ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಬಿಜೆಪಿ ಟೀಕಿಸುವ ನೈತಿಕತೆ ಕಾಂಗ್ರೆಸ್‌ಗಿಲ್ಲ: ಬಿ.ವಿ.ಕೃಷ್ಣಪ್ಪ

ಬಿಜೆಪಿ ವತಿಯಿಂದ ‘ಕರಾಳ ತುರ್ತು ಪರಿಸ್ಥಿತಿಯ ಒಂದು ನೆನಪು- 45’ ಕಾರ್ಯಕ್ರಮ
Last Updated 26 ಜೂನ್ 2020, 10:26 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ತುರ್ತು ಪರಿಸ್ಥಿತಿ ಘೋಷಣೆಯು ಭಾರತದ ಪಾಲಿಗೆ ಕರಾಳವಾಗಿತ್ತು. ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡಿ ಸಾಕಷ್ಟು ಕಾಲ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಕಿತ್ತುಕೊಂಡಿದ್ದ ಕಾಂಗ್ರೆಸ್‌ನವರಿಗೆ ಇಂದು ಬಿಜೆಪಿ ಟೀಕಿಸುವ ನೈತಿಕತೆ ಇಲ್ಲ’ ಎಂದು ನಿವೃತ್ತ ಪ್ರಾಂಶುಪಾಲ ಬಿ.ವಿ.ಕೃಷ್ಣಪ್ಪ ಹೇಳಿದರು.

ನಗರದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ‘ಕರಾಳ ತುರ್ತು ಪರಿಸ್ಥಿತಿಯ ಒಂದು ನೆನಪು- 45’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘1975ರ ಜೂನ್ 25ರಿಂದ 1977ರ ಮಾರ್ಚ್ 21ರವರೆಗೆ ದೇಶದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದರು. ರಾತ್ರಿ ಕಳೆದು ಹಗಲಾಗುವುದರೊಳಗೆ ಇಡೀ ದೇಶದಲ್ಲಿ ಜೈಲಿನ ವಾತಾವರಣ ಕಂಡುಬಂತು. ಪತ್ರಿಕೆ ಸಹಿತ ಮುಕ್ತವಾಗಿ ಮಾತನಾಡುವ, ಅಭಿಪ್ರಾಯ ಹೇಳುವ ಎಲ್ಲ ಅವಕಾಶಗಳನ್ನು ಕಿತ್ತುಕೊಳ್ಳಲಾಗಿತ್ತು’ ಎಂದು ತಿಳಿಸಿದರು.

‘1971ರ ಚುನಾವಣೆಯಲ್ಲಿ ಇಂದಿರಾ ಗಾಂಧಿ ಎದುರು ಸ್ಪರ್ಧಿಸಿದ್ದ ಜನತಾ ಪಾರ್ಟಿ ಅಭ್ಯರ್ಥಿ ರಾಜ ನಾರಾಯಣ್ ಅವರು, ಇಂದಿರಾ ಅವರು ಅಧಿಕಾರದ ದುರುಪಯೋಗ ಮಾಡಿಕೊಂಡು ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು’ ಎಂದರು.

‘1975ರ ಜೂನ್ 12 ರಂದು ನ್ಯಾಯಾಲಯ ಪ್ರಧಾನಿಯನ್ನು ತಪ್ಪಿತಸ್ಥೆ ಎಂದು ಘೋಷಿಸಿ ಇಂದಿರಾ ಆಯ್ಕೆಯನ್ನೇ ರದ್ದು ಮಾಡಿತು. ಅಲ್ಲದೇ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆಯೂ ನಿರ್ಬಂಧಿಸಿ ತೀರ್ಪು ನೀಡಿತು. ಈ ಸಂದರ್ಭ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸಿದ್ಧಾರ್ಥ ಶಂಕರ್ ರಾಯ್‌ ಆಂತರಿಕ ತುರ್ತು ಪರಿಸ್ಥಿತಿ ಹೇರುವಂತೆ ಇಂದಿರಾ ಅವರಿಗೆ ಸಲಹೆ ನೀಡಿದರು’ ಎಂದು ಹೇಳಿದರು.

‘ಸಂವಿಧಾನದ ಮಿತಿಯೊಳಗಿದ್ದುಕೊಂಡೇ ಪ್ರಜಾಪ್ರಭುತ್ವದ ಹಕ್ಕುಗಳನ್ನು ಹೇಗೆ ಹತ್ತಿಕ್ಕಬಹುದು ಎಂಬುದನ್ನು ಇಂದಿರಾ ತೋರಿಸಿಕೊಟ್ಟರು. ಹತಾಶರಾಗಿದ್ದ ಇಂದಿರಾ ಅವರ ಸಲಹೆಯಂತೆಯೇ ರಾಷ್ಟ್ರಪತಿಯಾಗಿದ್ದ ಫಕ್ರುದ್ದೀನ್ ಆಲಿ ಅಹಮದ್ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಅಂದು ದೇಶದ ಪ್ರಜಾಪ್ರಭುತ್ವವನ್ನೇ ಪ್ರಶ್ನಿಸಿದವರು ಇಂದು ಮೋದಿ ಅವರಂತಹ ಧಿಮಂತ ನಾಯಕನನ್ನು ಟೀಕಿಸುತ್ತಿದ್ದಾರೆ’ ಎಂದು ತಿಳಿಸಿದರು.

ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ ಹೋರಾಟಗಾರರಾದ ಬಿ.ಎಚ್.ಕೃಷ್ಣ ಮತ್ತು ಕೆ.ಎಂ.ನಾಗರಾಜ್ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ನಗರ ಮಂಡಲ ಅಧ್ಯಕ್ಷ ಶ್ರೀನಿವಾಸ್, ಗ್ರಾಮಾಂತರ ಘಟಕದ ಅಧ್ಯಕ್ಷ ಕೃಷ್ಣಾರೆಡ್ಡಿ, ಮುಖಂಡರಾದ ಲಕ್ಷ್ಮಿಪತಿ, ಸೋಮಶೇಖರ್, ಹನುಮೇಗೌಡ, ಶ್ರೀನಿವಾಸ್, ಅಶೋಕ್, ಮಧುಚಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT