ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಜಿ.ಪಂ. ಅಧ್ಯಕ್ಷರ ವಿರುದ್ಧ ಅ.9 ರಂದು ಅವಿಶ್ವಾಸ ಗೊತ್ತುವಳಿ ಸಭೆ

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಪಿ.ನಿರ್ಮಲಾ ಮುನಿರಾಜು ಪದಚ್ಯುತಿ ಸನ್ನಿಹಿತ
Last Updated 24 ಸೆಪ್ಟೆಂಬರ್ 2020, 13:17 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಪಂಚಾಯತ್ ರಾಜ್ ಕಾಯ್ದೆಯ ಕೆಲ ಅಧಿನಿಯಮಗಳ ತಿದ್ದುಪಡಿಯಿಂದ ಉಂಟಾಗಿರುವ ಗೊಂದಲದ ಕಾರಣಕ್ಕೆ ಮುಂದೂಡಿಕೆಯಾಗಿದ್ದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಪಿ.ನಿರ್ಮಲಾ ಮುನಿರಾಜು ಅವರ ವಿರುದ್ಧದ ಅವಿಶ್ವಾಸ ಗೊತ್ತುವಳಿ ಸಭೆ ಪುನಃ ಅಕ್ಟೋಬರ್ 9ಕ್ಕೆ ನಿಗದಿಯಾಗಿದೆ. ಇದು ರಾಜಕೀಯ ವಲಯದಲ್ಲಿ ಮತ್ತೆ ಸಂಚಲನ ಮೂಡಿಸಿದೆ.

ಅಧಿಕಾರ ಹಂಚಿಕೆ ವಿಚಾರದಲ್ಲಿ ನಿರ್ಮಲಾ ಅವರು ಕೊಟ್ಟ ಮಾತಿಗೆ ತಪ್ಪಿ ನಡೆಯುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪಂಚಾಯಿತಿಯ ಬಹುಪಾಲು ಸದಸ್ಯರು ಕಳೆದ ಮೇ ತಿಂಗಳಲ್ಲೇ ಅವರನ್ನು ಉಪಾಧ್ಯಕ್ಷೆ ಸ್ಥಾನದಿಂದ ಕೆಳಗಿಸಲು ಪಕ್ಷಾತೀತವಾಗಿ ಧ್ವನಿ ಎತ್ತಿದ್ದರು. ಮೇ ಮೊದಲ ವಾರದಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಉಪಾಧ್ಯಕ್ಷೆ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವಂತೆ ಮನವಿ ಮಾಡಿದ್ದರು.

ಆ ಮನವಿಯ ಮೆರೆಗೆ ಪ್ರಾದೇಶಿಕ ಆಯುಕ್ತ ವಿ.ಪಿ.ಇಕ್ಕೇರಿ ಅವರು ಮೇ 20 ರಂದು ಅವಿಶ್ವಾಸ ಗೊತ್ತುವಳಿ ಸಭೆಯನ್ನೂ ನಿಗದಿಪಡಿಸಿದ್ದರು. ಆದರೆ, ಸರ್ಕಾರ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 179(3) ಹಾಗೂ 180(6) ಪ್ರಕರಣಗಳಿಗೆ ತಂದಿರುವ ತಿದ್ದುಪಡಿಯಲ್ಲಿ ಸರ್ಕಾರ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧದ ಅವಿಶ್ವಾಸ ಮಂಡನೆ ವಿಧಾನ ಹಾಗೂ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳುವ ವಿಧಾನದ ನಿಯಮಗಳ ಬಗ್ಗೆ ಸಷ್ಪವಾಗಿ ತಿಳಿಸದ ಕಾರಣಕ್ಕೆ ಆ ಸಭೆಯನ್ನು ಮುಂದೂಡಲಾಗಿತ್ತು.

ಆಗ ತಾತ್ಕಾಲಿಕವಾಗಿ ಉಪಾಧ್ಯಕ್ಷೆ ಹುದ್ದೆಯಿಂದ ತಿರಸ್ಕೃತಗೊಳ್ಳುವ ತೂಗುಗತ್ತಿಯಿಂದ ಬಚಾವಾಗಿ ಕಳೆದ ಐದು ತಿಂಗಳಿಂದ ನಿರಾಳವಾಗಿದ್ದ ನಿರ್ಮಲಾ ಅವರಲ್ಲಿ ಪುನಃ ‘ಗದ್ದುಗೆ’ ಕಳೆದುಕೊಳ್ಳುವ ಭಯ ಕಾಣಿಸಿಕೊಂಡಿದೆ ಎನ್ನುತ್ತವೆ ಅವರ ಆಪ್ತ ಮೂಲಗಳು.

ಉಪಾಧ್ಯಕ್ಷೆ ಸ್ಥಾನ ಸರಸ್ವತಮ್ಮ ಅವರಿಗೆ ಬಿಟ್ಟು ಕೊಡುವಂತೆ ಕಾಂಗ್ರೆಸ್‌ ಹೈಕಮಾಂಡ್, ಸಚಿವ ಡಾ.ಕೆ.ಸುಧಾಕರ್, ಅನೇಕ ಶಾಸಕರು ಹೇಳಿದರೂ ನಿರ್ಮಲಾ ಅವರು ಸೊಪ್ಪು ಹಾಕದೆ, ಸ್ವಪಕ್ಷೀಯರೇ ಸೆಡ್ಡು ಹೊಡೆದು ಅಧಿಕಾರದಲ್ಲಿ ಮುಂದುವರಿದಿದ್ದಾರೆ ಎನ್ನಲಾಗಿದೆ. ಮುಂಬರುವ ಚುನಾವಣೆಗಳ ರಾಜಕೀಯ ಲೆಕ್ಕಾಚಾರದಲ್ಲಿ ಈ ವಿದ್ಯಮಾನ ನಡೆಯುತ್ತಿದೆ ಎನ್ನುವ ವಿಶ್ಲೇಷಣೆಗಳೂ ಹರಿದಾಡುತ್ತಿವೆ.

ಸದ್ಯ, ಜಿಲ್ಲಾ ಪಂಚಾಯಿತಿಯಲ್ಲಿರುವ ಹಾಲಿ ಅಧಿಕಾರರೂಢರ ಅವಧಿ ಕೊನೆಗೊಳ್ಳಲು ಸುಮಾರು 5 ತಿಂಗಳು ಬಾಕಿ ಉಳಿದಿವೆ. ಈ ಹೊತ್ತಿನಲ್ಲಿ ಜಿಲ್ಲಾ ಪಂಚಾಯಿತಿಯ ಇತಿಹಾಸದಲ್ಲಿಯೇ ಇದೇ ಮೊದಲ ಪ್ರತಿಧ್ವನಿಸಿದ್ದ ಅವಿಶ್ವಾಸ ನಿರ್ಣಯದ ವಿಚಾರ ಸದಸ್ಯರ ಆಡಳಿತ ವೈಖರಿಯ ಬಗ್ಗೆ ಸಾರ್ವಜನಿಕರಲ್ಲಿ ಬೇಸರ ತರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT