ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ | ಜೀವನೋಪಾಯಕ್ಕೆ ನೆರವಾದ ಕುರಿ ಮೇಕೆಗಳು

ತಾಲ್ಲೂಕಿನ ಕೋಟಹಳ್ಳಿಯ ದಿಲೀಪ್ ಸಾಧನೆ
Last Updated 10 ಮೇ 2020, 19:45 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಕೊರೊನಾ ಸೋಂಕಿನ ಪರಿಣಾಮ ನಗರ ದಿಕ್ಕಿನೆಡೆಗೆ ಹೊರಟಿದ್ದ ಗ್ರಾಮೀಣರ ವಲಸೆ ಹಿಮ್ಮುಖವಾಗಿದೆ. ನಗರದಿಂದ ಅನೇಕ ಗ್ರಾಮೀಣರು ಹಿಂದಿರುಗಿದ್ದಾರೆ. ಹಳ್ಳಿಗಳಲ್ಲಿರುವವರು ಇಲ್ಲಿಯೇ ಸುಸ್ಥಿರ ಬದುಕನ್ನು ಕಟ್ಟಿಕೊಳ್ಳಲು ಹಲವಾರು ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ಕೋಟಹಳ್ಳಿಯ ಯುವಕ ದಿಲೀಪ್ ಪಿಯುಸಿ ವರೆಗೆ ಓದಿದ್ದರೂ ವ್ಯವಸಾಯವನ್ನೇ ನಂಬಿದ್ದರು. ಪಿತ್ರಾರ್ಜಿತ 3 ಎಕರೆ ಜಮೀನಲ್ಲಿ ಸಾಲ ಮಾಡಿ ಕೊಳವೆಬಾವಿಯನ್ನು ಕೊರೆಸಿ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಒಂದು ವರ್ಷದಿಂದ ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿ ರೇಷ್ಮೆ ಸಾಕಾಣಿಕೆ ನಿಲ್ಲಿಸಬೇಕಾಗಿ ಬಂತು. ಕಡೆಗೆ ಕೆಲಸಕ್ಕಾಗಿ ಬೆಂಗಳೂರಿಗೆ ವಲಸೆ ಹೋಗಲು ತಯಾರಿ ನಡೆಸಿದ್ದರು. ಆದರೆ ಆ ಸಮಯದಲ್ಲಿ ಎಫ್.ಇ.ಎಸ್ (ಪರಿಸರ ಭದ್ರತಾ ಪ್ರತಿಷ್ಠಾನ) ಗ್ರಾಮದಲ್ಲಿ ನಡೆಸಿದ ತರಬೇತಿ ಕಾರ್ಯಾಗಾರ ಅವರು ಗ್ರಾಮದಲ್ಲಿಯೇ ಬದುಕು ಕಂಡುಕೊಳ್ಳಲು ನೆರವಾಯಿತು.

‘ಕೋಟಹಳ್ಳಿ ಗ್ರಾಮದಲ್ಲಿ ಪರಿಸರ ಭದ್ರತಾ ಪ್ರತಿಷ್ಠಾನ ಸಂಸ್ಥೆ ಗ್ರಾಮಸ್ಥರನ್ನೆಲ್ಲಾ ಸೇರಿಸಿ ಗ್ರಾಮ ಪರಿಸರ ಅಭಿವೃದ್ಧಿ ಸಮಿತಿಗಳನ್ನು ರಚನೆ ಮಾಡಿಕೊಳ್ಳಲು ಸಹಕಾರ ನೀಡಿತು. ಇದರ ಮೂಲಕ ಗ್ರಾಮದ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಣೆ ಮತ್ತು ಅಭಿವೃದ್ಧಿಯ ಮಾಡುವುದರ ಮೂಲಕ ಗ್ರಾಮೀಣ ಜನರ ಜೀವನೋಪಾಯ ಬಲಪಡಿಸಿಕೊಳ್ಳಲು ಯೋಜನೆ ರೂಪಿಸಲಾಯಿತು.

ರೇಷ್ಮೆ ಕೃಷಿ ಮಾಡಿಕೊಂಡಿದ್ದ ನನಗೆ ನಮ್ಮ ಗ್ರಾಮದಲ್ಲೇ ಇದ್ದು ಸಮಗ್ರ ಕೃಷಿಯನ್ನು ಅಳವಡಿಸಿಕೊಳ್ಳಲು ಪ್ರೇರಣೆಯಾಯಿತು. ಕುರಿಗಳನ್ನು ಸಾಕಲು ತೀರ್ಮಾನಿಸಿದೆ. ಎಫ್‌ಇಎಸ್ ಸಂಸ್ಥೆಯವರು ಕೊಟ್ಟ ಲೈಫ್ ಸ್ಟಾಕ್ ಮೆಶ್‌ಅನ್ನು ಬಳಸಿ ಕುರಿಗಳಿಗೆ ಕಡಿಮೆ ಹಣದಲ್ಲಿ ಆಶ್ರಯತಾಣವನ್ನು ನಿರ್ಮಿಸಿಕೊಂಡೆ. ಮೊದಲಿಗೆ ಎರಡು ಕುರಿಗಳನ್ನು ಮಾತ್ರ ಹೊಂದಿದ್ದ ನಾನು ನಂತರ ಐದು ಕುರಿಗಳನ್ನು ಖರೀದಿಸಿದೆ.

ಕುರಿಗಳಿಗೆ ಒಳ್ಳೆಯ ಗಾಳಿ ಮತ್ತು ಬೆಳಕಿನ ವಾತಾವರಣ ದೊರೆಯುತ್ತದೆ. ನಾಯಿಗಳಿಂದ ರಕ್ಷಣೆ ಸಿಗುತ್ತದೆ ಹಾಗೂ ಹೆಚ್ಚು ರೋಗಗಳು ಬರುವುದಿಲ್ಲ. ನಮ್ಮ ಗ್ರಾಮದಲ್ಲಿ ಕೇವಲ ಐದಾರು ಕುಟುಂಬಗಳಿಗೆ ಸೀಮಿತವಾಗಿದ್ದ ಕುರಿ ಸಾಕಾಣಿಕೆ ಈಗ 25 ಕುಟುಂಬಗಳಿಗೆ ವಿಸ್ತರಿಸಿ, ಜೀವನಾಧಾರವಾಗಿದೆ. ತಮ್ಮ ಜೀವನದ ಮಾರ್ಗವನ್ನು ಕಂಡುಕೊಳ್ಳಲು ತಂದೆ ತಾಯಿಯನ್ನು ಬಿಟ್ಟು ಬೆಂಗಳೂರಿಗೆ ವಲಸೆ ಹೋಗಿದ್ದ ಯುವಕರು ಕೊರೊನಾ ಹೊಡೆತಕ್ಕೆ ಸಿಕ್ಕಿ ಮತ್ತೆ ಗ್ರಾಮಗಳಿಗೆ ಮರಳುತ್ತಿರುವುದು ನೋಡಿದರೆ ಮೈ ಜುಮ್ಮೆನಿಸುತ್ತದೆ ಎನ್ನುತ್ತಾರೆ ದಿಲೀಪ್.

ಆರ್ಥಿಕವಾಗಿ ಬೆಳವಣಿಗೆ ಸಾಧಿಸಲು ನೆರವು
ಎಫ್‌ಇಎಸ್ (ಪರಿಸರ ಭದ್ರತಾ ಪ್ರತಿಷ್ಠಾನ) ಸಂಸ್ಥೆಯು ಗ್ರಾಮೀಣ ಭಾಗದ ರೈತರಿಗೆ, ಕುಶಲಕರ್ಮಿಗಳಿಗೆ, ಭೂರಹಿತರಿಗೆ, ಕಡುಬಡವರಿಗೆ, ಕೃಷಿ ಕೂಲಿಕಾರ್ಮಿಕರಿಗೆ ಮತ್ತು ಮಹಿಳಾ ಸ್ವ ಸಹಾಯ ಸಂಘದವರಿಗೆ ತಮ್ಮ ಜೀವನೋಪಾಯ ಬಲಪಡಿಸಿಕೊಳ್ಳಲು ಬೇಕಾಗುವ ಸಾಮರ್ಥ್ಯಾಭಿವೃದ್ಧಿ ತರಬೇತಿ ನೀಡುತ್ತಿದೆ. ಕೋಟಹಳ್ಳಿಯಲ್ಲಿ 14 ಮಂದಿಗೆ ಲೈಫ್ ಸ್ಟಾಕ್ ಮೆಶ್‌ಅನ್ನು ಕೊಟ್ಟು ಅವರು ಕುರಿ ಮೇಕೆಗಳನ್ನು ಸಾಕಿ ಆರ್ಥಿಕವಾಗಿ ಬೆಳವಣಿಗೆ ಸಾಧಿಸಲು ನೆರವಾಗಿದೆ ಎಂದು ಎಫ್‌ಇಎಸ್ ಉಪಯೋಜನಾಧಿಕಾರಿ ಆಗಟಮಡಕ ರಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT