಿಗೆ ಸಂಬಂಧಿಸಿದಂತೆ ದಾಖಲಿಸಿರುವ ದೂರುಗಳೇ ಸಾರಿ ಹೇಳುತ್ತಿವೆ. ಜಿಲ್ಲೆಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ನ.5ರಿಂದ 7ರವರೆಗೆ ಭೇಟಿ ನೀಡಿದ್ದರು.

ಚಿಕ್ಕಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಈ ಹಿಂದಿನ ಪ್ರಾಂಶುಪಾಲ ಎಲ್.ನಾರಾಯಣ ಸ್ವಾಮಿ ಸಮವಸ್ತ್ರ ನೀಡುತ್ತೇವೆ ಎಂದು ವಿದ್ಯಾರ್ಥಿಯಿಂದ ಹಣ ಪಡೆದಿದ್ದ ವಿಚಾರ ಚಿಕ್ಕಬಳ್ಳಾಪುರದಲ್ಲಿ ಚರ್ಚೆಗೂ ಕಾರಣವಾಗಿತ್ತು. ಉಪಲೋಕಾಯುಕ್ತರು ಭೇಟಿ ನೀಡಿದ ಸಂದರ್ಭದಲ್ಲಿ ಈ ಸಮವಸ್ತ್ರ ಹಗರಣದ ಬಗ್ಗೆ ಅಲ್ಲಿನ ಪ್ರಾಂಶುಪಾಲರಿಂದಮಾಹಿತಿ ಪಡೆದಿದ್ದಾರೆ. ಪದವಿ ಕಾಲೇಜಿನ ಅವ್ಯವಸ್ಥೆಗೆ ಸಂಬಂಧಿಸಿದಂತೆ ಉಪ ಲೋಕಾಯುಕ್ತರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿದ್ದಾರೆ.

ಕಳೆದ ಜುಲೈನಲ್ಲಿಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ಕೊಠಡಿಯಲ್ಲಿ ಮಾಟ, ಮಂತ್ರದ ಬೊಂಬೆ ಪತ್ತೆಯಾಗಿತ್ತು. ‘ವೊಡೋಫೋನ್’ ಜಾಹೀರಾತಿನಲ್ಲಿ ಬರುತ್ತಿದ್ದ ಗೊಂಬೆಯ ಮಾದರಿಯಲ್ಲಿ ಮಾಟಕ್ಕೆ ಬಳಸಿರುವ ಗೊಂಬೆ ಹಾಗೂ ಕೆಂಪುದಾರವನ್ನು ಇಟ್ಟಿದ್ದರು. ಇದು ಕಾಲೇಜಿನ ಉಪನ್ಯಾಸಕರ ನಡುವಿನ ಗುಂಪುಗಾರಿಕೆಯ ಕಾರಣದಿಂದ ಇಂತಹ ಬೆಳವಣಿಗೆಗಳು ನಡೆದಿವೆ ಎನ್ನುವ ಚರ್ಚೆ ಕಾಲೇಜಿನ ಅಂಗಳದಲ್ಲಿಯೇ ಕೇಳಿತ್ತು.

ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಖುದ್ದು ಉಪ ಲೋಕಾಯುಕ್ತರನ್ನು ಭೇಟಿ ಮಾಡಿ ಕಾಲೇಜಿನ ಕಟ್ಟಡ ನಿರ್ಮಾಣ ವಿಳಂಬವಾಗಿರುವುದನ್ನು ಮತ್ತು ಕಾಲೇಜಿನಲ್ಲಿ ಸೌಕರ್ಯಗಳು ಇಲ್ಲದಿರುವ ಬಗ್ಗೆ ಪ್ರಸ್ತಾಪಿಸಿದ್ದರು. ವಿದ್ಯಾರ್ಥಿನಿಯರ ಅಹವಾಲು ಆಲಿಸಿದ ಉಪಲೋಕಾಯುಕ್ತರು ಶಿಡ್ಲಘಟ್ಟ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮಹಿಳಾ ಪದವಿ ಕಾಲೇಜಿನ ಕಟ್ಟಡ ಕಾಮಗಾರಿ ವೀಕ್ಷಿಸಿದ್ದರು.

ಎಂಟು ವರ್ಷ ದಾಟಿದರೂ ಮಹಿಳಾ ಪದವಿ ಕಾಲೇಜಿನ ಕಟ್ಟಡ ಕಾಮಗಾರಿ ಪೂರ್ಣವಾಗಿಲ್ಲ. ಈ ಹಿಂದಿನ ಸಿಟಿಜನ್ ಕ್ಲಬ್‌ ಕಟ್ಟಡದಲ್ಲಿ ತರಗತಿಗಳು ನಡೆಯುತ್ತಿವೆ. ತಾತ್ಕಾಲಿಕವಾಗಿ ಕಾಲೇಜು ನಡೆಯುತ್ತಿರುವ ಆವರಣವನ್ನು ನೋಡಿದರೆ ಇದೇನು ಕಾಲೇಜು ಆವರಣವೊ ಅಥವಾ ತ್ಯಾಜ್ಯ ಎಸೆಯುವ ತೊಟ್ಟಿಯೊ ಎನಿಸುತ್ತದೆ.

ಹೀಗೆ ಪದವಿ ಕಾಲೇಜು ಮತ್ತು ಮಹಿಳಾ ಪದವಿ ಕಾಲೇಜುಗಳ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಡಾ.ಕೆ.ಸುಧಾಕರ್, ಕಾಲೇಜುಗಳ ಚಟುವಟಿಕೆಗಳ ಮೇಲೆ ನಿಗಾವಹಿಸಬೇಕು ಎನ್ನುವ ಆಗ್ರಹ ಪ್ರಜ್ಞಾವಂತರದ್ದಾಗಿದೆ.

ಸಮಿತಿಯವರು ಸಭೆ ನಡೆಸದಿದ್ದರೆ ಹೇಗೆ?: ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇಕ ವಿದ್ಯಾರ್ಥಿಗಳು ರೈತರು, ಕಾರ್ಮಿಕರು ಮತ್ತು ಬಡವರ ಮಕ್ಕಳಾಗಿದ್ದಾರೆ. ಇವರಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕಾಗಿರುವುದು ಉಪನ್ಯಾಸಕರು ಜವಾಬ್ದಾರಿ. ಆದರೆ ಪದೇ ಪದೇ ಚಿಕ್ಕಬಳ್ಳಾಪುರ ಸರ್ಕಾರಿ ಪದವಿ ಕಾಲೇಜು ಸುದ್ದಿ ಆಗುತ್ತಿದೆ. ಕಾಲೇಜು ಅಭಿವೃದ್ಧಿ ಸಮಿತಿಯವರು ಕಾಲ ಕಾಲಕ್ಕೆ ಸಭೆ ನಡೆಸಬೇಕು. ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಬೇಕು ಎನ್ನುತ್ತಾರೆ ಕಾಲೇಜಿನ ಹಳೇ ವಿದ್ಯಾರ್ಥಿ ಯಲುವಳ್ಳಿ ಸೊಣ್ಣೇಗೌಡ.

ಸಮವಸ್ತ್ರದ ಹೆಸರಿನಲ್ಲಿಹಣ ದುರುಪಯೋಗದ ಆರೋಪಗಳು ಕೇಳಿ ಬಂದಿವೆ. ಕಾಲೇಜಿನ ಅವ್ಯವಸ್ಥೆಗಳು ಸರಿಯಾಗಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎನ್ನುವುದು ನಮ್ಮ ಕಾಳಜಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT