ಮಂಗಳವಾರ, ಸೆಪ್ಟೆಂಬರ್ 28, 2021
20 °C

ಚಿಂತಾಮಣಿ: ಅಧಿಕಾರಶಾಹಿ ಕಾರ್ಯವೈಖರಿ ವಿರುದ್ಧ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ತಡೆಗಟ್ಟಬೇಕು. ಅಧಿಕಾರಿಗಳು ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಗೋಪಸಂದ್ರ ಕೆರೆಗೆ ಹರಿಯುತ್ತಿರುವ ಯುಜಿಡಿ ನೀರನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ನಗರಸಭೆ ಸದಸ್ಯ ಮಹ್ಮದ್ ಶಫೀಕ್ ಏಕಾಂಗಿಯಾಗಿ ಗುರುವಾರ ನಗರಸಭೆ ಕಚೇರಿ ಮುಂದೆ ಧರಣಿ ನಡೆಸಿದರು.

ಗೋಪಸಂದ್ರ ಕೆರೆಗೆ ಯುಜಿಡಿ ನೀರು ಹರಿಯುತ್ತಿದೆ. ಕೆರೆಯ ನೀರು ಕಲುಷಿತವಾಗಿ ದುರ್ವಾಸನೆ ಬಡಿಯುತ್ತಿದೆ. ಕೆರೆಯಲ್ಲಿ ಕೊಳವೆಬಾವಿಗಳಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರಿಗೂ ಕಲುಷಿತ ನೀರು ಮಿಶ್ರಣವಾಗುತ್ತಿದೆ. ಪೌರಾಯುಕ್ತರು ಮತ್ತು ಅಧ್ಯಕ್ಷರನ್ನು ಕರೆದುಕೊಂಡು ಹೋಗಿ ತೋರಿಸಿದ್ದೇನೆ. ಆದರೂ, ಯಾವುದೇ ಕ್ರಮಕೈಗೊಂಡಿಲ್ಲ. ಒಡೆದು ಹೋಗಿರುವ ಯುಜಿಡಿ ಪೈಪ್‌ಗಳ ದುರಸ್ತಿ ಮಾಡಿಸಿಲ್ಲ ಎಂದು ಟೀಕಿಸಿದರು.

ನಗರಸಭೆಯಲ್ಲಿ ನಾಗರಿಕರ ಕೆಲಸ ನಡೆಯುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ವಿಪರೀತವಾಗಿದೆ. ಕಚೇರಿಯಲ್ಲಿ ಕಡತಗಳು ನಾಪತ್ತೆಯಾಗುತ್ತಿವೆ. ಇ-ಸ್ವತ್ತು, ಖಾತೆ ಬದಲಾವಣೆಗೆ ಅರ್ಜಿ ನೀಡಿ, ಅರ್ಜಿದಾರರು ನೇರವಾಗಿ ಭೇಟಿ ಮಾಡಿದರೆ ಕೆಲಸ ಆಗುವುದಿಲ್ಲ. ಕುಂಟುನೆಪ ಹೇಳಿಕೊಂಡು ತಿಂಗಳುಗಟ್ಟಲೇ ಅಲೆದಾಡಿಸುತ್ತಾರೆ. ಇನ್ನೂ ಹೆಚ್ಚಿನ ಒತ್ತಡ ಹೇರಿ ಜೋರಾಗಿ ಮಾತನಾಡಿದರೆ ಕಡತವನ್ನೇ ನಾಪತ್ತೆ ಮಾಡುತ್ತಾರೆ. ಮಧ್ಯವರ್ತಿಗಳ ಮೂಲಕ ಹೋದರೆ ಸುಲಭವಾಗಿ ಕೆಲಸವಾಗುತ್ತದೆ ಎಂದು ಆರೋಪಿಸಿದರು.

ನಗರಸಭೆ ಅಧಿಕಾರಿಗಳು ಯಾರ ಹಿಡಿತದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಯಾರ ಭಯ, ಭಕ್ತಿಯೂ ಇಲ್ಲ. ಒಳಚರಂಡಿಯ ಮ್ಯಾನ್‌ಹೋಲ್ ಶಿಥಿಲಗೊಂಡರೆ, ಬೀದಿ ದೀಪಗಳು ಕೆಟ್ಟರೆ ಸರಿಪಡಿಸಲು ವಾರಗಟ್ಟಲೇ ತೆಗೆದುಕೊಳ್ಳುತ್ತಾರೆ. ನಗರಸಭೆಯ ಆಡಳಿತ ಹದಗೆಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪೌರಾಯುಕ್ತ ಚೇತನ್ ಎಸ್. ಕೊಳವಿ ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆಸಿದರು. ಗೋಪಸಂದ್ರ ಕೆರೆಯ ಯುಜಿಡಿ ಸಮಸ್ಯೆಯನ್ನು 15 ದಿನಗಳಲ್ಲಿ ಬಗೆಹರಿಸಲಾಗುವುದು. ಇತರೇ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.