ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದು ಬಂದವರು | ಧೃತಿಗೆಡದೆ ಧೈರ್ಯವಾಗಿ ಕೋವಿಡ್‌ ಎದುರಿಸಿದೆ: ಸುಧೀಂದ್ರ

ಕೋವಿಡ್‌ನಿಂದ ಸಂಪೂರ್ಣ ಗುಣಮುಖರಾದ ಚಿಕ್ಕಬಳ್ಳಾಪುರದ ನಿವಾಸಿ ಸುಧೀಂದ್ರ ಅವರ ಮನದಾಳದ ಮಾತಿದು
Last Updated 17 ಜುಲೈ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ರೀ ಸ್ವಾಮಿ ಅದೇನ್ರಿ, ಬೆಳ್ಳಂಬೆಳಿಗ್ಗೆ ಕೊರೊನಾ, ಕೋವಿಡ್‌ ಹೆಸರಲ್ಲಿ ಟಿ.ವಿ ಚಾನೆಲ್‌ನವರು ಸತ್ತವರ ಸುದ್ದಿಗಳನ್ನೇ ದೊಡ್ಡದಾಗಿ ಬಿಂಬಿಸುತ್ತ ಮುಗ್ಧ ಜನರಲ್ಲಿ ಭಯ ಬಿತ್ತುತ್ತಾರೆ. ಕೋವಿಡ್‌ ಕೂಡ ಮಾಮೂಲಿ ಜ್ವರದಂತೆ ಕಣ್ರೀ. ನನಗೂ ಕೋವಿಡ್ ಬಂದು ವಾಸಿಯಾಗಿದೆ. ಜನರಿಗೆ ಸತ್ಯ ತಿಳಿಸಿ’

ಕೋವಿಡ್‌ನಿಂದ ಸಂಪೂರ್ಣ ಗುಣಮುಖರಾದ ಚಿಕ್ಕಬಳ್ಳಾಪುರದ ಹಳೆ ಮೈಸೂರು ಬ್ಯಾಂಕ್‌ ರಸ್ತೆ ನಿವಾಸಿ ಜಿ.ಸುಧೀಂದ್ರ ಅವರು ಆರಂಭದಲ್ಲೇ ಬೇಸರದೊಂದಿಗೆ ಹೇಳಿದ ಮಾತಿದು.

‘ಕೊರೊನಾ ಸೋಂಕಿನ ವಿಚಾರದಲ್ಲಿ ಮಾಧ್ಯಮಗಳು ನಕಾರಾತ್ಮಕ ಸುದ್ದಿಗಳಿಗೆ ನೀಡಿದಷ್ಟು ಮಹತ್ವವನ್ನು ಜನರಿಗೆ ಅಗತ್ಯವಾದ ಪ್ರೇರಣಾದಾಯಕವಾಗುವಂತಹ ಸಕಾರಾತ್ಮಕ ಸುದ್ದಿಗಳಿಗೆ ನೀಡುತ್ತಿಲ್ಲ’ ಎಂಬ ನೋವು ಅವರದು. ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನುಭವ ಹಂಚಿಕೊಂಡ ಅವರು ಹೇಳಿದಿಷ್ಟು...

ನಾನು ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುವೆ. ಪತ್ನಿ ನಗರದಲ್ಲೇ ಅಂಚೆ ಇಲಾಖೆ ಉದ್ಯೋಗಿ. ಕೋವಿಡ್‌ ಕಾರಣಕ್ಕೆ ನಿತ್ಯ ಬೈಕ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದೆ. ಸುರಕ್ಷತೆಗೆ ತುಂಬಾ ಮುತುವರ್ಜಿ ವಹಿಸಿದ್ದೆ. ಜೂನ್‌ ಕೊನೆಯ ವಾರದಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದೆ.

ಪತ್ನಿಯ ಸಹದ್ಯೋಗಿ ಒಬ್ಬರಿಗೆ ಕೋವಿಡ್‌ ತಗುಲಿದ ವಿಚಾರ ತಿಳಿದು ಪತ್ನಿ ಮತ್ತು ನಾನು ಸ್ವಯಂ ಪ್ರೇರಣೆಯಿಂದ ಜೂನ್‌ 30 ರಂದು ಪರೀಕ್ಷೆಗೆ ಒಳಗಾದೆವು. ಜುಲೈ 9 ರಂದು ವರದಿ ಬಂದಾಗ ಪತ್ನಿಗೆ ಯಾವುದೇ ಸೋಂಕಿರಲಿಲ್ಲ. ನನ್ನ ವರದಿಪಾಸಿಟಿವ್‌ ಆಗಿತ್ತು.

ನಾನು ಅನಾವಶ್ಯಕ ಮನೆಯಿಂದ ಹೊರಗಡೆ ತಿರುಗಾಡುತ್ತಿರಲಿಲ್ಲ. ಬೆಂಗಳೂರಿಗೆ ಕೆಲಸಕ್ಕೆ ಹೋದ ವೇಳೆ ಸೋಂಕು ತಗುಲಿರುವ ಶಂಕೆ ಇದೆ. ನನ್ನಲ್ಲಿ ಯಾವುದೇ ರೀತಿಯ ಲಕ್ಷಣಗಳು ಇರಲಿಲ್ಲ. ಆರೋಗ್ಯದಲ್ಲಿ ಕೂಡ ಯಾವುದೇ ವ್ಯತ್ಯಾಸವಾಗಿಲ್ಲ.

ಕೋವಿಡ್‌ ತಗುಲಿರುವುದು ತಿಳಿದಾಗ ನಾನು ದೃತಿಗೆಡಲಿಲ್ಲ. ಆದರೆ ಮನೆಯಲ್ಲಿ ನಮ್ಮೊಂದಿಗೆ 11 ವರ್ಷದ ಮಗಳು, 68 ವಯಸ್ಸಿನ ತಾಯಿ ಇದ್ದಾರೆ. ಅವರ ವಿಚಾರವಾಗಿ ಸಹಜವಾಗಿ ಆತಂಕವಾಯಿತು. ಕೋವಿಡ್‌ ಕೂಡ ಬಹುತೇಕ ಕಾಯಿಲೆಗಳಂತೆ ಗುಣಪಡಿಸಬಹುದಾದ ಸೋಂಕು ಎನ್ನುವ ವಿಚಾರ ಮೊದಲು ಮನೆಯವರಿಗೆ ಮನವರಿಕೆ ಮಾಡಿಕೊಟ್ಟು, ಅವರಲ್ಲಿ ಧೈರ್ಯ ತುಂಬಿದೆ.

ಮಧ್ಯಾಹ್ನದ ಹೊತ್ತಿಗೆ ಜಿಲ್ಲಾ ಆಸ್ಪತ್ರೆಯ ಕೋವಿಡ್‌ ವಾರ್ಡ್‌ಗೆ ಹೋಗಿ ದಾಖಲಾದೆ. ಅಲ್ಲಿ ಚೆನ್ನಾಗಿ ಉಪಚರಿಸಿದರು. ಹೊತ್ತು ಹೊತ್ತಿಗೆ ಮಾತ್ರೆಗಳು, ಊಟ, ಉಪಾಹಾರ ನೀಡುತ್ತಿದ್ದರು. ಜುಲೈ 15 ರಂದು ಗುಣಮುಖನಾಗಿರುವೆ ಎಂದು ತಿಳಿಸಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದರು.

ಸದ್ಯ ವೈದ್ಯರ ಸಲಹೆ ಮೆರೆಗೆ ಮನೆಯಲ್ಲಿಯೇ 10 ದಿನ ಪ್ರತ್ಯೇಕವಾಗಿ ವಾಸಿಸುತ್ತಿರುವೆ. ಆರೋಗ್ಯ ಇಲಾಖೆಯವರು ಮಗಳು ಮತ್ತು ನನ್ನ ತಾಯಿ ಇಬ್ಬರ ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದಾರೆ. ವರದಿ ಬರಬೇಕಿದೆ. ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದೇವೆ. ಆದರೂ, ನನ್ನ ಹೆಸರು ಹೇಳಿ ಅಧಿಕಾರಿಗಳು ನಮ್ಮ ಮನೆ ಪ್ರದೇಶದಲ್ಲಿ ಕೆಲ ಅಂಗಡಿಗಳನ್ನು ಮುಚ್ಚಿದ್ದು ತಿಳಿದು ಬೇಸರವಾಯಿತು.

ಇಂದಿಗೂ ಸಾಕಷ್ಟು ಜನರು ಪರೀಕ್ಷೆಗೆ ಗಂಟಲು ದ್ರವ ಮಾದರಿ ನೀಡಬಾರದು ಎಂದೇ ಹೇಳುತ್ತಾರೆ. ಅದು ತಪ್ಪು. ಕೊರೊನಾ ಸೋಂಕಿನ ಸರಪಳಿ ತುಂಡರಿಸಬೇಕಾದರೆ ಪ್ರತಿಯೊಬ್ಬರೂ ಪರೀಕ್ಷೆ ಮಾಡಿಸಿಕೊಂಡು ಬೇಗ ಗುಣಮುಖರಾಗಬೇಕು. ಕೋವಿಡ್‌ ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅಂತರಕ್ಕೆ ಒತ್ತು ನೀಡುವ ಜತೆಗೆ ಸುರಕ್ಷಿತವಾಗಿರಬೇಕು. ಅನಗತ್ಯ ತಿರುಗಾಟ ನಿಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT