ಶಿಕ್ಷಕರಿಗೆ ನಿರಂತರ ಕಲಿಕೆ ಅಗತ್ಯ: ಡಾ.ಕೆ.ಸುಧಾಕರ್

7

ಶಿಕ್ಷಕರಿಗೆ ನಿರಂತರ ಕಲಿಕೆ ಅಗತ್ಯ: ಡಾ.ಕೆ.ಸುಧಾಕರ್

Published:
Updated:
Deccan Herald

ಚಿಕ್ಕಬಳ್ಳಾಪುರ: ‘ವಿದ್ಯಾರ್ಥಿಗಳ ಭವಿಷ್ಯದ ನಿರ್ಮಾಪಕರಾದ ಶಿಕ್ಷಕರು ನಿರಂತರವಾಗಿ ಅಧ್ಯಯನಶೀಲರಾದಾಗ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ. ಶಿಕ್ಷಕರು ನಿರಂತರ ಕಲಿಕೆ ಮೂಲಕ ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬುಧವಾರ ತಾಲ್ಲೂಕಿನ ಪೆರೇಸಂದ್ರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾಮಾಜಿಕ ಬದಲಾವಣೆ ಮತ್ತು ದೇಶದ ಪ್ರಗತಿಯಲ್ಲಿ ಶಿಕ್ಷಕರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಕ್ಷಕರ ಮೇಲೆ ಹಿಂದೆಂದಿಗಿಂತಲೂ ಹೆಚ್ಚಿನ ಜವಾಬ್ದಾರಿ ಇದೆ. ಅವರ ಮುಂದೆ ಹೆಚ್ಚಿನ ಸಮಸ್ಯೆ, ಸವಾಲುಗಳಿವೆ. ಇಂತಹ ಜವಾಬ್ದಾರಿಯನ್ನು ನಿರ್ವಹಿಸಿ ಸಮಸ್ಯೆ ಮತ್ತು ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಾದರೆ ಶಿಕ್ಷಕರು ಸಮಕಾಲೀನ ಸಂದರ್ಭಕ್ಕೆ ತಕ್ಕಂತೆ ಮುಖಾಮುಖಿಯಾಗಬೇಕು’ ಎಂದು ಹೇಳಿದರು.

‘ಎಲ್ಲವನ್ನೂ ಕಲಿತಿದ್ದೇವೆ ಎಂದು ಯಾರೂ ಹೇಳಲಿಕ್ಕೆ ಸಾಧ್ಯವಿಲ್ಲ. ಎಷ್ಟೇ ಕಲಿತರೂ ಕಲಿಯಬೇಕಾದದ್ದು ಮತ್ತು ಸಾಧಿಸಬೇಕಾದದ್ದು ಸಾಕಷ್ಟಿರುತ್ತದೆ. ಶಿಕ್ಷಕರು ಕಲಿಕೆಯಲ್ಲಿ ಅಲ್ಪತೃಪ್ತರಾಗಬಾರದು. ಹೊಸ ಆಲೋಚನೆ, ಆವಿಷ್ಕಾರ, ಸಂಶೋಧನೆಗಳ ಕಡೆಗೆ ತೊಡಗಿಸಿಕೊಂಡಾಗ ಇತರರಿಗಿಂತ ವಿಭಿನ್ನ ಶಿಕ್ಷಕರಾಗಲು ಸಾಧ್ಯ ಎಂಬುದು ಮನವರಿಕೆ ಮಾಡಿಕೊಳ್ಳಬೇಕು’ ಎಂದರು.

‘ಪ್ರತಿ ದೇಶದ ಅಭ್ಯುದಯದ ಹಿಂದೆ ಶಿಕ್ಷಕರ ಪಾತ್ರ ಹಿರಿದಾಗಿರುತ್ತದೆ. ಎಲ್ಲಾ ದೇಶಗಳಲ್ಲಿ ಶಿಕ್ಷಕರಿಗೆ ಇತರರಿಗೆ ದೊರೆಯುವುದಕ್ಕಿಂತ ಹೆಚ್ಚು ಗೌರವ, ಮನ್ನಣೆಗಳು ದೊರೆಯುತ್ತವೆ. ಸಮಾಜ ಶಿಕ್ಷಕರಿಗೆ ಸದಾ ಋಣಿಯಾಗಿರುತ್ತದೆ. ಸಮಾಜದ ಎಲ್ಲಾ ಕ್ಷೇತ್ರಗಳಿಗೆ ಅವಶ್ಯವಿರುವ ಸಂಪನ್ಮೂಲ ವ್ಯಕ್ತಿಗಳನ್ನು ನೀಡಿದವರೇ ಶಿಕ್ಷಕರಾಗಿದ್ದು, ಅವರ ಸೇವೆ ಅನನ್ಯ. ರಾಜಕಾರಣಿ, ವೈದ್ಯ, ಇಂಜಿನಿಯರ್ ಸೇರಿದಂತೆ ಯಾವುದೇ ದೊಡ್ಡ ಹುದ್ದೆಗಳನ್ನು ಸೃಷ್ಟಿ ಮಾಡುವುದೇ ಶಿಕ್ಷಕರು’ ಎಂದು ಕೊಂಡಾಡಿದರು.

‘ಶಿಕ್ಷಕರು ಮಾಡುವ ಕೆಲಸದಲ್ಲಿ ಶ್ರದ್ಧೆ ಇಟ್ಟುಕೊಂಡು ಹೋರಾಟದ ಮನೋಭಾವವನ್ನು ಹೊಂದಬೇಕು. ಸಾಮಾನ್ಯ ಶಿಕ್ಷಕರಾಗಿದ್ದುಕೊಂಡು ದೇಶದ ಅತ್ಯುನ್ನತ ಹುದ್ದೆಗೇರಿದ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಶಿಸ್ತು, ಸಂಯಮ, ಬದ್ಧತೆ ಮತ್ತು ಕಳಕಳಿಯನ್ನು ಮಾದರಿಯಾಗಿಟ್ಟುಕೊಂಡು ಮುಂದೆ ನಡೆಯಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಮಾತನಾಡಿ, ‘ಮಕ್ಕಳು ಪೋಷಕರಿಗಿಂತಲೂ ಹೆಚ್ಚಾಗಿ ಶಿಕ್ಷಕರ ನಡವಳಿಕೆ ಅನುಸರಿಸುತ್ತಾರೆ. ಆದ್ದರಿಂದ ಶಿಕ್ಷಕರು ವಿದ್ಯಾರ್ಥಿಗಳಿಗೆ ಸದಾ ಮಾದರಿಯಾಗಿರಬೇಕು. ಇತರ ವೃತ್ತಿಗಳಿಗಿಂತಲೂ ಶಿಕ್ಷಕರ ವೃತ್ತಿ ಹೆಚ್ಚು ಗೌರವಯುತವಾದದ್ದು. ಶಿಕ್ಷಕರ ಬೋಧನೆಯಲ್ಲಿ ಇಡೀ ದೇಶದ ಅಭಿವೃದ್ಧಿ, ಸಮಾಜದ ಶಕ್ತಿ ಅಡಗಿದೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ತಪಸಿಹಳ್ಳಿಯ ಪುಷ್ಪಾಂಡಜ ಮಹರ್ಷಿ ಆಶ್ರಮದ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ನಗರಸಭೆ ಅಧ್ಯಕ್ಷ ಎಂ.ಮುನಿಕೃಷ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವಣ್ಣರೆಡ್ಡಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !