ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಸೂಕ್ಷ್ಮ ಪ್ರದೇಶವಾದ ಜಿಲ್ಲೆ

ಆತಂಕ ಮೂಡಿಸಿದ ಕೇಂದ್ರ ಆರೋಗ್ಯ ಇಲಾಖೆ ವರದಿ, ಕೊರೊನಾ ವೈರಸ್‌ ಸೋಂಕು ಹರಡುತ್ತಿರುವ ಪ್ರದೇಶಗಳ ಪಟ್ಟಿಗೆ ಸೇರ್ಪಡೆ
Last Updated 1 ಏಪ್ರಿಲ್ 2020, 12:46 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೇಂದ್ರ ಆರೋಗ್ಯ ಇಲಾಖೆ ಜಿಲ್ಲೆಯನ್ನು ಕೊರೊನಾ ವೈರಸ್‌ ಸೋಂಕು ಹರಡುತ್ತಿರುವ ಹೊಸ ಸೂಕ್ಷ್ಮ ಪ್ರದೇಶಗಳ ಪಟ್ಟಿಗೆ ಸೇರ್ಪಡೆ ಮಾಡಿರುವುದು ಮೊದಲೇ ಆತಂಕದಲ್ಲಿದ್ದ ನಾಗರಿಕರಲ್ಲಿ ತಲ್ಲಣ ಉಂಟು ಮಾಡಿದೆ.

ಕೇಂದ್ರ ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಭಾರತದಲ್ಲಿ ಶೇ 80ರಷ್ಟು ಕೋವಿಡ್‌–19 ಪ್ರಕರಣಗಳು ದಾಖಲಾಗಿರುವ 10 ರಾಜ್ಯಗಳ ಪೈಕಿ ಕರ್ನಾಟಕ ಸಹ ಸೇರಿದ್ದು, ದೇಶದಲ್ಲಿ ಕೊರೊನಾ ವೈರಸ್‌ ಸೋಂಕು ಹರಡುತ್ತಿರುವ 25 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವ ನಗರಗಳ ಪೈಕಿ ಬೆಂಗಳೂರು ಮತ್ತು ಮೈಸೂರು ನಗರಗಳು ಕೊರೊನಾ ವೈರಸ್‌ ಸೋಂಕು ಹರಡುತ್ತಿರುವ ಸೂಕ್ಷ್ಮ ಪ್ರದೇಶಗಳ ಪಟ್ಟಿಗೆ ಸೇರಿದರೆ, ಜಿಲ್ಲೆಯೂ ಸೋಂಕು ಹರಡುತ್ತಿರುವ ಹೊಸ ಸೂಕ್ಷ್ಮ ಪ್ರದೇಶಗಳ ಪಟ್ಟಿಗೆ ಸೇರಿದೆ.

ಮಾರ್ಚ್‌ 21 ರಿಂದ ಜಿಲ್ಲೆಯಲ್ಲಿ 10 ದಿನಗಳ ಅಂತರದಲ್ಲಿ 10 ಕೋವಿಡ್‌ ಪ್ರಕರಣಗಳು ವರದಿಯಾಗಿ, ಈ ಪೈಕಿ 72 ವರ್ಷದ ವೃದ್ದೆಯೊಬ್ಬರು ಮಾರ್ಚ್‌ 25 ರಂದು ಮೃತಪಟ್ಟಿದ್ದರು. ಇದು ಜನಸಾಮಾನ್ಯರಲ್ಲಿ ಭೀತಿ ಹುಟ್ಟಿಸಿರುವಾಗಲೇ ಜಿಲ್ಲೆ ಕೊರೊನಾ ವೈರಸ್‌ ಸೋಂಕು ಹರಡುತ್ತಿರುವ ಸೂಕ್ಷ್ಮ ಪ್ರದೇಶದ ಪಟ್ಟಿಗೆ ಸೇರಿರುವುದು ನಾಗರಿಕರ ಎದೆ ಬಡಿತ ಹೆಚ್ಚುವಂತೆ ಮಾಡಿದೆ.

ಮೆಕ್ಕಾ ಯಾತ್ರೆ ಕೈಗೊಂಡ ಗೌರಿಬಿದನೂರಿನ ನಾಲ್ಕು ಜನರಲ್ಲಿ ಆರಂಭದಲ್ಲಿ ಕೋವಿಡ್‌ ಪತ್ತೆಯಾಗಿತ್ತು. ಬಳಿಕ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಪೈಕಿ ಆರು ಜನರಲ್ಲಿ ಸೋಂಕಿರುವುದು ಪತ್ತೆಯಾಗಿತ್ತು.

ಕೋವಿಡ್‌ ಸೋಂಕಿತರ ಪೈಕಿ ಐದು ಬೆಂಗಳೂರಿನ ರಾಜೀವ್‌ ಗಾಂಧಿ ಎದೆರೋಗ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೆ ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ತೆರೆದ ಕೋವಿಡ್‌ ಪ್ರಕರಣಗಳ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಸೋಂಕು ಹರಡುತ್ತಿರುವ ವಿಚಾರವಾಗಿ ಸಾರ್ವಜನಿಕರು ಜಿಲ್ಲಾಡಳಿತ, ಅಧಿಕಾರಿ ವರ್ಗದತ್ತ ಬೊಟ್ಟು ತೋರಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಅಧಿಕಾರಿಗಳು ಸೋಂಕಿತರ ನಿರ್ಲಕ್ಷ್ಯತನವೇ ಇದಕ್ಕೆಲ್ಲ ಕಾರಣ ಎಂದು ಸಮಜಾಯಿಷಿ ನೀಡುತ್ತಿದ್ದಾರೆ.

ಇದೆಲ್ಲದರ ನಡುವೆ ಜಿಲ್ಲೆಯಲ್ಲಿ ಲಾಕ್‌ಡೌನ್ ಅನುಷ್ಠಾನ ಮತ್ತಷ್ಟು ಬಿಗಿಗೊಳಿಸಿದ್ದು, ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅನೇಕ ಹಿರಿಯ ಅಧಿಕಾರಿಗಳು ಸರಣಿ ಸಭೆಗಳ ಮೂಲಕ ಪರಿಸ್ಥಿತಿ ಹತೋಟಿಗೆ ತರುವ ಕ್ರಮಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ರಾಜ್ಯ ಸರ್ಕಾರವು ಇತ್ತೀಚೆಗೆ ಗೌರಿಬಿದನೂರು ತಾಲ್ಲೂಕಿನವರೇ ಆದ ಸಕಾಲ ಮಿಷನ್ ಹೆಚ್ಚುವರಿ ನಿರ್ದೇಶಕ ಬಿ.ಎನ್.ವರಪ್ರಸಾದ್ ರೆಡ್ಡಿ ಅವರನ್ನು ಜಿಲ್ಲೆಗೆ ಕೋವಿಡ್‌ ಉಸ್ತುವಾರಿ ವಿಶೇಷ ಅಧಿಕಾರಿಯಾಗಿ ನಿಯೋಜನೆ ಮಾಡಿ, ಪರಿಸ್ಥಿತಿ ಹತೋಟಿಗೆ ತರಲು ಮುಂದಾಗಿದೆ.

ಇನ್ನೊಂದೆಡೆ ಪೊಲೀಸ್‌ ಇಲಾಖೆ ಅನಾವಶ್ಯಕವಾಗಿ ಮನೆಯಿಂದ ಹೊರಬಂದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪೊಲೀಸ್‌ ಇಲಾಖೆ ಎಚ್ಚರಿಕೆ ನೀಡಿದೆ.

ಸರ್ಕಾರದ ನಿರ್ಬಂಧಗಳನ್ನು ಉಲ್ಲಂಘಿಸುವ ವ್ಯಕ್ತಿ, ಸಂಸ್ಥೆ, ಸಂಘಟನೆಯ ವಿರುದ್ಧ ಸಾಂಕ್ರಾಮಿಕ ರೋಗಗಳ ಅಧಿನಿಯಮ, ವಿಕೋಪ ನಿರ್ವಹಣಾ ಅಧಿನಿಯಮ, ಭಾರತೀಯ ದಂಡ ಸಂಹಿತೆ 188ನೇ ಪ್ರಕರಣ ಮತ್ತು ಇತರ ಸಂಬಂಧಪಟ್ಟ ಸಂಹಿತೆಗಳು, ಅಧಿನಿಯಮಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸುವ ಚಿಂತನೆ ನಡೆಸಿದ್ದಾರೆ.

‘ಕೊರೊನಾ ವೈರಸ್‌ ನಿಯಂತ್ರಿಸಲು ಪ್ರತಿಯೊಬ್ಬ ನಾಗರಿಕರು ಸಹಕರಿಸಬೇಕು. ಆದೇಶವನ್ನು ಉಲ್ಲಂಘಿಸಿದರೆ ಐಪಿಸಿ ಸೆಕ್ಷನ್ 188 (ಸರ್ಕಾರಿ ಅಧಿಕಾರಿಯ ಆದೇಶದ ಉಲ್ಲಂಘನೆ), ಐಪಿಸಿ ಸೆಕ್ಷನ್ 269 (ಜೀವಕ್ಕೆ ಅಪಾಯಕಾರಿಯಾದ ರೋಗವನ್ನು ನಿರ್ಲಕ್ಷ್ಯದಿಂದ ಹರಡುವುದು), ಐಪಿಸಿ ಸೆಕ್ಷನ್ 271 (ಕ್ವಾರಂಟೈನ್‌ ನಿಯಮಕ್ಕೆ ಅವಿಧೇಯತೆ) ಅಡಿ ಕೇಸ್ ದಾಖಲಿಸಿ ಬಂಧಿಸಲಾಗುತ್ತದೆ’ ಎನ್ನುತ್ತಾರೆ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT