ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಪಾಳೆಯದಲ್ಲಿ ತಾರಕಕ್ಕೇರಿದ ಕಲಹ

ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಹಿರಿಯ ಮುಖಂಡರ ಸಭೆಯಲ್ಲಿ ನಂದಿ ಆಂಜನಪ್ಪ ಬದಲಾವಣೆಗೆ ಮುನಿಯಪ್ಪ ಪಟ್ಟು? ಕೆರಳಿದ ಶಿವಶಂಕರರೆಡ್ಡಿ
Last Updated 12 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ನಂದಿ ಆಂಜನಪ್ಪ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಇದೀಗ ಕಾಂಗ್ರೆಸ್‌ ನಾಯಕರಲ್ಲೇ ಅಸಮಾಧಾನ ಭುಗಿಲೆದ್ದಿದೆ. ಉಪ ಚುನಾವಣೆಯ ಅಧಿಸೂಚನೆ ಪ್ರಕಟವಾದರೂ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ವರಿಷ್ಠರ ಧೋರಣೆಗಳು ಈವರೆಗೂ ಬೂದಿ ಮುಚ್ಚಿದ ಕೆಂಡದಂತಿವೆ ಎನ್ನಲಾಗಿದೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಹಿರಿಯ ಮುಖಂಡರ ಸಭೆಯಲ್ಲಿ ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ರಾಜ್ಯ ಮಟ್ಟದ ನಾಯಕರ ನಡುವೆ ಅಪಸ್ವರಗಳು ವ್ಯಕ್ತವಾಗಿದ್ದು, ಸದ್ಯ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರನ್ನು ಗೊಂದಲಕ್ಕೆ ದೂಡಿದೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಅವರು ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ನಂದಿ ಆಂಜನಪ್ಪ ಅವರಿಗೆ ಟಿಕೆಟ್‌ ನೀಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇದು ಚಿಕ್ಕಬಳ್ಳಾಪುರ ಕ್ಷೇತ್ರದ ಉಪ ಚುನಾವಣೆ ವೀಕ್ಷಕ, ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಅವರನ್ನು ಕೆರಳುವಂತೆ ಮಾಡಿದೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ನಡೆದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರು ಮುನಿಯಪ್ಪ ಅವರೊಂದಿಗೆ ಸೇರಿಕೊಂಡು ತಂತ್ರಗಾರಿಕೆ ರೂಪಿಸಿ, ಸ್ವಪಕ್ಷೀಯರಲ್ಲೇ ಬಂಡಾಯ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಮೂಲಕ ಶಿವಶಂಕರರೆಡ್ಡಿ ಅವರಿಗೆ ಮುಖಭಂಗ ಉಂಟಾಗುವಂತೆ ಮಾಡಿದ್ದರು. ಇನ್ನೊಂದೆಡೆ, ಶಿವಶಂಕರರೆಡ್ಡಿ ಅವರ ವಿರೋಧದ ನಡುವೆಯೇ ಸುಧಾಕರ್ ಅವರು ಮಂಚೇನಹಳ್ಳಿ ತಾಲ್ಲೂಕು ಘೋಷಣೆ ಮಾಡಿಸುವಲ್ಲಿ ಯಶಸ್ವಿಯಾಗಿ ಅವರನ್ನು ಮತ್ತಷ್ಟು ಕೆರಳುವಂತೆ ಮಾಡಿದ್ದರು ಎನ್ನುತ್ತಾರೆ ಸ್ಥಳೀಯ ರಾಜಕಾರಣ ಬಲ್ಲವರು.

ಇದೀಗ ಸುಧಾಕರ್ ಅವರು ಪುನಃ ಮುನಿಯಪ್ಪ ಅವರ ಜತೆ ಸೇರಿ ಕಾಂಗ್ರೆಸ್‌ ಪಾಳೆಯದಲ್ಲಿ ಗೊಂದಲ ಮೂಡಿಸಿ, ಉಪ ಚುನಾವಣೆಯಲ್ಲಿನ ತಮ್ಮ ಕಠಿಣ ಮಾರ್ಗವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ತೆರೆಮರೆಯಲ್ಲಿ ತಂತ್ರಗಾರಿಕೆ ನಡೆಸಿದ್ದಾರೆ ಎನ್ನಲಾಗಿದೆ. ಅದರ ಭಾಗವಾಗಿಯೇ ಇದೀಗ ಮುನಿಯಪ್ಪ ಅವರು ಆಂಜನಪ್ಪ ಅವರನ್ನು ಬದಲಾಯಿಸುವಂತೆ ಪಟ್ಟು ಹಿಡಿದು, ವರಿಷ್ಠರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಕಾಂಗ್ರೆಸ್ ಪಾಳೆಯದಲ್ಲಿಯೇ ವ್ಯಕ್ತವಾಗುತ್ತಿದೆ.

‘ಸುಧಾಕರ್ ಅವರನ್ನು ಎದುರಿಸಲು, ಸೋಲಿಸಲು ಆಂಜನಪ್ಪ ಅವರಿಂದ ಸಾಧ್ಯವಿಲ್ಲ. ಆದ್ದರಿಂದ ಹಣ ಮತ್ತು ವರ್ಚಸು ಹೊಂದಿರುವ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು. ಸ್ಥಳೀಯರೇ ಜಿ.ಎಚ್.ನಾಗರಾಜ್ ಆಗಲಿ ಅಥವಾ ಹೊರಗಿನಿಂದ ಬಂದವರಾದರೂ ಪರವಾಗಿಲ್ಲ. ಒಟ್ಟಿನಲ್ಲಿ ಸುಧಾಕರ್ ಅವರ ವಿರುದ್ಧ ಸಮರ್ಥ ಅಭ್ಯರ್ಥಿಯನ್ನು ಹಾಕಬೇಕು’ ಎಂದು ಮುನಿಯಪ್ಪ ಅವರು ಸಭೆಯಲ್ಲಿ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಈ ವಿಚಾರ ತಿಳಿಯುತ್ತಿದ್ದಂತೆ ನಂದಿ ಆಂಜನಪ್ಪ ಅವರು ಮುಖಂಡ ಜಿ.ಎಚ್.ನಾಗರಾಜ್ ಅವರ ಬಳಿ ಹೋಗಿ ನನಗೆ ಟಿಕೆಟ್ ಬೇಡ, ಬೇರೆಯವರಿಗೆ ಕೊಡಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಪರಿಸ್ಥಿತಿ ಬಿಗಡಾಯಿಸುತ್ತಿರುವುದು ಅರಿತು ಸ್ಥಳೀಯ ಕಾಂಗ್ರೆಸ್ ಮುಖಂಡರು ನಾಗರಾಜ್ ಅವರ ತೋಟದ ಮನೆಯಲ್ಲಿ ಸೋಮವಾರ ರಾತ್ರಿ ತುರ್ತು ಸಭೆ ಕರೆದಿದ್ದರು. ಆದರೆ, ಗೌರಿಬಿದನೂರು ನಗರಸಭೆ ಚುನಾವಣೆ ಪ್ರಯುಕ್ತ ಶಿವಶಂಕರರೆಡ್ಡಿ ಅವರು ಆ ಸಭೆಗೆ ಬರಲು ಸಾಧ್ಯವಾಗದ ಕಾರಣ ಸಭೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT