ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿಯಲ್ಲಿ 27 ಕೋವಿಡ್ ಪ್ರಕರಣ

ವಲಸೆ ಕಾರ್ಮಿಕರಲ್ಲಿ ಬಹುತೇಕರಿಗೆ ಸೋಂಕು, ಬಾಗೇಪಲ್ಲಿ 22ನೇ ವಾರ್ಡ್‌ನ ಗರ್ಭಿಣಿಗೆ ಕೋವಿಡ್‌
Last Updated 24 ಮೇ 2020, 16:51 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ/ ಬಾಗೇಪಲ್ಲಿ: ಮುಂಬೈನಿಂದ ಈಚೆಗಷ್ಟೇ ಜಿಲ್ಲೆಗೆ ಮರಳಿರುವ ವಲಸೆ ಕಾರ್ಮಿಕರಲ್ಲಿ ಭಾನುವಾರ ಬಾಗೇಪಲ್ಲಿ ತಾಲ್ಲೂಕಿನ 26 ಮಂದಿಗೆ ಕೋವಿಡ್ ದೃಢಪಟ್ಟಿದೆ. ಜತೆಗೆ ಬಾಗೇಪಲ್ಲಿಯ ಗರ್ಭಿಣಿಗೆ ಸೋಂಕು ತಗುಲಿದೆ. ಒಂದೇ ದಿನ 27 ಪ್ರಕರಣಗಳು ಇಲ್ಲಿ ವರದಿಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 126ಕ್ಕೆ ಏರಿದೆ.

ಆರು ದಿನಗಳಲ್ಲಿ ಮಹಾರಾಷ್ಟ್ರ ದಿಂದ ಜಿಲ್ಲೆಗೆ ಮರಳಿರುವ 99 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.

ಯಾವುದೇ ಪ್ರಯಾಣದ ಹಿನ್ನೆಲೆ ಹೊಂದಿರದ ಬಾಗೇಪಲ್ಲಿಯ 22ನೇ ವಾರ್ಡ್‌ನ 24 ವರ್ಷದ ಗರ್ಭಿಣಿಗೆ ಸೋಂಕು ತಗುಲಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಮೇ 19ರಂದು ಗರ್ಭಿಣಿಗೆ ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಲಾಗಿತ್ತು. ಆರೋಗ್ಯ ಸುಧಾರಿಸದ ಕಾರಣ 20ರಂದು ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗಾಗಿ ಗಂಟಲು ದ್ರವ ಸಂಗ್ರಹಿಸಿ ಕಳುಹಿಸಲಾಗಿತ್ತು. ಭಾನುವಾರ ವರದಿ ಬಂದಿತು. ಗರ್ಭಿಣಿ ಮನೆ ಸುತ್ತಲೂ ಬ್ಯಾರಿಕೇಡ್ ಹಾಕಿ ಸೀಲ್‌ಡೌನ್ ಮಾಡಲಾಗಿದೆ.

ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್, ಉಪವಿಭಾಗಾಧಿಕಾರಿ ರಘುನಂದ್, ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ವಾರ್ಡ್‌ಗೆ ಭೇಟಿ ನೀಡಿ ಪರಿಶೀಲಿಸಿದರು.

ಮುಂಬೈನಿಂದ 247 ಜನ: ಮುಂಬೈನಿಂದ ಮೇ 19ರಂದು ಜಿಲ್ಲೆಯ ಗೌರಿಬಿದನೂರಿಗೆ 138 ಮತ್ತು ಬಾಗೇಪಲ್ಲಿಗೆ 109 ಸೇರಿದಂತೆ ಒಟ್ಟು 247 ಜನ ಮರಳಿದ್ದಾರೆ. ಅವರನ್ನೆಲ್ಲ ವಿವಿಧೆಡೆ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು.

ಜಿಲ್ಲೆಯಲ್ಲಿ ಈವರೆಗೆ ಗೌರಿಬಿದನೂರು, ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿಯಲ್ಲಿ ಮಾತ್ರ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದವು. ಇದೀಗ ವಲಸಿಗರ ಮರಳುವಿಕೆಯಿಂದ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕೂಡ ಕೋವಿಡ್‌ ಪ್ರಕರಣಗಳು ಕಾಣಿಸಿಕೊಂಡಿವೆ.

ಗೌರಿಬಿದನೂರಿನ 75, ಚಿಕ್ಕಬಳ್ಳಾಪುರ 9, ಚಿಂತಾಮಣಿ 5 ಮತ್ತು ಬಾಗೇಪಲ್ಲಿಯ 37 ಜನರು ಸೇರಿದಂತೆ 126 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಕೋವಿಡ್‌ನಿಂದ ಇಬ್ಬರು (ಗೌರಿಬಿದನೂರು, ಚಿಕ್ಕಬಳ್ಳಾಪುರದ ತಲಾ ಒಬ್ಬರು) ಮೃತಪಟ್ಟಿದ್ದಾರೆ. 18 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲಾ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ 106 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೆ ಖಾಲಿ ಮಾಡಿದ ಜನ

ಗರ್ಭಿಣಿಗೆ ಸೋಂಕು ದೃಢಪಡುತ್ತಿದ್ದಂತೆ 22ನೇ ವಾರ್ಡ್‌ನಲ್ಲಿ ಸುತ್ತಲೂ ಅಧಿಕಾರಿಗಳು ಸೀಲ್‌ಡೌನ್ ಮಾಡಿದರು. ನೆರೆಹೊರೆಯ ಕೆಲವರು ಮನೆ ಖಾಲಿ ಮಾಡಿ, ಸ್ವಗ್ರಾಮಗಳಿಗೆ ತೆರಳಿದರು. ಜನರು ಬಾಗಿಲು, ಕಿಟಕಿಗಳನ್ನು ಮುಚ್ಚಿಕೊಂಡು, ಸ್ವಪ್ರೇರಿತವಾಗಿ ಗೃಹಬಂಧನಕ್ಕೆ ಒಳಗಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT